Sunday, September 8, 2024

ಗ್ರಾಮ ಪಂಚಾಯಿತಿ ಮಾರ್ಗದರ್ಶಿ ‘ಜನಾಧಿಕಾರ’ ಪುಸ್ತಕ ಬಿಡುಗಡೆ

ಕುಂದಾಪುರ, ಅ.31: ಗ್ರಾಮ ಪಂಚಾಯಿತಿಗಳು ಜನಾಧಿಕಾರದ ತಾಯಿಬೇರು. ಅವುಗಳಲ್ಲಿ ಜನಸಹಭಾಗಿತ್ವಕ್ಕೆ ಗರಿಷ್ಠ ಅವಕಾಶವಿದೆ. ಅಲ್ಲಿ ಜನಪ್ರತಿನಿಧಿ, ಅಧಿಕಾರ ವರ್ಗದಷ್ಟೇ ಜನರಿಗೂ ಮಹತ್ವದ ಪಾತ್ರ ಇದೆ. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಅವು ಉದ್ದೇಶಿತ ಗುರಿ ಸಾಧಿಸಬಹುದು. ಅವರೆಲ್ಲರಿಗೂ ಅಗತ್ಯವಾದ ಮಾರ್ಗದರ್ಶನವನ್ನು ‘ಜನಾಧಿಕಾರ’ ಪುಸ್ತಕ ಒಳಗೊಂಡಿದೆ. ಜನರು ಆ ಮೂಲಕ ಗಳಿಸುವ ಎಚ್ಚರ, ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನಪರವಾಗಿ, ಉತ್ತರದಾಯಿಯಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಜನಪ್ರತಿನಿಧಿ ಪ್ರಕಾಶನದ ಆಶ್ರಯದಲ್ಲಿ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನ ಮತ್ತು ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟದ ಸಹಕಾರದೊಂದಿಗೆ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಪಂಚಾಯತ್ ರಾಜ್ ಪರಿಣತ ಎಸ್. ಜನಾರ್ದನ ಮರವಂತೆ ಸಂಕಲಿಸಿದ ‘ಜನಾಧಿಕಾರ-ಗ್ರಾಮ ಪಂಚಾಯಿತಿ ಮಾರ್ಗದರ್ಶಿ’ ಪುಸ್ತಕವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಸರಕಾರಗಳು ಜನಹಿತವಾಗಿ ಕೆಲಸ ಮಾಡಬೇಕು. ಆದರೆ ಇವತ್ತು ಕೆಳಸ್ತರದಿಂದ ಲೋಕಸಭೆಯ ತನಕ ಮನಸ್ಸು ಬಿಚ್ಚಿ ಮಾತನಾಡುವ ಸ್ಥಿತಿ ಇದ್ದಂತಿಲ್ಲ. ಕೆಲವೊಂದು ಬಾರಿ ಅಧಿಕಾರವನ್ನು ಅಧಿಕಾರಿಗಳು ಕಬಳಿಸುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತವೆ. ರದ್ದು ಮಾಡುವುದು, ಒಪ್ಪದಿರುವುದು, ತಡೆಹಿಡಿಯುವುದು ಈ ಮೂರರ ಅಡಿಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಪಂಚಾಯತ್ ವ್ಯವಸ್ಥೆಯಲ್ಲಿ ಕಾಯ್ದೆಗಳು ಪರಿಣಾಮಕಾರಿ ಅನುಷ್ಠಾನ ಆಗಬೇಕಾದ ಅಗತ್ಯತೆ ಇದೆ ಎಂದರು.

‘ಜನಾಧಿಕಾರ’ ಪುಸ್ತಕದಲ್ಲಿ ಎಸ್.ಜನಾರ್ದನ ಮರವಂತೆಯವರ ಆಶಾವಾದವನ್ನು ಕಾಣಬಹುದು. ಇದು ಪ್ರಸ್ತುತ ಅಗತ್ಯವೂ ಕೂಡಾ. ಪಂಚಾಯುತ್ ರಾಜ್ ವ್ಯವಸ್ಥೆ ಇನ್ನಷ್ಟು ಬಲಿಷ್ಟವಾಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈ ಪುಸ್ತಕದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು.

‘ಜನಾಧಿಕಾರ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ 3ನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷ ಎ.ಜಿ ಕೊಡ್ಗಿಯವರು, ಕರ್ನಾಟಕದಲ್ಲಿ ಅತ್ಯುತ್ತಮ ಪಂಚಾಯತ್ ರಾಜ್ ವ್ಯವಸ್ಥೆ ಇದೆಯಾದರೂ ಅದರಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಅದರ ಆಶಯ, ವ್ಯಾಪ್ತಿ, ಕಾರ್ಯವಿಧಾನದ ಪೂರ್ಣ ಅರಿವು ಇಲ್ಲದ ಕಾರಣ ಅದು ಸಮಗ್ರವಾಗಿ ಅನುಷ್ಠಾನಗೊಂಡಿಲ್ಲ. ಪುಸ್ತಕವನ್ನು ಓದುವ ಮೂಲಕ ಅವರೆಲ್ಲ ತಮ್ಮಲ್ಲಿನ ಅರಿವಿನ ಕೊರತೆಯನ್ನು ನೀಗಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕೃತಿಯನ್ನು ಪರಿಚಯಿಸಿದ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಸಮಿತಿಯ ಸದಸ್ಯರಾದ ಟಿ.ಬಿ.ಶೆಟ್ಟಿ ಅವರು, ಪಂಚಾಯತ್ ರಾಜ್ ಕಾಯ್ದೆಯನ್ನು ಪಂಚಾಯತ್ ಪ್ರತಿನಿಧಿಗಳು ತಿಳಿದುಕೊಳ್ಳಬೇಕು. ಇಲ್ಲಿ ಸಾಕಷ್ಟು ಕಾಯ್ದೆಗಳಿವೆ. ಅವುಗಳನ್ನೆಲ್ಲವನ್ನು ಸರಳವಾಗಿ ಜನಾರ್ದನ ಮರವಂತೆಯವರು ಈ ಕೃತಿಯಲ್ಲಿ ನೀಡಿದ್ದಾರೆ. ಇದು ಉಪಯೂಕ್ತ ಕೃತಿಯಾಗಲಿದೆ ಎಂದರು.

ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು. ಜನಾಧಿಕಾರ ಕೃತಿಯ ಲೇಖಕರಾದ ಎಸ್.ಜನಾರ್ದನ ಮರವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇದಾರ ಮರವಂತೆ ನಾಡಗೀತೆ ಹಾಡಿದರು. ಹಕ್ಕೋತ್ತಾಯ ಆಂದೋಲನದ ಕೃಪಾ ಎಂ.ಎಂ ವಂದಿಸಿದರು. ಉದಯ ಗಾಂವಕರ ಕಾರ್ಯಕ್ರಮ ನಿರ್ವಹಿಸಿದರು.

ಗ್ರಾಮ ಸರಕಾರ ಕಾರ್ಯಾಲಯದಿಂದ ‘ಜನಾಧಿಕಾರ’ ಅನಾವರಣ
ಪುಸ್ತಕ ಬಿಡುಗಡೆಯನ್ನು ವಿಶಿಷ್ಠವಾಗಿ ಮಾಡಲಾಯಿತು. ಪಂಚಾಯತ್ ಕಟ್ಟಡ ಮಾದರಿಯ ಗ್ರಾಮ ಸರಕಾರ ಕಾರ್ಯಾಲಯ ‘ಜನಾಧಿಕಾರ ಸೌಧ’ದ ಬಾಗಿಲು ತೆರೆದು ಎ.ಜಿ ಕೊಡ್ಗಿಯವರು ಪುಸ್ತಕವನ್ನು ಹೊರ ತಗೆದು ಅನಾವರಣಗೊಳಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!