spot_img
Friday, January 30, 2026
spot_img

ಕುಟುಂಬ ಯೋಜನೆ | ಡಾ. ಎಚ್. ಎಸ್. ಅನುಪಮಾ ಅವರ ಲೇಖನ

ಕೊಂಕುಳಲ್ಲಿ ಒಂದೂವರೆ ವರ್ಷದ ಮಗುವನ್ನು ಚಚ್ಚಿಕೊಂಡು ಒಳಬಂದವಳೇ ಉಸ್ಸಪ್ಪ ಎಂದು ಹಣೆಯ ಬೆವರನ್ನು ಸೆರಗಿನಿಂದ ಒರೆಸಿಕೊಳ್ಳುತ್ತ ಧಪ್ಪನೆ ಖುರ್ಚಿಯ ಮೇಲೆ ಕುಳಿತಳು ಮಾಲಕ್ಷಿö್ಮ. ಅವಳ ಹಿಂದೇ ಸೇರು, ಪಾವು, ಚಟಾಕುಗಳಂತೆ ಸರಸರ ಅವಳ ಹಿರಿಯ ಮೂರು ಮಕ್ಕಳು ಒಳಬಂದವು. ಆರು ವರ್ಷಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಅವಳನ್ನು ನಾನು `ನೀನು ಮಾಲಕ್ಷಿö್ಮ ಅಲ್ಲ, ಮಾತಾಯಿ’ ಎಂದು ತಮಾಷೆ ಮಾಡುವುದುಂಟು. ಮೂರನೆಯ ಮಗು ಬಸ್ಸಿಳಿದು ಬರುತ್ತಾ ಬಿದ್ದು ಕೈಕಾಲೆಲ್ಲ ತರಚಿಕೊಂಡು ಅಳುತ್ತಿತ್ತು. ಅದರ ಮೂಗು ಕಣ್ಣನ್ನೆಲ್ಲ ಒರೆಸಿ ಒಂದು ಸಲ ಗದರಿ ಕುಳಿತಳು. `ಜೊತೆಯಲ್ಲಿ ಯಾರೂ ಬರಲಿಲ್ವಾ?’ ಎಂದು ನಾನು ಕೇಳಿದ್ದೇ ಅವಳ ಕಣ್ಣುಗಳು ಕೊಳಗಳಾದವು. `ಅವರು ಬ್ಯಾಡಂದ್ರೂ ತಾಯಿಮನಿಗೆ ಹೋಗಿದ್ದೆ ಅಂತ ಸಿಟ್ಟುಮಾಡ್ಕಂಡು `ಈಗ ನೀನೊಬ್ಳೇ ಬಾ. ಮತ್ತೆ ಮಕ್ಕಳಿಗೇನಾರೂ ಸೀಕು ಆಗಿದ್ರೆ ಮದ್ದು ಮಾಡ್ಕಂಡೇ ಬಾ, ನನಗ್ಗೊತ್ತಿಲ್ಲ’ ಅಂದ್ರು ಇವರು. ಈಗ ಈ ಮೂರು ಮಕ್ಕಳನ್ನೂ ಮೂರು ಮೈಲು ದೂರ ನಡೆಸಿ ಊರುಮುಟ್ಟುವುದು ಹ್ಯಾಗೋ ಏನೋ’ ಎನ್ನುತ್ತ ಮತ್ತೆ ಬಿಕ್ಕಿದಳು. ಮತ್ತೆ ಏನೂ ಮಾತನಾಡದೇ ಬ್ಲೌಸಿನೊಳಗೆ ಕೈ ಹಾಕಿ ಪುಟ್ಟ ಗಂಟು ಹೊರತೆಗೆದವಳು ಮೆಲ್ಲಗೆ ನನ್ನೆದುರು ತೂರಿದಳು.

`ಎಂತ ಮಾರಾಯ್ತಿ? ಮದ್ದು ಕೊಡಲಿಕ್ಕೆ ಮೊದಲೇ ದುಡ್ಡು ಕೊಡ್ತಿದೀಯಲೆ’ ಎಂಬ ನನ್ನ ಮಾತಿಗೆ ಒಮ್ಮೆ ಹೊರಗೆ ಇಣುಕಿ ನೋಡಿ ಕಣ್ಣೊರೆಸಿಕೊಂಡವಳು ಶುರು ಮಾಡಿದಳು. `ಅಮಾ, ನಾನೀಗ ಮುಟ್ಟಾಗಿ ಎರಡು ತಿಂಗಳಾತು. ಈ ನಾಕನೇ ಹುಡುಗಿಯನ್ನು ಹೆತ್ತಾಗಲಾದರೂ ಆಪರೇಶನ್ ಮಾಡಿಸ್ಕಂತೆ ಎಂದು ಎಷ್ಟು ಹೇಳಿದ್ನೋ ಏನೋ. ಅವ್ರು ಕೇಳಲಿಲ್ಲ. ಈಗ ಮುಟ್ಟು ನಿಂತಿದೆ ಅಂತ ತಿಳಿದಿದ್ದೇ ಎಲ್ಲೆಲ್ಲೋ ಹೋಗಿ ಪ್ರಸಾದ ಕೇಳಿ, ಜಾತಕ ತೋರಿಸ್ಕಂಡು ಬಂದಿದಾರೆ. ಈ ಸಲ ಹುಟ್ಟದು ಗಂಡೇ ಅಂತಾರೆ. ಆದ್ರೆ ನಾನು ನಂ ತಾಯಿ ಮನೆ ಚೌಡಿ ಹತ್ರ ಕೇಳ್ದಾಗ ಅದು ಈ ಸಲ ಹೆಣ್ಣೇ ಆಗ್ತದೆ ಅಂತ ಹೇಳ್ಬಿಟ್ಟದೆ. ನನಕೈಲಿ ಮತ್ತೆಮತ್ತೆ ಹೆಣ್ಣು ಹೆತ್ತು, ಆ ಅಬ್ಬೆಮಗನ ಹತ್ರ ಪಿರಿಪಿರಿ ಬೈಸಿಕೊಳ್ಳೋಕೆ ಸಾದ್ದಿಲ್ಲೆ ಅಮಾ. ಬರೀ ಹೆತ್ತು ಹಾಕಿರೆ ಆಯ್ತಾ? ಆ ಮಕ್ಳ ದೇಖರೇಖೆ ನೋಡಬ್ಯಾಡ್ವಾ? ಈ ಗಣಸ್ರಿಗೆ ಅದೆಂತ ತಿಳೀತಿಲ್ಲೆ. ನಾನು ದುಡ್ಕಬಂದು ಹಾಕ್ತೆ, ನಿಂಗೆ ಮಕ್ಳ ಸಾಕುಕೇನ್ ಕಷ್ಟ ಅಂತ ಕೇಳ್ತುç ಅಮಾ.’

`ಓಹ್. ಹಾಗಾದರೆ ಮತ್ತೊಂದು ಬಾಣಂತನಕ್ಕೆ ತಯಾರಿನಾ?’

`ಎಂತ ಬಾಣಂತನ ಅಮಾ. ಆ ಸಲ ನೋಡಿದ್ರಲೆ ನೀವು, ಹದಿನೈದು ದಿನ ಕಳೆಯದರಾಗೆ ಎದ್ದು ಎಲ್ಲ ಕೆಲ್ಸ ಶುರು ಮಾಡ್ಬೇಕು. ಅದಿರ್ಲಿ, ಇನ್ನು ಎರಡು ಮೂರು ದಿನದಾಗೆ ಇವ್ರು ನನ್ನ ರ‍್ಕಬತ್ತಾರೆ. ಆಗ ನೀವು ಈ ಸಲದ್ದೂ ಹೆಣ್ಣೆಯಾ ಅಂತೇಳಿ ಸ್ಕಾö್ಯನ್ ಮಾಡಿ ಹೇಳಿಬಿಡಿ, ಆಗ ತೆಗೆಸುಕೆ ಒಪ್ತಾರೆ.’

`ಆದ್ರೆ ಹಂಗೆ ಹೇಳಿದ್ರೆ ನನ್ನ ಹಿಡ್ದು ಜೈಲಿಗೆ ಹಾಕ್ತಾರೆ ಅಷ್ಟೇ. ಅಲ್ಲದೇ ಇಷ್ಟು ಬೇಗ ಅದು ತಿಳಿಯುದೇ ಇಲ್ಲ. ಅದಕ್ಕೆ ಏಳು ತಿಂಗಳ ಮೇಲೆ ಆಗ್ಬೇಕು’, ಆತ್ಮ ರಕ್ಷಣೆಗೆ ಸುಳ್ಳೊಂದನ್ನು ಹೇಳಿದೆ.

`ಹಾಗಾದ್ರೆ ಮತ್ತೇನಾರೂ ಸೀಕು ಸಂಕ್ಟದ ವಿಷ್ಯ ಹೇಳಿ. ಒಟ್ಟೂ ನನಗೀ ಬಸುರು ಬ್ಯಾಡ ಅಷ್ಟೇ. ಈ ದುಡ್ನ ಇಟ್ಕಳಿ. ನಮಣ್ಣ ಕೊಟ್ಟಿದ್ದು, ನಂಗೆ ಬೇಕಾದಾಗ ಇಸ್ಕಂತೆ. ಇವ್ರತ್ರ ತಕಹೋಗಿ ಕೊಟ್ರೆ ಎರಡೇ ದಿನಕ್ಕೆ ಅದು ಕಾಣೆಯಾಗೋಗುತ್ತೆ. ಮತ್ತೆ ನಾನು ಇಲ್ಲಿ ಬಂದ ವಿಷ್ಯ ಅವ್ರಿಗೂ ನಮತ್ತೆ ಮಾವಂಗು ಹೇಳ್ಬೇಡಿ. ಇದು ನಿಮ್ಮಲ್ಲೇ ಇರ್ಲಿ.’

***

ಕುಟುಂಬದ ಗಾತ್ರ ಎಷ್ಟಿರಬೇಕೆಂದು ನಿರ್ಧರಿಸುವಲ್ಲಿ ಮೊದಲಿನಿಂದ ಮಹಿಳೆಗೆ ಎರಡನೇ ಅಥವಾ ಮೂರನೇ ಸ್ಥಾನ. ಗಂಡ, ಅವನ ಹೆತ್ತವರು ಅವಳಿಗೆ ಎಷ್ಟು ಮಕ್ಕಳು ಬೇಕೆಂದು ನಿರ್ಧರಿಸುವವರು. ಹೆರುವವಳು ಅವಳೇ ಆಗಿದ್ದರೂ ಹೆರುವಾಗಿನ ಎಲ್ಲ ದೈಹಿಕ, ಮಾನಸಿಕ ಕಾಂಪ್ಲಿಕೇಷನ್ ಮತ್ತು ಒತ್ತಡಗಳಿಗೆ ಅವಳೇ ಈಡಾಗುವುದಾದರೂ ಎಷ್ಟು ಹೆರಬೇಕು, ಎಷ್ಟು ಸಾಕು ಎಂದು ನಿರ್ಧರಿಸುವಲ್ಲಿ ಅವಳ ಪಾತ್ರ ಏನೇನೂ ಇರಲಿಲ್ಲ. ಇದು ಈಗಲೂ ಮುಂದುವರೆದುಕೊ0ಡು ಬರುತ್ತಿರುವ ಚಾರಿತ್ರಿಕ ಅನ್ಯಾಯ.

ಪಿತೃಪ್ರಧಾನ, ಸನಾತನ, ಅನಕ್ಷರಸ್ಥ ಭಾರತೀಯ ಗ್ರಾಮೀಣ ಸಮಾಜದಲ್ಲಷ್ಟೇ ಈ ಪರಿಸ್ಥಿತಿ ಎಂದು ತಿಳಿದರೆ ಅದು ತಪ್ಪು. ಧರ್ಮಶಾಸ್ತçವನ್ನು ಮಿದುಳಿನಿಂದಷ್ಟೇ ಓದಿದರೆ, ಡಿಕ್ಷನರಿ ಇಟ್ಟು ಅರ್ಥೈಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಕ್ರೆöÊಸ್ತ, ಇಸ್ಲಾಂ ಧರ್ಮಗಳಲ್ಲೂ ಉದಾಹರಣೆಗಳು ಸಿಗುತ್ತವೆ. ಭ್ರೂಣಹತ್ಯೆ ಮಾನವ ಹತ್ಯೆಗೆ ಸಮ ಎಂದು ಮಾನವಿಕ ನೆಲೆಯಿಂದ ಹೇಳಿರುವುದನ್ನೇ ಅಕ್ಷರಶಃ ಗರ್ಭಪಾತ ನಿಷೇಧ ಎಂದು ಕಟ್ಟಳೆಗೊಳಿಸಿ ಎಷ್ಟೋ ಹೆಣ್ಣುಮಕ್ಕಳ ಸಾವು ಸಂಭವಿಸುತ್ತಿದೆ. ಹೆಣ್ಣಿನ ದೇಹ ಒಂದು ರಣಾಂಗಣ. ಅಲ್ಲಿ ಧರ್ಮ-ರಾಜಕೀಯ-ಪುರುಷ ಪ್ರಾಧಾನ್ಯ-ಸಮಾಜದ ಎಲ್ಲ ಪಟ್ಟುಗಳನ್ನೂ ಪ್ರಯೋಗಿಸಲಾಗುತ್ತದೆ. ಧರ್ಮಗಳು ಸಮಾಜಶಾಸ್ತಿçÃಯವಾಗಿ ಮತ್ತು ಜೀವಶಾಸ್ತಿçÃಯವಾಗಿ ಹೇಗೆ ವರ್ತಿಸುತ್ತವೆ ಎನ್ನುವುದನ್ನು ನೋಡಿದರೆ ಲಿಂಗತಾರತಮ್ಯ ಅರ್ಥವಾಗುತ್ತದೆ. ಹೆಚ್ಚುಕಡಿಮೆ ಎಲ್ಲ ಧರ್ಮಗಳು ಹೆಣ್ಣಿಗೆ ಅವಳ ದೇಹದ ಹಕ್ಕನ್ನು ನೀಡುವುದಿಲ್ಲ. ಎಷ್ಟು ಮಕ್ಕಳು ಯಾವಾಗ ಬೇಕು ಎಂದು ನಿರ್ಧರಿಸುವಲ್ಲಿ ಅವಳ ಸ್ಥಾನ ಕೊನೆಯದು. ಲೈಂಗಿಕತೆ, ತಾಯ್ತನ ಮತ್ತು ಪ್ರಜನನ ಹಕ್ಕುಗಳ ಮೇಲೆ ಪುರುಷ ಮೊಹರು ಬೀಗ ಹಾಕಿ ಕುಳಿತಿರುತ್ತದೆ. ಆದರೆ ಸಮಾಜಶಾಸ್ತಿçಯವಾಗಿ ಧರ್ಮಗಳು ಭಿನ್ನವಾಗಿ ವರ್ತಿಸುತ್ತವೆ. ಜಗತ್ತಿನ ಅತ್ಯಂತ ಮಹಿಳಾ ಸ್ನೇಹಿ ಧರ್ಮ ಇಸ್ಲಾಂ ಮಹಿಳೆಯ ಶಿಕ್ಷಣ, ವಿಚ್ಛೇದನೆ, ಮರುವಿವಾಹ, ವಿಧವಾವಿವಾಹ, ಜೀವನಾಂಶದ0ತಹ ವಿಷಯಗಳ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅರ್ಥೈಸಿ ಪರದೆ ತೊಡಿಸಲಾಯಿತು. ಅಲ್ಲೂ ಪ್ರಜನನ ಹಕ್ಕುಗಳನ್ನು ನೀಡಲಿಲ್ಲ. ಆದರೆ ಬಹುತೇಕ ಎಲ್ಲ ಇಸ್ಲಾಮಿಕ್ ರಾಷ್ಟçಗಳಲ್ಲಿ ತಾಯಿ ಜೀವಕ್ಕೆ ಅಪಾಯ ಒದಗಿಸುವಂತಿದ್ದರೆ ಗರ್ಭಪಾತವನ್ನು ಸಮ್ಮತಿಸಲಾಗುತ್ತದೆ.

ಸಿರಿವಂತ, ಸುಶಿಕ್ಷಿತ, ಕಾನೂನು ಸಾಕ್ಷರತೆಯ ಅಮೆರಿಕ ಸಮಾಜದಲ್ಲೂ `ರಿಪ್ರೊಡಕ್ಟಿವ್ ರೈಟ್ಸ್’ಗಾಗಿ ದೊಡ್ಡ ಹೋರಾಟವೇ ನಡೆದಿದೆ. ಕ್ರೆöÊಸ್ತಧರ್ಮದಲ್ಲಿ ಭ್ರೂಣಹತ್ಯೆ ಪಾಪವೆಂಬ ಕಾರಣವೊಡ್ಡಿ ತೀರಾ ಇತ್ತೀಚಿನವರೆಗೂ ಗರ್ಭಪಾತಕ್ಕೆ ಕಾನೂನುಬದ್ಧ ಅವಕಾಶಗಳಿರಲಿಲ್ಲ. ಆದರೆ ಅದೇ ವೇಳೆಗೆ ಕರಿಯ ಗುಲಾಮಿ ಹೆಂಗಸರು, ಪೋರ್ಟರಿಕನ್ ಮತ್ತು ಚಿಕನಾ ಮಹಿಳೆಯರು ಮಕ್ಕಳನ್ನು ಹೆತ್ತು ದೇಶದ ಸಂಪನ್ಮೂಲ ಕಬಳಿಸುತ್ತಿದ್ದಾರೆಂದೂ, ನಗರ ವಾಸಿಗಳಾದ ಬಿಳಿಯ ಮಹಿಳೆಯರು ಮಕ್ಕಳನ್ನು ಕಡಿಮೆ ಹೆತ್ತು `ಸಂತತಿ ಆತ್ಮಹತ್ಯೆ’ಗೆ ಕಾರಣವಾಗುತ್ತಿದ್ದಾರೆಂದೂ ದೂರಲಾಗಿತ್ತು. ಯೂಜೆನಿಕ್ಸ್ ಥಿಯರಿಯನ್ನು ಆಧಾರವಾಗಿಟ್ಟುಕೊಂಡು ಶ್ರೇಷ್ಠ ತಳಿಯಾದ ಬಿಳಿಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕೆಂದು ಹೇಳಲಾಗುತ್ತಿತ್ತು. ಇಂಥ ಮನಸ್ಥಿತಿಯ ಸಮಾಜದ ನಡುವೆ ಪ್ರಜನನ ಹಕ್ಕುಗಳಿಗಾಗಿ ಅಲ್ಲಿ ದೊಡ್ಡ ಹೋರಾಟವೇ ನಡೆಯಿತು. ಧರ್ಮದ ನೆಪವೊಡ್ಡಿ ಹೆಣ್ಣನ್ನು ಹೆರುವ ಯಂತ್ರವಾಗಿಸುವುದರಲ್ಲಿ ಇಸ್ಲಾಂ ದೇಶಗಳು ಹಿಂದೆ ಬಿದ್ದಿಲ್ಲ.

ಹಾಗೆ ನೋಡಿದರೆ ತೃತೀಯ ಜಗತ್ತಿನ ರಾಷ್ಟçಗಳೇ ಮಹಿಳೆಗೆ ಸಮಾಜ ಕಲ್ಯಾಣ ಕಾರ್ಯಕ್ರಮದ ನೆಪದಲ್ಲಿ ಶಿಕ್ಷಣ, ರಾಜಕೀಯ, ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಮಾನತೆಯನ್ನೂ ಪ್ರಾತಿನಿಧ್ಯವನ್ನೂ ಒದಗಿಸಿವೆ ಎನ್ನಬಹುದು. ಜಗತ್ತಿನ ಬಹಳಷ್ಟು ದೇಶಗಳಲ್ಲಿ ಧರ್ಮವನ್ನು ಆಧಾರವಾಗಿಟ್ಟುಕೊಂಡು ಈಗಲೂ ಗರ್ಭಪಾತ ಕಾನೂನು ವಿರೋಧಿಯಾಗಿದೆ. ಆದರೆ ಕಡಿಮೆ ಮರಣ ಪ್ರಮಾಣ ಮತ್ತು ಹೆಚ್ಚಿದ ಜನನ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಯಿತು. ಬಡತನ, ಅನಕ್ಷರತೆ, ನಿರುದ್ಯೋಗಗಳಂತಹ ಸಾಮಾಜಿಕ ಸಮಸ್ಯೆಗಳನ್ನು ಎದುರಿಟ್ಟುಕೊಂಡು ಭಾರತ ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಸ್ವತಂತ್ರ ಬರುವ ಮೊದಲೇ ಅಳವಡಿಸಿಕೊಂಡಿತು. ಮೈಸೂರು 1921ರ ಸುಮಾರಿಗೆ ಕುಟುಂಬ ಯೋಜನೆ ಅಳವಡಿಸಿಕೊಂಡಿದ್ದು ವಿಶ್ವದಲ್ಲೇ ಕುಟುಂಬ ಯೋಜನೆಯನ್ನು ನೀತಿಯಾಗಿ ಅಳವಡಿಸಿ ಅನುಷ್ಠಾನಗೊಳಿಸಿದ ಪ್ರಪ್ರಥಮ ರಾಜ್ಯವಾಗಿದೆ. ಅದರ ಭಾಗವಾಗಿ ವೈದ್ಯಕೀಯ ಗರ್ಭಪಾತಕ್ಕೆ ದಶಕಗಳ ಹಿಂದೆಯೇ ಅನುಮತಿ ನೀಡಲಾಗಿದೆ.

ಆದರೆ ಇಲ್ಲೂ ಮತ್ತೊಂದು ಲಿಂಗರಾಜಕಾರಣವಿದೆ. ಹೆರಲು, ಹೊರಲು ಹೇಗೆ ಹೆಣ್ಣು ತನ್ನ ದೇಹವನ್ನೇ ಸಂಪೂರ್ಣ ಒಡ್ಡಿಕೊಳ್ಳಬೇಕೋ ಹಾಗೆ ಕುಟುಂಬ ಯೋಜನೆಯೂ ಸಂಪೂರ್ಣ ಅವಳದೇ ಜವಾಬ್ದಾರಿಯಾಗಿದೆ. ಹಾಗೆ ನೋಡಿದರೆ ಮಹಿಳೆಯರಿಗೆ ಮಾಡುವ ಕುಟುಂಬ ಯೋಜನೆ ಆಪರೇಶನ್ನಿಗಿಂತ ಗಂಡಸರಿಗೆ ಮಾಡುವ ವ್ಯಾಸೆಕ್ಟಮಿ ಅತ್ಯಂತ ಸರಳ, ಸುಲಭ. ಮಹಿಳೆಯರು ಬಳಸುವ ಕುಟುಂಬಯೋಜನಾ ವಿಧಾನಗಳ ಅಡ್ಡ ಪರಿಣಾಮಗಳಿಗಿಂತ ಗಂಡಸರ ಕಾಂಡೋಮ್ ಬಳಸುವುದು ಸಂಪೂರ್ಣ ನಿರಪಾಯಕಾರಿ ಮತ್ತು ಸುಲಭ. ಆದರೆ ಬಹುತೇಕ ಪುರುಷ ವೃಂದವು ದೈಹಿಕವಾಗಿ ಸುಖ ಅನುಭವಿಸುವುದಷ್ಟೇ ತಮ್ಮ ಹಕ್ಕು; ಕುಟುಂಬ ಯೋಜನೆ, ಮಣ್ಣುಮಸಿಗಳೆಲ್ಲ ಹೆಂಗಸರ ಹಣೆಬರಹ ಎಂದು ಭಾವಿಸಿದ್ದಾರೆ. ಇವತ್ತಿಗೂ ಟ್ಯುಬೆಕ್ಟಮಿ-ಲ್ಯಾಪರೋಸ್ಕೋಪಿ ಕ್ಯಾಂಪುಗಳು ಮಹಿಳೆಯರಿಗಾಗಿ ನಡೆಯುತ್ತಿವೆ. ವ್ಯಾಸೆಕ್ಟಮಿ ಕ್ಯಾಂಪುಗಳು ಬಹುತೇಕ ನಿಂತು ಹೋಗಿವೆ. ಪುರುಷರ ಸಂತಾನಹರಣ ಶಸ್ತçಚಿಕಿತ್ಸೆಯ ಬಗೆಗಿರುವ ತಪ್ಪು ಕಲ್ಪನೆ ಮತ್ತು ಹೆಣ್ಣುದೇಹ-ಆರೋಗ್ಯದ ಬಗೆಗಿರುವ ಅನಾದರ, ನಿಷ್ಕಾಳಜಿಗಳು ಅದಕ್ಕೆ ಕಾರಣವಾಗಿವೆ.

ಸಣ್ಣ ಕುಟುಂಬ ಸುಖೀ ಕುಟುಂಬ ಎಂದು ಬಿಂಬಿಸಿ ಮಿತಸಂತಾನ ಉತ್ತೇಜಿಸುವುದಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಟುಂಬ ಯೋಜನೆ ಶಸ್ತçಚಿಕಿತ್ಸೆಗೊಳಗಾದವರಿಗೆ ಧನಸಹಾಯ ಮತ್ತಿತರ ಅನುಕೂಲ ಒದಗಿಸಿಕೊಡುವುದರ ಮೂಲಕ ಮಹಿಳೆಗ ಕುಟುಂಬದಲ್ಲಿ ಎಷ್ಟು ಮಕ್ಕಳು ಯಾವಾಗ ಬೇಕೆಂದು ಯೋಜಿಸಿ ನಿರ್ಧರಿಸಲು ಹಕ್ಕು ನೀಡಲಾಗಿದೆ. ಕುಟುಂಬ ಯೋಜನೆಯನ್ನು ಒತ್ತಾಯಪೂರ್ವಕ ಮಾಡುವಂತಿಲ್ಲ. ಅದು ಮಾನವ ಹಕ್ಕು ಉಲ್ಲಂಘನೆ. 1975ರ ತನಕ ಅಮೆರಿಕದಲ್ಲಿ ಕರಿಯ ಮೆಕ್ಸಿಕನ್ ಹೆಣ್ಣುಮಕ್ಕಳನ್ನು, ಮದುವೆಯಾಗದ ಹದಿಹರೆಯದವರನ್ನೂ ಕರೆತಂದು ಅವರಿಗೆ ಗೊತ್ತೇ ಆಗದ ಹಾಗೆ ಕುಟುಂಬಯೋಜನಾ ಶಸ್ತç ಚಿಕಿತ್ಸೆ ಮಾಡಲಾಗಿತ್ತು. ಈ ಅನಾಗರಿಕ ತಾರತಮ್ಯ ಧೋರಣೆ ಎಷ್ಟೋ ವರ್ಷ ಮುಂದುವರೆದು ವರ್ಷಕ್ಕೆ 2 ಲಕ್ಷ ಇಂತಹ ಶಸ್ತçಚಿಕಿತ್ಸೆ ನಡೆಯುತ್ತಿದ್ದವು. ಮಾನವ ಹಕ್ಕು ಪ್ರತಿಪಾದಿಸುವ ಗುಂಪುಗಳು ಈ ಬಗ್ಗೆ ವಿಸ್ತೃತ ಅಧ್ಯಯನ, ವರದಿ ತಯಾರಿಸಿ ಅಂತೂ 1975ರಲ್ಲಿ ಗರ್ಭಪಾತ ಹಕ್ಕು ನೀಡಲಾಯಿತು.

ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಕಾಲದಲ್ಲೂ ಹೀಗೇ ಒತ್ತಾಯವಾಗಿ ಹೆಣ್ಣುಮಕ್ಕಳನ್ನು ಕರೆತಂದು ಶಸ್ತçಚಿಕಿತ್ಸೆ ನಡೆಸಲಾಗಿತ್ತು. ಅದರ ಕೆಟ್ಟ ಪರಿಣಾಮವೆಂದರೆ ಸರ್ಕಾರಿ ಕಾರ್ಯಕ್ರಮಗಳು ಜನಪರವಾದುವಲ್ಲ ಎಂಬ ಅವಿಶ್ವಾಸ ಜನರಲ್ಲಿ ಬೆಳೆದದ್ದು. ಜನಸಂಖ್ಯೆ ಆಧರಿಸಿ ಆರೋಗ್ಯ ಕಾರ್ಯಕರ್ತರಿಗೆ ವರ್ಷಕ್ಕೆ ಇಷ್ಟೇ ಕುಟುಂಬ ಯೋಜನೆ ಆಪರೇಷನ್ ಮಾಡಿಸಬೇಕು ಹಾಗೂ ಕುಟುಂಬ ಯೋಜನೆಯ ಇತರ ವಿಧಾನಗಳನ್ನು ಅಳವಡಿಸಬೇಕೆಂಬ ಗುರಿ ನೀಡಲಾಗಿತ್ತು. ಈಗ ಗುರಿ ಆಧಾರಿತ ಯೋಜನೆಗಳು ಹೋಗಿ ಸೇವೆ ಆಧಾರಿತ ಯೋಜನೆಗಳು ಬಂದಿವೆ.

ಮೂಗ ಕೋಲೆ ಬಸವನಂತೆ ಬಲಿಪಶುವಾಗಿರುತ್ತಿದ್ದ ಹೆಣ್ಣು ಈಗೊಂದು ಶತಮಾನದಿಂದೀಚೆಗೆ ಪ್ರಜನನ ಹಕ್ಕುಗಳ ಬಗ್ಗೆ ಎಚ್ಚೆತ್ತಿದ್ದಾಳೆ. ಆದರೆ ಆ ಅರಿವು-ಹಕ್ಕು ಸಾಮಾನ್ಯ ಮಹಿಳೆಯರ ಪಾಲಿಗಿನ್ನೂ ದೂರವಾಗಿಯೇ ಇದೆ. ತನಗೆ ಮಗು ಬೇಕು-ಬೇಡ; ಕಾಂಪ್ಲಿಕೇಟೆಡ್ ಬಸಿರು ಇರಲಿ-ಇರುವುದು ಬೇಡ ಎಂದು ಕೊನೆಗೂ ನಿರ್ಧರಿಸುವವರು ಯಾರು? ಬಸುರೆಂಬ ಪುನರ್ಜನ್ಮ ಪಡೆಯಲು ದೈಹಿಕ-ಮಾನಸಿಕ-ಸಾಮಾಜಿಕವಾಗಿ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿಯೇ ತಾಯಿಯಾಗಬೇಕು. ಆದರೆ ಎಷ್ಟು, ಯಾವಾಗ ಎಂದು ನಿರ್ಧರಿಸುವಲ್ಲಿ ಹೆಣ್ಣಿಗೆ ಸಂಪೂರ್ಣ ಅಧಿಕಾರ ದೊರೆಯಬೇಕು.


ಡಾ. ಎಚ್. ಎಸ್. ಅನುಪಮಾ
ವೈದ್ಯೆ, ಲೇಖಕಿ, ಸಾಮಾಜಿಕ ಕಾರ್ಯಕರ್ತೆ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!