Wednesday, April 17, 2024

ಸಾಂಸ್ಕೃತಿಕ ರಾಯಭಾರಿ, ನೃತ್ಯ ಗುರು ಅಂತರಾಷ್ಟ್ರೀಯ ಖ್ಯಾತಿಯ ಡಾ|ಮೀನಾಕ್ಷಿ ರಾಜು ಶ್ರೀಯಾನ್

ನೃತ್ಯ ಅಭಿನಯ ಮತ್ತು ನೃತ್ಯ ನಿರ್ದೇಶನದಲ್ಲಿ ತನ್ನದೇಯಾದ ವಿಶಿಷ್ಠ ಛಾಪು ಮೂಡಿಸಿ, ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್, ಮೋಹಿನಿಯಾಟ್ಟಂನಂಥಹ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲದೆ ಜಾನಪದ ಮತ್ತು ಪಾಶ್ಚಾತ್ಯ ಶೈಲಿಯ ನೃತ್ಯಗಳನ್ನು ಅವರು ರೂಢಿಸಿಕೊಂಡಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನು ನಡೆಸಿ, ವೀಣಾ ವಾದನ, ಕನರ್ಾಟಕ ಸಂಗೀತದಲ್ಲಿಯೂ ಅದ್ಬುತ ಸಾಧನೆ ಮಾಡಿ ನಾಟ್ಯಕಲೆಗೊಂದು ವಿಶೇಷ ಮಾನ್ಯತೆ ತಂದುಕೊಟ್ಟು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ಡಾ|ಮೀನಾಕ್ಷಿ ರಾಜು ಶ್ರೀಯಾನ್.

ಅರ್ಜಿಸಿಕೊಂಡಿದ್ದನ್ನು ಇನ್ನೊಬ್ಬರಿಗೆ ದಾರೆ ಎರೆಯುವ ಉದಾತ್ತ ಗುರುಮನಸ್ಸಿನ ಮೀನಾಕ್ಷಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ-ಸಂಗೀತವನ್ನು ಕಲಿಸುವ ಮೂಲಕ ತನ್ನಂತೆ ಅದೆಷ್ಟೋ ಪ್ರತಿಭೆಗಳನ್ನು ಪೋಷಿಸಿದ್ದಾರೆ. ಹಮ್ಮು-ಬಿಮ್ಮುಗಳಿಲ್ಲದೆ ನೃತ್ಯಶಾಸ್ತ್ರದ ಆಳ-ವಿಸ್ತಾರವನ್ನು ಅರಿತಿರುವ ಇವರು ಯೋಗ್ಯ ಗುರುವಾಗಿ, ಭಾರತದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗಮನ ಸಳೆಯುತ್ತಾರೆ.

ಬಾಲ್ಯವೇ ಸಂಗೀತ-ಕಲೆಯನ್ನು ಕಲಿಸಿತು. ಬದುಕಿನ ಮುಂದೆ ನಾಟ್ಯಕಲೆ ತೆರೆದುಕೊಂಡಿತು. ಪ್ರಯೋಗಶೀಲತೆಯಲ್ಲಿ ಹೊಸ ಹೊಸ ಕುಸುಮಗಳು ಪಲ್ಲವಿಸಿದವು. ಯಶಸ್ಸಿನ ನಾಗಲೋಟವೇ ಆರಂಭವಾಯಿತು. ಉಡುಪಿ ತಾಲೂಕಿನ ಹೆಜಮಾಡಿ ಗ್ರಾಮದ ಗುರು ಮಹಾಬಲ ಸುವರ್ಣ ಮತ್ತು ಸುಶೀಲಾ ಎಂ.ಸುವರ್ಣ ಮುಲ್ಕಿ ಅವರ ಪುತ್ರಿಯಾಗಿ ಜನಿಸಿದ ಮೀನಾಕ್ಷಿ ಅವರಿಗೆ ಮನೆಯೇ ಕಲಾಲಯ. ಸಂಗೀತ ಸಾಂಸ್ಕೃತಿಕ ವಿಕಸನಕ್ಕೆ ಅಮ್ಮನೇ ಮೊದಲ ಗುರು. ಆಗಲೇ ಮುಂಬಯಿಯಲ್ಲಿ ಅರುಣೋದಯ ಕಲಾ ನಿಕೇತನ ಚೆಂಬೂರು ಎನ್ನುವ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಅರುಣೋದಯವೇ ಇವರಿಗೂ ಸಂಗೀತ ನೃತ್ಯದ ಅರುಣೋದಯವಾಯಿತು. ಅಮ್ಮನಿಂದ ಪಿಟೀಲು , ವೀಣೆ ನುಡಿಸುವುದನ್ನು ಕಲಿತರು. ತಂದೆ ಸ್ಥಾಪಿಸಿದ ಅರುಣೋದಯ ಕಲಾನಿಕೇತನಲ್ಲದೆ ಹಲವು ನೃತ್ಯ ಶಾಲೆಗಳ ಮೂಲಕ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿರುವ ಇವರು ಪ್ರಸಿದ್ದ ನೃತ್ಯ ನಿದರ್ೇಶಕಿಯಾಗಿ, ವಿಧುಷಿಯಾಗಿ, ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡವರು.
ಪ್ರಸಿದ್ದ ನೃತ್ಯ ಕಲಾವಿದೆಯಾಗಿ, ಸುಪ್ರಸಿದ್ಧ ನೃತ್ಯ ನಿರ್ದೇಶಕಿಯಾಗಿ, ಅದ್ಬುತ ಕಲ್ಪನೆಗಳನ್ನು ರಂಗದಲ್ಲಿ ಜೀವಂತಗೊಳಿಸುವ ಹೊಸತುಗಳ ಪರಿಶೋಧಿಸುವ ಮೀನಾಕ್ಷಿಯವರು ಈಗಾಗಲೇ ನೃತ್ಯಕಲೆಯ ಮೂಲಕವೇ ದೇಶದ ಕೀರ್ತಿ ಪತಾಕೆಯನ್ನು ವಿದೇಶದ ನೆಲದಲ್ಲಿ ಹಾರಿಸಿದ್ದಾರೆ. ದುಬೈ, ಇಂಗ್ಲೆಂಡ್, ಅಮೇರಿಕ, ಸಿಂಗಾಪುರ, ಜರ್ಮನಿ, ಬೆಹರಿನ್, ಮಾರಿಷಸ್, ಶ್ರೀಲಂಕಾ, ಕೆನಡಾ, ಪ್ಯಾರಿಸ್, ಮಾಲ್ಡಿವ್ಸ್, ಕತಾರ್, ಕಿನ್ಯಾ, ಮಲೇಶ್ಯಾ ಸೇರಿದಂತೆ ಹಲವಾರ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಇವರು ಅಭಿನಯಿಸಿ, ನಿರ್ದೇಶಿಸಿದ ಅಷ್ಟಲಕ್ಷ್ಮೀ, ಅಯ್ಯಪ್ಪ ಅವತಾರ, ಶ್ರವಣ ಕುಮಾರ, ದೇವಿ ನಮಃ, ಕೃಷ್ಣಲೀಲಾ, ಶಕುಂತಲಾ, ದ್ರೌಪದಿ, ತಾಂಡವ ಲಾಸ್ಯ, ಗಣೇಶ ವಿಜಯ, ಔಕ್ತ ಮಾರ್ಕಂಡೇಯ, ದಶಾವತಾರ, ತಾಯಿ ಯಶೋಧ, ಕಾಳಿಂಗ ನರ್ತನ, ತ್ರಿಪುರ ಸಮರ, ನಾರಾಯಣಿಯಂ, ಕಾಳಿದಾಸ. ಮೇಘಧೂತ, ನವಸಂಧಿ, ಸಮಯ ಕಾಲಚಕ್ರ, ಶ್ರೀಚಕ್ರ, ಶಕ್ತಿಮಾಯೆ, ಕಾಲಸಮರ ಮುಂತಾದವುಗಳು ಭಾರಿ ಜನಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಜಾನಪದದಲ್ಲಿ ಕಿನ್ನರಿ ಜೋಗಿ, ಪುರಂದರದಾಸ, ಕನಕ ದಾಸರ ಕೀರ್ತನೆ ಆಧಾರಿತ ನೃತ್ಯಗಳು, ಕುಣಿದಾಡು ಕ್ರಷ್ಣ, ಮರಾಠಿಯಲ್ಲಿ ರಾಜಹಂಸ, ಅಭಂಗ, ತಮಿಳಿನಲ್ಲಿ ಅಯ್ಯಪ್ಪವತಾರಂ ಮುಂತಾದವುಗಳನ್ನು ನಿರ್ದೇಶಿಸಿ, ಸ್ವತಃ ಅಭಿನಯಿಸಿದ್ದಾರೆ.

ಇವರು ನಿರ್ದೇಶಿಸುವ ಹಾಗೂ ಅಭಿನಯಿಸುವ ನೃತ್ಯಗಳಲ್ಲಿ ಅದ್ಬುತ ಶಕ್ತಿ ಇರುತ್ತದೆ. ಪ್ರೇಕ್ಷಕ ಸಂದೋಹವನ್ನು ಮಂತ್ರಮುಗ್ದಗೊಳಿಸುವ ಅಭಿವ್ಯಕ್ತಿ ಇರುತ್ತದೆ. ಅಷ್ಟೊಂದು ಗುಣಮಟ್ಟ, ಪ್ರತಿಭಾಸಿರಿಯಿಂದ ಕಾರ್ಯಕ್ರಮ ತುಂಬಿರುತ್ತದೆ. ಬೆರಗು ಮೂಡಿಸುವ ಲಾಸ್ಯಗಳು, ಮುಕ್ತ ಪ್ರಶಂಸೆಗೆ ಪಾತ್ರವಾಗುವ ಮುದ್ರೆಗಳು, ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಪರಿಕರ, ಕಿವಿಗೆ ತಂಪನೀಯುವ ಸಂಗೀತ, ಕಣ್ಗಗಳಿಗೆ ಹಿತವಾಗುವ ಬೆಳಕು, ನೃತ್ಯಕ್ಕೆ ಒಪ್ಪಕೊಡುವ ರಂಗ ವಿನ್ಯಾಸ ಒಟ್ಟಾರೆ ಒಂದು ಅದ್ಬುತ ಪ್ರದರ್ಶನವನ್ನು ಇವರು ನೀಡುತ್ತಾರೆ. ಹಾಗಾಗಿಯೇ ಮುಂಬಯಿ ಮಹಾನಗರವಲ್ಲದೇ ಬೇರೆ ಬೇರೆ ಕಡೆಗಳಲ್ಲಿಯೂ ಪೂರೈಸದಷ್ಟು ಬೇಡಿಕೆ ಇದೆ.

ವಿದೇಶಗಳಲ್ಲಿ ಇವರ ನೃತ್ಯಕ್ಕೆ ಮೇರು ಮನ್ನಣೆ ದೊರಕಿದೆ. ಜರ್ಮನಿಯ ವಿವಿಧೆಡೆಗಳಲ್ಲಿ ಇವರ ಸಾಂಸ್ಕೃತಿಕ ಸಂಬಂಧಗಳಿಗೆ ಭಾರತದ ರಾಯಭಾರಿಯಾಗಿ ಜರ್ಮನಿಯಲ್ಲಿ 2003ರಲ್ಲಿಯೇ ಭರತನಾಟ್ಯ ಕಲಾವಿದರಾದ ಲಿಜಾ ಪುರ್ಕೆಟ್, ಪ್ರಿಯದರ್ಶನಿ ಘಾಟಕ್ ಅವರೊಂದಿಗೆ ಆಯ್ಕೆಯಾಗಿ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ವಿದ್ವತ್ ಮೆರೆದಿದ್ದಾರೆ. ಬೆಹರಿನ್ನಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ, ಮಾರಿಷಸ್ನಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿರುವುದು ಉಲ್ಲೇಖನೀಯ.

ರಂಗಭೂಮಿಯಲ್ಲಿಯೂ ಇವರ ಖ್ಯಾತಿ ಹಬ್ಬಿದೆ. 2008ರಲ್ಲಿ ಕರ್ನಾಟಕದಲ್ಲಿ ನಡೆದ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದ ನಾಟಕಕ್ಕೆ ನೃತ್ಯ ನಿರ್ದೇಶನ ಮಾಡಿದ್ದು ಈ ನಾಟಕ ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತ್ತು. 2002ರಲ್ಲಿ ಮುಂಬಯಿಯಲ್ಲಿ ನಡೆದ ಕುವೆಂಪು ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಕಿನ್ನರಿ ಜೋಗಿ ಮಕ್ಕಳ ನಾಟಕದಲ್ಲಿ ನೃತ್ಯ ನಿರ್ದೇಶನ ಮಾಡಿದ್ದರು. ಇಷ್ಟೇ ಅಲ್ಲ, ಕಾರ್ಪೊರೇಟ್ ಕಂಪೆನಿಗಳು ಆಯೋಜಿಸಿದ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. 1987ರಲ್ಲಿ ಫಿಜರ್ ಲಿ ಸರ್ವಿಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ, 1986ರಲ್ಲಿ ಫಿಜರ್ ಲಿಮಿಟೆಡ್ ಕಾರ್ಪೊರೇಟ್  ಸೆಮಿನಾರ್ನಲ್ಲಿ ವಿನೂತನ ಶೈಲಿಯ ನೃತ್ಯಗಳ ಪ್ರದರ್ಶನ ನೀಡಿದ್ದರು. ಮುಂಬಯಿಯಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಚಾಲನೆಗೊಂಡ ನ್ಯೂಸ್ ಚಾನೆಲ್ ಉದ್ಘಾಟನೆಯಲ್ಲಿ , ನ್ಯೂ ಎಡಿಷನ್ ಆಫ್ ಮುಂಬಯಿ ನ್ಯೂಸ್ ಚಾನೆಲ್ನಲ್ಲಿ ಇವರು ನೃತ್ಯ ಪ್ರದರ್ಶನ ನೀಡಿದ್ದರು.

ನೃತ್ಯ, ಸಂಗೀತ, ಸಾಂಸ್ಕೃತಿಕ ಪ್ರಜ್ಞೆಯ ಬಗ್ಗೆ ಹಲವಾರು ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ನೃತ್ಯೋತ್ಸವ, ಸಂಗೀತ ಕಚೇರಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಕಿಯಾಗಿಯೂ ಗಮನ ಸಳೆದಿದ್ದಾರೆ. ಮಾರ್ಷಲ್ ಆರ್ಟ್ಸ್, ಜಾನಪದ ನೃತ್ಯ, ಯೋಗ ವಿದ್ಯೆಯಲ್ಲಿಯೂ ಹಿಡಿತ ಸಾಧಿಸಿದ್ದಾರೆ. ನೃತ್ಯ ಸಂಗೀತ ಕಲೆಯ ಲೇಖಕರಾಗಿ ನೃತ್ಯಕ್ಕೆ ಅಭಿನಯಕ್ಕೆ ಸಂಬಂಧಿಸಿದ ಆನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.

ಸಂಗೀತ ಶಿಕ್ಷಕಿಯಾಗಿ
ಅರುಣೋದಯ ಕಲಾ ನಿಕೇತನದಲಿ ನೃತ್ಯ ಗುರುವಾಗಿ ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಾರೆ. 1995ರಿಂದ ಮುಂಬಯಿಯ ಶ್ರೀ ವಲ್ಲಭ ಸಂಗೀತಾಲಯದಲ್ಲಿ ಶಿಕ್ಷಕಿಯಾಗಿದ್ದಾರೆ. ಭರತ ಕಾಲೇಜ್ ಆಫ್ ಫೈನ್ ಆರ್ಟ್ಸ್ ನಲ್ಲಿ  ನೃತ್ಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೆಂಬೂರಿನ ಸುತ್ತಮುತ್ತ ವಿಕಲಚೇತನ ಮಕ್ಕಳಿಗೆ ನಾಟ್ಯ ತರಬೇತಿ ನೀಡುತ್ತಿದ್ದಾರೆ.

ಲಲಿತ ಕಲೆಯಲ್ಲಿ ಎಂ.ಎಫ್.ಎ ಪದವಿ
ಮುಂಬಯಿಯ ಚೆಂಬೂರಿನ ಚೆಡ್ಡಿನಗದಲ್ಲಿ ಜನಿಸಿದ ಮೀನಾಕ್ಷಿಯವರು ನಾಲ್ಕನೇ ವರ್ಷದಲ್ಲಿಯೇ ರಂಗದಲ್ಲಿ ಮಿಂಚಿದವರು. ಬಿ.ಎ ಪದವಿ ಪಡೆದು ಬಳಿಕ ಮದರಾಸು ವಿ.ವಿಯಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು. ನಾಗಪುರ ವಿಶ್ವವಿದ್ಯಾಲಯದಿಂದ ಲಲಿತ ಕಲೆಯಲ್ಲಿ ಸ್ನಾತಕೋತ್ತರ (ಎಂ.ಎಫ್.ಎ) ಪದವಿ ಪಡೆದರು. ತಂದೆಯ ಬಳಿಯಲ್ಲಿಯೇ ನಾಲ್ಕು ವರ್ಷ ನೃತ್ಯಾಭ್ಯಾಸ ಮಾಡಿ, ಎ.ಎಫ್ ಕುಂಜಿನಾಥನ್ ಮತ್ತು ಜೆ.ವೇಣುಗೋಪಾಲ್ ಪಿಳ್ಳೆಯವರ ಬಳಿ ನೃತ್ಯ ಪ್ರಕಾರಗಳ ಕಲಿತರು. 1993ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಿಂದುಸ್ತಾನಿ ಸಂಗೀತ, ಘರಾಣ-ತಂಜಾವೂರು ಪಡೆದು ನೃತ್ಯವಿಶಾರದೆ ಎನಿಸಿಕೊಂಡರು.

2005ರಲ್ಲಿ ನಾವುಂದದವರಾದ ಮುಂಬಯಿಯಲ್ಲಿ ಬ್ಯಾಂಕ್ ಉದ್ಯೋಗಿಯಾದ ರಾಜು ಶ್ರೀಯಾನ್ ಬಾಳ ಸಂಗಾತಿಯಾದರು. ರಾಜು ಶ್ರೀಯಾನ್ ಕೂಡಾ ಅಪ್ಪಟ ಕಲಾಭಿಮಾನಿ, ನೃತ್ಯ ಸಂಗೀತದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಹಾಗಾಗಿ ಪತಿಯ ಕಲಾಪೋಷಣೆಯ ಆಶ್ರಯದಲ್ಲಿ ಇನ್ನಷ್ಟು ಪ್ರಬುದ್ಧತೆ ಲಭಿಸಿತು.

ನಾಟ್ಯ ಮಯೂರಿ, ನಾಚು ಮಯೂರಿ, ನೃತ್ಯ ವಿಶಾರದೆ, ಮೊಗವೀರ ಮಯೂರಿ, ನಾಟ್ಯ ಪ್ರವೀಣೆ, ನಾಟ್ಯ ಸರಸ್ವತಿ, ಮಿನುಗು ತಾರೆ, ನಾಟ್ಯ ಶಾರದೆ ಮೊದಲಾದ ಬಿರುದುಗಳು ಇವರಿಗೆ ಸಂದಿವೆ. ಸಂದ ಪ್ರಶಸ್ತಿಗಳು ಅಸಂಖ್ಯ. 2012ರಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಜ್ಞಾನ ಮಂದಾರ ಪ್ರಶಸ್ತಿ, ವಚನಶ್ರೀ ಪ್ರಶಸ್ತಿ, 2011ರಲ್ಲಿ ರಷ್ಯಾದ ರಾಯಭಾರಿ ಎಚ್.ಇ.ಡಿಮಿಟ್ರಿಎ ಕಜೆನೊವ್ ಅವರಿಂದ ಶ್ರೇಷ್ಠ ನರ್ತಕಿ ಪ್ರಶಸ್ತಿ, ಇಂದಿರಾ ಅಂತರಾಷ್ಟ್ರೀಯ ಆವಾರ್ಡ್, ಸುವರ್ಣ ಕರ್ನಾಟಕ ರತ್ನ ರಾಜ್ಯ ಪ್ರಶಸ್ತಿ, ನೃತ್ಯ ಜ್ಯೋತಿ ಪ್ರಶಸ್ತಿ, ಡಾ|ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, 2010ರಲ್ಲಿ ಸ್ವಾಮಿ ವಿವೇಕನಂದ ರಾಷ್ಟ್ರೀಯ ಪ್ರಶಸ್ತಿ, 2006ರಲ್ಲಿ ನೊಬೆಲ್ ಪ್ರಶಸ್ತಿ, ಹೃದಯವಂತ ಪ್ರಶಸ್ತಿ, ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.
-ಲೇಖನ: ನಾಗರಾಜ್ ವಂಡ್ಸೆ

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!