spot_img
Friday, January 30, 2026
spot_img

ಆರ್.ಸಿ.ಬಿ ವಿಜಯೋತ್ಸವ ದುರಂತ : ಕಾಂಗ್ರೆಸ್ ಸರ್ಕಾರದ ಅಧಿಕ ಪ್ರಸಂಗ

ಹುಚ್ಚು ಅಭಿಮಾನ ತಂದ ಸೂತಕ | ರಾಜಕೀಯ ಸಲಹೆಯ ಅವಿವೇಕ

ಕಾಲ ಉರುಳಿದಂತೆ ಜನಪ್ರಿಯ ಕ್ಷೇತ್ರಗಳಲ್ಲಿ ಒಂದಾದ ಕ್ರಿಕೇಟ್, ಯುವ ಜನರನ್ನು ಮತ್ತಷ್ಟು ಸೆಳೆಯುತ್ತಿದೆ. ಅದರಲ್ಲೂ ಐಪಿಎಲ್ ಯುವಕರನ್ನು ಸೆಳೆದಷ್ಟು, ಕ್ರಿಕೇಟ್‌ನ ಯಾವ ಮಾದರಿಯೂ ಯುವಕರನ್ನು ಇಷ್ಟು ಪರಿಣಾಮಕಾರಿಯಾಗಿ ಸೆಳೆದಿರಲಿಕ್ಕಿಲ್ಲ. ಐಪಿಎಲ್ ಎಂಬ ಮಾಯಾಲೋಕ ಕ್ರಿಕೇಟ್ ಮೇಲೆ ಯುವಕರಲ್ಲಿ ಅಭಿಮಾನ ಹೆಚ್ಚಿಸಿದೆ. ಹುಚ್ಚೆಬ್ಬಿಸಿದೆ. ಬಹಳ ಪ್ರಮುಖವಾಗಿ ಬೆಟ್ಟಿಂಗ್ ದಂಧೆಯ ಮೂಲಕ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಮಾನಸಿಕವಾಗಿ ಕೂಪಕ್ಕೆ ತಳ್ಳಿದ ಐಪಿಎಲ್ ಕ್ರಿಕೇಟ್ ಮಾದರಿಯಿದು ಎಂದರೇ ತಪ್ಪಿಲ್ಲ.

ಐಪಿಎಲ್ ಆರಂಭವಾದಾಗಲ0ತೂ ಗಲ್ಲಿಗಲ್ಲಿಗಳಲ್ಲಿ ಈ ಐಪಿಎಲ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತದೆ. ಐಪಿಎಲ್ ನಡೆಯುವ ಅವಧಿಯಲ್ಲಿ ದೇಶದಾದ್ಯಂತ ಕೋಟಿಕೋಟಿ ಬೆಟ್ಟಿಂಗ್ ವ್ಯವಹಾರ ರಾಜಾರೋಷವಾಗಿ ನಡೆಯುತ್ತದೆ. ಯಾರೋ ಬಂಡವಾಳ ಹೂಡಿ ಯಾರೋ ಲಾಭ ಗಳಿಸುವ ಈ ಐಪಿಎಲ್ ಮಾದರಿ ಕ್ರಿಕೇಟ್ ಬಗ್ಗೆ ಯುವ ಜನಾಂಗ ಈ ಪರಿ ಹುಚ್ಚು ಅಭಿಮಾನವನ್ನು ಇಡೀ ಮನಸ್ಸು, ದೇಹಕ್ಕೆಲ್ಲಾ ಅಂಟಿಸಿಕೊAಡಿರುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ. ಬೆಟ್ಟಿಂಗ್ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಅವಿರತ ಶ್ರಮಿಸುತ್ತಿದ್ದರೂ ಕ್ರಿಕೇಟ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಈ ದಂಧೆಯ ಭಾಗೀದಾರರಾಗಿ ಇರುವುದೇನೂ ಗುಟ್ಟಾಗಿ ಉಳಿದಿಲ್ಲ. ಮತ್ತೆ ಇವೆಲ್ಲಾ ನಮ್ಮ ರಾಜ್ಯ ಕಾಂಗ್ರೆಸ್ ಗೆ ಗೊತ್ತಿಲ್ಲದೇನಲ್ಲ. ಆದಾಗ್ಯೂ ಐಪಿಎಲ್ ನಲ್ಲಿ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂರ‍್ಸ್ ಬೆಂಗಳೂರು(ಆರ್.ಸಿ.ಬಿ) ತಂಡವನ್ನು ರಾಜ್ಯ ಸರ್ಕಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಿರುವುದು ರಾಜ್ಯದ ಆಡಳಿತದ ದುರಂತವೇ ಸರಿ.

ಆರ್.ಸಿ.ಬಿ ತಂಡವನ್ನು ಸ್ವತಃ ಸಿಎಂ, ಡಿಸಿಎಂ ಮತ್ತು ರಾಜ್ಯಪಾಲರನ್ನೊಳಗೊಂಡು ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗಿದೆ ಎಂದರೇ, ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಬೆಂಬಲಿಸುತ್ತದೆ ಎಂದು ಒಪ್ಪಿಕೊಂಡAತಾಯಿತು ಅಲ್ಲವೇ? ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನನ್ನು ತಾನು ಅಗತ್ಯವಾಗಿ ಪ್ರಶ್ನಿಸಿಕೊಳ್ಳಬೇಕಿದೆ.

ಸಿಎಂ ಸಿದ್ದರಾಮಯ್ಯ ಅವರಂತಹ ಪ್ರಬುದ್ಧ ರಾಜಕಾರಣಿಗಳಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇಂತಹದ್ದೊAದು ಅಸಂಬದ್ಧ ಪ್ರಸಂಗವನ್ನು ಬೆನ್ನು ತಟ್ಟಿದ್ದು ವಿಷಾದನೀಯವೇ ಸರಿ. ಬಹುಶಃ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಇಂತಹದ್ದೊAದು ಅಸಂಬದ್ಧ ರಾಜಕೀಯ ಸಲಹೆಗೆ ಬಲಿಯಾಗಿದ್ದಾರೆ ಎನ್ನುವುದು ನೇರವಾಗಿ ತಿಳಿಯುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ರಾಜಕೀಯ ತಂತ್ರಕಾರಿಕೆಯನ್ನು ಹೆಣೆಯುತ್ತಿರುವ ಒಂದು ಪ್ರತಿಷ್ಠಿತ ರಾಜಕೀಯ ಸಲಹಾ ಸಂಸ್ಥೆ ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತವನ್ನೇ ಮರೆಸುತ್ತಿದೆ ಎಂದೇ ಕಾಣಿಸುತ್ತಿದೆ. ಆರ್.ಸಿ.ಬಿ ತಂಡಕ್ಕೆ ಅತ್ಯಂತ ದೊಡ್ಡ ಅಭಿಮಾನಿಗಳ ಸಮೂಹವೇ ಇದೆ. ಅದರಲ್ಲೂ ಅತಿ ಹೆಚ್ಚು ಯುವ ಸಮೂಹವೇ ಆರ್.ಸಿ.ಬಿಯನ್ನು ಬೆಂಬಲಿಸುತ್ತದೆ. ದೊಡ್ಡ ಯುವ ಸಮೂಹದ ಬೆಂಬಲ ಹೊಂದಿರುವ ಆರ್.ಸಿ.ಬಿ ಕಳೆದ 18 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.

ದಿ ಕರ್ನಾಟಕ ಸ್ಟೇಟ್ ಕ್ರಿಕೇಟ್ ಅಸೋಸಿಯೇಷನ್, ಗೆದ್ದ ಆರ್.ಸಿ.ಬಿ ತಂಡವನ್ನು ಅಭಿನಂದಿಸುವ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆಗೆ ಮುಂದಾಗಿತ್ತು. ಈ ನಡುವೆ ರಾಜ್ಯ ಸರ್ಕಾರವೂ ರಾಜಕೀಯವಾಗಿ ಲಾಭ ಪಡೆದುಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ತಂಡದ ಆಟಗಾರರನ್ನು ಸನ್ಮಾನಿಸಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರ್.ಸಿ.ಬಿ ತಂಡವನ್ನು ಸನ್ಮಾನಿಸುವ ಯಾವ ಅಗತ್ಯವೂ ಇರಲಿಲ್ಲ. ಅದರಲ್ಲೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗೌರವಿಸುವಂತ ಕಾರ್ಯಕ್ರಮವಂತೂ ಖಂಡಿತ ಇದಲ್ಲ. ಸರ್ಕಾರದ ವತಿಯಿಂದ ಆರ್.ಸಿ.ಬಿ ತಂಡವನ್ನು ಗೌರವಿಸಲೇ ಬೇಕಿತ್ತು ಅಂತಾಗಿದ್ದರೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ತಂಡದ ಆಟಗಾರರನ್ನು ಶಾಲು ಹೊದಿಸಿಯೋ, ಪುಷ್ಪಗುಚ್ಚವನ್ನು ನೀಡಿಯೋ ಗೌರವಿಸಬಹುದಿತ್ತು. ವಿಧಾನಸೌಧದ ಮೆಟ್ಟಿಲುಗಳ ಮೇಲೆಯೂ ಅದನ್ನೇ ಮಾಡಿದ್ದು ಅಲ್ವೇ?

ವಿಧಾನಸೌಧದಿಂದ ಕಾರ್ಯಕ್ರಮ ಮುಗಿಸಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹೋಗುವಾಗ ಜನ ಸಮೂಹವೇ ಹರಿದು ಬಂದಿತ್ತು. ಅಭಿಮಾನಿಗಳ ಪ್ರೀತಿ ಉನ್ಮಾದ ಸ್ಥಿತಿಗೆ ತಲುಪಿತ್ತು. ಅದಾಗಲೇ ಕ್ರೀಡಾಂಗಣದ ಬಳಿ ನೂಕುನುಗ್ಗಲು ಸೃಷ್ಟಿಯಾಗಿತ್ತೆಂಬ ವರದಿಯಿತ್ತು. ಅಭಿಮಾನಿಗಳ ಹುಚ್ಚುತನವನ್ನು ಪೊಲೀಸರಿಂದ ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. ಕಾಲ್ತುಳಿತಕ್ಕೆ ಹನ್ನೊಂದು ಮಂದಿಯ ಬಲಿ ಆಯಿತು. ಆರ್.ಸಿ.ಬಿ ಆಡಳಿತ ಮಂಡಳಿಯಾಗಲಿ, ವಿಜಯೋತ್ಸವವನ್ನು ಆಯೋಜಿಸಿದ ಕೆ.ಎಸ್.ಸಿ.ಎ ಆಗಲಿ, ಆರ್.ಸಿ.ಬಿ ತಂಡದ ಆಟಗಾರರಾಗಲಿ ಈ ಸಂದರ್ಭದಲ್ಲಿ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ.

ಸರ್ಕಾರ ಲಾಭದ ಉದ್ದೇಶದಿಂದ ಆರ್.ಸಿ.ಬಿ ತಂಡವನ್ನು ಅಭಿನಂದಿಸುವುದಕ್ಕೆ ಎಲ್ಲಿಯವರೆಗೆ ಹಪಹಪಸಿತ್ತು, ಉತ್ಸಾಹ ತೋರಿತ್ತು ಎಂದರೇ, ಆರ್.ಸಿ.ಬಿ ಆಡಳಿತ ಮಂಡಳಿ ಹಾಗೂ ಇಡೀ ತಂಡವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರ ಮಾಡಿಕೊಂಡಿತ್ತು. ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಏರ್ ಪೋರ್ಟ್ ಗೆ ತೆರಳಿ ಆಟಗಾರರನ್ನು ಬರಮಾಡಿಕೊಂಡಿದ್ದರು. ಐಪಿಎಲ್ ಎಂಬ ಸಮೂಹ ಸನ್ನಿಗೆ ಯುವಕರು ಒಳಗಾದಂತೆ, ಐಪಿಎಲ್ ಎಂಬ ಬೆಟ್ಟಿಂಗ್ ದಂಧೆಯ ದೊಡ್ಡ ಪ್ಲಾಟಫಾರ್ಮ್ ನಲ್ಲಿ ಗೆದ್ದು ಬೀಗಿದ ಆರ್.ಸಿ.ಬಿ ತಂಡವನ್ನು ಗೌರವಿಸಲು ರಾಜ್ಯ ಸರ್ಕಾರ ಅತೀವ ಉತ್ಸಾಹ ತೋರ್ಪಡಿಸಿತ್ತು. ಸಿಎಂ, ಡಿಸಿಎಂ ಸೇರಿ ಪ್ರಮುಖ ನಾಯರಕ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಆರ್.ಸಿ.ಬಿ ಗೆಲುವಿಗಾಗಿ ಶುಭ ಹಾರೈಕೆಯಿಂದ ಹಿಡಿದು ಎಲ್ಲವನ್ನೂ ಗಮನಿಸಿದರೇ, ಸರ್ಕಾರವೂ ಐಪಿಎಲ್ ಸಮೂಹ ಸನ್ನಿಗೆ ಒಳಗಾಗಿ ಅವಿವೇಕ ಮೆರೆದಿತ್ತು ಎಂದೇ ಹೇಳಬೇಕು.
ಆರ್.ಸಿ.ಬಿ ಮೇಲೆ ಇರುವ ಜನಪ್ರಿಯತೆಯನ್ನು ಮತಗಳಾಗಿ ಕಾಂಗ್ರೆಸ್‌ಗೆ ಪರಿವರ್ತಿಸಿ ಕೊಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ರಾಜಕೀಯ ಸಲಹಾ ಸಂಸ್ಥೆಯೊ0ದು ಮತ್ತೆ ಎಡವಿತು.

ಕಾಂಗ್ರೆಸ್ ಕೂಡ ಇಂತಹ ಅನಗತ್ಯ, ಅಧಿಕ ಪ್ರಸಂಗಿತನದ ಸಲಹೆಗಳನ್ನು ತೆಗೆದುಕೊಳ್ಳಬಾರದು ಎಂಬ ಕನಿಷ್ಠ ಜ್ಞಾನವಿಲ್ಲ ಎಂಬ0ತೆ ವರ್ತಿಸಿತ್ತು. ಯಾರದ್ದೋ ನಿರ್ಧಾರಕ್ಕೆ ಯಾರದ್ದೋ ತಲೆದಂಡ. ಯಾರೋ ಜೇಬು ತುಂಬಿಸಿಕೊAಡಿದ್ದಕ್ಕೆ ಯಾರದ್ದೋ ಜೀವ ಬಲಿ. ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ಈ ದುರಂತಕ್ಕೆ ಸರ್ಕಾರ, ಆರ್.ಸಿ.ಬಿ ಮಾಲೀಕರು, ಕೆ.ಎಸ್.ಸಿ.ಎ ಹೊಣೆಗಾರಿಕೆ ಹೊರಬೇಕು.

ಸರ್ಕಾರ, ಆರ್.ಸಿ.ಬಿ ಮೇಲೆ ಇರುವ ಜನರ ಅಭಿಮಾನದ ಲಾಭ ಪಡೆಯುವ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿತ್ತು. ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಲೆಕ್ಕ ಹಾಕಬೇಕಿದ್ದ ರಾಜ್ಯ ಸರ್ಕಾರ ಮೈಮರೆತು ವರ್ತಿಸಿತು. ಕೆಲವೇ ಗಂಟೆಗಳ ಅಂತರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ನಿಯೋಜಿಸುವುದು ಕಷ್ಟದ ಕೆಲಸ ಎನ್ನುವ ಕನಿಷ್ಠ ಜ್ಞಾನ ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲವೇ?. ಅಷ್ಟಲ್ಲದೇ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇರುವುದರಿಂದ ಕೆಲವು ದಿನಗಳ ಬಳಿಕ ಈ ಕಾರ್ಯಕ್ರಮ ಆಯೋಜಿಸುವುದು ಸೂಕ್ತವೆಂಬ ಪೊಲೀಸ್ ಅಧಿಕಾರಿಗಳ ವರದಿಯನ್ನು ನಿರ್ಲಕ್ಷಿಸುವಷ್ಟು ಕಾಂಗ್ರೆಸ್ ಸರ್ಕಾರದ ನಾಯಕರು ಬೌದ್ಧಿಕ ಬಡತನದಲ್ಲಿದ್ದರು ಎನ್ನುವುದನ್ನು ಬಹುಶಃ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಅವರೂ ಊಹಿಸಿರಲಿಕ್ಕಿಲ್ಲ.

ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸುವ ಮೂಲಕ ಅಮಾನತ್ತಿನ ಶಿಕ್ಷೆ ವಿಧಿಸಿ ತನ್ನನ್ನು ತಾನೇ ಸಮರ್ಥಿಸಿಕೊಂಡಿತು. ಇದರ ಹಿಂದೆ ಅನೇಕ ನಿಗೂಢ ಸಂಗತಿಗಳಿವೆ ಎನ್ನುವುದನ್ನು ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಇನ್ನು, ಕೊನೆಯದಾಗಿ, ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಇಂತಹ ಸಂದರ್ಭಗಳು ರಾಜಕೀಯವಾಗಿ ಆಡಳಿತಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ರಾಜ್ಯ ಸರ್ಕಾರ ಇತಿಹಾಸದ ಪಾಠ ತಿಳಿದುಕೊಳ್ಳಬೇಕಿತ್ತು. ಅದು ಆಗದೇ ಇರುವುದೇ ಈ ದುರ್ಘಟನೆಗೆ ಕಾರಣ. ಖಂಡಿತ ಈ ಪ್ರಸಂಗ ಸರ್ಕಾರದ ಆಡಳಿತಕ್ಕೆ ಒಂದು ಕಪ್ಪು ಚುಕ್ಕೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಇನ್ನಾದರೂ ಇಂತಹ ಅಧಿಕ ಪ್ರಸಂಗ ಮಾಡುವುದನ್ನು ನಿಲ್ಲಿಸಲಿ.

-ಶ್ರೀರಾಜ್ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!