Sunday, September 8, 2024

ಬಸ್ರೂರು ಕಂಚಿನ ಕಂಬದಲ್ಲಿ ಶಾಸನ ಪತ್ತೆ : ಆಮೆಯ ಹಣೆಯ ಮೇಲ್ಭಾಗದಲ್ಲಿತ್ತು ನಾಲ್ಕು ಸಾಲಿನ ಶಾಸನ


ಕುಂದಾಪುರ: ಬಸರೂರಿನ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಎದುರು ಇರುವ ಪ್ರಾಚೀನ ಕಂಚಿನ ದೀಪಸ್ತಂಭದಲ್ಲಿ ಶಾಸನ ಇರುವುದು ಪತ್ತೆಯಾಗಿದೆ. 500 ವರ್ಷಗಳಿಗೂ ಹಿಂದಿನದು ಎನ್ನಲಾದ ಈ ದೀಪಸ್ತಂಭ ಗತ ಇತಿಹಾಸವನ್ನು ಸಾರುತ್ತಿತ್ತು. ಆದರೆ ಈ ದೀಪಸ್ತಂಭದ ಬಗ್ಗೆ ಈ ತನಕ ಆಳವಾದ ಅಧ್ಯಯನ ನಡೆದಿರಲಿಲ್ಲ.


ನೂರಾರು ವರ್ಷಗಳ ಕಾಲ ದೀಪವನ್ನು ಹಚ್ಚುವ ಮೂಲಕ ಈ ಕಂಚಿನ ದೀಪಸ್ತಂಭ ಕರಿ ಕಟ್ಟಿದ ಪರಿಣಾಮವಾಗಿ ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಯಾರ ಕಣ್ಣಿಗೂ ಬೀಳಲ್ಲಿಲ್ಲ. ಆದರೆ ಬಸರೂರಿನ ಯುವ ಬ್ರಿಗೇಡ್ ತರುಣರು ಕೈಗೊಂಡ ಶ್ರಮ ದಾನದ ಫಲಶೃತಿಯಾಗಿ ಕಂಚಿನ ಕಂಭದ ಕೆಳಭಾಗ ಇಂದು ಫಳ ಫಳವಾಗಿ ಹೊಳೆಯುತ್ತಿದ್ದು ಸ್ಥಳೀಯ ನಿವಾಸಿ ಪ್ರದೀಪ್ ಕುಮಾರ್ ಬಸರೂರು ಅವರು ಈ ಶಾಸನವನ್ನು ಮೊಟ್ಟಮೊದಲ ಬಾರಿಗೆ ನೋಡಿ ಇದನ್ನು ಓದಿ ಜನರ ಗಮನಕ್ಕೆ ತರಲು ಸಫಲರಾಗಿದ್ದಾರೆ.


ಈ ಶಾಸನದಲ್ಲಿ ಇರುವ ನಾಲ್ಕು ಸಾಲುಗಳಿದ್ದು, (1). ವಿನಾಯಕ ದೇವರ (2). ಕಂಚಿನ ಕಂಬ 1 ಕ್ಕೆ (3). ನಗ 29 ಕ್ಕೆ ಅಶಲು (4). 49//3//0 ಎಂಬ ಉಲ್ಲೇಖವಿದೆ.


ಪುರಾತತ್ವ, ಶಾಸನ ಮತ್ತು ಪುರಾತನ ಮಾಪನ ತಜ್ಞರಾದ ಡಾ| ಜಗದೀಶ್ ಅಗಸಿಬಾಗಿಲು ಅವರ ಅನಿಸಿಕೆ ಪ್ರಕಾರ ಈ ಶಾಸನದಲ್ಲಿ ಕಂಚಿನ ದೀಪಸ್ತಂಭವನ್ನು ನಿರ್ಮಾಣ ಮಾಡಲು ಬೇಕಾದ ಕಂಚು ಅಥವಾ ಅದಕ್ಕೆ ಆ ಕಾಲದಲ್ಲಿ ತಗಲುವ ವೆಚ್ಚವನ್ನು ಉಲ್ಲೇಖಿಸಲಾಗಿದೆ. ಸರಿಸುಮಾರು 49 ಸೇರು ಅಂದರೆ 45.73 ಕೆಜಿ ತೂಕದ ಅಂದಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಕ್ಕೆ ಸಮನಾದ ಕಂಚನ್ನು ಈ ದೀಪಸ್ತಂಭದಲ್ಲಿ ಉಪಯೋಗಿಸಲಾಗಿದೆ. ಇನ್ನೂ ಈ ಶಾಸನದಲ್ಲಿ ಉಲ್ಲೇಖಿಸಿರುವ ವಿನಾಯಕ ಶಿವ ಪುತ್ರ ಗಣಪತಿ ಅಲ್ಲದೇ ಸ್ವಯಂ ಗರುಡನೇ ಏಕೆಂದರೆ ಗರುಡನಿಗೆ ಇರುವ ಹಲವಾರು ಹೆಸರಿನಲ್ಲಿ ವಿನಾಯಕ ಸಹಾ ಒಂದು. ಆದರಿಂದ ಈ ವಿಶಿಷ್ಠವಾದ ದೀಪಸ್ತಂಭವನ್ನು ವಿನಾಯಕ ಸ್ತಂಭ ಅನ್ನುವುದು ಸೂಕ್ತ. ಈ ದೀಪಸ್ತಂಭದಲ್ಲಿ ಕೆತ್ತಲಾಗಿರುವ ಶಿಲ್ಪಗಳ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸ್ತಂಭವನ್ನು ವಿಜಯನಗರದ ಕೊನೆಯ ಕಾಲಘಟ್ಟದಲ್ಲಿ ಅಥವಾ ಕೆಳದಿ (ಇಕ್ಕೇರಿ) ನಾಯಕರ ಪ್ರಥಮ ಕಾಲಘಟ್ಟದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಒಮ್ಮತ ಮೂಡುತ್ತದೆ. ಡಾ ಜಗದೀಶ್ ಅಗಸಿಬಾಗಿಲು ಅವರು ಸಹಾ ಈ ವಿನಾಯಕ ದೇವರ ಕಂಚಿನ ದೀಪಸ್ತಂಭವು 16ನೇ ಶತಮಾನದ ಪ್ರಥಮ ಕಾಲಘಟ್ಟಕ್ಕೆ ಸೇರಿದ್ದು ಎಂದು ಅಭಿಪ್ರಾಯ ಪಡುತ್ತಾರೆ. ನಮ್ಮ ದಕ್ಷಿಣ ಭಾರತದ ಕರಾವಳಿಯಲ್ಲಿ ಅಂದರೆ ಗೋವಾಯಿಂದ ಕೇರಳದವರೆಗೂ ರಾಜರು, ವ್ಯಾಪಾರಿಗಳು, ವ್ಯಾಪಾರಿ ಸಂಘಗಳು ಹಾಗೂ ಸಾರ್ವಜನಿಕರು ದೀಪದ ಸ್ತಂಭವನ್ನು ನಿರ್ಮಿಸಿರುವ ಬಗ್ಗೆ ಮಾಹಿತಿ ಇದೆ. ಇನ್ನೂ ಆಮೆಯ ಮೇಲೆ ಸ್ತಂಭವನ್ನು ನಿರ್ಮಾಣ ಮಾಡುವ ಕಾರ್ಯ ಅದೆಷ್ಟೋ ಶತಮಾನಗಳಿಂದ ನಡೆದುಕೊಂಡು ಬಂದಿದ್ದು ಇದನ್ನು ಇಂದು ಹಲವಾರು ಸುಪ್ರಸಿದ್ಧ ಪುರಾತನ ದೇವಾಲಯಗಳಲ್ಲಿ ಇಂದಿಗೂ ಸಹಾ ಕಾಣಬಹುದು. ಐನೂರು ವರ್ಷಗಳ ಹಿಂದೆ ಬಸರೂರಿನ ವಿನಾಯಕ ಕಂಚಿನ ದೀಪಸ್ತಂಭ ಮೂರು ದೇವಾಲಯಗಳನ್ನು ನೇರವಾಗಿ ನೋಡುತ್ತಿದ್ದರೆ ಇಂದು ಎಲ್ಲವೂ ಬದಲಾಗಿದೆ. ದೀಪಸ್ತಂಭ ಮತ್ತು ಕೋಟೆ ಆಂಜನೇಯ ದೇವಾಲಯದ ಮಧ್ಯದಲ್ಲಿ ಪ್ರಮುಖ ರಸ್ತೆ ಹಾದು ಹೋದರೆ ಇನ್ನೊಂದು ಕಡೆ ದೀಪಸ್ತಂಭದಲ್ಲಿ ಉನ್ನತಿ ನೋಡುತ್ತಿದ್ದ ಶ್ರೀ ಉಮಾಮಹೇಶ್ವರ ದೇವಾಲಯ ಪಾಳುಬಿದ್ದಿದ್ದು ಇವೆರಡರ ನಡುವೆ ಸಭಾಂಗಣ ನಿರ್ಮಾಣವಾಗಿದೆ.


ಬಸರೂರಿನ ಪ್ರದೀಪ್ ಕುಮಾರ್ ಬಸರೂರು, ಶಾಸನವನ್ನು ಪತ್ತೆ ಹಚ್ಚಿದ್ದು, ಇವರಿಗೆ ಮಾರ್ಗದರ್ಶನದೊಂದಿಗೆ ಅಜಯ್ ಕುಮಾರ್ ಶರ್ಮಾ ,ಸಹಕಾರವಾಗಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ವೇದಬ್ರಹ್ಮ ಪ್ರಭಾಕರ ಬಾಯರಿ, ಡಾ ರವಿಕುಮಾರ್ ಕೆ ನವಲಗುಂದ, ಮಧುಕರ ಮೈಯಾ ಹಾಗೂ ಡಾ ಜಗದೀಶ್ ಅಗಸಿಬಾಗಿಲು, ಸತೀಶ್ ಗುಂಡ್ಮಿ, ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!