spot_img
Friday, January 30, 2026
spot_img

ದ್ವೇಷ ಭಾಷಣ, ದ್ವೇಷ ರಾಜಕಾರಣದ ವಿರುದ್ಧ ಬುದ್ಧಿವಂತರು ಧ್ವನಿ ಎತ್ತಲಿ

ದ್ವೇಷ ಬಿತ್ತುವ ಮನಸ್ಥಿತಿಗೆ ಜನರೇ ಮದ್ದರೆಯಲಿ | ಕಾನೂನು, ಸರ್ಕಾರ ವಿಫಲ ?  

ದ್ವೇಷ ಭಾಷಣ ಮಾಡುವವರ ಮನಸ್ಥಿತಿಗಿಂತ  ದ್ವೇಷ ಭಾಷಣಗಳನ್ನು ಕೇಳಿ ತಲೆಯಾಡಿಸುತ್ತಾ ಹೌದೆಂದು ಕೂರುವ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ, ಬೆಂಬಲಿಸುವ ಮನಸ್ಥಿತಿ ಸಮಾಜಕ್ಕೆ ಅಂತ್ಯಂತ ಅಪಾಯಕಾರಿ ಎನ್ನುವುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.

ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕರಾವಳಿ ಕರ್ನಾಟಕದಲ್ಲಿ ಕೋಮು ಸಂಘರ್ಷವನ್ನು ಕಡಿಮೆಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ಚಾಲ್ತಿಯಲ್ಲಿಡುವ ಪ್ರಯತ್ನವನ್ನು ರಾಜಕೀಯ ಪಕ್ಷಗಳೇ ಹಿಂದಿದ್ದು ಮಾಡಿವೆ. ಇಲ್ಲಿನ ಜನರೂ ಕೂಡ ದ್ವೇಷ, ತಾರತಮ್ಯ, ಸಂಘರ್ಷ, ಕೊಲೆಗಳನ್ನು ಮೌನವಾಗಿಯೇ ನೋಡಿ ಸುಮ್ಮನಾಗಿದ್ದಾರೆ ಬಿಟ್ಟರೇ, ಅದರ ವಿರುದ್ಧವಾಗಿ ಧ್ವನಿ ಎತ್ತುವಂತಹ ಕೆಲಸವನ್ನು ಎಂದೂ ಮಾಡಿಲ್ಲ. ಉಡುಪಿ, ದಕ್ಷಿಣ ಕನ್ನಡ ಎಂದಿಗೂ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುತ್ತಲೇ ಬಂದಿವೆ. ಆದರೇ, ಇಂತಹ ದ್ವೇಷ ಭಾಷಣ, ಕೋಮು ಸಂಘರ್ಷಗಳ ವಿರುದ್ಧ ಇಲ್ಲಿನ ಜನರು ಬುದ್ಧಿವಂತಿಕೆಯನ್ನು ತೋರದೇ ಇರುವುದು ದುರಂತವೇ ಸರಿ.

ದ್ವೇಷ ಭಾಷಣ ಮತ್ತು ಕೋಮು ಸಂಫರ್ಷ ಕರಾವಳಿಯಲ್ಲಿ ಒಂದು ರೀತಿಯಲ್ಲಿ ಮಾನಸಿಕ ಸೋಂಕು ಎಂಬಂತಾಗಿದೆ. ದ್ವೇಷ ಭಾಷಣವನ್ನು ಮಾಡುವವರು ಇಲ್ಲಿನ ಜನರಿಗೂ ಆ ಸೋಂಕನ್ನು ಹಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಮುದಾಯ, ಈ ಸಮುದಾಯ ಎನ್ನುವುದಕ್ಕಿಲ್ಲ. ಇಲ್ಲಿ ಧರ್ಮ, ರಾಜಕೀಯ ಮಾಡುವವರೆಲ್ಲಾ ಮಾನಸಿಕ ಸೋಂಕಿನಿಂದ ಬಳಲುತ್ತಿರುವವರೇ ಆಗಿದ್ದಾರೆ.

ಗೆಳೆಯನೋರ್ವನೊಂದಿಗೆ ಕರಾವಳಿಯಲ್ಲಿ ಆಗುತ್ತಿರುವ ಕೊಲೆ, ಪ್ರತಿಕಾರದ ಕೊಲೆ, ಸಂಘರ್ಷ, ಧಾರ್ಮಿಕ ವೈಮನಸ್ಸು, ಧರ್ಮ ರಾಜಕಾರಣ, ಧರ್ಮ ವೈಷಮ್ಯ ಇವೆಲ್ಲದರ ಬಗ್ಗೆ ಕೆಲವು ದಿನಗಳ ಹಿಂದೆ ಬಹಳ ಹೊತ್ತು ಮಾತನಾಡಿದ್ದೆ. ʼಧರ್ಮದ ಹೆಸರಿನಲ್ಲಿ ಹುಟ್ಟಿಕೊಂಡ ಯಾವ ಧರ್ಮದ ಸಂಘಟನೆಗಳಿಂದಲೂ ಧರ್ಮ ರಕ್ಷಣೆಯಾಗುತ್ತಿಲ್ಲ. ಧರ್ಮವನ್ನು, ಇನ್ನೊಂದು ಧರ್ಮದವರನ್ನು ಕೊಲ್ಲುವುದರ ಮೂಲಕ ಅಥವಾ ಇನ್ನೊಂದು ಧರ್ಮವನ್ನು ದ್ವೇಷಿಸುವ ಮೂಲಕ ರಕ್ಷಿಸುವ ಅನಿವಾರ್ಯ ಯಾವ ಧರ್ಮಕ್ಕೂ ಬಂದಿಲ್ಲ. ಇಲ್ಲಿ ಹೀಗೆ ಬಹಿರಂಗವಾಗಿ ಮಾತನಾಡುವವ ನಾಳೆ ದಿನ ಕೊಲೆಯಾಗಿ ಸುದ್ದಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯಲ್ಲಿ ಸೃಷ್ಟಿಯಾಗಿರುವ ಈ ವಿಷಮ ಸ್ಥಿತಿಯನ್ನು ಸರಿಪಡಿಸುವುದಕ್ಕೆ ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಅವರಿಗೆ ಬೇಕಾದ ಹಾಗೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಮನದಿಚ್ಛೆಯಂತೆ ಮಾಡಿವೆ ಹೊರತು ಕೋಮುದ್ವೇಷವನ್ನು ತಣಿಸುವಂತಹ ಯಾವುದೇ ಪರಿಣಾಮಕಾರಿ ನಡೆಯನ್ನು ಯಾವ ಸರ್ಕಾರವೂ ತೆಗೆದುಕೊಂಡಿಲ್ಲ. ಕೋಮು ದ್ವೇಷ ಎಲ್ಲಿಂದ ಹರಡುತ್ತಿದೆಯೋ ಅದರ ಮೂಲವನ್ನು ನಿರ್ಮೂಲನೆ ಮಾಡುವ ಯಾವ ಪ್ರಯತ್ನವೂ ಮಾಡಿಲ್ಲ. ಪೊಲೀಸ್‌ ಇಲಾಖೆಯೂ ಸರ್ಕಾರಕ್ಕೆ ಬೇಕಾದಂತೆ ಕಾರ್ಯ ನಿರ್ವಹಿಸುತ್ತಿವೆ ಹೊರತಾಗಿ ಜನರ ನಿರೀಕ್ಷೆಯಂತೆ ಮಾಡುತ್ತಿಲ್ಲ. ಜನರು ಕೂಡ ಈ ಬಗ್ಗೆ ದಿವ್ಯ ಅಸಡ್ಡೆ ತೋರುತ್ತಿದ್ದಾರೆ. ಜನರ ಮೌನವಿಲ್ಲಿ ಕೋಮು ಅಲೆ ಉರಿಯುವುದಕ್ಕೆ ಮುಖ್ಯ ಕಾರಣʼ ಎಂದೆಲ್ಲಾ ಮಾತನಾಡಿಕೊಂಡಿದ್ದೇವು.

ವೈಯಕ್ತಿಕ ಬದುಕನ್ನು ಸಾರ್ವಜನಿಕ ಬದುಕಿನ ಜೊತೆಗೆ ನಡೆಸುತ್ತಿರುವ ನಮ್ಮಂತಹ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವವರಿಗೆ ಇಂತಹ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡದೆ ಇರುವಂತಹ ಸ್ಥಿತಿಗತಿ ʼಒಳಗೂ-ಹೊರಗೂʼ ಇದೆ. ಧ್ವನಿ ಎತ್ತಿದರೇ ಲೇಬಲ್‌ ಅಂಟಿಸುವುದಕ್ಕೆ ಈ ಸಮಾಜವಂತೂ ಸಿದ್ಧವಿದೆ.

ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ಈ ಕುರುಡು ದ್ವೇಷ ಇಲ್ಲಿನ ಜನ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮದ ರಕ್ಷಣೆಯ ಹೆಸರಿನಲ್ಲಿ ದ್ವೇಷ ಭಾಷಣ ಹೆಚ್ಚುತ್ತಿರುವುದರ ಹಿಂದೆ ಮತೀಯ ಶಕ್ತಿಗಳ, ಸರ್ಕಾರಗಳ ಹಾಗೂ ರಾಜಕೀಯ ಪಕ್ಷಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದಿದೆ. ಅದು ಗೌಪ್ಯವಾಗೇನೂ ಉಳಿದಿಲ್ಲ. ಅವರೆಲ್ಲರ ಪಾಲಿಗಿದು ಮನರಂಜನೆ ಎಂಬಂತಾಗಿದೆ. ಅಲ್ಲಿಯವರೆಗೆ ಕರಾವಳಿಯಲ್ಲಿ ಕೋಮು ದ್ವೇಷ ಬೆಳೆದಿದೆ.  

ಸದ್ಯ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಪದೇ ಪದೇ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಥವಾ ಕ್ರಿಮಿನಲ್ ಅಪರಾಧಗಳ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮತ್ತಿಷ್ಟು ಕೊಲೆ ಆಗುವುದಕ್ಕಾಗಿ ಕಾದು ಕುಳಿತರೇ ಅಥವಾ ಸರ್ಕಾರದ ಆದೇಶಕ್ಕಾಗಿ ಕಾಯಬೇಕಾಗಿತ್ತೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಕೊನೆಗೂ ಮತ್ತೆ ದಕ್ಷಿಣ ಕನ್ನಡ ಕರಾವಳಿಯಲ್ಲಿ ದ್ವೇಷ ಭಾಷಣ, ಕೋಮು ಸಂಘರ್ಷ ಹೆಚ್ಚಳವಾದ ಮೇಲೆ 36 ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ದ್ವೇಷ ಭಾಷಣಗಳನ್ನು ಮಾಡಿದವರ ವಿರುದ್ಧ ಎಫ್‌.ಐ.ಆರ್‌ ಗಳನ್ನು ದಾಖಲಿಸಿಕೊಂಡು ಬಂಧನಕ್ಕೊಳಪಡಿಸಲಾಗುತ್ತಿದೆ. ಆದಾಗ್ಯೂ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯಗಳಿವೆ. ಬಹುಶಃ ಅಂತಹ ಅಭಿಪ್ರಾಯ ಕೇಳಿ ಬರುವಂತೆಯೇ ಪೊಲೀಸ್‌ ಇಲಾಖೆ ಅಥವಾ ರಾಜ್ಯ ಸರ್ಕಾರ ನಡೆದುಕೊಂಡಿತೇ ಎನ್ನುವ ಪ್ರಶ್ನೆಯೂ ನಮ್ಮಲ್ಲಿ ಮೂಡದೇ ಇರದು.

ಇನ್ನು, ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾಗದಿದ್ದರೂ ಪ್ರಕರಣ ದಾಖಲಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ‘ದ್ವೇಷ ಭಾಷಣಗಳನ್ನು ಮಾಡುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅಂತಹ ಭಾಷಣಗಳು ದೇಶದ ಜಾತ್ಯತೀತ ರಚನೆಗೆ ಧಕ್ಕೆ ತರುವ ಸಾಮರ್ಥ್ಯವನ್ನು ಹೊಂದಿವೆ’ ಎಂದು ವ್ಯಾಖ್ಯಾನಿಸಿತ್ತು. ‘ದ್ವೇಷ ಭಾಷಣಗಳಿಗೆ ಸಂಬಂಧಿಸಿ ಆದೇಶವು ಎಲ್ಲ ಧರ್ಮದವರಿಗೂ ಅನ್ವಯಿಸಬೇಕು. ದ್ವೇಷ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಲು ವಿಳಂಬ ಮಾಡುವುದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆಯನ್ನೂ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀಡಿತ್ತು.

ಮಾತ್ರವಲ್ಲದೇ, ದ್ವೇಷ ಭಾಷಣ ಮಾಡಿರುವುದು ಕಂಡುಬಂದಾಗ, ಯಾವುದೇ ದೂರು ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತರಿಪಡಿಸಬೇಕು’ ಎಂದೂ ಕೂಡ ನ್ಯಾಯಪೀಠ ಸೂಚನೆ ನೀಡಿದೆ. ‘ಈ ಸಂಬಂಧ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಐಜಿಪಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಆದೇಶಿಸಿತ್ತು. ‘ದ್ವೇಷ ಭಾಷಣಗಳ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಜನರ ಹಿತರಕ್ಷಣೆ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ಎಲ್ಲ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸುತ್ತಲೇ ಇದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಸುಪ್ರೀಂ ಕೋರ್ಟ್‌ ಹೀಗೆ ಖಡಕ್‌ ಆಗಿ ಆದೇಶಿಸಿದ ಬಳಿಕವೂ ದ್ವೇಷ ಭಾಷಣಗಳೇನೂ ಕಡಿಮೆಯಾಗಿಲ್ಲ. ದ್ವೇಷ ಭಾಷಣಗಳ ವಿರುದ್ಧ ದೇಶದಾದ್ಯಂತ ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಅದರರ್ಥ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಕಾನೂನು, ಪೊಲೀಸ್‌ ಇಲಾಖೆ, ಸರ್ಕಾರ ಯಾವುದಕ್ಕೂ ಹೆದರುವುದಿಲ್ಲ ಎಂದಾಗಿದೆಯಲ್ವೇ ? ಮತ್ತದು ವಾಸಿಯಾಗದ ಸೋಂಕು. ಆ ಸೋಂಕಿಗೆ ಬಹುಶಃ ಮದ್ದರೆಯುವುದರಲ್ಲಿ ನಮ್ಮ ಸರ್ಕಾರಗಳು ಸೋತಿವೆ ಎಂದೇ ಕಾಣಿಸುತ್ತಿದೆ. ಹಾಗಾಗಿ ಇಂತಹುಗಳ ನಿರ್ಮೂಲನೆಗೆ ಜನರೇ ಮದ್ದರೆಯುವ ಮೂಲಕ ವಿರೋಧಿಸುವ ತುರ್ತಿದೆ. ಎಲ್ಲಿಯವರೆಗೆ ಹುಂಬ ಮನಸ್ಥಿತಿಯ ಅನುಯಾಯಿಗಳು ಇರುತ್ತಾರೋ ಅಲ್ಲಿಯವರೆಗೆ ಇಂತಹ ಚಟುವಟಿಕೆಗಳು ಕಡಿಮೆಯಾಗುವುದಿಲ್ಲ.

ಬಹಳ ಮುಖ್ಯವಾಗಿ ಇದರ ಬಗ್ಗೆ ಸಮಾಜಕ್ಕೆ ತುರ್ತಾಗಿ ಅರಿವಾಗಬೇಕಿದೆ. ಜನರು ಎಚ್ಚರಗೊಂಡಾಗ ಮಾತ್ರ ಇಂತಹ ದ್ವೇಷ ಭಾಷಣ, ಕೋಮು ದ್ವೇಷಗಳಿಗೆ ಕಡಿವಾಣ ಬೀಳುವುದಕ್ಕೆ ಸಾಧ್ಯವಿದೆ. ಸಮಾಜದಲ್ಲಿ ಯಾವ ವಾದಕ್ಕೂ ವಾಲದೇ, ಯಾವ ಸಿದ್ಧಾಂತಕ್ಕೂ ಒಳಗಾಗದೇ ಇರುವವರಾದರೂ ಇದರ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಬೇಕಿರುವ ಅನಿವಾರ್ಯತೆ ಇದೆ. ಇಂತಹ ಘಟನೆಗಳು ನಡೆದಾಗೆಲ್ಲಾ ಸಾಮರಸ್ಯ ಮೂಡಬೇಕು ಎಂದು ಹೇಳಿ ಗೋಸುಂಬೆತನ ಮೆರೆಯುವ ಸಮಾಜದ ಪ್ರಭಾವಿ ಸ್ಥಾನಮಾನಗಳಲ್ಲಿರುವವರೂ ಧೈರ್ಯ ತೋರಿ ವಿರೋಧಿಸಬೇಕಿದೆ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!