spot_img
Tuesday, March 24, 2026
spot_img

ಕೆಂಪು ಕಲ್ಲಿನ ಕೆತ್ತನೆಯಲ್ಲಿ ಕಾಯಕಲ್ಪಗೊಂಡ ತಾರಿಬೇರು ಸೋಮನಾಥೇಶ್ವರ ದೇವಸ್ಥಾನ


ಕುಂದಾಪುರ: ಸುತ್ತ ಎತ್ತ ದೃಷ್ಟಿ ಹಾಯಿಸಿದರೂ ಹಚ್ಚ ಹಸಿರ ವನರಾಜಿ ದೇವೋಪಮ ಸೊಬಗು. ತಪೋನಿಲಯಯದಂತಹ ಪ್ರಶಾಂತವಾದ ವಾತಾವರಣ. ಈ ನಿಸರ್ಗದ ನಡುವೆ ಸಹಸ್ರಾರು ವತ್ಸರಗಳ ಹಿಂದೆಯೇ ನೆಲೆನಿಂತ ಶ್ರೀ ಸೋಮನಾಥೇಶ್ವರ ಸ್ವಾಮಿ.

ಕುಂದಾಪುರ ತಾಲೂಕು ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾರಿಬೇರು ಎಂಬಲ್ಲಿ ಇರುವ ಪುರಾತನ ಶಿವಾಲಯ ಇದೀಗ ಉಡುಪಿ ಜಿಲ್ಲೆಯಲ್ಲಿಯೇ ಗಮನ ಸೆಳೆಯುವಂತೆ ಜೀರ್ಣೋದ್ದಾರಗೊಂಡು ನಿಂತಿದೆ. ಈ ಭಾಗದಲ್ಲಿ ಸಾಕಷ್ಟು ಶಿವನ ದೇಗುಲಗಳಿವೆ. ಒಂದೊಂದು ದೇಗುಲಕ್ಕೊ ಒಂದೊಂದು ಕಥೆಗಳಿವೆ. ತಾರಿಬೇರುವಿನಲ್ಲಿ ನೆಲೆಸಿರುವ ಶ್ರೀ ಸೋಮನಾಥೇಶ್ವರ ಸ್ವಾಮಿ ವಿಜಯನಗರದ ಅರಸರ ಕಾಳದ ಐತಿಹ್ಯ ಒಳಗೊಂಡ ದೇವಾಲಯ.

ಸೌಪರ್ಣಿಕಾ ನದಿಯ ತಟದಲ್ಲಿ ಸುಮಾರು 900 ವರ್ಷಗಳ ಪ್ರಾಚೀನತೆಯನ್ನು ಸಾರುವ ಈ ದೇವಾಲಯ ಕಾಲದ ಹೊಡೆತಕ್ಕೆ ಸಿಕ್ಕು ಜೀರ್ಣವಸ್ಥೆ ತಲುಪಿದಾಗ 2012ರಲ್ಲಿ ದೇವಳದ ಜೀರ್ಣೋದ್ಧಾರಕ್ಕೆ ಮುಂದಾಗಿ ಅಷ್ಟಮಂಗಲ ಪ್ರಶ್ನೆ ಇರಿಸಿದಾಗ ಸಾಕಷ್ಟು ವಿಷಯಗಳು ಪ್ರಶ್ನಾಚಿಂತನೆಯಲ್ಲಿ ತಿಳಿದು ಬಂದವು. ನಂತರದ ದಿನಗಳಲ್ಲಿ ದೇಗುಲ ಪುನರ್ ನಿರ್ಮಾಣದ ಸಲುವಾಗಿ ಜೀರ್ಣೋದ್ದಾರ ಸಮಿತಿ ರಚಿಸಿಕೊಂಡು 2015ರಲ್ಲಿ ಪರಿಹಾರಾದಿ ಪ್ರಕ್ರಿಯೆಗಳನ್ನು ಮುಗಿಸಿಕೊಂಡು, ವಾಸ್ತು ವಿನ್ಯಾಸದಂತೆ ನೀಲ ನಕಾಸೆ ತಯಾರಿಸಿಕೊಂಡು ಶ್ರೀ ಸೋಮನಾಥೇಶ್ವರನ ಗರ್ಭಗುಡಿ, ತೀರ್ಥಮಂಟಪ, ಮುಖಮಂಟಪ, ಹೆಬ್ಬಾಗಿಲು, ಸುತ್ತು ಪೌಳಿ, ನಾಗದೇವರ ಗುಡಿ, ಬಾವಿ ಪುನರ್ ನಿರ್ಮಾಣದ ಸಂಕಲ್ಪ ಕೈಗೊಂಡು 2019ರ ಜೂನ್ ತಿಂಗಳಲ್ಲಿ ಸಮಗ್ರ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸುಮಾರು 2 ಕೋಟಿ ವೆಚ್ಚದ ಅಂದಾಜು ವೆಚ್ಚದಲ್ಲಿ ಈಗ ಭವ್ಯವಾದ ಶಿವಾಲಯ ನಿರ್ಮಾಣಗೊಂಡಿದೆ.

ವಿಶಿಷ್ಠ ಹಾಗೂ ವೈಶಿಷ್ಟ್ಯಪೂರ್ಣವಾಗಿ ಕೆಂಪು ಕಲ್ಲಿನಿಂದಲೇ ಸೋಮನಾಥೇಶ್ವರ ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಲಾಯಿತು. ತೀರಾ ಅಪರೂಪವಾಗಿರುವ ಕೆಂಪು ಕಲ್ಲಿನು ದೇವಾಲಯದ ಪರಿಕಲ್ಪನೆಯೇ ಅದ್ಬುತ. ಅಂತೆಯೇ ಕೆಂಪು ಕಲ್ಲಿನ ಶಿಲ್ಪಕಲೆಯಲ್ಲಿ ಪರಿಣಿತ ಶಿಲ್ಪಿಗಳ ಮೂಲಕ ದೇವಸ್ಥಾನದ ನೀಲನಕಾಸೆ ಸಿದ್ದಪಡಿಸಲಾಯಿತು. ನಿರೀಕ್ಷೆಗೂ ನಿಲುಕದ ರೀತಿಯಲ್ಲಿ ಕೆಂಪು ಶಿಲೆಯಿಂದಲೇ ಸೋಮನಾಥೇಶ್ವರನ ಗರ್ಭಗುಡಿ, ನಂದಿ ಮಂಟಪ ನಿರ್ಮಾಣಗೊಂಡಿದೆ. ಮೇಲ್ಛಾವಣಿಗೆ ತಾಮ್ರದ ಹೊದಿಕೆ ಮಾಡಲಾಗಿದೆ. ಸೂರಿನ ಒಳಭಾಗದ ಶಿಲೆಯ ಕೆತ್ತನೆ ಗೋಲ ಮಾದರಿಯಲ್ಲಿ ನಿರ್ಮಾಣವಾಗಿದೆ. ಸಂಪೂರ್ಣ ಕೆಂಪು ಕಲ್ಲನೆ ಬಳಕೆ ಮಾಡಿರುವುದರಿಂದ ಸಹಜ ಹವಾನಿಯಂತ್ರಿತ ಕೊಠಡಿಯಂತೆ ಭಾಸವಾಗುತ್ತದೆ.

ಕೆಂಪು ಕಲ್ಲನ್ನು ಶಿಲ್ಪಿ ಬಳಸಿಕೊಂಡು ಅಲ್ಲಿ ಕಲೆಯ ಚಿತ್ರಿಕೆಗಳನ್ನು ಪಡಿಮೂಡಿಸಿದ ಬಗೆ ಬೆರಗು ಮೂಡಿಸುತ್ತದೆ. ಕೆಂಪು ಕಲ್ಲಿನಲ್ಲಿ ನಿರ್ಮಾಣಗೊಂಡ ದೇಗುಲಗಳು ಅಪರೂಪ. ಆ ಬೆರಳೆಣಿಕೆಯ ದೇವಸ್ಥಾನಗಳ ಪಂಕ್ತಿಯಲ್ಲಿ ಸೋಮನಾಥೇಶ್ವರ ದೇವಸ್ಥಾನ ಮೇರುಸ್ಥಾನದಲ್ಲಿ ಕಾಣಸಿಗುತ್ತದೆ. ಗರ್ಭಗುಡಿಯ ವಿವಿಧ ಹಂತಗಳು, ಗೋಡೆಯಲ್ಲಿನ ಜಾಲಂಧ್ರಗಳು, ಭುಜಗಳು, ಮೂಲೆಗಳು, ಹೊರಮೈಯಲ್ಲಿ ರಚಿಸಲಾದ ಆಕೃತಿಗಳು ಆಕರ್ಷಣೀಯವಾಗಿವೆ.

ಎದುರಿನ ನಂದಿ ಮಂಟಪದ ನಾಲ್ಕು ಸ್ತಂಭಗಳು ಕೂಡಾ ಕಮನೀಯವಾಗಿ ಮೂಡಿಬಂದಿದೆ. ಮೇಲ್ಮಾಹಡಿಯ ಒಳಭಾಗದ ಕೆತ್ತನೆ ಅದ್ಬುತವಾಗಿದೆ. ಗರ್ಭಗುಡಿಯ ರಾಜಗಾಂಭಿರ್ಯಕ್ಕೆ ನಂದಿ ಮಂಟಪ ಇನ್ನಷ್ಟು ಶೋಭೆ ನೀಡಿದೆ. ಪಶ್ಚಿಮ ಭಾಗಕ್ಕೆ ಮುಖ ಮಾಡಿರುವ ಸೋಮನಾಥೇಶ್ವರ ಸ್ವಾಮಿಯ ಹೆಬ್ಬಾಗಿಲ ಕೆತ್ತನೆಯೂ ಕೂಡಾ ಗಮನ ಸಳೆಯುತ್ತದೆ.


25 ಅಡಿ ಆಳದಲ್ಲಿ ನಿಧಿಕುಂಭ
ಈ ಹಿಂದೆ ಇದ್ದ ದೇವಸ್ಥಾನ ನಿರ್ಮಿಸುವಾಗ 25 ಅಡಿಗಳ ಆಳದಲ್ಲಿ ನಿಧಿ ಕುಂಭ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ. ಜೀರ್ಣೋದ್ಧಾರ ಸಂದರ್ಭ ಗರ್ಭಗುಡಿ ನಿರ್ಮಾಣಕ್ಕೆ ಹೊಸ ನಿಧಿಕುಂಭ ಸ್ಥಾಪನೆಯ ಸಂದರ್ಭ ಇದು ಬೆಳಕಿಗೆ ಬಂದಿದೆ. ಅಂದರೆ ನೂರಾರು ವರ್ಷಗಳ ಹಿಂದೆಯೇ ಕರಾರುವಕ್ಕಾಗಿ ಈ ದೇವಸ್ಥಾನ ನಿರ್ಮಿಸಿದ್ದರು ಎನ್ನುವ ಮಾತುಗಳಿಗೆ ಹೆಚ್ಚಿನ ಪುಷ್ಟಿ ಸಿಗುತ್ತದೆ.

ತಾರಿಬೇರುವಿನಂತಹ ಒಂದು ಗ್ರಾಮೀಣ ಪ್ರದೇಶದಲ್ಲಿ ವಿನೂತನ ಮಾದರಿಯಲ್ಲಿ ಕಡುಗಲ್ಲಿನಿಂದಲೇ ಕೆತ್ತಿ ದೇಗುಲ ನಿರ್ಮಿಸಿರುವುದು ಅಚ್ಛರಿಯ ಅಂಶವಾಗಿದೆ. ಇವತ್ತಿನ ಕಾಲಘಟ್ಟಕ್ಕೆ ತೀರ ಅಪೂರ್ವವಾಗಿದೆ. ಈ ದೇವಸ್ಥಾನ ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು, ಯಾತ್ರಾರ್ಥಿಗಳ ಗಮನ ಸಳೆಯುವುದಂತೂ ದಿಟ.

ಕೆಂಪು ಶಿಲೆಯಲ್ಲಿಯೇ ದೇವಳ ನಿರ್ಮಾಣ ಸಂಕಲ್ಪ, ಪರಿಕಲ್ಪನೆಯ ಸಾಕ್ಷಾತ್ಕಾರದ ಹಿನ್ನೆಲೆಯಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾಗಿ ಬಿ ಅಪ್ಪಣ್ಣ ಹೆಗ್ಡೆ, ರಮೇಶ್ ಗಾಣಿಗ ತಾರಿಬೇರು, ಅಧ್ಯಕ್ಷರಾದ ಯು. ರಾಜಾರಾಮ್ ಭಟ್ ಉಪ್ಪುಂದ, ಕೋಶಾಧಿಕಾರಿ ಬಾಬು ಗೌಡ, ಜೊತೆ ಕೋಶಾಧಿಕಾರಿ ದಿನೇಶ್ ಪೂಜಾರಿ, ಕಾರ್ಯದರ್ಶಿ ಆನಂದ ಗಾಣಿಗ ತಾರಿಬೇರು, ಜೊತೆ ಕಾರ್ಯದರ್ಶಿ ಸತೀಶ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಊರಿನ ಭಕ್ತಮಹಾಶಯರು ಈ ಪುಣ್ಯಕಾರ್ಯದಲ್ಲಿನ ಪರಮೊಚ್ಛ ಶ್ರಮವಿದೆ. ಭಕ್ತದಾನಿಗಳ ನೆರವಿನ ಧ್ವನಿಯಿದೆ. ಸಂಘಟಿತ ಶ್ರಮದ ಹನಿಗಳಿವೆ.

ಆಲೂರು ಗ್ರಾಮದ ತಾರಿಬೇರುವಿನಲ್ಲಿ ಅಪೂರ್ವ ದೇವಳವೊಂದು ವಿಶಿಷ್ಟವಾಗಿ ಕಾಯಕಲ್ಪಗೊಂಡಿದೆ. ಪುಣ್ಯಪ್ರಧ ಕಾರ್ಯವೊಂದು ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಇದು ಭವಿಷ್ಯದಲ್ಲಿ ಬೇರೆ ಬೇರೆ ಭಾಗದಿಂದಲೂ ಯಾತ್ರಾರ್ಥಿಗಳನ್ನು ಆಕರ್ಷಿಸಲಿದೆ.

ದೇವಳದ ಇತಿಹಾಸ:
ಈ ದೇವಾಲಯವು ಸುಮಾರು 900 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ದೇಗುಲ ಇದು ಎನ್ನಲಾಗಿದೆ. ಉತ್ತರದ ಹಾಡುಹಳ್ಳಿ ಪ್ರದೇಶದಿಂದ ಗಂಗನಾಡು, ಉಳ್ಳೂರು, ರಾಗಿಹಕ್ಲು ಮೂಲಕ ನಾಡ, ಆಲೂರು, ಹಟ್ಟಿಯಂಗಡಿ, ಬಸ್ರೂರುಗಳಿಗೆ ಸಂಪರ್ಕಿಸುವ ಮುಖ್ಯದಾರಿಯ ಕೊಂಡಿ ಪ್ರದೇಶ ಇದಾಗಿತ್ತು. ಹಿಂದೆ ತಾರಿಬೇರು ಅಗ್ರಹಾರ ಪ್ರದೇಶವಾಗಿದ್ದು, ಸೋಮನಾಥೇಶ್ವರ (ರಾಮೇಶ್ವರ) ಸಹಜ ಲಿಂಗವನ್ನು ಕಾಶಿಯಿಂದ ತಂದು ಇಲ್ಲಿ ಪ್ರತಿಷ್ಠೆ ಮಾಡಲಾಗಿದೆ ಎನ್ನಲಾಗುತ್ತಿದೆ. ದೇವಾಲಯಕ್ಕೆ ಉಂಬಳಿ, ಉತ್ತಾರಗಳಿದ್ದು ಹಿಂದಿನ ಕಾಲದಲ್ಲಿ ಯಾತ್ರಿಕರಿಗೆ ಊಟ, ವಸತಿ ಸೌಕರ್ಯವನ್ನು ಕಲ್ಪಿಸುತ್ತಾ ಪರಿಸರದ ಜನರಿಗೆ ವಿದ್ಯಾಭ್ಯಾಸ ಒದಗಿಸುವ ಐಗಳ ಮಠದಂತೆಯೂ ಈ ಪ್ರದೇಶ ಉಪಯೂಕ್ತವಾಗಿತ್ತು.
ದೇವಸ್ಥಾನ ಹಾಗೂ ಅದರ ಉಂಬಳಿಯು ಮಂಜುನಾಥ ಭಟ್ ಎಂಬುವವರ ಹೆಸರಿನಲ್ಲಿದ್ದು ಕೆಲವು ಶತಮಾನಗಳ ಹಿಂದೆ ಆ ಕುಟುಂಬವು ವಲಸೆ ಹೋದ ನಂತರ ಪೂಜೆ ಉತ್ಸವಗಳು ಕ್ಷೀಣಿಸುತ್ತಾ ಹೋಗಿ ಸ್ಥಗಿತಗೊಂಡಿದೆ. ಸುಮಾರು ಒಂದು ಶತಮಾನದಿಂದ ಯಾವುದೇ ವಿಧಿ ವಿಧಾನಗಳು ಇಲ್ಲದೆ ನಿರ್ವಹಣೆ ಇಲ್ಲದೆ ದೇವಸ್ಥಾನ ಸಂಪೂರ್ಣ ಶಿಥಿಲ ಹೊಂದಿತ್ತು. ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು, ಗಣಪತಿ, ಅಮ್ಮನವರ ಗುಡಿ, ಪೌಳಿ, ಬಾವಿ ಎಲ್ಲವೂ ನಾಶ ಹೊಂದಿತ್ತು. ಶಿಥಿಲ ಹೊಂದಿದ ಗರ್ಭಗುಡಿಯಲ್ಲಿ ಸುಂದರವಾದ ಶಿವನ ಲಿಂಗ, ಹೊರಗಡೆ ನಂದಿಯ ಮೂರ್ತಿ ಉಳಿದುಕೊಂಡಿತ್ತು.

ಮೇ.5ರಿಂದ ನೂತನ ದೇವಳ ಸಮರ್ಪಣೆ
ಸಂಪೂರ್ಣ ಕೆಂಪು ಶಿಲೆಯಿಂದ ನಿರ್ಮಿಸಲಾದ ಗರ್ಭಗುಡಿ, ತೀರ್ಥಮಂಟ, ಮುಖಧ್ವಾರ ಸಹಿತ ಸುತ್ತು ಪೌಳಿಗಳ ನಿರ್ಮಾಣವಾಗಿದ್ದು ಇದೇ ಮೇ.5ರಿಂದ ಮೇ.8ರ ತನಕ ದೇಗುಲ ಸಮರ್ಪಣೆಯ ಪ್ರಕ್ರಿಯೆಗಳು ನಡೆಯಲಿವೆ.

ಆರ್ಥಿಕ ನೆರವು ನೀಡಬಹುದು
ಧನ ಸಹಾಯ ನೀಡುವ ಮೂಲಕ ಈ ಪವಿತ್ರ ಮಹಾತ್ಕಾರ್ಯದಲ್ಲಿ ಭಾಗಿಗಳಾಗುವ ಭಕ್ತಾದಿಗಳು ಕರ್ನಾಟಕ ಬ್ಯಾಂಕ್ ಸೇನಾಪುರ ಶಾಖೆಯಲ್ಲಿರುವ ದೇವಸ್ಥಾನದ ಉಳಿತಾಯ ಖಾತೆ ಸಂಖ್ಯೆ 6922500100074101   IFSC CODE KARB0000692 ಈ ಖಾತೆಗೆ ಜಮಾ ಮಾಡಬಹುದಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ 9902205883 ನ್ನು ಸಂಪರ್ಕಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!