Sunday, September 8, 2024

ಕುಂದಾಪುರ ಭಂಡಾರ್ ಕಾರ್‍ಸ್ ಕಾಲೇಜಿನಲ್ಲಿ ‘ಆವರ್ತ ಯಕ್ಷ -ವೇದಿಕೆ’ ಯಕ್ಷಗಾನ ವಸ್ತು ಸಂಗ್ರಹಾಲಯ

ಕುಂದಾಪುರದ ಭಂಡಾರ್ ಕಾರ್‍ಸ್ ಕಾಲೇಜು ಯಕ್ಷಗಾನಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಾ ಬಂದಿದೆ. ಕಾಲೇಜಿನಲ್ಲಿ ಸಕ್ರಿಯವಾಗಿರುವ ಯಕ್ಷಗಾನ ಸಂಘದಿಂದ ವಿದ್ಯಾರ್ಥಿಗಳಿಗೆ ಯಕ್ಷ ತರಬೇತಿ, ಪ್ರದರ್ಶನ, ಇಲ್ಲಿ ಚಂಡೆ, ಮದ್ದಲೆ, ನೂಪುರ ನಿನಾದಕ್ಕೆ ಭರವಿಲ್ಲ. ಯಕ್ಷಗಾನಕ್ಕೆ ಇನ್ನಷ್ಟು ಒತ್ತು ನೀಡುವ ದೃಷ್ಟಿಯಲ್ಲಿ ಕಾಲೇಜಿನಲ್ಲಿ ಎರಡು ವರ್ಷಗಳ ಹಿಂದೆ ಸ್ಥಾಪಿಸಲಾದ ಬಡಗು-ಬಡಾಬಡಗು ಯಕ್ಷಗಾನ ವಸ್ತು ಸಂಗ್ರಹಾಲಯ ಆವರ್ತ ಯಕ್ಷ-ವೇದಿಕೆ ಯಕ್ಷಪ್ರಿಯರ ಮನಸೆಳೆಯುತ್ತಿದೆ.

ಕಾಲೇಜಿನ ಒಳಗಡೆ ಇರುವ ಈ ಮ್ಯೂಸಿಯಂನಲ್ಲಿ ಸಂಪ್ರದಾಯಿಕ ಯಕ್ಷಗಾನದ ಸಮಗ್ರ ಪರಿಚಯವಿದೆ. ಕ್ಲೈ ಮೌಲ್ಡ್ ನಿಂದ ನಿರ್ಮಾಣವಾದ ಯಕ್ಷಗಾನ ಪ್ರತಿಕೃತಿಗಳು, ಮುಖವಾಡಗಳು, ವಿವಿಧ ಅಪೂರ್ವ ಛಾಯಾಚಿತ್ರಗಳು ಕಲಾಸಕ್ತರ ಗಮನ ಸಳೆಯುತ್ತದೆ.

ವಿವಿಧ ಮುಖ ವರ್ಣಿಕೆಗಳು:
ಯಕ್ಷಗಾನದಲ್ಲಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಮುಖವರ್ಣಿಕೆಯಲ್ಲಿ ಪಾತ್ರಗಳ ಗುಣ ಸ್ವಭಾವದ ವೈಶಿಷ್ಟ್ಯತೆಯನ್ನು ಬಿಂಬಿಸಲಾಗುತ್ತದೆ. ಯಕ್ಷಗಾನದ ಸಂಪ್ರದಾಯಿಕವಾದ ಮುಖವರ್ಣಿಕೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ನೀಡುವ ಸಲುವಾಗಿ ಯಕ್ಷಗಾನದಲ್ಲಿ ಬರುವ ವಿವಿಧ ಪಾತ್ರಗಳ ಮುಖವರ್ಣಿಕೆಯ ಮುಖವಾಡಗಳನ್ನು ಇರಿಸಲಾಗಿದೆ.


ಗಂಧರ್ವ, ಕರ್ಣ, ಅರ್ಜುನ, ಕೃಷ್ಣ, ಶಲ್ಯ, ಸುಭದ್ರೆ, ಪ್ರಭಾವತಿ, ಕಂಸ, ಹನುಮಂತ, ಕಿರಾತ, ಬ್ರಾಹ್ಮಣ, ಜಾಂಬವ, ಅಭಿಮನ್ಯು, ವಾಲಿ ಸುಗ್ರಿವ, ರಾಕ್ಷಸ ಧೂತ ಹಾಸ್ಯ, ಗಂಡು ಬಣ್ಣ, ಹೆಣ್ಣು ಬಣ್ಣದ ವೇಷಗಳ ಮುಖವರ್ಣಿಕೆಗಳು ಇಲ್ಲಿವೆ. ಮುಖ ವರ್ಣಿಕೆಯಲ್ಲಿ ರೇಖೆಗಳ ವಿನ್ಯಾಸಗಳ ಬಗ್ಗೆ ಪರಿಣಾಮಕಾರಿ ಚಿತ್ರಣ ಇಲ್ಲಿ ಇದೆ.

ಪಾತ್ರದ ಪ್ರತಿಕೃತಿಗಳು:
ಯಕ್ಷಗಾನದಲ್ಲಿ ಹತ್ತಾರು ಬಗೆಯ ಪಾತ್ರಗಳು ಬರುತ್ತವೆ. ಪ್ರತಿ ಪಾತ್ರವೂ ಭಿನ್ನ-ವಿಭಿನ್ನ ಹಾಗೂ ವ್ಯಕ್ತಿತ್ವದ ವಿಚಾರದಲ್ಲಿ ವಿಶಿಷ್ಟವಾಗಿರುತ್ತದೆ. ಅವುಗಳನ್ನು ಪರಿಚಯಿಸುವ ಸಲುವಾಗಿ ಇಡೀ ಪಾತ್ರದ ಪ್ರತಿಕೃತಿಯೂ ಇದೆ. ಬಡಗು ಶೈಲಿಯ ಕೃಷ್ಣ ವೇಷ, ಬಡಗಿನ ರಾಜವೇಷ, ಬಡಗಿನ ಗರತಿ ಸ್ತ್ರೀವೇಷ, ಚಿತ್ರಾಂಗದೆ, ಸುಭದ್ರೆ ಇತ್ಯಾದಿ, ಬಡಗು ಶೈಲಿಯ ರಕ್ಕಸ, ರಾಜ, ಪ್ರಭಾವಳಿಯ ಕಿರೀಟದ ವೇಷ, ಬಡಗಿನ ಹಾಸ್ಯಗಾರ ಪಾತ್ರ ದೂತ ಇತ್ಯಾದಿ, ಬಡಗಿನ ಸಾಂಪ್ರದಾಯಿಕ ಹೆಣ್ಣು ಬಣ್ಣದ ವೇಷ, ಅಕ್ಕಿಹಿಟ್ಟಿನ ಚಿಟ್ಟಿಯ ಮುಖವರ್ಣಿಕೆ, ನವಿಲುಗಿರಿಯ ಕಿರೀಟ ಹೀಗೆ ಹಲವು ವೈವಿಧ್ಯಮಯ ಪ್ರಕಾರಗಳ ಪರಿಚಯ ಇಲ್ಲಿದೆ.

ಯಕ್ಷಗಾನ ಆಹಾರ್ಯ:
ಯಕ್ಷಗಾನದಲ್ಲಿ ವಾಚಿಕದಷ್ಟೆ ಆಹಾರ್ಯ ಮುಖ್ಯ. ಕಸೆ ಸೀರೆಯಿಂದ ಆರಂಭಿಸಿ ಕೇದಗೆಮಂದಲೆಯ ತುರಾಯಿ ತನಕವೂ ಮಹತ್ವದ್ದಾಗಿದೆ. ಯಕ್ಷಗಾನದ ಉಡುಗೆ-ತೊಡುಗೆ, ಬಳಕೆ, ಮಹತ್ವದ ಬಗ್ಗೆ ವಿವರಣೆ ಇದೆ. ಒಂದು ವೇಷದ ಭಾವಚಿತ್ರವಿಟ್ಟು ಆಹಾರ್ಯಗಳ ಸಮಗ್ರ ಪರಿಚಯ ಮಾಡಲಾಗಿದೆ. ಪ್ರಸಾದನ, ಬಣ್ಣಗಳ ವೈವಿಧ್ಯತೆ, ಜವಳಿಗಳ ನಾಮವಳಿಗಳನ್ನು ತಿಳಿಸಿಕೊಡಲಾಗಿದೆ. ಇಲ್ಲಿ ಯಕ್ಷಗಾನ ಸಂಬಂಧಿ ಛಾಯಾಚಿತ್ರಗಳಿವೆ. ದೊಂದಿ ಬೆಳಕಿನ ಯಕ್ಷಗಾನ, ಮುಖವರ್ಣಿಕೆಯ ಪ್ರಾತ್ಯಕ್ಷಿಕೆ, ರಂಗನಡೆ, ಯಕ್ಷಗಾನ ತರಬೇತಿ ಸನ್ನಿವೇಶಗಳು, ಯಕ್ಷಗಾನ ಆಭರಣಗಳ, ಧಿರೀಸು, ಪೋಷಾಕುಗಳ ತಯಾರಿಯ ಚಿತ್ರಗಳಿವೆ.


ರಂಗಸ್ಥಳದ್ದೆ ಪ್ರತಿಕೃತಿ:
ಇಡೀ ಯಕ್ಷ ಸ್ಥಳದ ಸ್ವರೂಪವನ್ನು ಶಾಶ್ವತ ಪ್ರತಿಯನ್ನಾಗಿ ಇಲ್ಲಿ ಸ್ಥಾಪಿಸಲಾಗಿದೆ. ಬಡಗಿನ ಸಾಂಪ್ರದಾಯಿಕ ಆರು ಸ್ತಂಭಗಳ ರಂಗಸ್ಥಳ, ಸಿಂಹಾಸನ, ಹಿನ್ನೆಲೆ ಪರದೆ, ಹಿಮ್ಮೇಳದವರ ಉಪಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಭಾಗವತರು ಭಾಗವತಿಕೆ ಮಾಡುತ್ತಿರುವುದು, ಮದ್ದಳೆಗಾರರು ಮದ್ದಳೆ ನುಡಿಸುತ್ತಿರುವುದು, ಚಂಡೆಯವರು ಚಂಡೆ ಭಾರಿಸುತ್ತಿರುವ ಪರಿಣಾಮಕಾರಿ ನೋಟ ಇಲ್ಲಿದೆ. ರಂಗಸ್ಥಳದ ಪೂರ್ಣ ಕಲ್ಪನೆಯನ್ನು ಈ ಪ್ರತಿಕೃತಿ ವಿವರಿಸುತ್ತದೆ.

ಮಣಿಪಾಲ ಆಕಾಡೆಮಿ ಆಫ್ ಎಜ್ಯುಕೇಶನ್‍ನ ಅಧ್ಯಕ್ಷರಾದ ಡಾ|ಎಚ್.ಶಾಂತಾರಾಮ್ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ| ಎನ್.ಪಿ.ನಾರಾಯಣ ಶೆಟ್ಟಿಯವರ ಸಹಕಾರದಲ್ಲಿ ಆವರ್ತ ಯಕ್ಷ-ವೇದಿಕೆಯ ಸಂಚಾಲಕರಾದ ಶಶಾಂಕ್ ಪಟೇಲ್ ನೇತೃತ್ವದಲ್ಲಿ ರೂಪಿಸಲಾಗಿದೆ. ಬ್ರಹ್ಮಾವರದ ಮಿಥುನ್ ನಾಯ್ಕ್ ಕ್ಲೈ ಮೌಲ್ಡ್ ನಲ್ಲಿ ಪ್ರತಿಕೃತಿ ಹಾಗೂ ಮುಖವಾಡಗಳನ್ನು ನೈಜವೆನಿಸುವಷ್ಟು ಚೆನ್ನಾಗಿ ನಿರ್ಮಿಸಿದ್ದಾರೆ.

ಇಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ, ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿವರ್ಷ ಆವರ್ತ ಯಕ್ಷ ವೇದಿಕೆ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಕಾಲೇಜು ಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ಬಾರಿ 20 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಉಪನ್ಯಾಸಕರು, ಪ್ರವೃತ್ತಿಯಲ್ಲಿ ಪ್ರಸಿದ್ಧ ಹವ್ಯಾಸಿ ಕಲಾವಿದರೂ ಆಗಿರುವ ಶಶಾಂಕ್ ಪಟೇಲ್ ತರಬೇತಿ ನೀಡುತ್ತಿದ್ದಾರೆ.

ಕಾಲೇಜಿನ ಆವರ್ತ ಯಕ್ಷ-ವೇದಿಕೆ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಲು ಬೇರೆ ಬೇರೆ ಕಾಲೇಜಿನ ಆಸಕ್ತ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಈ ಬಗ್ಗೆ ಆಸಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಾಲೇಜಿನ ಅನುಮತಿಯೊಂದಿಗೆ ಮ್ಯೂಸಿಯಂ ವೀಕ್ಷಿಸಬಹುದಾಗಿದೆ.
ಮಾಹಿತಿಗೆ ಕಾಲೇಜಿನ ದೂರವಾಣಿ ಸಂಖ್ಯೆ-08254 230369, ಸಂಚಾಲಕರು-9449240501 ಸಂಪರ್ಕಿಸಬಹುದು.

(ಬರೆಹ: ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!