Sunday, September 8, 2024

ವೇಗದ ಬೌಲರ್ ಗಳಿಗೆ ‘ವಿರಾಟ್ ಕೊಹ್ಲಿ ಆತ್ಮೀಯ ಸ್ನೇಹಿತ’


ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ


ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಅಪಾರವಾಗಿ ಸುಧಾರಿಸಿರುವ ವಿಭಾಗವೆಂದರೆ ಅದು ವೇಗದ ಬೌಲಿಂಗ್. ಸ್ಪಿನ್ ಬೌಲಿಂಗ್ ಟೀಂ ಇಂಡಿಯಾದ ಪ್ರಾಬಲ್ಯದ ದಾಳಿ ಎಂದು ಪರಿಗಣಿಸಿದ ಕಾಲದಲ್ಲಿ ಅಪೇಕ್ಷಣೀಯ ವೇಗದ ಬೌಲಿಂಗ್ ರೂಪಾಂತರಗೊಂಡಿತು . ಈ ಸ್ವರೂಪದಲ್ಲಿ ಟೀಂ ಇಂಡಿಯಾ ಎಲ್ಲಾ ರೀತಿಯ ವೇಗದ ಬೌಲರ್‍ಗಳನ್ನು ಹೊಂದಿಕೊಳ್ಳುವ ಸಾಮರ್ಥ್ಯ ಪಡೆಯುವಂತಾಯಿತು. ಪ್ರಸಕ್ತ ಕಾಲಘಟ್ಟದಲ್ಲಿ ವೇಗದ ಬೌಲಿಂಗ್ ಪಡೆಯಲ್ಲಿ ಪ್ರಮುಖರಾದ ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ವೇಗದ ಬೌಲಿಂಗಿನ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಒಂದು ಮಹತ್ವದ ಹೊಸ ಯುಗದ ರೂವಾರಿ ನಾಯಕ ವಿರಾಟ್ ಕೊಹ್ಲಿ. ಈ ವಿಷಯವನ್ನು ಬಹಿರಂಗ ಪಡಿಸಿದ್ದು ಟೀಂ ಇಂಡಿಯಾದ ಪ್ರಬುದ್ಧ ಹಾಗೂ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ.


ನಿರೂಪಕ ಮತ್ತು ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅವರೊಂದಾಗಿನ ಸಂದರ್ಶನವೊಂದರಲ್ಲಿ ಮೊಹಮ್ಮದ್ ಶಮಿ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ” ಪ್ರಸಕ್ತ ಸಾಲಿನಲ್ಲಿ ಐವರು ಗುಣಮಟ್ಟದ ಪರಿಣಾಮಕಾರಿ ವೇಗದ ಬೌಲರುಗಳನ್ನು ಹೊಂದಿರುವ ಭಾರತೀಯ ಕ್ರಿಕೆಟ್ ತಂಡ ಒಂದು ರೀತಿಯಲ್ಲಿ ಅದೃಷ್ಟ ತಂಡ. ಇತ್ತೀಚಿನ ಭಾರತೀಯ ತಂಡದ ಬೆಳವಣಿಗೆಯಲ್ಲಿ ಈ ವೇಗದ ಬೌಲರುಗಳ ಕಠಿಣ ಪರಿಶ್ರಮವೂ ಇದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಕಾರಣವೆಂದು ಹೇಳಬಹುದು. ವಿರಾಟ್ ಯಾವಾಗಲೂ ವೇಗದ ಬೌಲರ್‍ಗಳಿಗೆ ಬೆಂಬಲ ನೀಡುತ್ತಿದ್ದಾರೆ ಮತ್ತು ಅವರಿಗೆ ಮೈದಾನದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡಿದ ಪರಿಣಾಮ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ”.


ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ, ವೇಗದ ಬೌಲರ್‍ಗಳು ನಾಯಕನಿಂದ ಬೆಂಬಲ ಪಡೆದಾಗ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ. ಅಂತಹ ವ್ಯಕ್ತಿತ್ವ ವಿರಾಟ್ ಕೊಹ್ಲಿ ಅವರದ್ದು. ವಿರಾಟ್ ಸವಾಲನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅವರು ಬಯಸಿದ್ದನ್ನು ಸ್ಪಷ್ಟಪಡಿಸುತ್ತಾರೆ ಮತ್ತು ವೇಗದ ಬೌಲರುಗಳ ಶಕ್ತಿಗೆ ಬೆಂಬಲವನ್ನು ನೀಡುತ್ತಾರೆ. ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವನೆ ಹೊಂದಿದ್ದರೂ ಅದು ತಂಡದ ಲಾಭಕ್ಕಾಗಿ ಮಾತ್ರ. ತಂಡದ ಗೆಲುವೇ ಅವರ ಮೊದಲ ಆದ್ಯತೆ. ನಾವೆಲ್ಲರೂ ದೇಶಕ್ಕಾಗಿ ಆಡುತ್ತಿದ್ದೇವೆ ಎನ್ನುವುದನ್ನು ಕೊಹ್ಲಿ ತನ್ನ ಯೋಜನೆಗಳ ಮೂಲಕ ಕಾರ್ಯಗತಗೊಳಿಸುತ್ತಿರುವುದು ಹೆಮ್ಮೆಯ ವಿಚಾರ. ಕೆಲವೊಮ್ಮೆ ಕೊಹ್ಲಿ ಮೈದಾನದಲ್ಲಿ ತುಂಬಾ ತಮಾಷೆಯಾಗಿರುತ್ತಾರೆ. ವೇಗದ ಬೌಲರ್‍ಗಳನ್ನು ಕೊಹ್ಲಿ ಎಂದಿಗೂ ಒತ್ತಡಕ್ಕೆ ಒಳಪಡಿಸಿಲ್ಲ . ಇದರಿಂದ ನಮಗೆ ಅವರು ನಮ್ಮ ಬಾಲ್ಯದ ಸ್ನೇಹಿತನಂತೆ ಕಾಣುತ್ತಾರೆ. ಇದು ಮೊಹಮ್ಮದ್ ಶಮಿ ಅನಿಸಿಕೆಯಾಗಿದೆ.


ಹೌದು, ಮೊಹಮ್ಮದ್ ಶಮಿ ಅಭಿಪ್ರಾಯವನ್ನು ಒಪ್ಪುವಂತದೆ. ಸದ್ಯ ಭಾರತ ತಂಡದ ವೇಗದ ಬೌಲಿಂಗ್ ವಿಭಾಗ ಒಂದು ಘಟಕವಾಗಿ ಯಾವಾಗಲೂ ಪರಸ್ಪರರ ಯಶಸ್ಸನ್ನು ಬಯಸುತ್ತಿದೆ. ಕಳೆದ ಕೆಲವು ವರ್ಷಗಳ ದಾಖಲೆಯನ್ನು ನೋಡಿದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸದ್ಯ ವೇಗದ ಬೌಲರುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿದ್ದೇವೆ ಮಾತ್ರವಲ್ಲ ವಿಕೆಟ್ ಪಡೆಯುವುದರಲ್ಲೂ ಮುಂಚೂಣಿಯಲ್ಲಿದ್ದಾರೆ. ಪರಸ್ಪರರ ಯಶಸ್ಸನ್ನು ಪ್ರಶಂಸಿಸುವುದರ ಜೊತೆಗೆ ತಂಡದ ಗೆಲುವಿನಲ್ಲಿ ವೇಗದ ಬೌಲರುಗಳು ಮುಖ್ಯ ಶಕ್ತಿಯಾಗಿದ್ದಾರೆ. ಸದ್ಯ ಭಾರತದ ವೇಗದ ದಾಳಿಯಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮತ್ತು ಇಶಾಂತ್ ಶರ್ಮಾ ಇದ್ದಾರೆ. ವೇಗದ ಬೌಲರುಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸಾಮರ್ಥ್ಯವನ್ನು ಅಮೋಘ ರೀತಿಯಲ್ಲಿ ಸಾಬೀತುಪಡಿಸಿದ್ದಾರೆ.


ಮೊಹಮ್ಮದ್ ಶಮಿ, ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ಯಶಸ್ಸನ್ನು ಕಂಡು ತನ್ನ ಪ್ರಾಮಾಣಿಕ ಅನಿಸಿಕೆಯನ್ನು ನಾಯಕನ ಬಗ್ಗೆ ಹೇಳಿಕೊಂಡಿದ್ದಾರೆ. ಸುಮಾರು 50 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮೊಹಮ್ಮದ್ ಶಮಿ 27.59ರ ಸರಾಸರಿಯಲ್ಲಿ 180 ವಿಕೆಟ್ ಪಡೆದಿದ್ದಾರೆ. ಸದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆಗೊಂಡಿದ್ದು ಜಸ್ಪ್ರೀತ್ ಬುಮ್ರಾ ಜೊತೆ ಹೊಸ ಚೆಂಡನ್ನು ಹಂಚಿಕೊಳ್ಳಲ್ಲಿದ್ದಾರೆ. ಭಾರತ ತಂಡದಲ್ಲಿ ಇವರು ಅನುಭವಿ ವೇಗದ ಬೌಲರ್. ವೇಗದ ಬೌಲಿಂಗ್ ನಲ್ಲಿ ಸಕಾರಾತ್ಮಕ ಚಿಂತನೆಯನ್ನು ಹೊಂದಿರುವ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟಿನ ಅದ್ಭುತ ಬೌಲರ್.


ನಾಯಕ ವಿರಾಟ್ ಕೊಹ್ಲಿ ಬಗ್ಗೆ ತುಂಬಾ ಅಭಿಮಾನ ಹೊಂದಿರುವ ಮೊಹಮ್ಮದ್ ಶಮಿ ಅವರ ಗುಣಮಟ್ಟದ ನಾಯಕತ್ವದ ವಿಚಾರವನ್ನು ಸಾಕಷ್ಟು ತಿಳಿದುಕೊಂಡಿದ್ದಾರೆ. ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ತಮ್ಮ ಸಾಧನೆಗೆ ವಿರಾಟ್ ಕೊಹ್ಲಿ ಬಳಸಿದ ತಂತ್ರಗಾರಿಕೆಯೇ ಕಾರಣ ಎನ್ನುವುದನ್ನು ಕೂಡ ನೆನಪಿಸಿಕೊಂಡಿದ್ದಾರೆ. ಪಂದ್ಯದ ಸಮಯದಲ್ಲಿ ವಿಕೆಟ್ ಮತ್ತು ವಿಭಿನ್ನ ಸನ್ನಿವೇಶಗಳನ್ನು ಚರ್ಚಿಸುತ್ತಾ ವಿರಾಟ್ ಕೊಹ್ಲಿ ಫೀಲ್ಡಿಂಗ್ ಸಂಯೋಜನೆ ಮಾಡುವ ರೀತಿಯೂ ಕೂಡ ಗಮನಿಸುವಂತದ್ದು. ಒಟ್ಟಿನಲ್ಲಿ ಮೊಹಮ್ಮದ್ ಶಮಿ, ಹರ್ಷ ಬೋಗ್ಲೆ ಅವರೊಂದಿಗೆ ಹಂಚಿಕೊಂಡಿರುವ ವಿಷಯಗಳು ಭಾರತೀಯ ಕ್ರಿಕೆಟ್ ಬೆಳವಣಿಗೆಗೆ ಪೂರಕವಾಗಿರುವಂತದ್ದು . ತಂಡದ ಒಗ್ಗಟ್ಟನ್ನು ಮೊಹಮ್ಮದ್ ಶಮಿ ತನ್ನ ಹೇಳಿಕೆಯಲ್ಲಿ ಪ್ರತಿಬಿಂಬಿಸಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೇರಿದಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡದ ವೇಗದ ಬೌಲರುಗಳು ಉತ್ಕೃಷ್ಟ ಪ್ರದರ್ಶನದ ಜೊತೆಗೆ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಭರ್ಜರಿ ಗೆಲುವು ಪ್ರಾಪ್ತಿಯಾಗಲಿ ಎನ್ನುವುದೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!