spot_img
Tuesday, July 7, 2026
spot_img

ಪ್ರಾಚೀನ ಯಡಾಡಿ ಮದಗ ಕೆರೆಗೆ ಕಾಯಕಲ್ಪ |’ನಮ್ಮೂರು ನಮ್ಮ ಕೆರೆ’ ಅಭಿಯಾನದಲ್ಲಿ ಬೃಹತ್ ಕೆರೆಗೆ ಜೀವಕಳೆ

ಮೊದಲು ಕೆರೆ ಹೀಗಿತ್ತು.
ಕೆರೆ ಅಭಿವೃದ್ಧಿಗೆ ಭೂಮಿ ಪೂಜೆ

[ವರದಿ: ನಾಗರಾಜ್ ವಂಡ್ಸೆ]

ಕುಂದಾಪುರ ತಾಲೂಕಿನ ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಗ್ರಾಮದ ಬಹುದೊಡ್ಡ ಜಲಮೂಲವಾದ ಯಡಾಡಿ ಕೆರೆಗೆ ಕಾಯಕಲ್ಪದ ಯೋಗ ಲಭಿಸಿದೆ. ಈ ಕೆರೆ ಪುನಶ್ಚೇತನ ಕನಸಿನ ಮಾತು ಎಂದೇ ಭಾವಿಸಿದ್ದ ಕಾಲವಿತ್ತು. ಯಡಾಡಿ ಗ್ರಾಮದ ಬಹುದೊಡ್ಡ ಕನಸು ನನಸಾಗಿದೆ. ಸಂಪೂರ್ಣ ಅವನತಿಗೆ ಸೇರಿ ಇತಿಹಾಸವಾಗುತ್ತಿದ್ದ ಕೆರೆ ಈಗ ವಿಶಾಲ ಕೆರೆಗೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಇದರ ನಮ್ಮೂರು ನಮ್ಮ ಕೆರೆ ಅಭಯಾನದಲ್ಲಿ 955ನೇ ಕೆರೆಯಾಗಿ ಯಡಾಡಿ ಕೆರೆ ಅಮಗ್ರ ಅಭಿವೃದ್ಧಿಗೊಂಡು ಹಸ್ತಾಂತರಕ್ಕೆ ಸಿದ್ಧವಾಗಿದೆ.

ಸುಮಾರು 5 ಎಕ್ರೆ ವಿಸ್ತೀರ್ಣದ ಯಡಾಡಿ ಕೆರೆಗೆ ಶತಶತಮಾನಗಳ ಇತಿಹಾಸವಿದೆ. ಯಡಾಡಿಯ ಗುಡ್ಡಟ್ಟು ಭಾಗದ ಗದ್ದೆಗಳಿಗೆ ಏಕೈಕ ನೀರಿನ ಮೂಲ ಈ ಕೆರೆಯಾಗಿತ್ತು. ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು. ಕಾಲಕ್ರಮೇಣ ಕೆರೆ ಹೂಳು ತುಂಬುತ್ತ ಬಂತು. ಇತ್ತೀಚೆಗಿನ ವರ್ಷಗಳಲ್ಲಿ ನೀರಿನ ಒರತೆ ಕಡಿಮೆಯಾಗಿ ನೆನೆಗುದಿಗೆ ಬಿದ್ದಿತ್ತು.

ಗ್ರಾಮದ ಜೀವಸಲೆಯಾದ ಈ ಕೆರೆಯ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಪ್ರಮುಖರು ಸಾಕಷ್ಟು ಯೋಚನೆ ಮಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹತ್ವಕಾಂಕ್ಷಿ ಯೋಜನೆಯಾದ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಈ ಕೆರೆ ಪ್ರಸ್ತಾಪ ಮುಂದಿಟ್ಟರು. ಕಳೆದ ವರ್ಷದ ಸಮೀಪದ ಕ್ಯಾಸನಕೆರೆ ಇದೇ ಯೋಜನೆಯಲ್ಲಿ ಅಭಿವೃದ್ಧಿಗೊಂಡಿತ್ತು. ಈ ಕೆರೆಯ ವಿಸ್ತಾರ, ಮಹತ್ವ ಗಮನಿಸಿದ ಧ.ಗ್ರಾ ಯೋಜನೆ ಕೆರೆ ಅಭಿವೃದ್ಧಿಗೆ ಮಂಜೂರಾತಿ ನೀಡಿತು. ಅರುಣ್ ಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಯಡಾಡಿ ಮದಗ ಕೆರೆ ಸಮಿತಿ ರಚನೆಗೊಂಡಿತು.
ಸುತ್ತ ಹೂಳು ತುಂಬಿ, ಮಧ್ಯ ಸಣ್ಣ ಹೊಂಡದಲ್ಲಿ ಮಾತ್ರ ನೀರಿನ ಮೂಲ ಇದ್ದು ಕ್ರಿಕೆಟ್ ಮೈದಾನದಂತಿದ್ದ ಕೆರೆಯನ್ನು ಸಮಗ್ರ ಹೂಳೆತ್ತಿ ಅಭಿವೃದ್ಧಿ ಪಡಿಸುವ ಕಾರ್ಯಯೋಜನೆ ಏಪ್ರಿಲ್ 10-2026ರಂದು ಚಾಲನೆ ಪಡೆಯಿತು. ವೇಗವಾಗಿ ನಡೆದ ಕಾಮಗಾರಿ ಎರಡು ತಿಂಗಳಲ್ಲಿ ಕೆರೆ ಪುನಶ್ಚೇತನಗೊಂಡಿತು. ಸುಮಾರು ಏಳು ಲಕ್ಷದ ಐವತ್ತೈದು ಸಾವಿರ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಂಡಿದೆ. ಹೂಳು ಸಾಗಾಟದಲ್ಲಿ ಸ್ಥಳೀಯರು ಸಹಕಾರ ನೀಡಿದ್ದು, ಗ್ರಾಮಸ್ಥರು ಅಭಿಮಾನದಿಂದ ಕೆರೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಪರಿಸರದಲ್ಲಿಯೇ ಅತೀ ವಿಸ್ತಾರವಾದ ಕೆರೆಯಾಗಿ ಮಾರ್ಪಟ್ಟಿದೆ. ಸುಮಾರು 10-15 ಅಡಿ ಆಳ ಮಾಡಲಾಗಿದೆ. ಸುತ್ತ ರಸ್ತೆ ನಿರ್ಮಾಣ ಮಾಡಿದ್ದು, ನಡೆದುಕೊಂಡು ವಿಹಾರ ಮಾಡಲು ಅನುಕೂಲವಾಗುತ್ತದೆ. ಇದರ ಬದುಗಳಲ್ಲಿ ಸುತ್ತ ಹಣ್ಣಿನ ಗಿಡಗಳನ್ನು ನಡಲಾಗುತ್ತದೆ. ಕಾಡು ಪ್ರಾಣಿಗಳಿಗೆ ನೀರು ಕುಡಿದುಕೊಂಡು ಹೋಗಲು ಅನುಕೂಲವಾಗಲು ಇನ್ನೊಂದು ರಚನೆಯನ್ನು ಮಾಡಲಾಗಿದೆ. ಕೆರೆಯ ಒಂದು ಭಾಗದಲ್ಲಿ ತಾಳೆ ಮರವೊಂದಿದ್ದು ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಕ್ಕಿ ಪಕ್ಷಿಗಳು ನೀರಡಿಕೆ ನಿವಾರಿಸಿಕೊಳ್ಳಲು, ಇದರ ಬುಡಭಾಗದ ಸಾಕಷ್ಟು ಮಣ್ಣಿದ ದಿಬ್ಬವನ್ನು ಉಳಿಸಿದ್ದು ಅನುಕೂಲವಾಗಲಿದೆ.

ವ್ಯವಸ್ಥಿತವಾಗಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದ್ದು, ಈ ಕೆರೆಯಿಂದ ಸುತ್ತ ಕುಡಿಯುವ ನೀರಿನ ಬಾವಿಗಳ ಅಂತರ್ಜಲ ವೃದ್ಧಿಯಾಗಲಿದೆ. ಕೆಳಭಾಗದ 300ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಗೆ ನೀರಾವರಿ ಅನುಕೂಲತೆ ಲಭಿಸಲಿದೆ. ಒಟ್ಟಾರೆಯಾಗಿ ಪ್ರಾಚಿನ ಕೆರೆಯೊಂದನ್ನು ಅಭಿವೃದ್ದಿ ಪಡಿಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ಲಾಘನಾರ್ಹ ಕಾರ್ಯವಾಗಿದೆ.

ಜು.8ರಂದು ಕೆರೆ ಸ್ಥಳೀಯಾಡಳಿತಕ್ಕೆ ಹಸ್ತಾಂತರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ-2 ಯೋಜನಾ ಕಛೇರಿ, ಗ್ರಾಮ ಪಂಚಾಯತ್ ಹೊಂಬಾಡಿ ಮಂಡಾಡಿ, ಕೆರೆ ಅಭಿವೃದ್ದಿ ಸಮಿತಿ-ಯಡಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ 955ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಂಡಿರುವ ಯಡಾಡಿ ಮದಗ ಕೆರೆಯ ಹಸ್ತಾಂತರ ಕಾರ್ಯಕ್ರಮ, ಕೆರೆಯಂಗಳದಲ್ಲಿ ಗಿಡ ನಾಟಿ, ಬಾಗಿನ ಕಾರ್ಯಕ್ರಮ ಜುಲೈ8 ಬುಧವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ.

ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಉದ್ಘಾಟನೆ ನೆರವೇರಿಸಲಿದ್ದಾರೆ. ಯಡಾಡಿ ಮದಗ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅರುಣ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ನಾಮಫಲಕ ಅನಾವರಣ ಮಾಡಲಿದ್ದಾರೆ. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕರಾವಳಿ ಪ್ರಾದೇಶಿಕ ಕಛೇರಿ-ಉಡುಪಿ ಇದರ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಕೆರೆ ಹಸ್ತಾಂತರ ನೆರವೇರಿಸಲಿದ್ದಾರೆ. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೆಟ್ಟಿ ಕೆರೆಯಂಗಳದಲ್ಲಿ ಗಿಡನಾಟಿ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಧ.ಗ್ರಾ ಯೋಜನೆ ನಿರ್ದೇಶಕರಾದ ನಾಗರಾಜ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ರಂಜಿತ್ ಕುಮಾರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಕುಂದಾಪುರ ಸಾಮಾಜಿಕ ಅರಣ್ಯದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಣಪತಿ ನಾಯ್ಕ್, ಸಿ.ಜಗನ್ನಾಥ ಶೆಟ್ಟಿ ಚಿಟ್ಟಿಬೈಲು, ಉದ್ಯಮಿ ಮಹೇಶ ಶೆಣೈ ಗಾವಳಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸುಲೇಖಾ ಶೆಟ್ಟಿ, ಗಣೇಶ ಕೊಳನಕಲ್ಲು, ಕೃಷ್ಣ ಮರಕಾಲ ಯಡಾಡಿ, ಗ್ರಾ.ಪಂ.ಮಾಜಿ ಸದಸ್ಯ ಉದಯ್, ದಿನೇಶ ಮೊಗವೀರ, ಬಿದ್ಕಲ್ ಕಟ್ಟೆ ವಲಯಾಧ್ಯಕ್ಷ ರಮೇಶ ಪೂಜಾರಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಗಣೇಶ ಶೆಟ್ಟಿ ಭಾಗವಹಿಸಲಿದ್ದಾರೆ.

“ಯಡಾಡಿ ಮದಗ ಕೆರೆ ತುಂಬಾ ಹಳೆಯ ಕೆರೆ. ಹೂಳು ತುಂಬಿ ಹೋಗಿತ್ತು. ಈ ಕೆರೆಯನ್ನು ಪುನಶ್ಚೇತನ ಮಾಡಬೇಕೆನ್ನುವುದು ನಮ್ಮ ಬಹಳ ವರ್ಷದ ಬೇಡಿಕೆಯಾಗಿತ್ತು. ಹಿಂದೆ ಕ್ಯಾಸನಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿದರು. ಅದೇ ರೀತಿ ಈ ಕೆರೆಯ ಮಹತ್ವ, ಅವಶ್ಯಕತೆ ಅಧಿಕಾರಿಗಳಿಗೆ ಮನವರಿಕೆ ಮಾಡಿದೆವು. ಯೋಜನೆಯಿಂದ ಅನುಮೋದನೆ ದೊರೆತು ಈಗ ಕೆರೆ ಪುನಶ್ಚೇತನಗೊಂಡಿದೆ. ಇದರಿಂದ ಗ್ರಾಮಕ್ಕೆ ಅನುಕೂಲವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ”-ಅರುಣ್ ಕುಮಾರ್ ಹೆಗ್ಡೆ, ಅಧ್ಯಕ್ಷರು, ಯಡಾಡಿ ಮದಗ ಕೆರೆ ಅಭಿವೃದ್ಧಿ ಸಮಿತಿ.

“ಸಕಲ ಜೀವ ಸಂಕುಲಕ್ಕೆ ಜೀವ ಜಲಗಳಾಗಿ ಕೆರೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಕೆರೆಗಳು ಹೂಳಿನಿಂದ ತುಂಬಿ ನೀರು ಸಂಗ್ರಹಣ ಸಾಮರ್ಥ್ಯ ಕಡಿಮೆಯಾದಾಗ ಅಂತರ್ಜಲ ಮಟ್ಟ ಕಡಿಮೆ ಆಗುವುದರ ಜೊತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಮನಗಂಡು ಪೂಜ್ಯ ಹೆಗ್ಗಡೆಯವರು ಕರ್ನಾಟಕ ರಾಜ್ಯದ್ಯಂತ ಕೆರೆ ಪುನಶ್ಚೇತನಕ್ಕೆ ಜೀವ ಕಳೆ ಕೊಟ್ಟಿದ್ದು ನಮ್ಮ ಕುಂದಾಪುರ-2 ತಾಲೂಕಿನ ಯಡಾಡಿ ಮದಗ ಕೆರೆಯನ್ನು ಪುನಶ್ಚೇತನಗೊಳಿಸಿದ್ದು ಕೆರೆಯ ನೀರು ತುಂಬಿಕೊಂಡಿದ್ದು ಸ್ಥಳೀಯರಲ್ಲಿ ಸಂತಸವನ್ನುಂಟು ಮಾಡಿದೆ”- ಸುಧೀರ್ ಹಂಗಳೂರು, ಯೋಜನಾಧಿಕಾರಿ, ಧ.ಗ್ರಾ ಯೋಜನೆ ಕುಂದಾಪುರ-೨

“ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ 955ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಈ ಕೆರೆಯನ್ನು ಆಯ್ಕೆ ಮಾಡಿಕೊಂಡು ಪುನಶ್ಚೇತನಗೊಳಿಸಲಾಗಿದೆ. ಕೃಷಿ ಭೂಮಿ, ಕುಡಿಯುವ ನೀರಿನ ಮೂಲಗಳ ಅಂತರ್ಜಲ ವೃದ್ಧಿ, ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಕೆರೆ ಅನುಕೂಲವಾಗಲಿದೆ. ಸುಮಾರು 10-15 ಅಡಿ ಆಳ ಮಾಡಲಾಗಿದ್ದು ಮುಂದಿನ ವರ್ಷ ಯಥೇಚ್ಛ ನೀರು ಸಂಗ್ರಹವಿರುವ ನಿರೀಕ್ಷೆ ಇದೆ. ಕೆರೆ ಸುತ್ತ ಹಣ್ಣಿನ ಗಿಡಗಳನ್ನು ನೆಡಲಾಗುವುದು”-ಪ್ರದೀಪ್ ಕುಮಾರ್ ಕೃಷಿ ಮೇಲ್ವಿಚಾರಕರು

ವಿಡಿಯೋ ವೀಕ್ಷಿಸಿ: https://www.facebook.com/share/v/18mQq3LAwc/

 

ಕೆರೆ ಅಭಿವೃದ್ಧಿ ಕಾಮಗಾರಿಯ ಚಿತ್ರಗಳು:

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!