spot_img
Friday, January 30, 2026
spot_img

ತಂಡ ಪರಿಶ್ರಮದಲ್ಲಿ  ಯಶಸ್ವಿ ಪ್ರಸಂಗದತ್ತ ಸಾಲಿಗ್ರಾಮ ಮೇಳದ ‘ಷಣ್ಮುಖಪ್ರಿಯ’

ಸದ್ಯಕ್ಕೆ ಉಳಿದಿರುವುದು ಯಕ್ಷಗಾನದಲ್ಲಿ ಎರಡೇ ಡೇರೆ ಮೇಳಗಳು. ಸವಾಲುಗಳ ನಡುವೆ ತಿರುಗಾಟದ ಮಾಡುತ್ತಿವೆ. ಡೇರೆ ಮೇಳದ ಆಟದಲ್ಲಿ ಮನೋರಂಜನೆಯ ಒಂದಿಷ್ಟು ನಿರೀಕ್ಷೆ ಸಹಜವಾಗಿರುತ್ತದೆ. ಟೆಂಟಿನೊಳಗೆ ಆರಾಮ ಖುರ್ಚಿಯಲ್ಲಿ ಕುಳಿತು ಆಟ ನೋಡುವ ಆನಂದವೇ ವಿಭಿನ್ನ. ಈ ಬಾರಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು ಸಾಲಿಗ್ರಾಮ ಮೇಳ. ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ 58ನೇ ವರ್ಷದ ತಿರುಗಾಟ. ಮೇಳದ ಬತ್ತಳಿಕೆಯಿಂದ ಪ್ರಥಮವಾಗಿ ಹೊರ ತಗೆದಿದ್ದೇ ಈಶ್ವರ ಮಂಗಲರ ನೂತನ ಆಖ್ಯಾನ. ಪಳ್ಳಿ ಕಿಶನ್ ಹೆಗ್ಡೆಯವರ ಸಮರ್ಥ ಯಜಮಾನ್ಯದಲ್ಲಿ, ವಿಭಿನ್ನ ಕಥಾವಸ್ತು ತನ್ನ ಶೀರ್ಷಿಕೆಯಿಂದಲೇ ಗಮನ ಸಳೆಯಿತು.

‘ಷಣ್ಮುಖಪ್ರಿಯ’. ಪ್ರೇಕ್ಷಕರನ್ನು ಸಳೆಯಲು ಸಾಕಷ್ಟು ಸರಕುಗಳನ್ನು ಹೊಂದಿದೆ. ನವರಸಗಳಿಗೂ ಪ್ರಾತಿನಿಧ್ಯವಿದೆ. ಎಲ್ಲ ಕಲಾವಿದರ ಪ್ರತಿಭಾವ್ಯಕ್ತಿಗೂ ಗರಿಷ್ಠ ಮಟ್ಟದ ಅವಕಾಶವಿದೆ. ಸರಳವಾಗಿ, ಮೆಲುಕು ಹಾಕಬಲ್ಲ ಛಂದಸ್ಸಿನಿಂದ ಕೂಡಿದ ಪದ್ಯಗಳು ಪ್ರಸಂಗದ ಜೀವಾಳ. 99 ಪ್ರಸಂಗಂಗಳ ಬರೆದಿರುವ ದೇವದಾಸ ಈಶ್ವರಮಂಗಲರ ಪ್ರಬುದ್ಧ ಸಾಹಿತ್ಯ ಇಲ್ಲಿ ಗಮನೀಯ. ಹಿಮ್ಮೇಳ-ಮುಮ್ಮೇಳದ ಸ್ಪರ್ಧಾತ್ಮಕವಾದ ಪ್ರಯತ್ನ, ಪ್ರಸಂಗ ಗೆಲ್ಲಿಸುವಲ್ಲಿ ಕಲಾವಿದರ ಟೀಂ ವರ್ಕ್, ಪ್ರಸಂಗವನ್ನು ಶತದಿನೋತ್ಸವಕ್ಕೆ ತಗೆದುಕೊಂಡು ಹೋಗುವುದರಲ್ಲಿ ಅತಿಶಯವಿಲ್ಲ. ರಾಗದಿಂದ ಮಳೆ ಸುರಿಯುತ್ತದೆ, ದೀಪ ಬೆಳಗುತ್ತದೆ, ರೋಗ ವಾಸಿಯಾಗುತ್ತದೆ, ಅಂತಹ ಶಕ್ತಿ ಸಂಗೀತಕ್ಕಿದೆ ಎನ್ನುವುದು ಅನಾದಿ ನಂಬಿಕೆ. ಸಂಗೀತ ಶಕ್ತಿಯ ವಾಸ್ತವಿಕತೆಯನ್ನು ಷಣ್ಮುಖಪ್ರಿಯ ಹೇಳುತ್ತಾ ಹೋಗುತ್ತದೆ.

‘ಷಣ್ಮುಖಪ್ರಿಯ’ ಕುತೂಹಲವನ್ನು ಕೊನೆಯ ತನಕವೂ ಕಾಯ್ದಿಟ್ಟುಕೊಳ್ಳುತ್ತದೆ. ಸನ್ನಿವೇಶಕ್ಕೆ ವೇಗವಿದೆ. ದೀರ್ಘವಾದ ಕುಣಿತವಾಗಲಿ, ಗಂಭೀರ ಎನಿಸುವ ಚರ್ಚೆಯಾಗಲಿ ಇಲ್ಲ. ಮನಸ್ಸಿಗೆ ಮುಟ್ಟುವ, ಮಸ್ತಕಕ್ಕೆ ತಟ್ಟುವ, ಕೊನೆಗೊಂದು ಸಂದೇಶವನ್ನು ನೀಡುವಲ್ಲಿ ಷಣ್ಮುಖಪ್ರಿಯ ಯಶಸ್ವಿಯಾಗುತ್ತದೆ. ರಾಗದ ವಿಚಾರವಾಗಿ ನಡೆಯುವ ವಾಗ್ವಾದ, ಕ್ಷಣಕ್ಷಣಕ್ಕೂ ಯುವ ಹೃದಯ ತಂತಿಯನ್ನು ಎಳೆಯುತ್ತ ಹೋಗುತ್ತದೆ. ಹಾಗಾಗಿ ಇದು ಯಕ್ಷಭೂಮಿಯಲ್ಲಿ ತುಸು ಹೊಸತು ಎನಿಸಿಕೊಳ್ಳುತ್ತದೆ. ಇಲ್ಲಿ ಪಾತ್ರಗಳನ್ನು ಸೃಜಿಸಿದ ವಿಧಾನ, ದೃಶ್ಯ ಸಂಯೋಜನೆ, ಕವಿತಾಶಕ್ತಿ, ಸೂಕ್ಷ್ಮಗ್ರಾಹಿತ್ವದ ಚಿಂತನೆ ಉಲ್ಲೇಖನೀಯ.

ಈ ಪ್ರಸಂಗದಲ್ಲಿ ಮೂರು ಪಾತ್ರಗಳು ಹೆಚ್ಚು ಕಾಡುತ್ತದೆ. ಹಾಸ್ಯ ಮನದಲ್ಲಿ ಉಳಿಯುತ್ತದೆ. ಪ್ರಸನ್ನ ಶೆಟ್ಟಿಗಾರ್, ಈಶ್ವರ ನಾಯ್ಕ ಮಂಕಿ ಹಾಗೂ ಪ್ರದೀಪ ಶೆಟ್ಟಿ ನಾರ್ಕಳಿ ಪ್ರಾರಂಭದಿಂದ ಕೊನೆ ತನಕ ಪ್ರೇಕ್ಷಕರ ಜೊತೆ ಇರುತ್ತಾರೆ. ಮಿತಿಮೀರದ ಕುಣಿತ, ಪ್ರೌಢ ಸಾಹಿತ್ಯಶುದ್ದಿ ಭಾಷೆ, ಗತ್ತಿನ ನಡೆ, ಆಕರ್ಷಕ ವೇಷ ಹೀಗೆ ಎಲ್ಲವನ್ನು ಸಂಪಾದಿಸಿದ ಶೆಟ್ಟಿಗಾರರು ‘ಅನಘ’  ಎನ್ನುವ ಪಾತ್ರದ ಮೂಲಕ ನೆನಪಿನಲ್ಲಿ ಉಳಿಯುತ್ತಾರೆ. ತಿಳಿಹಾಸ್ಯದ ಮೋಡಿಯೊಂದಿಗೆ ಅವರು ಪಾತ್ರ ಬೆಳೆಸುತ್ತಾ ಹೋಗುತ್ತಾರೆ. ಕೊನೆಯ ದೃಶ್ಯಗಳು, ಅವರ ಅಭಿವ್ಯಕ್ತಿ ಪ್ರಶಂಸೆ ಹರಿಸುತ್ತದೆ. ಅದಟ್ಟು, ಸ್ವರಭಾರ, ಗತ್ತುಗಾರಿಕೆ, ಭಾವದ ಎಳೆಯನ್ನು ಪರಿಣಾಮಕಾರಿಯಾಗಿ ಬೆಳೆಸುವಲ್ಲಿ ಇವರ ಮಾಗಿದ ಅನುಭವ ಇನ್ನಷ್ಟು, ಮತ್ತಷ್ಟು ಹೊತ್ತು ಪ್ರಸನ್ನರು ವೇದಿಕೆಯಲ್ಲಿ ಬೇಕು ಅನ್ನಿಸುತ್ತದೆ.

‘ಅಕ್ಷರ’ ಹೆಸರಿಗೆ ತಕ್ಕ ಸಾತ್ವಿಕ ಪಾತ್ರ. ಕಥೆಯ ಕೇಂದ್ರ ಅಕ್ಷರ ರಾಗ ಅನುರಾಗದಲ್ಲಿ ಜೊತೆಯಾಗುತ್ತಾರೆ. ಮಂಕಿ ಈಶ್ವರ ನಾಯಕರ ಈ ಪಾತ್ರ ನಿರ್ವಹಣೆ ಅವರ ರಂಗ ತಾಲೀಮು, ಪಾತ್ರದ ಅಂತರ್ಯವನ್ನರಿತು ಅವರು ಅಕ್ಷರನ ಜೀವಂತಗೊಳಿಸಿದ್ದಾರೆ. ಗುಪ್ತವಾಗಿ ಪತ್ರ ಬರೆದು ತನ್ನ ಆರಾದಿಸುವ ಅಭಿಮಾನಿಯನ್ನು ಪಡೆಯುವ ಹೋರಾಟ, ತನ್ನ ಸುತ್ತ ನೆಡೆಯುವ ಮೋಸ ತಿಳಿಯದ ಮುಗ್ದತೆಯನ್ನವರಿಸಿದ ಪಾತ್ರಕ್ಕೆ ಗರಿಷ್ಟ ನ್ಯಾಯ ಒದಗಿಸಿದ್ದಾರೆ. ಪ್ರೇಮವೇ ಕೊನೆಗೆ ಗೆಲ್ಲುತ್ತದೆ ಎನ್ನುವುದು ಪ್ರತಿಯೊಂದು ಕಥೆಗಳ ಸಂದೇಶ. ಇಲ್ಲಿ ಕಥಾನಾಯಕನ ಪಾತ್ರ ನಿರ್ವಹಣೆಯಲ್ಲಿ ಮನಸ್ಸಿನೊಳಗಿನ ತಹತಹ, ಅಂತರ್ಯ ಭಾವಸಂವೇದನೆಯನ್ನು ಅಷ್ಟೊಂದು ಸುಂದರವಾಗಿ ತೆರೆದಿಟ್ಟಿದ್ದಾರೆ. ಮಂಕಿಯವರ ಶೃತಿಬದ್ದ ಮಾತು ಕಥೆಯ ಓಘಕ್ಕೆ ಪುಷ್ಠಿಧಾತು.

ಕಥಾನಾಯಕಿ ರೋಹಿಣಿ ಪಾತ್ರ ನಿರ್ವಹಿಸಿದ ಪ್ರದೀಪ ಶೆಟ್ಟಿ ನಾರ್ಕಳಿ. ಸಾಲಿಗ್ರಾಮ ಮೇಳಕ್ಕೆ ಹೊಸ ಪರಿಚಯ. ಬಯಲಾಟ ಮೇಳದ ಎರಡನೇ ಸ್ತ್ರೀವೇಷಧಾರಿ ಯುವ ಕಲಾವಿದನಿಗೆ ಪ್ರಧಾನ ಸ್ತ್ರೀವೇಷದ ಜವಬ್ದಾರಿ ಹೆಗಲೇರಿದೆ. ಪ್ರತಿಭಾ ಸಂಪನ್ನ ಪ್ರದೀಪ್ ತನ್ನ ದೈವದತ್ತ ಪ್ರತಿಭೆಯಿಂದ ಪಾತ್ರವನ್ನು ಸಚೇತನಗೊಳಿಸಿದ್ದಾರೆ. ನವರಸಗಳನ್ನು ಹೊಂದಿರುವ ಪಾತ್ರ ಇಡೀ ಕಥೆಯ ಜೀವಾಳ. ನೃತ್ಯದಷ್ಟೇ ವಾಕ್ ಪ್ರಾವೀಣ್ಯತೆ, ರಾಗ ಪ್ರಧಾನ ಅಂಶ ಹೊಂದಿರುವ ವಿಭಿನ್ನ ಕಥಾವಸ್ತುವಾದ್ದರಿಂದ ನಾಯಕಿ ಇಲ್ಲಿ ಇಡೀ ಕಥೆಯುದ್ದಕ್ಕೂ ರಸಾಭಿವ್ಯಕ್ತಿಯೊಂದಿಗೆ ರಾಗಜ್ಞಾನ, ವಾಚಿಕದಲ್ಲೂ ಸೆಣಸಬೇಕಾಗುತ್ತದೆ. ಓದು, ಅಧ್ಯಯನ, ಅನುಭವ ಎಲ್ಲವೂ ಇಲ್ಲಿ ಕಾಣುತ್ತದೆ. ಹುಡುಗಾಟಿಕೆಯ ಹುಡುಗಿಯಿಂದ ಸಾಗುವ ಪಾತ್ರ ಬರುಬರುತ್ತಾ ಪ್ರಭುದ್ಧತೆಯನ್ನು ಕಂಡುಕೊಂಡು ಗಂಭೀರವಾಗುತ್ತದೆ. ತರ್ಕ, ಚಕಾಮಕಿ, ಘರ್ಷಣೆ, ರೋಷ, ಅಸಹನೆ, ಆಕ್ರೋಶ, ವ್ಯಥೆ, ದುಃಖ, ವಿಬ್ರಾಂತಿ ಹೀಗೆ ಭಾವಗಳು ಬದಲಾಗುತ್ತ ಹೋದಂತೆ ಕಲಾವಿದ ಪಾತ್ರವನ್ನು ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿ ನಿಲ್ಲಿಸುವಲ್ಲಿ ಯಶ ಕಾಣುತ್ತಾರೆ. ಇಲ್ಲಿ ಸೃಷ್ಟಿಶೀಲತೆ ಹಾಗೂ ಪ್ರಯೋಗಶೀಲತೆ ಕಥೆಯೊಳಗಿನ ಪಾತ್ರವನ್ನು ಮೆರೆಸುವಲ್ಲಿ ಪ್ರದೀಪ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸುಮಾರು ಮೊವತ್ತು ರಾಗಗಳ ವೈಶಿಷ್ಟ್ಯತೆ ನಿರರ್ಗಳವಾಗಿ ವಿವರಿಸುವ ಮೂಲಕ ಗಮನ ಸಳೆಯುತ್ತಾರೆ. ಆಕರ್ಷಕ ವೇಷ, ಸ್ತ್ರೀಸಹಜ ಸ್ವರ, ಕರುಣಾರಸದಲ್ಲಿ ಕಣ್ಣೀರಿನೊಂದಿಗೆ ಪಾತ್ರ ಕಟ್ಟಿಕೊಡುವ ಇವರು ಬಡಗಿಗೆ ದೊರೆತ ತಾರಮೌಲ್ಯದ ಸ್ತ್ರೀವೇಷಧಾರಿ.

ಹಾಸ್ಯವೂ ಕೂಡಾ ಕಥೆಯ ಉದ್ದಕ್ಕೂ ಸಾಗುತ್ತದೆ. ಇಲ್ಲಿ ತುಸು ವಿಭಿನ್ನ ಹಾಸ್ಯವಿದೆ. ಒಂದಿಷ್ಟು ಬದಲಾವಣೆ ಇದೆ. ಸದಾ ಹೊಸತನ್ನು ಕೊಡುವ ಮಹಾಬಲೇಶ್ವರ ಭಟ್ ಕ್ಯಾದಗಿಯವರು ಬೇಸರ ತರಿಸುವುದಿಲ್ಲ. ಸಮರ್ಥ ರಂಗಕಲಾವಿದರಾಗಿರುವ ಕ್ಯಾದಗಿ ಭಟ್ಟರು, ಗಾಯಕನಾಗುವ ಕನಸಿನಲ್ಲಿ ಹಾಡುತ್ತಾ, ಕೀಟಲೆ ಮಾಡುತ್ತಾ, ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ಸು ಸಾಧಿಸುತ್ತಾರೆ. ಜೊತೆಗೊಂದಿಷ್ಟು ಹೊಸಹೊಸ ನಗೆ ಸರಕುಗಳು ಅವರಲ್ಲಿವೆ. ಯುವ ಪ್ರತಿಭೆ ಕಾರ್ತಿಕ ರಾವ್ ಪಾಂಡೇಶ್ವರ ವೆಂಕಟನ ಪಾತ್ರದಿಂದ ಕಚಗುಳಿ ಇಡುತ್ತಾರೆ. ಇಲ್ಲಿಯೂ ಕೂಡಾ ಹೊಂದಾಣಿಕೆ, ಪ್ರಸಂಗ ಗೆಲ್ಲಿಸುವ ಒಟ್ಟು ಶ್ರಮ ಕಂಡು ಬರುತ್ತದೆ.

ಷಣ್ಮುಖಪ್ರಿಯ ಎನ್ನುವ ಮಾಲೆಯಲ್ಲಿ ಅನೇಕ ಮಣಿಮುತ್ತುಗಳಿವೆ. ಚಂದ್ರಶೇಖರ ಶೆಟ್ಟಿ ಅರಳಿ ಸುರಳಿಯವರ ಗತ್ತಿನ ಬೆಳಗಿನ ಜಾವದ ಖಳನಾಯಕ, ಪ್ರಣವ್ ಅವರ ಎರಡನೇ ನಾಯಕ, ಗೆಳತಿಗಾಗಿ ಯಾವ ಸ್ವಾರ್ಥ ಇಲ್ಲದೆ ಒದ್ದಾಡುವ ಸೌರಭ್ ಅವರ ಸಿಂಧೂರಿಯ ಪಾತ್ರ ಮನಸ್ಸಿನಲ್ಲಿ ಉಳಿಯಲ್ಪಡುತ್ತದೆ. ಯುವರಾಜ್, ತಿಲಕ್ ರಾಜ್ ಸಂದೇಶ್ , ವಿಜಯ್ ಮುದ್ದುಮನೆ, ಇವರುಗಳ ಪಾರಂಪರಿಕ ಯುದ್ಧ ಕುಣಿತ, ಆಕರ್ಷಣೆ ಮಾಡಿದ ಅಕ್ಷಯ್ ಅವರ ಪಾತ್ರವನ್ನೂ ಮರೆಯುವಂತಿಲ್ಲ. ನಂದನ್ ಶೆಟ್ಟಿ ಅವರ ನೈಜ ಅಭಿನಯ, ವಿಶೇಷ ಕೇಶ ವಿನ್ಯಾಸದ ತಬಲ ಸದ್ದುವಿನ ಪ್ರೇಯಸಿ ಲಾವಣ್ಯ, ಸುಮಂತ್ ಅವರ ಸರೋಜ ಮತ್ತು ವೈಷ್ಣವಿ ಪಾತ್ರ. ಶೈಲೇಶ ತೀರ್ಥಹಳ್ಳಿಯವರ ಪಾತ್ರ ನಿರ್ವಹಣೆ ಮತ್ತು ಸೃಜನಶೀಲತೆ ವಿಶೇಷ.

ಜೈ‌ಅಂಜನೇಯ ಪ್ರಸನ್ನಾಂಜನೇಯ ಪದ್ಯದ ಬಗ್ಗೆ ಚರ್ಚೆ ಇದೆ. ಈಶ್ವರಮಂಗಲರು ಯಕ್ಷಗಾನಕ್ಕೆ ಅನೇಕ ಅಪರೂಪದ ಜನಪದ ಪದ್ಯಗಳನ್ನು ನೀಡಿದ್ದಾರೆ. ಅಂಥಹ ಪದ್ಯವನ್ನು ಇಲ್ಲೂ ನಿರೀಕ್ಷಿಸಬಹುದಿತ್ತು.

ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಅವರ ಕಂಠಸಿರಿ, ಪುರಾಣ ಪ್ರಸಂಗದ ಶೈಲಿಯಲ್ಲಿ ಹಾಡುವ ಹದಭರಿತ ಹಾಡುಗಳು ಚೇತೋಹಾರಿಯಾಗಿವೆ. ಹೃದಯಗುಡಿಯ ದೇವಾ ಪದ್ಯ ಚೆನ್ನಾಗಿದೆ. (ಕೋಟೇಶ್ವರ ಜಾತ್ರೆ ಆಟ. ಆವತ್ತು ಅವರು ಮೊದಲು ಬಂದಿದ್ದರು) ಮತ್ತೆ ಸಾಲಿಗ್ರಾಮ ಮೇಳಕ್ಕೆ ಆಗಮಿಸಿದ ಆನಂದ್ ಅಂಕೋಲಾ ನಿರೀಕ್ಷಿತ ಪರಂಪರೆಯ ಭಾಗವತಿಕೆಯಿಂದ ಮೋಡಿ ಮಾಡುತ್ತಾರೆ. ಯುವ ಪ್ರತಿಭೆ ದರ್ಶನ್ ಗೌಡರು ಉತ್ತಮ ನಾಂದಿ ನೀಡಿದ್ದಾರೆ.

ಹಿರಿಯ ಮದ್ದಳೆ ವಾದಕರಾದ ಎನ್.ಜಿ ಹೆಗ್ಡೆ ಯಲ್ಲಾಪುರ ಮದ್ದಳೆಯಲ್ಲಿ ಇಲ್ಲೂ ಮೋಡಿ ಮಾಡಿದ್ದಾರೆ. ಅವರು ರಂಗದಲ್ಲಿ ಪ್ರತಿಯೋರ್ವ ಕಲಾವಿದರ ಹೆಜ್ಜೆ ಗಮನಿಸುತ್ತಾರೆ. ಈ ಪ್ರಸಂಗದ ಯಶಸ್ಸಿನಲ್ಲಿ ಎನ್.ಜಿ ಹೆಗಡೆಯವರ ಮದ್ದಳೆ ಪೆಟ್ಟುಗಳು ಇವೆ. ಶಶಿಕುಮಾರ್ ಆಚಾರ್ಯ ಬೆಳ್ಕಲೆ ಅವರು ತಾವೇನು ಕಡಿಮೆ ಇಲ್ಲ ಎನ್ನುವಂತೆ ಸ್ಪರ್ಧಾತ್ಮಕ ಹಿಮ್ಮೇಳದಲ್ಲಿ ಗೆದ್ದಿದ್ದಾರೆ, ಚಂಡೆಯಲ್ಲಿ ಗುರುದತ್, ಹಾಗೂ ಮಂಗೇಶ್ ನಾಡಕರ್ಣಿ ಉತ್ತಮ ಸಾಥ್ ಮರೆಯುವಂತಿಲ್ಲ.

ಪ್ರತಿಭಾನ್ವಿತ ನವತಾರುಣ್ಯದ ಕಲಾವಿದರ ದಂಡೇ ಇಲ್ಲಿದೆ. ಯುವಪಡೆ ಪಾದರಸದಂತೆ ಅತ್ಯುತ್ಸಾಹದಿಂದ ಗರೀಷ್ಟ ಮಟ್ಟದ ಶ್ರಮ ವಿನಿಯೋಗಿಸುತ್ತಿದೆ. ಹೊಸಬರ ಶ್ರಮ, ಪ್ರತಿಭೆಯನ್ನು ಬೆಳೆಸಬೇಕು ಉತ್ತರದಾಯಿತ್ವದ ಕಾರಣದಿಂದ. ಕಲೆ ನಿಂತ ನೀರಾಗದೆ ಹರಿಯುವ ನದಿಯಾಗಲು ಸಮ್ಮೀಳಿತ ಅಗತ್ಯ. ಸಾಮರ್ಥ್ಯ‌ಉಳ್ಳ ಯುವ ಕಲಾವಿದರನ್ನು ಗುರುತಿಸಿ ಅವಕಾಶ ಕೊಟ್ಟರೆ ಮಾತ್ರ ಭವಿಷ್ಯದ ತಾರಾಮೌಲ್ಯದ ಕಲಾವಿದರನ್ನು ಸಂಘಟಿಸುವಿವಲ್ಲಿ ಯಜಮಾನರಾದ ಕಿಶನ್ ಹೆಗ್ಡೆಯವರ ಕಲೆಯ ಕಾಳಜಿ ಸ್ತುತ್ಯರ್ಹ. ಕಲೆಯ ಭವಿಷ್ಯದ ದೃಷ್ಟಿಯಿಂದ ಸಾಹಸಿ ಪ್ರೌಢಿಮೆ, ಪ್ರಯೋಗಶೀಲತೆ, ದೂರದೃಷ್ಟಿತ್ವ, ಚಿಕಿತ್ಸಾ ದೃಷ್ಟಿಕೋನ ಅಗತ್ಯ. ಅದು ಅನಿವಾರ್ಯ ಕೂಡಾ.
ಪ್ರದರ್ಶನದಿಂದ ಪ್ರದರ್ಶನಕ್ಕೆ ರಚನಾತ್ಮಕ ಬೆಳವಣಿಗೆ ಕಾಣುತ್ತಿದೆ. ತಂಡದ ಪರಿಶ್ರಮ ಹೊಸ ಬದಲಾವಣೆಗೆ ಕಾರಣವಾಗಲಿದೆ. ಇನ್ನೂ ಪ್ರೌಢವಾಗಬೇಕು, ಅಲ್ಲಲ್ಲಿ ಒಂದಿಷ್ಟು ಸುಧಾರಣೆಗಳು ಬೇಕು, ಆ ನಿರೀಕ್ಷೆ ಇದೆ.

(-ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!