spot_img
Tuesday, March 24, 2026
spot_img

ಹಡಿಲು ಭೂಮಿಗೆ ಹಸಿರು ಹೊದಿಕೆ ಹೊನ್ಕಲ್ಲು ಶಂಕರ ನಾಯ್ಕರ ಯಶೋಗಾಥೆ

ಕುಂದಾಪುರ: ಸಾಧಿಸುವ ಛಲ ಹೊಂದಿರುವವರಿಗೆ ಸಾಧನೆ ಬಲು ಹತ್ತಿರ. ಶ್ರಮ ವಹಿಸಿ ದುಡಿಯುವ ಮನೋಭಾವನೆ ಉಳ್ಳ ವ್ಯಕ್ತಿ ಕೃಷಿಯಲ್ಲಿ ಬಹುಬೇಗ ಪ್ರಗತಿ ಕಾಣುತ್ತಾನೆ. ತರಕಾರಿ ಕೃಷಿಯಲ್ಲಿ ಅಲ್ಪಾವಧಿಯಲ್ಲಿ ಆದಾಯ ಗಳಿಸುವ ಮೂಲಕ ಯಶಸ್ವಿ ರೈತರೆನಿಸಿಕೊಂಡ ಶಂಕರ ನಾಯ್ಕ ಹೊನ್ಕಲ್ಲು ಅವರ ಯಶೋಗಾಥೆ ಇದು.


ಉಡುಪಿ ಜಿಲ್ಲೆಯ ಬೆಳ್ವೆ ಹೊನ್ಕಲ್ಲು, ಕಲ್ಪಟರು ಶಂಕರ ನಾಯ್ಕ ಮೂಲತಃ ಶ್ರಮಜೀವಿ. ಕಠಿಣ ಪರಿಶ್ರಮಿ. ಪರಂಪರಿಕ ಕೃಷಿ ಕುಟುಂಬದ ಇವರು ಕೃಷಿಯನ್ನೇ ಆಶ್ರಯಿಸಿಕೊಂಡವರು. ಸಾಂಪ್ರದಾಯಿಕ ಪದ್ದತಿಯ ಕೃಷಿ ಮಾಡುತ್ತಿದ್ದ ಶಂಕರ ನಾಯ್ಕ ಇವತ್ತು ಕೃಷಿಯಲ್ಲಿ ಆಧುನಿಕತೆಯನ್ನು ಬಳಸಿಕೊಂಡಿದ್ದಾರೆ. ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.


ಮನೆಯ ಪರಿಸರದಲ್ಲಿ ತರಕಾರಿ, ತೋಟಗಾರಿಕೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಶಂಕರ ನಾಯ್ಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ತಂಡ ಸೇರಿದ ಮೇಲೆ ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹ ಮೂಡಿತು. ಮಾಹಿತಿ-ಮಾರ್ಗದರ್ಶನ ಮನೆ ಬಾಗಿಲಿಗೆ ಬರಲಾರಂಭಿಸಿತು. ಶಂಕರ ನಾಯ್ಕರು ಅವಕಾಶಗಳನ್ನು ಬಳಸಿಕೊಂಡರು. ಕೃಷಿವಿಡೀ ಭೂಮಿಯಲ್ಲಿ ದುಡಿಯಲು ಮುಂದಾದರು. ಕಾಲಬೇಧವಿಲ್ಲದೇ ಸರ್ವಋತು ತರಕಾರಿಗಳ ಬೆಳೆಯತೊಡಗಿದರು.
ಹೀರೆ, ಪಡುವಲ, ಬದನೆ, ತೊಂಡೆ, ಸಾಂಬ್ರಾಣಿ, ಅಲಸಂಡೆ ಹೀಗೆ ಬಹುವಿಧ ತರಕಾರಿಗಳನ್ನು ಇವರು ಬೆಳೆಯುತ್ತಾರೆ. ಈ ಬಾರಿ ಭೂಮಾಲಿಕರೋರ್ವರಿಂದ 20 ಸೆಂಟ್ಸ್ ಜಾಗವನ್ನು ಲೀಸ್‍ಗೆ ಭೂಮಿ ಪಡೆದು ಹಡಿಲು ಭೂಮಿಯಲ್ಲಿ ಸಮೃದ್ದವಾದ ತರಕಾರಿ ಕೃಷಿ ಮಾಡಿದ್ದಾರೆ. ಬೇಸಿಗೆಯಲ್ಲಿ ಭೂಮಿಯನ್ನು ಸರಿಯಾಗಿ ಹದಗೊಳಿಸಿ ಜುಲೈ ತಿಂಗಳಲ್ಲಿ ಹೀರೆ ಮತ್ತು ಪಡುವಲ ಬೇಸಾಯಕ್ಕೆ ಮುಂದಾಗಿದ್ದರು. ಈಗಾಗಲೇ ಹೀರೆ ಮತ್ತು ಪಡುವಲ ಕೋಯ್ಲಿಗೆ ಬರುತ್ತಿದ್ದು, ಒಳ್ಳೆಯ ಆದಾಯವನ್ನು ಪಡೆಯುತ್ತಿದ್ದಾರೆ.


ಹೀರೆ ಮತ್ತು ಪಡುವಲಕ್ಕೆ ಏಕರೂಪದಲ್ಲಿ ಚಪ್ಪರ ಮಾಡಿದ್ದಾರೆ. ಬಳ್ಳಿಗಳು ಮೇಲೇರಲು ಕೂಡಾ ಬಲೆಯನ್ನು ಬಳಸಿದ್ದಾರೆ. ಚಪ್ಪರಕ್ಕೂ ಬಲೆಯನ್ನೇ ಬಳಸಿದ್ದಾರೆ. ಕೊಯ್ಲು ಮುಗಿದ ನಂತರ ಬಲೆ ತಗೆದಿಟ್ಟರೆ ಮುಂದಿನ ವರ್ಷಕ್ಕೆ ಆಗುತ್ತದೆ ಎನ್ನುವ ಶಂಕರ ನಾಯ್ಕರು ತರಕಾರಿ ಕೃಷಿಯಲ್ಲಿ ಸಾಕಷ್ಟು ನುರಿತರು. ಈ ಬಾರಿ ಮಳೆ ಜಾಸ್ತಿ ಇರುವುದರಿಂದ ಕಾಯಿಗಳಿಗೆ ಕೊಳೆ ಕಾಣಿಸಿಕೊಂಡಿದೆ. ಆದರೂ ವಾರಕ್ಕೆ 70 ಕೆ.ಜಿ ಪಡುವಲ, 50 ಕೆ.ಜಿ ಹೀರೆ ಕೊಯ್ಲು ಮಾಡುತ್ತಾರೆ.


ಇದರೊಂದಿಗೆ ಪಕ್ಕದಲ್ಲಿ ಸಾಂಬ್ರಾಣಿಯನ್ನು ಕೂಡಾ ಹಾಕಿದ್ದಾರೆ. ಸಾಂಬ್ರಾಣಿ ಕಂದಮೂಲ ತರಕಾರಿ ಆದ್ದರಿಂದ ಮಣ್ಣನ್ನು ಸರಿಯಾಗಿ ಹದ ಮಾಡಬೇಕು. ಸಾವಯವ ಪದಾರ್ಥ ಬಳಿಸಿ ಟಿಲ್ಲರ್ ಮೂಲಕ ಉಳುಮೆ ಮಾಡಿ, ನಂತರ ಏರಿ ತಗೆದು ಸಿದ್ಧ ಮಾಡಿಕೊಂಡ ಸಾಂಬ್ರಾಣಿ ಕಾಂಡಗಳನ್ನು ನಾಟಿ ಮಾಡಬೇಕು. ಮತ್ತೆ ಒಮ್ಮೆ ಚೆನ್ನಾಗಿ ಮಣ್ಣು ಏರಿಸಬೇಕು. 120 ದಿನಗಳ ಒಳಗೆ ಸಾಂಬ್ರಾಣಿ ಕೀಳಲು ಬರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಚೆನ್ನಾಗಿದೆ.


ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವೀರ ಮಾರುತಿ ಪ್ರಗತಿಬಂಧು ತಂಡದ ಸದಸ್ಯರಾಗಿರುವ ಇವರು ಶ್ರಮ ವಿನಿಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಸಾಲಸೌಲಭ್ಯ, ವಿವಿಧ ಅನುದಾನಗಳು ಯೋಜನೆಯಿಂದ ಇವರಿಗೆ ಲಭಿಸಿದೆ. ಪ್ರಸ್ತುತ ನವ ಜೀವನ ಸಮಿತಿಯ ಸದಸ್ಯರಾಗಿದ್ದಾರೆ. ಕೃಷಿ ಅಧಿಕಾರಿ ಚೇತನ್ ಕುಮಾರ್ ಅವರ ಮಾರ್ಗದರ್ಶನ, ಯೋಜನೆಯ ಅಧಿಕಾರಿಗಳ ಪ್ರೋತ್ಸಾಹ ತನ್ನ ಯಶಸ್ಸಿಗೆ ಕಾರಣ ಎನ್ನುತ್ತಾರೆ ಶಂಕರ ನಾಯ್ಕರು. ವ್ಯಕ್ತಿಯೊಬ್ಬನ ವ್ಯಕ್ತಿತ್ವ ಪರಿವರ್ತನೆಯ ಬಳಿಕ ಹೊಸ ದಿಕ್ಕಿನೆಡೆ ಸಾಗುತ್ತಿದೆ ಎನ್ನುವುದಕ್ಕೆ ಇವರು ಜ್ವಲಂತ ನಿದರ್ಶನ.
ಶಂಕರ ನಾಯ್ಕರ ದೂರವಾಣಿ ಸಂಖ್ಯೆ: 8217029047

ನಾಗರಾಜ್ ವಂಡ್ಸೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!