spot_img
Friday, January 30, 2026
spot_img

ದಿಕ್ಕು ಕಾಣದೆ ಹೋಗುತ್ತಿರುವ ಸ್ಥಿತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಬರಲಿ !

ಪಾಟೀಲ್ ಆರೋಪದಲ್ಲಿ ಮತ್ತೆ ಮರುಗಿದ ಕಾಂಗ್ರೆಸ್ | ನೈತಿಕತೆ ಕಳೆದುಕೊಳ್ಳುತ್ತಿದೆಯೇ ?

ಸದ್ಯ ರಾಜ್ಯ ರಾಜಕಾರಣದಲ್ಲಿ ಶಾಸಕ ಬಿ. ಆರ್ ಪಾಟೀಲ್ ಅವರು ಮಾತನಾಡಿರುವ ಆಡಿಯೋ ದೊಡ್ಡ ಸುದ್ದಿ. ಆಡಳಿತ ಕಾಂಗ್ರೆಸ್ ಸರ್ಕಾರದ ತಪ್ಪುಗಳಿಗಾಗಿ ಕಾಯುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಇವು ಸುಲಭವಾಗಿ ಸಿಕ್ಕ ಗ್ರಾಸದಂತಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭರ್ಜರಿ ಜಯದೊಂದಿಗೆ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿ0ದ ಕಾಂಗ್ರೆಸ್ ಸರ್ಕಾರ ಒಂದಲ್ಲಾ ಒಂದು ವಿವಾದಗಳಿಗೆ ಸಿಲುಕುತ್ತಲೇ ಇದೆ. ಸ್ವಪಕ್ಷೀಯರ ಭಿನ್ನಮತವೇ ಕಾಂಗ್ರೆಸ್ ಸರ್ಕಾರವನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡುತ್ತಿದೆ. ನೂರಾರು ವರ್ಷಗಳ ಚರಿತ್ರೆಯಿರುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರö್ಯ ಹೋರಾಟಕ್ಕೆ ಕೊಡುಗೆ ನೀಡಿದ ಪಕ್ಷ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾ ಈವರೆಗೂ ಅನೇಕ ಏಳು ಬೀಳುಗಳನ್ನು ಕಂಡುಕೊ0ಡು ಬಂದಿದೆ. ಈ ದೇಶದಲ್ಲಿ ಸುದೀರ್ಘವಾಗಿ ರಾಜಕೀಯ ಆಡಳಿತ ನಡೆಸಿದ ಇತಿಹಾಸವಿರುವ ಕಾಂಗ್ರೆಸ್, ಈ ದೇಶಕ್ಕೆ ಅನೇಕ ಮಹತ್ತರ ಕೊಡುಗೆ ನೀಡಿದೆ. ಒಮ್ಮೊಮ್ಮೆ ಜನವಿರೋಧಿಯಾಗಿಯೂ ನಡೆದುಕೊಂಡ ಉದಾಹರಣೆಯಿದೆ. ಒಂದಿಷ್ಟು ವಿಚಾರಗಳನ್ನು ಹೊರತು ಪಡಿಸಿದರೇ, ಕಾಂಗ್ರೆಸ್ ಜನಪರವಾಗಿಯೇ ಆಡಳಿತವನ್ನು ನೀಡಿದೆ. ಹಾಗಾಗಿ ಹಲವು ಹೆಜ್ಜೆ ಮುಂದೆ, ಕೆಲವು ಹೆಜ್ಜೆ ಹಿಂದೆ ಎಂಬ0ತೆ ಕಾಂಗ್ರೆಸ್ ಸ್ಥಿತಿ ಇದೆ.

ಕಾಂಗ್ರೆಸ್ ಒಂದು ನಿರ್ಣಾಯಕ ಹೆಜ್ಜೆಯನ್ನು ಇಡಬೇಕು ಎಂದುಕೊ0ಡಾಗೆಲ್ಲಾ, ಆ ನಿರ್ಣಯ ತೆಗೆದುಕೊಳ್ಳಲಾಗದೆ, ಸದಾ ಆಂತರಿಕ ಕಚ್ಚಾಟದಲ್ಲಿ ಸಿಲುಕುತ್ತದೆ. ಅನಗತ್ಯ ವಿವಾದಗಳಲ್ಲಿ ಸಿಲುಕಿ ವಿರೋಧ ಪಕ್ಷಗಳ ಬಾಯಿಗೆ ತುತ್ತಾಗುತ್ತದೆ. ಕೇಂದ್ರದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲಗಳಿಂದ ಅಧಿಕಾರದಿಂದ ಹೊರಗೆ ಉಳಿದಿರುವುದು ಮತ್ತು ರಾಜ್ಯಗಳಲ್ಲಿ ಇರುವ ಅಧಿಕಾರವನ್ನು ಸಮರ್ಥವಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಅಧಿಕಾರ ಕಳೆದುಕೊಳ್ಳುತ್ತಿರುವುದು, ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಂತ ವಿವಾದಕ್ಕೆ ಪದೇ ಪದೇ ಈಡಾಗುತ್ತಿರುವುದು ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಬಿಜೆಪಿ ನಾಯಕರು ಪ್ರತಿ ಅವಕಾಶವನ್ನೂ ಬಳಸಿಕೊಂಡು ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಮೇಲೆ ಇಂತಹ ಸಂದರ್ಭಗಳನ್ನು ಬಳಸಿಕೊಂಡು ನಿರಂತರವಾಗಿ ದಾಳಿ ಮಾಡಿದಾಗೆಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿಯ ದಾಳಿಗೆ ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಅರೆಮನಸ್ಸಿನಿಂದ ಹಾಗೂ ಅಸಮರ್ಪಕ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಕೂಡ ಕಾಂಗ್ರೆಸ್ ನ ಈ ವಿಷಮ ಸ್ಥಿತಿಗೆ ಬಹಳ ದೊಡ್ಡ ಕಾರಣವಾಗುತ್ತಿದೆ. ಕಾಂಗ್ರೆಸ್ ನಲ್ಲಿ ಒಂದು ಸಮರ್ಥ ಸಾಂಸ್ಥಿಕ ರಚನೆ ಇಲ್ಲದಿರುವುದು ಕೂಡ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗುತ್ತಿದೆ. ಪಕ್ಷದ ಅಥವಾ ಆಡಳಿತದ ಸಮಸ್ಯೆಗಳು ಬಹಿರಂಗವಾಗದ0ತೆ ನೋಡಿಕೊಳ್ಳುವುದಕ್ಕೆ ಬೇಕಾದ ಸಮರ್ಥತೆಯಲ್ಲಿ ಕಾಂಗ್ರೆಸ್ ಇತ್ತೀಚೆಗೆ ಕೊರತೆ ಅನುಭವಿಸುತ್ತಿದೆ ಎಂದು ನೇರವಾಗಿ ಕಾಣಿಸುತ್ತಿದೆ.

ಬಹುಶಃ ಅದರ ಮುಂದುವರಿದ ಭಾಗ ಎಂಬ0ತೆ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಅವರ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿ. ಆರ್. ಪಾಟೀಲ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದಡಿ ಬಡವರಿಗೆ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪ ಹೊರಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ತೀವ್ರ ಮುಖಭಂಗವನ್ನು0ಟು ಮಾಡಿದೆ. ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಶಾಸಕ ರಾಜು ಕಾಗೆ ಅವರೂ ಕೂಡ ಬೆಂಬಲ ಸೂಚಿಸಿದರು. ಲಂಚ ನೀಡಿದವರಿಗೆ ಮಾತ್ರವೇ ಮನೆ ಹಂಚಲಾಗುತ್ತಿದೆ ಎಂದು ಪಾಟೀಲ್ ಆರೋಪ ಮಾಡಿರುವ ವೈರಲ್ ಆಗಿರುವ ಆಡಿಯೋ ತಮ್ಮದೇ ಎಂದು ಹೇಳಿದ್ದಲ್ಲದೇ, ಮುಖ್ಯಮಂತ್ರಿಗಳು ಕರೆದರೆ ಹೋಗಿ ಮಾತನಾಡುತ್ತೇನೆಂದೂ ಪಾಟೀಲ್ ಹೇಳಿದರು. ಮತ್ತೊಂದೆಡೆ ಕಾಂಗ್ರೆಸ್ ನ ಮತ್ತೋರ್ವ ಶಾಸಕ ಬೇಳೂರು ಗೋಪಾಲಕೃಷ್ಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಅವರು ರಾಜೀನಾಮೆ ನೀಡುವಂತೆ ಹೇಳಿದ್ದನ್ನೂ ಕೂಡ ಪ್ರತಿಪಕ್ಷ ಬಿಜೆಪಿ ತನ್ನ ರಾಜಕೀಯಕ್ಕೆ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿತು.

2025ರ ಜನವರಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ಹುದ್ದೆಗೆ ಪಾಟೀಲ್ ರಾಜೀನಾಮೆ ನೀಡಿ, ಸರ್ಕಾರದ ಕೆಲವು ನೀತಿಗಳು ಸರಿಯಿಲ್ಲ. ಮುಖ್ಯಮಂತ್ರಿಗಳ ಸಲಹೆಗಾರನ ಹುದ್ದೆಯಲ್ಲಿದ್ದುಕೊಂಡು ಸಾಕಷ್ಟು ಪ್ರಭಾವ ಬೀರಲು ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿಕೊಂಡಿದ್ದರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರವೇ ನಂ.1 ಎಂದೂ ಆರೋಪ ಮಾಡಿದ್ದು ಕೂಡ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೊಳಗೊಂಡು, ಕಾಂಗ್ರೆಸ್ ಗೆ ಬಹಳ ದೊಡ್ಡ ಧಕ್ಕೆ ಉಂಟಾಗಿತ್ತು. ಬಹಿರಂಗವಾಗಿ ಈ ರೀತಿಯಲ್ಲಿ ಪಕ್ಷದ ಮೇಲೆ, ಸರ್ಕಾರದ ಮೇಲೆ ನೇರಾನೇರ ಆರೋಪ ಹೊರಿಸುತ್ತಿರುವಾಗಲೂ ಕಾಂಗ್ರೆಸ್ ನಾಯಕತ್ವವಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ಕ್ರಮ ತೆಗದುಕೊಳ್ಳಲಿಲ್ಲ. ಸ್ವಪಕ್ಷೀಯ ಶಾಸಕರೇ ಹೇಳಿರುವ ಹೇಳಿಕೆಯಿಂದ ಆಡಳಿತದ ವರ್ಚಸ್ಸಿಗೆ ಧಕ್ಕೆ ಉಂಟಾದಾಗಲೂ ಸೂಕ್ತ ಪರಿಹಾರ ಅಥವಾ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗದೇ ಇನ್ನೂ ‘ಕೂತು ಮಾತನಾಡುವ’ ತಂತ್ರವನ್ನೇ ಕಾಂಗ್ರೆಸ್ ಎದುರುಗಾಣುತ್ತಿದೆ ಎನ್ನುವುದು ಆಶ್ಚರ್ಯವೇ ಸರಿ.

ಕಾಂಗ್ರೆಸ್ ಸರ್ಕಾರದ ನೈತಿಕತೆಯ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಪಕ್ಷದ ಉನ್ನತ ಸ್ಥಾನದಲ್ಲಿರುವವರೇ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದು ಸರ್ಕಾರದ ನೈತಿಕತೆ ವಿಚಾರದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ದೇಶಮಟ್ಟದಲ್ಲಿ ಅಧಿಕಾರ ಪಡೆಯುವುದಕ್ಕೆ ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೇ, ಅಧಿಕಾರ ಇರುವ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಕಾಂಗ್ರೆಸ್ ಪಕ್ಷವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸುವುದಕ್ಕಾಗಲಿ ಅಥವಾ ಪಕ್ಷ ಸಂಘಟನೆ ಬಲವರ್ಧನೆ ಮಾಡುವುದಕ್ಕಾಗಲಿ ಬಹಳ ಪ್ರಮುಖವಾಗಿ ಬೇಕಾಗಿರುವ ಒಗ್ಗಟ್ಟು ಕಾಪಾಡಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದೆ. ಸದಾ ಒಂದು ಹೆಜ್ಜೆ ಮುಂದೆ ಇಡುವುದಕ್ಕೆ ಪ್ರಯತ್ನಿಸುತ್ತದೆಯಾದರೂ ಇಂತಹ ಕೆಲವೊಂದು ಆಂತರಿಕ ವೈಫಲ್ಯಗಳು ಕಾಂಗ್ರೆಸ್ ಸರ್ಕಾರದ ಆಡಳಿತದ ಚುರುಕಿಗೆ ಅಡ್ಡಗಾಲಾಗಿ ಕಾಣಿಸಿಕೊಳ್ಳುತ್ತಿವೆ. ಮತ್ತು ಇಂತಹ ಸಂದರ್ಭಗಳಲ್ಲಿ ತ್ವರಿತ ಕ್ರಮಕ್ಕೂ ಕಾಂಗ್ರೆಸ್ ಮುಂದಾಗದೇ ಮೀನಮೇಷ ಎಣಿಸುವುದು ಕೂಡ ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸ್ವತಃ ಕಾಂಗ್ರೆಸಿಗರಲ್ಲೂ ಅಸಮಾಧಾನ ಮೂಡಿಸುತ್ತಿದೆ.

ಇನ್ನು, ಇಂತಹ ಸಂದರ್ಭಗಳಲ್ಲಿ ಬಿಜೆಪಿ, ಮಾಧ್ಯಮಗಳನ್ನೂ ಚೆನ್ನಾಗಿ ದುಡಿಸಿಕೊಳ್ಳುತ್ತಿದೆ. ಆಡಳಿತ ಪಕ್ಷದ ಮೇಲೆ ಮುಗಿಬೀಳುವ ಹಾಗೆ ಮಾಧ್ಯಮಗಳ ಅಸ್ತಿತ್ವಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲಗಳನ್ನೂ ಮಾಡಿಕೊಡುವುದರಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತಲೂ ಒಂದು ಹಂತ ಮೇಲೆ ಇದೆ. ಬಹುಶಃ ಇಂತಹುವುಗಳನ್ನೆಲ್ಲಾ ನೋಡಿದಾಗ ಕಾಂಗ್ರೆಸ್ ರಾಜಕೀಯ ಮಾಡುವುದಕ್ಕೆ ಇನ್ನೂ ಕಲಿತಿಲ್ಲ ಎಂದೇ ಕಾಣಿಸುತ್ತದೆ. ರಾಜಕೀಯದ ಸ್ಥಿತ್ಯಂತ0ರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಕ್ಕೆ ಇನ್ನೂ ಕಲಿಯದೇ ಇರುವುದರಿಂದಲೇ ಈ ಕಾಲದ ರಾಜಕಾರಣದಿಂದ ಹೊರಗೆ ಉಳಿಯುತ್ತಿದೆ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿರುಮ್ಮಳ ಮೌನ ವಹಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಪ್ರಯತ್ನಿಸಬೇಕು.

ಒಟ್ಟಿನಲ್ಲಿ, ಪಾಟೀಲ್ ಆರೋಪ ಸರ್ಕಾರದ ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರೇ ಇಂತಹ ಆರೋಪ ಮಾಡಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಕಾಂಗ್ರೆಸ್ ಗೆ ಇನ್ನೂ ಸ್ಪಷ್ಟತೆ ಇಲ್ಲ. ಇಲಾಖೆಯ ಸಚಿವರು ಆರೋಪ ಸಾಬೀತಾದರೇ ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಮರು ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಮಾದರಿ ಆಡಳಿತ ಎನ್ನುವಂತೆ ಮಾಡಿಕೊಳ್ಳಬೇಕು ಎಂಬ ಇರಾದೆ ಇಲ್ಲದಂತೆ ರಾಜ್ಯ ಕಾಂಗ್ರೆಸ್ ವರ್ತಿಸುತ್ತಿದೆ. ಹೀಗೆ ದಿಕ್ಕುಕಾಣದೆ ಬರುವ ಆರೋಪಗಳಿಗೆ, ವಿವಾದಗಳಿಗೆ ಕಡಿವಾಣವನ್ನು ಹಾಕುವುದರ ಮೂಲಕ ಪಕ್ಷವನ್ನು, ಸರ್ಕಾರವನ್ನು ದಿಕ್ಕುಕಾಣದೆ ಹೋಗುವ ಸ್ಥಿತಿಯಿಂದ ಹೊರತರಬೇಕಿದೆ.

-ಶ್ರೀರಾಜ್ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!