spot_img
Wednesday, November 19, 2025
spot_img

ಹಳ್ಳಿಯತ್ತ ಚಿತ್ತ ನೆಟ್ಟ ಡಾ. ಕಾವೇರಿ ನಂಬೀಶನ್ | ಡಾ. ಎಚ್. ಎಸ್. ಅನುಪಮಾ ಅವರ ಲೇಖನ

ವಿದ್ಯೆ ಕಲಿತವರು ನಗರಗಳತ್ತ ನಡೆಯುತ್ತಾರೆ; ಅದರಲ್ಲೂ ತಜ್ಞ ವೈದ್ಯರು ಹಳ್ಳಿಯ ಕಡೆ ಬರುವುದಿಲ್ಲ ಎನ್ನುವುದು ಸದಾ ಕೇಳಿಬರುವ ಆರೋಪ. ಅದು ನಿಜವೂ ಹೌದು. ಹೆಚ್ಚು ಜನ, ಹೆಚ್ಚು ರೋಗಿಗಳು ಇರುವುದು ನಗರಗಳಲ್ಲಿ. ಅತ್ಯಾಧುನಿಕ ವ್ಯವಸ್ಥೆ, ಅದರ ಶುಲ್ಕ ಭರಿಸಬಲ್ಲ ಜನರು, ಸಹಾಯಕ/ಕಿಯರು, ವೃತಿಬಾಂಧವರು ಸಿಗುವುದು ನಗರಗಳಲ್ಲಿ. ಆಧುನಿಕ ಬದುಕಿನ ಐಷಾರಾಮಗಳು ತಕ್ಷಣವೇ ದೊರೆಯುವುದು ನಗರಗಳಲ್ಲಿ. ಆದ್ದರಿಂದ ಹಲವೆಂಟು ತರಹದ ತಜ್ಞರನ್ನು ನಗರಗಳು ಎಳೆಯುತ್ತವೆ. ಅಂಥವರ ನಡುವೆ ಇಂಗ್ಲೆ0ಡಿನಲ್ಲಿ ಶಿಕ್ಷಣ ಪಡೆದುಬಂದ ಸರ್ಜನ್ ಒಬ್ಬರು ತಮ್ಮ ತಜ್ಞತೆಯನ್ನು ನಾಲ್ಕು ದಶಕಗಳ ಕಾಲ ಗ್ರಾಮೀಣ ಭಾರತಕ್ಕೆ ಮೀಸಲಿಟ್ಟದ್ದು, 36 ವರ್ಷ ತಜ್ಞವೈದ್ಯರಾಗಿ ಕೆಲಸ ಮಾಡಿ ಬಳಿಕ ಹಳ್ಳಿಯ ಜನರಲ್ ಪ್ರಾಕ್ಟೀಸಿಗೆ ಮರಳಿದ್ದು, ವೈದ್ಯಕೀಯದಷ್ಟೇ ಬರವಣಿಗೆಗೂ ಆದ್ಯತೆ ನೀಡಿ ಭಾರತದ ಪ್ರಮುಖ ಇಂಗ್ಲಿಷ್ ಲೇಖಕಿಯಾಗಿ ಹೊರಹೊಮ್ಮಿದ್ದು ಅಸಾಮಾನ್ಯ ಸಂಗತಿ ಎನ್ನಬಹುದು. ವೈದ್ಯವೃಂದವು ಜನಸಾಮಾನ್ಯರೊಡನೆ ತಮ್ಮನ್ನು ಗುರುತಿಸಿಕೊಳ್ಳಲು ದೊಡ್ಡ ತಡೆಯಾಗಿರುವ ವರ್ಗಪ್ರಜ್ಞೆಯನ್ನು ಮೀರಿ ವರ್ಗ ಅಸ್ಮಿತೆಯಾಚೆ ಬದುಕಲೆತ್ನಿಸಿದ ಆ ವೈದ್ಯೆ ಡಾ. ಕಾವೇರಿ. ಸಾಹಿತಿ, ಸಂಗಾತಿ, ಸಮಾಜಸೇವಕಿ, ಆಕ್ಟಿವಿಸ್ಟ್ ಮುಂತಾದ ಪಾತ್ರಗಳನ್ನು ವೃತ್ತಿಯೊಡನೆ ನಿಭಾಯಿಸುತ್ತಿರುವವರು ಡಾ. ಕಾವೇರಿ ನಂಬೀಶನ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಇಂಗ್ಲಿಷ್ ಲೇಖಕಿಯಾದ ಅವರು ಕನ್ನಡ ವಲಯಗಳಲ್ಲಿ ಅಪರಿಚಿತರಾಗಿರುವ ನಮ್ಮ ಕೊಡಗು ಮೂಲದವರು.

ದಕ್ಷಿಣ ಕೊಡಗಿನ ಪಳಂಗಳ ಎಂಬ ಹಳ್ಳಿಯಲ್ಲಿ ಹುಟ್ಟಿದ ಕಾವೇರಿ ರಾಜಕಾರಣದ ಮನೆತನದವರು. ಅವರ ಅಜ್ಜ ದಿವಾನ್ ಚೆಪ್ಪುಡಿರ ಪೊನ್ನಪ್ಪ ಅವರ ಹೆಸರಿನಲ್ಲಿ 1821ರಲ್ಲಿ ರೂಪುಗೊಂಡ ಊರು ಪೊನ್ನಂಪೇಟೆ. ಕಾವೇರಿ ಹುಟ್ಟುವ ವೇಳೆಗೆ ತಂದೆ ಸಿ. ಎಂ. ಪೂಣಚ್ಚ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಹೋರಾಟಗಾರರಾಗಿದ್ದರು. ಎರಡು ಬಾರಿ ಜೈಲುವಾಸ ಅನುಭವಿಸಿದ್ದರು. ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಕೊಡಗಿನ ಮುಖ್ಯಮಂತ್ರಿಯಾಗಿದ್ದರು (1952-56). ಕೊಡಗು, ಮಂಗಳೂರು, ಮೈಸೂರುಗಳನ್ನು ವಿಧಾನಸಭೆ, ರಾಜ್ಯಸಭೆ, ಲೋಕಸಭೆಗಳಲ್ಲಿ ದಶಕಗಳ ಕಾಲ ಪ್ರತಿನಿಧಿಸಿದ್ದ ಪೂಣಚ್ಚ ಮೈಸೂರು ರಾಜ್ಯದ ಗೃಹಮಂತ್ರಿ (1957-62), ಕೇಂದ್ರ ಅರ್ಥ ಖಾತೆಯ ರಾಜ್ಯಮಂತ್ರಿ (1966), ಸಾರಿಗೆ, ವಿಮಾನಯಾನ, ಜಲಯಾನ, ಪ್ರವಾಸೋದ್ಯಮ ಖಾತೆಯ ರಾಜ್ಯ ಮಂತ್ರಿ (1966-67), ಕೇಂದ್ರ ರೈಲ್ವೆ ಮಂತ್ರಿ (1967-69), ಕಬ್ಬಿಣ ಮತ್ತು ಭಾರೀ ಕೈಗಾರಿಕೆ ಖಾತೆಯ ಮಂತ್ರಿ (1969-71), ಮಧ್ಯಪ್ರದೇಶ (1978-80) ಮತ್ತು ಒರಿಸ್ಸಾ (1980-83) ರಾಜ್ಯಗಳ ರಾಜ್ಯಪಾಲರಾಗಿದ್ದವರು.

ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಇಂಥ ಜನನಾಯಕರು ಹೇಗಿರಬಹುದೆಂದು ನಾವಿಂದು ಕಲ್ಪಿಸುತ್ತೇವೋ ಹಾಗೆ ಪೂಣಚ್ಚ ಇರಲಿಲ್ಲ. ಗಾಂಧೀವಾದಿಯಾಗಿದ್ದ ಅವರು ತಮ್ಮ ನಾಲ್ಕು ಮಕ್ಕಳಾಗಲೀ, ಕುಟುಂಬದವರಾಗಲೀ ಅಧಿಕಾರದ ಪ್ರಭಾವವನ್ನು ಬಳಸಿಕೊಳ್ಳಲು ಒಪ್ಪುತ್ತಿರಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ದೆಹಲಿ, ಬೆಂಗಳೂರು, ಮೈಸೂರುಗಳಿಗೆ ತಂದೆ ಓಡಾಡುತ್ತಿರುವಾಗ ಮಕ್ಕಳು ಮಡಿಕೇರಿಯ ಕನ್ನಡ ಶಾಲೆಗಳಲ್ಲಿ ಕಲಿತರು. ಕಾವೇರಿಗೆ 12 ವರ್ಷವಿರುವಾಗ ಕುಟುಂಬ ದೆಹಲಿಗೆ ಹೋಯಿತು. ಮಕ್ಕಳು ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಕಲಿಯಬೇಕಾಯಿತು. ಚುರುಕಿನ, ಸ್ವತಂತ್ರ ನಡವಳಿಕೆಯ ಹಿರಿಯ ಮಗಳು ಕಾವೇರಿ ಬಾಲ್ಯದಿಂದಲೇ ಚಂದಮಾಮಾ, ಜೀವನ ಚರಿತ್ರೆ, ಸಣ್ಣಕತೆಗಳ ಪುಸ್ತಕ ಓದುತ್ತಿದ್ದಳು. ದೆಹಲಿಗೆ ಬಂದಮೇಲೆ ಇಂಗ್ಲಿಷ್ ಕಾದಂಬರಿ ಲೋಕಕ್ಕೆ ಪ್ರವೇಶವಾಯಿತು. `ಡಾ. ಜಿವಾಗೋ’ ಕಾದಂಬರಿ ಓದಿದ್ದ ಕಾವೇರಿ ಮೆಡಿಕಲ್ ಓದುವ ಕನಸು ಕಂಡಳು. ಮನೆಯವರಿಗೆ ಅಷ್ಟೇನೂ ಇಷ್ಟವಿಲ್ಲದಿದ್ದರೂ 1965ರಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಳು. ಎಂಬಿಬಿಎಸ್ ನಂತರ ಶಸ್ತçಚಿಕಿತ್ಸಾ ತಜ್ಞೆ (ಸರ್ಜನ್) ಆಗಬೇಕೆಂಬ ಗುರಿಯಿಟ್ಟುಕೊಂಡಳು.

ಸರ್ಜರಿ ಎನ್ನುವುದು ಗಂಡಸರ ತಜ್ಞತೆಯ ಕ್ಷೇತ್ರ; ಅಕಸ್ಮಾತ್ ಮಹಿಳೆ ಸರ್ಜನ್ ಆದರೂ ಯಶಸ್ವಿಯಾಗುವುದು ಕಷ್ಟ ಎಂದು ಇವತ್ತಿಗೂ ಭಾವಿಸಲಾಗಿದೆ. ಕಾವೇರಿಯ ತಂದೆಯೂ ಹಾಗೆಯೇ ಭಾವಿಸಿದರು. ಸ್ತಿçರೋಗ-ಚರ್ಮ-ಮಕ್ಕಳ ತಜ್ಞೆ ಮುಂತಾಗಿ ಮಹಿಳೆಯರಿಗೆ ಹೊಂದಿಕೆಯಾಗುವ ತಜ್ಞತೆ ಆರಿಸಿಕೊಳ್ಳಬೇಕೆಂದು ತಮ್ಮ ಪರಿಚಯದ ವೈದ್ಯರಿಂದ ಮಗಳಿಗೆ ಹೇಳಿಸಿದರು. ಬೇಡಬೇಡವೆಂದಷ್ಟೂ ಕಾವೇರಿ ಅದಕ್ಕೇ ಹೋಗುವೆನೆಂದು ಧೃಢವಾದಳು. ನಿರ್ವಾಹವಿಲ್ಲದೆ ತಂದೆ ಎಫ್‌ಆರ್‌ಸಿಎಸ್‌ಗೆ ಮಗಳನ್ನು ಕಳಿಸಲು ಒಪ್ಪಿದರು. ವೀಸಾಗಾಗಿ ಮಗಳ ಜೊತೆಗೆ ತಾವೂ ಓಡಾಡಿದರು.

ಇಂಗ್ಲೆAಡಿನ ಲಿವರ್‌ಪೂಲ್ ತಲುಪಿದ ಕಾವೇರಿ ಹಗಲುರಾತ್ರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಶ್ರಮವಹಿಸಿ ಓದಿದರು. ಕೆಲಸ, ಓದು, ಕೆಲಸ, ಓದು. ಎಫ್‌ಆರ್‌ಸಿಎಸ್ ಪದವಿ ದೊರೆಯಿತು. ಕಾಲೇಜು ದಿನಗಳ ಒಡನಾಡಿಯಾಗಿದ್ದ, ತಮಗಿಂತ ಒಂದು ವರ್ಷ ಮೊದಲೇ ಎಫ್‌ಆರ್‌ಸಿಎಸ್ ಪಡೆಯಲು ಇಂಗ್ಲೆ0ಡ್ ತಲುಪಿದ್ದ ಡಾ. ಕೆ. ಆರ್. ಭಟ್ ಅವರನ್ನು ವಿವಾಹವಾದರು.

ಇತ್ತ ಭಾರತದ ಆಗುಹೋಗುಗಳು ತಂದೆ, ತಾಯಿಯ ಪತ್ರಗಳಿಂದ ತಿಳಿಯುತ್ತಿದ್ದವು. ನಾಯಕತ್ವದ ಸುತ್ತ ಆರಾಧನಾ ಭಾವ ಬೆಳೆದಿದ್ದ, ಜನನಾಯಕರು ನಿರ್ಲಜ್ಜೆ ಬೆಳೆಸಿಕೊಂಡು ಭ್ರಷ್ಟರಾಗುತ್ತಿದ್ದ ತುರ್ತುಪರಿಸ್ಥಿತಿಯ ಕಾಲ ಅದು. ರಾಜಕಾರಣ ನೋಡುತ್ತ ಬೆಳೆದಿದ್ದ ಕಾವೇರಿಗೆ ಭಾರತದಲ್ಲಿ ನಡೆಯುತ್ತಿದ್ದ ಸಂಗತಿಗಳು ಬೇಸರ ತಂದವು. ನೇರವಾಗಿ ಪ್ರಧಾನಿ ಇಂದಿರಾಗೆ ಪತ್ರ ಬರೆದರು. ಭಾರತ ಮುಂದುವರೆಯಬೇಕಾದರೆ ಆಗಬೇಕಿರುವುದೇನು ಎಂದು ತನ್ನ ಕನಸನ್ನು ಪ್ರಧಾನಿಯೊಂದಿಗೆ ಹಂಚಿಕೊ0ಡರು.

ಒಂದು ದಿನ ಕೆಲಸ ಮುಗಿಸಿ ರೂಮಿಗೆ ಬರುವ ಹೊತ್ತಿಗೆ ಅಂತರ್ದೇಶೀಯ ಪತ್ರ ಕಾಯುತ್ತಿತ್ತು. `ಗವರ್ನಮೆಂಟ್ ಆಫ್ ಇಂಡಿಯಾ’ ಎಂಬ ಕೆಂಪು ಮುದ್ರೆಯ ಲಕೋಟೆ ಒಡೆದರೆ, ಪ್ರಧಾನಿ ಪತ್ರ ಬರೆದಿದ್ದರು. ತನ್ನ ನಾಯಕತ್ವದಲ್ಲಿ ಭಾರತ ವೇಗವಾಗಿ ಮುಂದುವರೆಯುತ್ತಿರುವಾಗ ಸ್ವಂತ ಲಾಭಕ್ಕೆ ದೇಶ ತೊರೆದು ವಿದೇಶ ಸೇರಿದ ಕೃತಘ್ನ ವ್ಯಕ್ತಿಗಳು ತನಗೆ ಉಪದೇಶ ಮಾಡುವ ಅಗತ್ಯವಿಲ್ಲ ಎಂದು ಕಟುವಾಗಿ ತಿವಿದಿದ್ದರು.

ಪತ್ರದ ಕಟಕಿ ಕುಟುಕತೊಡಗಿತು. ಚಳಿಗಾಲದ ಹಿಮವು ತನ್ನ ಎದೆಯೊಳಗೇ ರಾಶಿಬಿದ್ದು ಹೆಪ್ಪುಗಟ್ಟಿ ಭಾರವಾದಂತೆನಿಸಿತು. ಇಂಗ್ಲೆ0ಡಿನ ಶಿಸ್ತು, ಅಚ್ಚುಕಟ್ಟುತನ, ಕೆಲಸದ ಶ್ರದ್ಧೆ, ಸಮಾಜ ಜೀವನ ಎಲ್ಲ ಚೆನ್ನಾಗಿದ್ದರೂ ಅಲ್ಲಿರುವ ಮನಸ್ಸಾಗಲಿಲ್ಲ. ಮುಂದೇನು? ಬಿಹಾರದ ಪಾಟ್ನಾದಿಂದ 90 ಕಿಲೋಮೀಟರ್ ದೂರದಲ್ಲಿದ್ದ, ಹಿಂದುಳಿದ ಬಡ ಪ್ರದೇಶ ಮೊಕಾಮಾ ಕೈಬೀಸಿ ಕರೆಯಿತು. ಅಲ್ಲಿ ಕಾವೇರಿಯ ಮೆಡಿಕಲ್ ಕಾಲೇಜು ಸಹಪಾಠಿಯಾಗಿದ್ದ ನನ್ ಒಬ್ಬರು ನಜರೆತ್ ಪಂಥಾನುಯಾಯಿಗಳು ನಡೆಸುತ್ತಿದ್ದ ಆಸ್ಪತ್ರೆಗೆ ಸರ್ಜನ್ ಬೇಕಿದ್ದಾರೆ, ಬರುವೆಯಾ ಎಂದು ಆಹ್ವಾನ ನೀಡಿದರು.

ದಂಪತಿಗಳು ಭಾರತಕ್ಕೆ ಹೊರಟರು. ಒಬ್ಬರೇ ಹೋದವರು ಇಬ್ಬರಾಗಿ ಮರಳಿದರು. ಇಬ್ಬರದೂ ಸಾಂಪ್ರದಾಯಿಕ ಮನೆತನ. ಅಲ್ಲಿ ಪ್ರೇಮವಿವಾಹ ನಿಷಿದ್ಧ. ಅನ್ಯಮಾರ್ಗವಿಲ್ಲದೆ ಎರಡೂ ಕಡೆಯವರು ಬರಮಾಡಿಕೊಂಡರು. ಅವರು ನೆಲೆಯಾಗಲು ಹೊರಟ ಸ್ಥಳ ತಿಳಿದವರು, `ಬಿಹಾರವಾ? ಎಲ್ಲ ಬಿಟ್ಟು ಅಲ್ಲಿಗ್ಯಾಕೆ?’ ಎಂದೇ ಅಚ್ಚರಿಯಿಂದ ಕೇಳಿದರು. ಅದಕ್ಕೆ ಕಾರಣವಿತ್ತು. ಅಂದಿಗೂ ಇಂದಿಗೂ ಜನಭರಿತ, ಖನಿಜ ಭರಿತ, ಗಂಗಾನದಿ ತಟದ ಫಲವತ್ತಾದ ನೆಲವಾದರೂ ದೇಶದ ಅತಿ ಹಿಂದುಳಿದ ರಾಜ್ಯ ಬಿಹಾರ. ಜಮೀನ್ದಾರಿ ಗರ್ವ, ಕ್ರೌರ್ಯಗಳ ಗೂಂಡಾ ರಾಜ್ಯದಲ್ಲಿ ಬಡತನವೆಷ್ಟೋ ಅಷ್ಟೇ ಸಾಮಾಜಿಕ ಅರಾಜಕತೆ ಎದ್ದು ಕಾಣುತ್ತದೆ. ಸೊಕ್ಕಿದ ಜಮೀನ್ದಾರರು, ಹಿಂಸಿಸಲ್ಪಟ್ಟ ಜೀತದಾಳುಗಳು, ಕ್ರಿಮಿನಲ್‌ಗಳು, ಢಕಾಯಿತರು, ಗ್ಯಾಂಗ್ ಯುದ್ಧ, ಕೊಲೆ, ರಕ್ತಪಾತ, ಬಡತನ, ಕಾಯಿಲೆಗಳ ತವರು ಅದು.

ಕಾವೇರಿ ಹೋದ ಸಮಯದಲ್ಲಿ ಸಾಸಿವೆಯ ಹೊಲಗಳಲ್ಲಿ, ರೈಲ್ವೇ ಟ್ರಾಕಿನ ಮೇಲೆ, ಹಾದಿಬೀದಿಗಳಲ್ಲಿ, ಪಾಳುಮನೆಗಳಲ್ಲಿ, ನಗರದ ನಟ್ಟನಡುವಲ್ಲಿ ಎಲ್ಲಿ ಬೇಕಾದರೂ ಕೊಲೆ, ಹಲ್ಲೆ, ಹತ್ಯೆಗಳಾಗುತ್ತಿದ್ದವು. ರಾತ್ರಿ, ಹಗಲು ಎಂದಿಲ್ಲದೆ ಎಮರ್ಜೆನ್ಸಿ ರೋಗಿಗಳು ನೆರೆಯುತ್ತಿದ್ದರು. ಕೆಲವೊಮ್ಮೆ ರೌಡಿ ಗ್ಯಾಂಗೇ ಆಸ್ಪತ್ರೆಗೆ ಬರುತ್ತಿತ್ತು. ರೋಗಿಯ ಇತ್ಯೋಪರಿ ವಿಚಾರಿಸುತ್ತ ನಿಂತವರ ಕೈಯಲ್ಲಿ ಚಾಕು, ಚೂರಿ, ಪಿಸ್ತೂಲು, ಎಕೆ47 ರೈಫಲ್ಲುಗಳು ರಾರಾಜಿಸುತ್ತಿದ್ದವು! ಆಸ್ಪತ್ರೆಯ ಸುರಕ್ಷಿತ ಆವರಣ ದಾಟಿ ಹೊರಹೋಗಲು ಎಲ್ಲರೂ ಹೆದರುತ್ತಿದ್ದರು. ಎಲ್ಲಿ ಹೋಗುವುದಾದರೂ ಸೈಕಲ್ ರಿಕ್ಷಾಗಳನ್ನೇ ಅವಲಂಬಿಸಬೇಕು. ಅಂಥಲ್ಲಿ ನಜರೆತ್ ಸಿಸ್ಟರುಗಳು 1940ರಲ್ಲಿ ತೆರೆದ ಆ ಆಸ್ಪತ್ರೆಯಲ್ಲಿ ಕೈತುಂಬಾ ಕೆಲಸವಿತ್ತು. ತಾನು ನಿಜವಾಗಿ ಸರ್ಜನ್ ಆದೆ ಎಂಬ ಭಾವನೆ ಹುಟ್ಟುವಷ್ಟು ದಟ್ಟ ಅನುಭವವಾಯಿತು.

ಲಿವರ್‌ಪೂಲಿನ ಸುಸಜ್ಜಿತ, ಶಿಸ್ತಿನ ವಾತಾವರಣವೇ ಬೇರೆ, ಮೊಕಾಮಾ ಲೋಕವೇ ಬೇರೆ. ಇಲ್ಲಿ ಸಮಾಜದ ವಿರಾಟ್ ದರ್ಶನವಾಯಿತು. ಮಡಿಕೇರಿ, ದೆಹಲಿ, ಬೆಂಗಳೂರು, ಲಿವರ್‌ಪೂಲ್, ಮೊಕಾಮಾ – ಎಷ್ಟು ಅಂತರ! ಎಷ್ಟು ವೈರುಧ್ಯ?! ಸೂಕ್ಷö್ಮ ಮನಸ್ಸಿಗೆ ತುಮುಲ ಹೆಚ್ಚಿದಾಗ ಬರವಣಿಗೆ ಆರಂಭಿಸಿದರು. ಇದುವರೆಗೆ ಓದುಗುಳಿಯಾಗಿದ್ದ ಕಾವೇರಿ ಬರಹದ ಬದುಕಿಗೆ ತೆರೆದುಕೊಂಡರು. ಮಗಳು ಚೇತನಾ ಸಂಸಾರದಲ್ಲಿ ಬಂದ ಪ್ರಭಾವವೋ ಏನೋ, ಮಕ್ಕಳಿಗಾಗಿ ಮಕ್ಕಳ ಪತ್ರಿಕೆಗಳಲ್ಲಿ ಕಾವೇರಿ ಭಟ್ ಎಂಬ ಹೆಸರಿನಲ್ಲಿ ಬರೆಯತೊಡಗಿದರು. ಸರ್ಜನ್, ಲೇಖಕಿ, ತಾಯಿ, ಹೆಂಡತಿ ಮುಂತಾಗಿ ಹಲವು ಪಾತ್ರಗಳನ್ನು ನಿಭಾಯಿಸಿದರು. 1986ರಲ್ಲಿ ಅವರ ಮೊದಲ ಮಕ್ಕಳ ಕಾದಂಬರಿ `ಒನ್ಸ್ ಅಪಾನ್ ಎ ಫಾರೆಸ್ಟ್’ ಹೊರಬಂತು. ಬಳಿಕ `ಕಿಟ್ಟಿ ಕೈಟ್’ ಪ್ರಕಟಿಸಿದರು. ಫೆಮಿನಾ, ಈವ್ಸ್ ವೀಕ್ಲಿಗೂ ಬರೆಯತೊಡಗಿದರು.

ಒಂದೇ ವರ್ಷ. ಅರಾಜಕ ಬಿಹಾರ ದಣಿವು ಹುಟ್ಟಿಸಿ ದಂಗು ಬಡಿಸಿದಾಗ ಅಲ್ಲಿಂದ ಹೊರಟರು. 1980ರ ವೇಳೆಗೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿ ರಾಮಕೃಷ್ಣ ಮಿಷನ್ನಿನವರು ನಡೆಸುತ್ತಿದ್ದ ಆಸ್ಪತ್ರೆ ಸೇರಿದರು. ಅದು ಮತ್ತೊಂದು ಲೋಕ. ವಿಧವೆಯರು, ಸನ್ಯಾಸಿಗಳು, ಅಮಾಯಕ ಹಳ್ಳಿಯ ಜನರು, ಬಡಜನತೆ ತುಂಬಿದ್ದ ಪೌರಾಣಿಕ ಖ್ಯಾತಿಯ ಊರದು. ಅಲ್ಲೂ ಪೇಶೆಂಟುಗಳಿಗೆ ಕೊರತೆಯಿಲ್ಲ. ಆದರೆ ಮೊಕಾಮಾದ ಶಿಸ್ತು, ಶ್ರದ್ಧೆ, ಸ್ವಚ್ಛತೆ, ಬದ್ಧತೆಯ ಸೇವೆಗಳು ಕಾಣಲಿಲ್ಲ. ನುರಿತ ನರ್ಸುಗಳಾಗಲೀ, ಸಿಬ್ಬಂದಿಯಾಗಲೀ ಇರಲಿಲ್ಲ. ಹೇಗೆ ನಡೆದರೂ ಧರ್ಮಾಸ್ಪತ್ರೆಯಲ್ಲಿ ನಡೆದೀತು ಎಂಬ ಉದಾಸೀನ. ಒಂದೆರೆಡು ಅಪವಾದ ಹೊರತುಪಡಿಸಿ ಮತ್ತೆಲ್ಲ ಅಶಿಸ್ತಿನ ಸಿಬ್ಬಂದಿ, ಬೇಜವಾಬ್ದಾರಿ ಚಿಕಿತ್ಸೆ. ಕಂಡ ಲೋಪಗಳನ್ನು ಹೇಳಿದ ಕೂಡಲೇ ವ್ಯವಸ್ಥೆಯನ್ನು ಕ್ರಮಬದ್ಧ, ಶಿಸ್ತುಬದ್ಧಗೊಳಿಸುವ ಜವಾಬ್ದಾರಿ ಇವರ ಮೇಲೇ ಬಿತ್ತು. ಅತ್ತ ಮೊಕಾಮಾದ ಕ್ರೆಸ್ತ ಸನ್ಯಾಸಿನಿಯರು, ಇಲ್ಲಿ ರಾಮಕೃಷ್ಣ ಮಿಶನ್ನಿನ ಸನ್ಯಾಸಿಗಳು – ಜಾತಿಮತ ಮೀರಿ ಸೇವಾಭಾವನೆಯಲ್ಲಿ ತೆತ್ತುಕೊಂಡಿದ್ದರೂ ಎಲ್ಲೆಲ್ಲೂ ತುಂಬಿ ತುಳುಕುವ ಅತಿ ಧಾರ್ಮಿಕತೆ ಉಸಿರುಗಟ್ಟಿಸಿ ಅಲ್ಲಿಂದಲೂ ಹೊರಬಿದ್ದರು.

ಆ ವೇಳೆಗೆ ಗ್ರಾಮೀಣ ಭಾರತದಲ್ಲಿ ಕೆಲಸ ಮಾಡುವ ಶಸ್ತçಚಿಕಿತ್ಸಾ ತಜ್ಞರೆಲ್ಲ ಸೇರಿ `ಅಸೋಸಿಯೇಷನ್ ಆಫ್ ರೂರಲ್ ಸರ್ಜನ್ಸ್ ಆಫ್ ಇಂಡಿಯಾ’ (ಎಎಸ್ಸಾರೈ) ಎಂಬ ಸಂಘ ಕಟ್ಟಿಕೊಂಡರು. ಅದರ ಮೂಲಕ ಗ್ರಾಮೀಣ ಭಾಗದ ಆರೋಗ್ಯ ಅವಶ್ಯಕತೆಗಳತ್ತ ಸಮಾಜ-ಸರ್ಕಾರಗಳು ನೀತಿನಿರೂಪಣೆಯ ಸಮಯದಲ್ಲೇ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಆ ಸಂಘದ ಆಡಳಿತ ಸಮಿತಿಯ ಸದಸ್ಯೆಯಾಗಿ ಕಾವೇರಿ ಕಾರ್ಯ ನಿರ್ವಹಿಸಿದರು. ಅವರ ಮೊದಲ ಕಾದಂಬರಿ `ದ ಟ್ರುತ್ (ಆಲ್ಮೋಸ್ಟ್) ಅಬೌಟ್ ಭಾರತ್’ (1991) ಬಂದಿತು. ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಓದು ನಿಲ್ಲಿಸಿ ಬೈಕಿನಲ್ಲಿ ದೇಶ ಸುತ್ತಿ ಪಡೆದ ಅನುಭವ ಕಥನ ಅದು.

ಬದುಕು ಮತ್ತೊಂದು ಮುಖ್ಯ ತಿರುವು ತೆಗೆದುಕೊಂಡಿತು. 18 ವರ್ಷಗಳ ದಾಂಪತ್ಯ ಕೊನೆಗೊಂಡಿತ್ತು. ಮಗಳು ತಂದೆಯೊಡನೆ ಹೋದಾಗ ಕಾವೇರಿ ಒಂಟಿಯಾದರು. ಮದರಾಸಿನಲ್ಲಿ ಕೆಲಸಕ್ಕೆ ಸೇರಿದರು. ಐದು ಅಂತಸ್ತಿನ, 600 ಹಾಸಿಗೆಗಳ, ಸುಸಜ್ಜಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಅದರ ಮಾಲೀಕನೂ ಸರ್ಜನ್ನೇ. ಆದರೆ ಆತ್ಮರತಿ, ಅಹಂಕಾರ, ಅಜ್ಞಾನ, ಅವಿವೇಕದ ಆ ಸರ್ಜನ್ ರೋಗಿಗಳನ್ನು ಅಕ್ಷರಶಃ ಸುಲಿಯುತ್ತಿದ್ದ. ಅವಧಿ ಮೀರಿದ ಔಷಧಿಗಳನ್ನು ಮಾರುತ್ತಿದ್ದ. ಉಳ್ಳವರು, ಇಲ್ಲದವರ ಚಿಕಿತ್ಸೆಗಳಲ್ಲಿ ಅಗಾಧ ಅಂತರವಿತ್ತು. ರೋಗಿಗಳಿಗೆ ಮೋಸ ಮಾಡಿಯಾದರೂ ದುಡ್ಡು ಬರಬೇಕು. ಹೆಚ್ಚೆಚ್ಚು ಆಪರೇಷನ್ ಮಾಡಬೇಕು, ಹೆಚ್ಚೆಚ್ಚು ಅಡ್ಮಿಟ್ ಮಾಡಬೇಕು, ರೋಗಿಗಳಿಗೆ ಹೆಚ್ಚೆಚ್ಚು ಖರ್ಚಾಗಬೇಕು. ಅಷ್ಟು ಮಾಡದಿದ್ದರೆ ಪದೇಪದೇ ಕರೆಸಿ ಎಚ್ಚರಿಸುತ್ತಿದ್ದ. ಒಂದು ವರ್ಷ ಮೂರು ತಿಂಗಳ ಬಳಿಕ ಆ ಕೆಲಸವನ್ನೂ ಬಿಟ್ಟರು.

ಆಗ `ದಿ ಹಿಂದೂ’ ಪತ್ರಿಕೆಯಲ್ಲಿದ್ದ ಕೇರಳ ಮೂಲದ ಕವಿ, ಪತ್ರಕರ್ತ, ವಿಜಯ್ ನಂಬೀಶನ್ ಪರಿಚಯವಾಯಿತು. ಸಮಾನ ಮನಸ್ಕ ಜೀವಗಳು ಹತ್ತಿರ ಬಂದವು. ತನಗಿಂದ ಕಿರಿಯರಾದ ಅವರನ್ನು ಕಾವೇರಿ 1994ರಲ್ಲಿ ವಿವಾಹವಾದರು. ಮತ್ತೆ ಮೊಕಾಮಾ ಕೈಬೀಸಿ ಕರೆಯಿತು. ವಿಜಯ್ ಜೊತೆಗೆ ಅದೇ ನಜರೆತ್ ಸಿಸ್ಟರುಗಳ ಆಸ್ಪತ್ರೆಗೆ ಹೋದರು. ಆದರೆ ಆಸ್ಪತ್ರೆಯಲ್ಲಿ ಮ್ಯಾನೇಜ್‌ಮೆಂಟ್ ಸಂಸ್ಕೃತಿ ತಲೆ ಹಾಕಿತ್ತು. ಎಲ್ಲಕ್ಕೂ ಜನ. ಎಲ್ಲವೂ ವ್ಯವಹಾರ. ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುವ ನಷ್ಟದ ವ್ಯವಹಾರದ ಬದಲು ಜಾಗೃತಿ ಕಾರ್ಯಕ್ರಮಗಳನ್ನೇ ನಡೆಸೋಣವೆಂದು ಮ್ಯಾನೇಜ್‌ಮೆಂಟ್ ಹೇಳತೊಡಗಿತು. ಒಂದೂವರೆ ವರ್ಷದ ಬಳಿಕ ಆಸ್ಪತ್ರೆಯು ಲಾಭದಾಯಕವಾಗಲು ತನ್ನ ಸ್ವರೂಪ, ಉದ್ದೇಶ ಬದಲಿಸಿಕೊಂಡಾಗ ಅಲ್ಲಿಂದ ಹೊರಟರು.

ನಂತರದ ನಡೆ ಕೇರಳದ ಕಡೆಗೆ. ಇಡುಕ್ಕಿಯಲ್ಲಿ ಎಲ್‌ಎಂಪಿ ವೈದ್ಯರೊಬ್ಬರು 60 ಹಾಸಿಗೆಗಳ ಆಸ್ಪತ್ರೆ ನಡೆಸುತ್ತಿದ್ದರು. ಅಲ್ಲಿ ರೋಗಿಗಳಿಗೆ ದಿನಾ ಬೆಳಿಗ್ಗೆ ಭಜನೆ ಹೇಳಿಕೊಟ್ಟು ತಲೆಮೇಲೆ ಕೈಯಿಟ್ಟು ಆಶೀರ್ವದಿಸುವ ಹೀಲಿಂಗ್ ಸೆಷನ್ನುಗಳು ನಡೆಯುತ್ತಿದ್ದವು! ಓಟಿಯಲ್ಲಿ ನಿರ್ವಹಣೆಯಾಗದ ವೈದ್ಯಕೀಯ ನೀತಿಸಂಹಿತೆ, ಅಕ್ರಮ ಪ್ರಾಕ್ಟೀಸುಗಳನ್ನು ಎತ್ತಿ ತೋರಿಸಿದ್ದಕ್ಕೆ ಆಸ್ಪತ್ರೆಯಿಂದ ಹೊರನಡೆಯಿರಿ ಎಂಬ ಸಂದೇಶ ಬಂತು. ಐದೇ ತಿಂಗಳಲ್ಲಿ ಹೊರಬಂದರು. ಆದರೆ ಅಕ್ರಮ ಎಸಗುವವರನ್ನು ಸುಮ್ಮನೆ ಬಿಡಬಾರದೆಂದು ಅಲ್ಲಿ ನಡೆಯುವ ಅನ್ಯಾಯಗಳ ಬಗೆಗೆ ಮೆಡಿಕಲ್ ಕೌನ್ಸಿಲಿಗೆ ಬರೆದರು. ಕ್ರಮ ಜರುಗಿಸುವುದು ಒತ್ತಟ್ಟಿಗಿರಲಿ, ಯಾರೂ ಅದೊಂದು ಗಂಭೀರ ವಿಷಯವೆಂದೇ ಪರಿಗಣಿಸಲಿಲ್ಲ. ಬಳಿಕ ಕೆಲ ಕಾಲ ನಿರುದ್ಯೋಗ. ಆನಂತರ ಮುನ್ನಾರ್, ಅಣ್ಣಾಮಲೈಗಳ ಟಾಟಾ ಟೀ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ಪರಿಣತಿಗೆ ಸೂಕ್ತ ವಾತಾವರಣವೇನೋ ಅಲ್ಲಿತ್ತು. ಆದರೆ ಪ್ರತಿ ವ್ಯಕ್ತಿಗೂ ಕೊಡುವ ಶ್ರೇಣಿ ಮತ್ತು ಶ್ರೇಣೀಕರಣದಂತೆ ಇರಲೇಬೇಕಾದ ಕಾರ್ಪೋರೇಟ್ ಸಂಸ್ಕೃತಿ ಹಿಂಸೆಯೆನಿಸಿತು.

ಐದಾರು ವರ್ಷ ಅಲ್ಲಿ ಕೆಲಸ ಮಾಡಿ ಬಳಿಕ ಪುಣೆ ಹತ್ತಿರದ ಲೋನಾವಳಕ್ಕೆ ಕಾವೇರಿ ಮತ್ತು ನಂಬೀಶನ್ ಬಂದರು. ಪ್ರಕೃತಿಯ ಮಡಿಲಲ್ಲಿ ಮನೆ ಕಟ್ಟಿಕೊಂಡರು. ನೋಡನೋಡುತ್ತಿದ್ದಂತೆ ಪ್ರಕೃತಿ ಕರಗಿ ರೆಸಾರ್ಟುಗಳು ಅಣಬೆಯಂತೆ ತಲೆಯೆತ್ತಿದವು. ಕೂಲಿಗಳಾಗಿ ಎಲ್ಲೆಂಲ್ಲಿAದಲೋ ಜನ ಬಂದರು. ಹಾಗೆ ಬಂದ ವಲಸೆ ಕಾರ್ಮಿಕರ ಸಲುವಾಗಿ 2006ರವರೆಗೂ ಕ್ಲಿನಿಕ್ ನಡೆಸಿದರು. ಅವರ ಮಕ್ಕಳಿಗೆ ಕಲಿಕಾ ಕೇಂದ್ರ ತೆರೆದರು.

ವರ್ಷಗಳು ಸರಿಯುತ್ತಿದ್ದವು. ಪ್ರಾಯವೂ. ಪ್ರಕೃತಿಯ ಏರಿಳಿತಗಳಂತೆ ಸಂಬ0ಧ, ಕುಟುಂಬ, ವೃತ್ತಿಯಲ್ಲೂ ಏರಿಳಿತಗಳು ಬಂದುಹೋದವು. ಹೇಗಾದರೂ ಮಾಡಿ ಕೈತುಂಬ ಗಳಿಸಲು ಪಂಚತಾರಾ ಆಸ್ಪತ್ರೆಗಳಲ್ಲಿ, ಆಸ್ಪತ್ರೆಗಳೆಂಬ ಚಿಕಿತ್ಸಾ ಮಾರ್ಕೆಟ್ಟುಗಳಲ್ಲಿ ಕೆಲಸ ಹುಡುಕುವ ಮನಸ್ಸಾಗಲಿಲ್ಲ. ಹೆಚ್ಚೆಚ್ಚು ಶಿಕ್ಷಣ ಪಡೆಯುತ್ತ ಹೋಗುವುದು ಎಂದರೆ ಹೆಚ್ಚೆಚ್ಚು ಹಳ್ಳಿಗಳಿಂದ ದೂರವಾಗಿ, ಜನಸಾಮಾನ್ಯರಿಂದ ದೂರವಾಗಿ, ಸಿರಿವಂತರಿರುವ ದೊಡ್ಡ ನಗರಗಳತ್ತ ಚಲಿಸುವುದು ಎಂದಾಗಿಬಿಟ್ಟಿದೆ. ಆದರೆ ಕಾವೇರಿ ಅದಕ್ಕಿಂತ ಭಿನ್ನವಾಗಿದ್ದರು. ಬದುಕಿನ ಅವಶ್ಯಕತೆಗೆ ತಕ್ಕ ದುಡಿಮೆ, ಅದೂ ಎಲ್ಲಿ ತಮ್ಮ ಅನಿವಾರ್ಯ ಅವಶ್ಯಕತೆಯಿದೆಯೋ ಅಂತಹ ಗ್ರಾಮೀಣ ಪ್ರದೇಶದಲ್ಲಿ ನೆಲೆಯಾಗಬೇಕು ಎಂದು ನಿರ್ಧರಿಸಿದರು. ತವರು ನೆಲ ಕೊಡಗಿಗೆ ಬಂದ ಕಾವೇರಿ ನಂಬೀಶನ್ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟಿನ ಆಸ್ಪತ್ರೆಯಲ್ಲಿ ಒಂದು ದಶಕ ಕಾಲ ಕೆಲಸ ಮಾಡಿದರು.

`ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಎಂಬ ಕವಿವಾಣಿಯಂತೆ ಜಂಗಮ ಬದುಕು ನಡೆಸಿದ ಅವರು ಸಂಗಾತಿ ನಂಬೀಶನ್‌ರೊ0ದಿಗೆ 35 ವರ್ಷಗಳ ಪ್ರಾಕ್ಟೀಸಿಗೆ ವಿದಾಯ ಹೇಳಿ ಪೊನ್ನಂಪೇಟೆಗೆ ಮರಳಿದರು. ಕೈತೋಟ, ಮರ, ಬಾವಿಗಳಿರುವ ಚಿಕ್ಕ ಆವರಣದಲ್ಲಿ ತಮ್ಮ ಕನಸಿನ ಪುಟ್ಟ ಮನೆ ಕಟ್ಟಿದರು. ಇನ್ನು ಬರಹದಲ್ಲಿ ತನ್ನ ತಾ ತೊಡಗಿಸಿಕೊಳ್ಳಬೇಕು ಎಂದುಕೊAಡಿದ್ದರು. ಆದರೆ ಬಿಟ್ಟೆನೆಂದರೂ ಬಿಡದೆ ವೃತ್ತಿ ಸೆಳೆಯಿತು. ಕಿವಿಯಲ್ಲಿ ಕಣ್ಣೆದುರು ಸದಾ ರೋಗ, ರೋಗಿ, ಶಸ್ತçಚಿಕಿತ್ಸೆ, ನರ್ಸುಗಳ ನಡೆದಾಟ, ಓಟಿಯ ಸದ್ದುಗಳೇ ರಿಂಗಣಿಸುತ್ತ ಕೊನೆಗೊಂದು ಕ್ಲಿನಿಕ್ ತೆರೆದರು. ಎರಡು ಕ್ಷೌರದ ಅಂಗಡಿಗಳ ನಡುವಿನ ಪುಟ್ಟ ಕೋಣೆಯನ್ನು ಬಾಡಿಗೆಗೆ ಹಿಡಿದು ಜನರಲ್ ಪ್ರಾಕ್ಟೀಸಿನಲ್ಲಿ ತೊಡಗಿ ಈಗಲೂ ಮುಂದುವರೆಸಿದ್ದಾರೆ.

***

ಪುರುಸೊತ್ತೇ ಸಿಗದ ವೈದ್ಯಕೀಯ ವೃತ್ತಿಯಲ್ಲಿರುವವರು ಸಮಯ ಮತ್ತು ಏಕಾಗ್ರತೆಯನ್ನು ಬೇಡುವ ಸಾಹಿತ್ಯದ ಜೊತೆಗಿನ ನಂಟನ್ನು ಹೊಂದಲು ಹೇಗೆ ಸಾಧ್ಯವಾಗುತ್ತದೆ ಎಂಬುದು ಹಲವರ ಅಚ್ಚರಿ. ಆದರೆ ಸಾಹಿತಿಯಾಗಿಯೂ ಪ್ರಸಿದ್ಧರಾದ ಅನೇಕ ವೈದ್ಯರಿದ್ದಾರೆ. ಉತ್ತಮ ವೈದ್ಯರಾಗಲು ಸೂಕ್ಷö್ಮ ಗ್ರಹಿಕೆ, ಬದುಕಿನ ಬಗೆಗೆ ದೀರ್ಘ ಮುನ್ನೋಟವಿರಬೇಕು. ಹೇಳುವುದಕ್ಕಿಂತ ಹೆಚ್ಚು ಕೇಳಲು ಕಲಿತಿರಬೇಕು. ನಿರ್ದುಷ್ಟವಾಗಿ ಬದುಕನ್ನು ನೋಡಿ, ಹಗುರ ತೀರ್ಮಾನಗಳನ್ನು ತಾಳದೇ, ಯಾವ ಅಭಿಪ್ರಾಯವನ್ನೂ ಹೇರದೇ, ಕೇಳುವ ನೂರು ಗುಟ್ಟುಗಳನ್ನು ಅಡಗಿಸಿಕೊಳ್ಳಬೇಕು. ಆಶಾವಾದಿಯಾಗಿರಬೇಕು, ವಾಸ್ತವವಾದಿಯಾಗಿರಬೇಕು. ಇವೆಲ್ಲವೂ ಉತ್ತಮ ಬರಹಗಾರರಿಗೂ ಇರಬೇಕಾಗುತ್ತದೆ. ಯಾವುದನ್ನು ಪರಿಣಾಮಕಾರೀ ಕ್ರಿಯೆಯಾಗಿಸಲು ವೈದ್ಯರು ಶ್ರಮಿಸುತ್ತಾರೋ ಅದನ್ನೇ ಅಕ್ಷರ ರೂಪಕ್ಕಿಳಿಸಲು ಬರಹಗಾರರು ಪ್ರಯತ್ನಿಸುತ್ತಾರೆ. ಈ ಸಾದೃಶ್ಯವೇ ವೈದ್ಯರು ಬರಹಗಾರರಾಗಲಿಕ್ಕೂ, ಅನೇಕ ಬರಹಗಳು ವೈದ್ಯರ ಚಿಕಿತ್ಸೆಯಂತಹ ಪರಿಣಾಮ ಬೀರುವುದಕ್ಕೂ ಕಾರಣವಾಗಿದೆ.

ಎಂದಿನಿAದಲೂ ವೈದ್ಯಕೀಯ ಮತ್ತು ಬರಹ ಜೊತೆಗೂಡಿವೆ. ಗ್ರೀಕ್ ಪುರಾಣಗಳ ಅಪೊಲೊ ಮತ್ತು ಅಥೆನೆ ವೈದ್ಯಕೀಯ ಮತ್ತು ಕಾವ್ಯದ ದೇವರುಗಳು. ಕೆಲ್ಟಿಕ್ ಜನಾಂಗದ ಬ್ರಿಗಿಟ್ ದೇವತೆಯು ಕಾವ್ಯ, ವೈದ್ಯಕೀಯ ಮತ್ತು ಶ್ರಮಿಕರ ದೇವತೆ. ವೈದ್ಯ ಸಂಹಿತೆಗಳನ್ನು ಬರೆದ ಚರಕ, ಸುಶ್ರುತರು ಬರಹಗಾರರೇ. ಗ್ರೀಕ್ ತತ್ವಜ್ಞಾನಿ ಹಿಪ್ಪೋಕ್ರೆಟಿಸ್ ವೈದ್ಯ. ಇತೀಚಿನ ಚರಿತ್ರೆಯನ್ನು ನೋಡಿದರೆ ರಷಿಯನ್ ಲೇಖಕ ಆಂಟನ್ ಚೆಕಾಫ್, ಮಿಖಾಯಿಲ್ ಬಲ್ಗಾಕೊವ್, ಸೋಮರ್‌ಸೆಟ್‌ಮಾಮ್, `ಕೋಮಾ’ ಖ್ಯಾತಿಯ ರಾಬಿನ್‌ಕುಕ್, `ಜುರಾಸಿಕ್ ಪಾರ್ಕ್’ ಖ್ಯಾತಿಯ ಮೈಕೆಲ್ ಕ್ರಿಕ್‌ಟನ್, ಷೆರ್ಲಾಕ್ ಹೋಮ್ಸ್ ಜನಕ ಸರ್ ಆರ್ಥರ್ ಕಾನನ್ ಡಾಯ್ಲ್, ಇಂಗ್ಲಿಷ್ ಕವಿ ಜಾನ್ ಕೀಟ್ಸ್, ಮಲೇರಿಯಾ ಪತ್ತೆ ಮಾಡಿದ ರೊನಾಲ್ಡ್ ರಾಸ್, ಅಮೆರಿಕದ ಪ್ರಬಂಧಕಾರ, ಕವಿ ವಿಲಿಯಂ ಕಾರ್ಲೋಸ್ ವಿಲಿಯಂ, ಆಲಿವರ್ ಗೋಲ್ಡ್ಸ್ಮಿತ್, ಡೇವಿಡ್ ಲಿವಿಂಗ್ ಸ್ಟೋನ್, ಡೇನಿಯಲ್ ಮ್ಯಾಸನ್, ಕ್ರಿಸ್ ಆಡ್ರಿಯನ್, ತನ್ನ ಬದುಕು-ಬರಹಗಳಿಂದ ಹಲವರ ಮನದಲ್ಲಿ ಅಚ್ಚಳಿಯದೆ ನಿಂತ ಕ್ರಾಂತಿಕಾರಿ ಅರ್ನೆಸ್ಟೋ ಚೆಗೆವಾರ, ಆಫ್ಘನಿಸ್ತಾನ ಮೂಲದ ಅಮೆರಿಕನ್ ವೈದ್ಯ ಖಾಲಿದ್ ಹೊಸೇನಿ, ಬಾಂಗ್ಲಾದ ತಸ್ಲೀಮಾ ನಸ್ರೀನ್, ಭಾರತೀಯ ದೀಪಕ್ ಚೋಪ್ರಾ ಮುಂತಾದ ಹಲವು ಪ್ರಸಿದ್ಧ ಸಾಹಿತಿಗಳು ವೃತ್ತಿಯಿಂದ ವೈದ್ಯರು. ಕನ್ನಡದ ಮಟ್ಟಿಗೆ ಹಳೆಯ ತಲೆಮಾರಿನ ರಾಶಿ, ಅನುಪಮಾ ನಿರಂಜನ, ಬೆಸಗರಹಳ್ಳಿ ರಾಮಣ್ಣ, ಎಚ್. ಡಿ. ಚಂದ್ರಪ್ಪ ಗೌಡ, ಎಚ್. ಗಿರಿಜಮ್ಮ ಅವರಲ್ಲದೆ ಈಗ ಬರೆಯುತ್ತಿರುವ ಹಲವರಿದ್ದಾರೆ. ಇಷ್ಟು ದೊಡ್ಡ ಪಟ್ಟಿ ನೋಡಿದರೆ ವೈದ್ಯರು ಲೇಖಕರಾಗಿ ಹೊಮ್ಮಿದ್ದು ಕೇವಲ ಆಕಸ್ಮಿಕ ಇರಲಿಕ್ಕಿಲ್ಲ ಅನಿಸುತ್ತದೆ. ಈ ಪಟ್ಟಿಯಲ್ಲಿ ಸೇರುವ ಬಹುಮುಖ್ಯ ಹೆಸರು ಕನ್ನಡ ಮೂಲದ ಇಂಗ್ಲಿಷ್ ಕಾದಂಬರಿಕಾರ್ತಿ ಡಾ. ಕಾವೇರಿ ನಂಬೀಶನ್ ಅವರದು.

ಜನ ಇಡುವ ವಿಶ್ವಾಸವನ್ನೇ ಅವಲಂಬಿಸಿ ನಡೆಯುವ ವೈದ್ಯವೃತ್ತಿಯಲ್ಲಿ ಅಲೆಮಾರಿಯಾಗಿ ಬೇರೆಬೇರೆ ಕಡೆಗಳಲ್ಲಿ ಕೆಲಸ ಮಾಡುವುದು ತಲ್ಲಣ ಮೂಡಿಸುವ ವಿಷಯ. ಆದರೆ ಅಸ್ಥಿರತೆ, ಆತಂಕವನ್ನು ಅನುಭವವಾಗಿ ಪರಿವರ್ತಿಸಿಕೊಂಡ ಕಾವೇರಿ ಸೂಕ್ಷö್ಮ ಬರಹಗಾರ್ತಿಯಾಗಿ ರೂಪುಗೊಂಡರು. ಒಂದೇಸಮ ಬರೆದರು. ಸೂಕ್ಷö್ಮಮನದ ಕವಿ ವಿಜಯ್ ನಂಬೀಶನ್‌ರ ಸಾಂಗತ್ಯ ಅವರೊಳಗಿನ ಲೇಖಕಿ ಅರಳಿಕೊಳ್ಳುವಂತೆ ಮಾಡಿತು. ಅವರ ಸುಲಲಿತ ಭಾಷೆ, ಓದಿಸಿಕೊಳ್ಳುವ ಶೈಲಿ, ಸೂಕ್ಷಾö್ಮತಿಸೂಕ್ಷö್ಮ ವಿವರಗಳನ್ನು ಕಟ್ಟಿಕೊಡುವ ಕಲೆಗಾರಿಕೆ, ನವಿರಾದ ಹಾಸ್ಯ, ತುಂಟತನ, ನೆನಪುಗಳ ನಿರೂಪಣೆ – ಮೊದಲಾದ ವಿಶೇಷ ಗುಣಗಳು ಅವರನ್ನು ಭಾರತದ ಪ್ರಮುಖ ಇಂಗ್ಲಿಷ್ ಲೇಖಕಿಯಾಗುವಂತೆ ಮಾಡಿದವು. ಹಲವಾರು ಮನ್ನಣೆ, ಪ್ರಶಸ್ತಿಗಳು ಸಂದವು.

ವೈವಿಧ್ಯಮಯ ವಸ್ತುಗಳ, ವಿಶಿಷ್ಟ ಒಳನೋಟಗಳ ಪಾತ್ರಗಳನ್ನು ತಮ್ಮ ಕತೆ, ಕಾದಂಬರಿಗಳಲ್ಲಿ ಕಾವೇರಿ ಸೃಷ್ಟಿಸಿದ್ದಾರೆ. ಕೊಡಗಿನ ಜನಜೀವನದ ಒಳಹೊರಗುಗಳನ್ನು ದಿ ಸೆಂಟ್ ಆಫ್ ಪೆಪ್ಪರ್ (1996) ಕಾದಂಬರಿಯಲ್ಲಿ ಕಲಾತ್ಮಕವಾಗಿ ಅನಾವರಣಗೊಳಿಸಿದರೆ; ಮ್ಯಾಂಗೋ ಕರ‍್ಡ್ ಫಿಶ್ (1998) ತನ್ನಿಷ್ಟವಿಲ್ಲದವನನ್ನು ಮದುವೆಯಾಗಬೇಕಾದ ಒತ್ತಡಕ್ಕೆ ಸಿಲುಕಿದವಳ ಕಥನವಾಗಿದೆ. ಆನ್ ವಿಂಗ್ಸ್ ಆಫ್ ಬಟರ್‌ಫ್ಲೆöÊಸ್ (2002) ಮಹಿಳಾ ಚಳುವಳಿಯ ಹೋರಾಟಗಾರ್ತಿಯರ ತಂಡವೊAದು ರಾಜಕಾರಣ ಪ್ರವೇಶಿಸಲು ಹಾಕಿದ ಯೋಜನೆಯ ಕಥೆ. ದ ಹಿಲ್ಸ್ ಆಫ್ ಅಂಗೇರಿ (2005) ತರುಣ ವೈದ್ಯೆಯೊಬ್ಬಳ ವೈದ್ಯಕೀಯ ಅನುಭವಗಳ ಕಥನ. ದ ಸ್ಟೋರಿ ದಟ್ ಮಸ್ಟ್ ನಾಟ್ ಬಿ ಟೋಲ್ಡ್ (2010) ಕಾದಂಬರಿಯು ಮುಂಬೈಯ ಸಿರಿವಂತ ವಿಧುರ ಇಳಿವಯಸ್ಸಿನಲ್ಲಿ ತಮ್ಮ ಸನಿಹದಲ್ಲೇ ಇರುವ ಸ್ಲಮ್ಮಿನವರಿಗಾಗಿ ಕೆಲಸ ಮಾಡಿದ ಕಾದಂಬರಿ. ಎ ಟೌನ್ ಲೈಕ್ ಅರ‍್ಸ್÷(2014) ಸಣ್ಣ ಊರಿನಲ್ಲಿ ಬದುಕಿರುವ ವೇಶ್ಯೆಯೊಬ್ಬಳು ಅಲ್ಲಿನ ಜನ, ಸಮಾಜವನ್ನು ಕಂಡ ಬಗೆಯನ್ನು ಹೇಳುವ ಕಾದಂಬರಿ. ಈ ಕಾದಂಬರಿಗಳಲ್ಲದೆ ಇಂಡಿಯನ್ ಲಿಟರೇಚರ್ ಎಂಬ ಕೇಂದ್ರ ಸಾಹಿತ್ಯ ಅಕಾಡೆಮಿಯ ಪತ್ರಿಕೆಗೆ ನಿರಂತರವಾಗಿ ಬರೆದರು. 2020ರಲ್ಲಿ ಆತ್ಮಚರಿತ್ರಾತ್ಮಕ ವಿವರಗಳ `ಎ ಲಕ್ಷÄರಿ ಕಾಲ್ಡ್ ಹೆಲ್ತ್’ ಬರೆದಿದ್ದಾರೆ. ಹಲವು ಭಾಷೆಗಳು, ಹಲವು ತೆರನ ಜನ, ಹಲವು ಸಾಂಸ್ಕೃತಿಕ ಭಿನ್ನತೆಗಳ ನಡುವೆ ಕೆಲಸ ಮಾಡಿ ಶ್ರೀಮಂತ ಅನುಭವ ಪಡೆದ ಕಾವೇರಿ ಅವನ್ನು ಸೃಜನಶೀಲ ಗದ್ಯವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಸುಲಲಿತವಾಗಿ ಓದಿಸಿಕೊಳ್ಳುವ ಅವರ ಬರಹಗಳು ಅಪಾರ ಓದುಗವರ್ಗವನ್ನು ಹೊಂದಿವೆ. ಅಯೋವಾ ವಿವಿ ಸೇರಿ ಹಲವೆಡೆ ಬರವಣಿಗೆಯ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಸಾಹಿತ್ಯ ಮೇಳಗಳಲ್ಲಿ ಪಾಲ್ಗೊಂಡಿದ್ದಾರೆ. ಹಲವು ಮನ್ನಣೆಗಳನ್ನು ಪಡೆದಿದ್ದಾರೆ.

2017ರಲ್ಲಿ ವಿಜಯ್ ನಂಬೀಶನ್ ಗಂಟಲು ಕ್ಯಾನ್ಸರಿಗೆ ತುತ್ತಾಗಿ ಮರಣ ಹೊಂದಿದ ಬಳಿಕ ಆಘಾತಗೊಂಡ ಡಾ. ಕಾವೇರಿ ಕೆಲಕಾಲ ಅಸಹನೀಯ ಏಕಾಂಗಿತನ ಅನುಭವಿಸಿದರು. ಬಳಿಕ ಅದರಿಂದ ಹೊರಬಂದು ಈಗ ಪೊನ್ನಂಪೇಟೆಯಲ್ಲಿ ವಾಸಿಸಿದ್ದಾರೆ. ಜನರ ದಿನನಿತ್ಯದ ಆರೋಗ್ಯ ಅಗತ್ಯಗಳ ಸಲುವಾಗಿ ಜನರಲ್ ಪ್ರಾಕ್ಟೀಸ್ ಮಾಡುತ್ತ ಕುಟುಂಬ ವೈದ್ಯೆಯಾಗಿದ್ದಾರೆ. ಕೋವಿಡ್ ಮುನ್ನವೂ, ನಂತರವೂ ಅವರು ನೀಡಿದ, ನೀಡುತ್ತಿರುವ ಚಿಕಿತ್ಸೆ, ಆರೋಗ್ಯ ಜಾಗೃತಿಗಳು ಅಲ್ಲಿ ಮನೆ ಮಾತಾಗಿವೆ.

ವೈದ್ಯರು ಹಳ್ಳಿಗೆ ಹೋಗಬೇಕು ನಿಜ, ಆದರೆ ಹಳ್ಳಿಯಲ್ಲಿ ವೈದ್ಯವೃತ್ತಿ ಸುಲಭವಿಲ್ಲ. ಅಲ್ಲಿ ಯಾವ ಸಿದ್ಧ ಮಾರ್ಗವೂ ತೆರೆದುಕೊಂಡಿರುವುದಿಲ್ಲ. ನಮ್ಮ ಬೆಳಕು ನಾವೇ ಆಗಿ ಜನರೊಡನೆ, ಅವರ ಅಮಾಯಕತೆ ಅಸಹಾಯಕತೆ ಅಜ್ಞಾನದ ಜೊತೆ ನಮ್ಮ ಅಸಹಾಯಕತೆ, ಅಜ್ಞಾನ-ವಿಜ್ಞಾನಗಳನ್ನು ಹೊಂದಿಸಿಕೊAಡು ಬದುಕಬೇಕು. ಇದು ಸವಾಲೇ ಆದರೂ ಇಡಲೇಬೇಕಾದ ಹೆಜ್ಜೆಯಾಗಿದೆ. ವೃತ್ತಿಯಲ್ಲಿ, ಬದುಕಿನಲ್ಲಿ ತನ್ನ ಆಯ್ಕೆಯನ್ನು ತಾನೇ ಮಾಡಿಕೊಳ್ಳುತ್ತ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸಲು ಪಣತೊಟ್ಟ ವಿಶಿಷ್ಟ ವ್ಯಕ್ತಿತ್ವದ ವೈದ್ಯೆ ಕಾವೇರಿ ಈ ಕಾರಣಕ್ಕೆ ಹೊಸ ಪೀಳಿಗೆಯ ವೈದ್ಯರಿಗೆ ಮಾದರಿಯಾಗಿದ್ದಾರೆ.


ಡಾ. ಎಚ್. ಎಸ್. ಅನುಪಮಾ
ವೈದ್ಯೆ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!