spot_img
Friday, January 30, 2026
spot_img

ಇಂದಿರಾ ದುರ್ಗಾವತಾರ ಮತ್ತು ಅಮೇರಿಕ ಮಧ್ಯಸ್ಥಿಕೆ

ಪರೋಕ್ಷ ವೈರಿಯ ಬಗ್ಗೆ ಎಚ್ಚರ ವಹಿಸುವುದು ಮುಖ್ಯ | ಇಂದಿರಾ ಮಾದರಿ ಯಾಕೆ ?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ತುರ್ತು ಪರಿಸ್ಥಿತಿ ಹೇರಿದಾಕೆ ಎಂಬ ಕಾರಣಕ್ಕೆ ವಿರೋಧಿಸಬಹುದು, ಕಾಂಗ್ರೆಸ್‌ ಪಕ್ಷದವರು ಎಂಬ ಕಾರಣಕ್ಕೆ ವಿರೋಧಿಸಿಬಹುದು, ನೆಪೋಟಿಸಂನಿಂದ ಪ್ರಧಾನಿಯಾದವರು ಎಂಬ ಕಾರಣಕ್ಕೆ ವಿರೋಧಿಸಬಹುದು, ಸಿದ್ಧಾಂತದ ಆಧಾರದ ಮೇಲೂ ವಿರೋಧಿಸಬಹುದು ಅಥವಾ ಇಂದಿರಾ ಅವರನ್ನು ವಿರೋಧಿಸುವುದಕ್ಕೆ ಇನ್ನೂ ಅನೇಕ ಕಾರಣಗಳಿರಬಹುದು. ಇಂದಿರಾ ಅವರನ್ನು ಹೊಗಳುವುದಕ್ಕೂ ಹಲವಾರು ಕಾರಣಗಳಿವೆ. ಮತ್ತವನ್ನು ಬಹುಶಃ ಭಾರತ ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ.

ಪೆಹಲ್ಗಾಮ್‌ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ʼಆಪರೇಷನ್‌ ಸಿಂದೂರ್‌ʼ ಕಾರ್ಯಾಚರಣೆಯನ್ನು ಯಶ್ವಸ್ವಿಯಾಗಿಯೇ ಪೂರೈಸಿದೆ. ಸೇನೆ ತೆಗೆದುಕೊಂಡ ನಿರ್ಧಾರವನ್ನು ಭಾರತೀಯರೆಲ್ಲರೂ ಮೆಚ್ಚಿದ್ದಾರೆ. ಸೇನೆಗೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಕೈಗೊಂಡ ದಿಟ್ಟ ನಡೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ದೇಶದ ಮಧ್ಯಸ್ಥಿಕೆಯೂ ಅಗತ್ಯವಿಲ್ಲ ಎಂದು ಅಂದು ಇಂದಿರಾ ಅಮೇರಿಕಾಕ್ಕೆ ನೇರವಾಗಿ ಕಡ್ಡಿ ಮುರಿದಂತೆ ಹೇಳಿದ ವೀಡಿಯೋಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಹರಿದಾಡುತ್ತಿವೆ. ಇವೆಲ್ಲದಕ್ಕೂ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಅಮೇರಿಕ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಣೆ ಆಗಿದೆ ಎಂದು ಹೇಳಿರುವುದೇ ಈಗ ದೊಡ್ಡ ಕಾರಣ. ಸಂಭವನೀಯ ಯುದ್ಧವನ್ನೇ ತಾನು ನಿಲ್ಲಿಸಿದ್ದು ಎಂದು ಟ್ರಂಪ್‌ ಹೇಳಿಕೊಳ್ಳುವುದಕ್ಕೆ ಬಿಡುವಷ್ಟು ಏನಿದೆ ಎನ್ನುವುದೇ ಈಗ ಇರುವ ಪ್ರಶ್ನೆ. ಈ ವಿವಾದಗಳೆಲ್ಲಾ ಕೇಳಿ ಬಂದ ಮೇಲೆ ಪ್ರಧಾನಿ ಮೋದಿ ಅಮೇರಿಕಾ ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ ಎಂದು ಹೇಳಿಕೆ ಕೊಡುವಂತಾಯಿತು.

ಇಂದಿರಾ ಮಾದರಿ ಯಾಕೆ !?

ಢಾಕಾದಲ್ಲಿ ‘ಆಪರೇಷನ್‌ ಸರ್ಚ್‌ಲೈಟ್‌’ ಹೆಸರಿನಲ್ಲಾದ ನರಮೇಧವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಿದೆ. 1970ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನ(ಈಗಿನ ಬಾಗ್ಲಾದೇಶ)ದಲ್ಲಿ ನೆಲೆಯಾಗಿದ್ದ ಶೇಕ್ ಮುಜೀಬರ್‌ ರಹಮಾನರ ಅವಾಮಿ ಲೀಗ್ ಸ್ಪಷ್ಟ ಬಹುಮತ ಪಡೆಯಿತು. ಪಾಕಿಸ್ತಾನ, ಅವಾಮಿ ಲೀಗ್ ಅಧಿಕಾರ ಸ್ವೀಕರಿಸುವುದನ್ನು ಹತ್ತಿಕ್ಕಲು ಢಾಕಾದಲ್ಲಿ ‘ಆಪರೇಷನ್‌ ಸರ್ಚ್‌ಲೈಟ್‌’ ನರಮೇಧ ನಡೆಸಿತ್ತು.

1971ರ ಮಾರ್ಚ್ 25ರಂದು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ಬಾಂಗ್ಲಾದೇಶವೆಂದು ಘೋಷಿಸಲಾಯಿತು. ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ನಡೆಸಿತು. ಅಷ್ಟರ ಮಟ್ಟಿಗೆ ಪಾಕಿಸ್ತಾನ ಕ್ರೂರತನ ಮೆರೆದಿತ್ತು. ಆ ಸಂದರ್ಭದಲ್ಲಿ ಸುಮಾರು 10 ಲಕ್ಷದಷ್ಟು ಬಂಗಾಳಿಗಳು ಜೀವ ಉಳಿಸಿಕೊಳ್ಳುವುದಕ್ಕಾಗಿ ಭಾರತಕ್ಕೆ ವಲಸೆ ಬಂದರು. ಲಕ್ಷಾಂತರ ನಿರಾಶ್ರಿತರಿಗೆ ಆಸರೆಯಾಗುವುದು ಭಾರತಕ್ಕೆ ಅನಿವಾರ್ಯವಾಗಿತ್ತು.

ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಬಾಂಗ್ಲಾ ಜನರು ಸಂಘಟಿತರಾದರು. ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಿತು. ಅಂದಿನ ಸ್ಥಿತಿ ಹಾಗೂ ಇಂದಿನ ಸ್ಥಿತಿ ಸಂಪೂರ್ಣ ಬೇರೆಯೇ ಆಗಿದ್ದರೂ ಕೂಡ ಅಂದು ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರ, ದಿಟ್ಟತನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇಂದಿರಾ ಗಾಂಧಿ ಬಾಂಗ್ಲಾ ವಿಮೋಚನಾ ಯುದ್ಧದ ತುರ್ತು ಸಂದರ್ಭವನ್ನು ಅತ್ಯಂತ ಚಾಣಾಕ್ಷತನ, ರಾಜತಾಂತ್ರಿಕ ನೈಪುಣ್ಯದಿಂದ ನಿರ್ವಹಿಸಿದರು.

ರಿಚರ್ಡ್ ನಿಕ್ಸನ್ ಅಮೇರಿಕಾದ ಅಧ್ಯಕ್ಷರಾಗಿದ್ದ ಆಡಳಿತಾವಧಿಯಲ್ಲಿ ಪಾಕಿಸ್ತಾನದ ಪರವಾಗಿ ಅಮೇರಿಕ ತನ್ನ ನಿಲುವನ್ನು ಹೊಂದಿತ್ತು. ಇಂದಿರಾ ನಿಕ್ಸನ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು. ʼಭಾರತದ ಆತ್ಮಗೌರವವನ್ನು ಕಾಪಾಡಿಕೊಳ್ಳುವುದಕ್ಕೆ ಭಾರತಕ್ಕೆ ಗೊತ್ತಿದೆʼ ಎಂದೇ ಇಂದಿರಾ ಅಮೇರಿಕಾಕ್ಕೆ ನೇರವಾಗಿ ಉತ್ತರಿಸಿದ್ದರು. ಪಾಕಿಸ್ತಾನಕ್ಕೆ ಸದಾ ಬೆಂಬಲಿಸುತ್ತಲೇ ಬಂದಿದ್ದ ಚೀನಾಕ್ಕೂ ಕೂಡ ಇಂದಿರಾ ಎಚ್ಚರಿಕೆ ನೀಡಿದ್ದರು.

ಡಿಸೆಂಬರ್ 3ರಂದು ಭಾರತದ ವಾಯುನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿತ್ತು. ಭಾರತೀಯ ಸೇನೆ ಕೂಡ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸಿಕೊಂಡಿತ್ತು. ಬಾಂಗ್ಲಾ ವಿಮೋಚನೆಗಾಗಿ ಭಾರತೀಯ ಸೇನೆ ಕಾರ್ಯಾಚರಣೆ ಮಾಡಿತ್ತು. ಡಿಸೆಂಬರ್ 16ರಂದು ಭಾರತೀಯ ಸೇನೆಗೆ ಪಾಕಿಸ್ತಾನ ಶರಣಾಯಿತು. 93,000 ಸೈನಿಕರೊಂದಿಗೆ ಭಾರತೀಯ ಸೇನೆಗೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಶರಣಾದರು. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಮುಂದೆ ನಿಯಾಜಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದರು.

1972ರಲ್ಲಿ ನಡೆದ ಶಿಮ್ಲಾ ಒಪ್ಪಂದದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡಿತು. ಐದು ತಿಂಗಳ ಬಳಿಕ ಭಾರತಕ್ಕೆ ಶರಣಾಗಿದ್ದ ಪಾಕಿಸ್ತಾನ ಸೇನೆಯ ಸಾವಿರಾರು ಯುದ್ಧಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಯುದ್ಧಕೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಇಂದಿರಾ ಅಪಾರ ಟೀಕೆಗಳನ್ನು ಕೇಳುವಂತಾಯಿತು. ಆದಾಗ್ಯೂ ಜಯ ಸಾಧಿಸಿದವರು ಎಂದಿಗೂ ಉದಾರಿಗಳಾಗಿರಬೇಕು ಎಂಬ ತತ್ವವನ್ನು ಜಗತ್ತಿಗೆ ಸಾರುವ ಪ್ರಯತ್ನವನ್ನು ಇಂದಿರಾ ಮಾಡಿದ್ದರು.

ಭಾರತೀಯ ಸೇನೆಯ ಮೂರೂ ಪಡೆಗಳು ಬಾಂಗ್ಲಾ ವಿಮೋಚನಾ ಯುದ್ಧವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಪಡೆಗಳು ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ, ಪಾಕಿಸ್ತಾನ ಭಾರತದ 11 ವಾಯನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇಂದಿರಾ ನೇತೃತ್ವದ ಸರ್ಕಾರ ಪಾಕಿಸ್ತಾನದ ಮೇಲೆ ಪ್ರತಿದಾಳಿಗೆ ಆದೇಶಿಸಿತು. ಭಾರತೀಯ ಸೇನೆ ಪಾಕಿಸ್ತಾನದ ಕರಾಚಿ ಬಂದರು, ಯುದ್ಧನೌಕೆಗಳನ್ನು ನಾಶ ಪಡಿಸಿತ್ತು. ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಸೇನಾ ಕಾರ್ಯಚರಣೆ ನಡೆಸುತ್ತಿದ್ದ ಪಾಕಿಸ್ತಾನದ ಸೇನೆಗೆ ಪೂರೈಸಲು ಸಂಗ್ರಹಿಸಿದ್ದ ಇಂಧನವಿದ್ದ ಟ್ಯಾಂಕ‌ರ್ ಹಡಗುಗಳು ನಾಶವಾದವು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸೇನೆಗೆ ಇಂದಿರಾ ಕೊಟ್ಟ ನಿರ್ದೇಶನ, ಪಾಕಿಸ್ತಾನದ ಪರವಾಗಿದ್ದು ಅಮೇರಿಕ ಮಧ್ಯಸ್ಥಿಕೆಗೆ ಬಂದಿದ್ದನ್ನು ತಿರಸ್ಕರಿಸಿದ ದಿಟ್ಟತನವೆಲ್ಲವೂ ಮಾದರಿ ಅಲ್ಲದೇ ಮತ್ತಿನ್ನೇನು ?

ಯುದ್ಧ ಅನಿವಾರ್ಯ ಆಯ್ಕೆಯೇ !?

ಯುದ್ಧಗಳು ಕೊನೆಗೊಳ್ಳುವುದಿಲ್ಲ. ಯುದ್ಧ ನಿಂತರೂ ಅದರ ಪ್ರತಿಕಾರ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವೇ ಇದಕ್ಕೆ ಉತ್ತಮ ಸಾಕ್ಷಿ. ದೇಶ ವಿಭಜನೆಗೊಂಡ ಬೆನ್ನಿಗೆ ಮತ್ತೆ ಯುದ್ಧ ಆರಂಭವಾಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ಕದನ ವಿರಾಮ ಘೋಷಿಸಲಾಯಿತು. ಆದರೇ, ಉದ್ದೇಶ ಈಡೇರಲಿಲ್ಲ. ಶಾಂತಿ ಸ್ಥಾಪನೆಯಾಗಲಿಲ್ಲ. ಅಂದು ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ಬುದ್ದಿ ಕಲಿಸುವುದಕ್ಕೆ ಇಂದಿರಾ ಗಾಂಧಿ ಅವರಿಗೆ ಯುದ್ಧ ಅನಿವಾರ್ಯ ಆಯ್ಕೆ. ಅದಕ್ಕೆ ವಾಜಪೇಯಿ ಇಂದಿರಾರನ್ನು ʼದುರ್ಗೆʼ ಎಂದು ಕರೆದರು.

ʼರಾಜತಾಂತ್ರಿಕ ಕ್ರಮʼಕ್ಕೂ ಬಗ್ಗದೆ ಇರುವಾಗ ಯುದ್ಧ ಅನಿವಾರ್ಯ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಅಮೇರಿಕಾ ಭಾರತವನ್ನು ಬೆಂಬಲಿಸಿದಂತೆ ಮಾಡುತ್ತದೆ. ಇದು ಅಸಲಿ ಬೆಂಬಲವಲ್ಲ. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿಯೂ ಅಮೇರಿಕ ಮಧ್ಯ ಪ್ರವೇಶಿಸಿತ್ತು. ಶಾಂತಿ ಸ್ಥಾಪನೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಅಮೇರಿಕಾ ಎಂದಿಗೂ ಪಾಕಿಸ್ತಾನವನ್ನು ಎಚ್ಚರಿಸುವುದಕ್ಕೆ ಹೋಗಿಲ್ಲ. ಪಾಕಿಸ್ತಾನವನ್ನು ಬೆಂಬಲಿಸುವ ಉದ್ದೇಶದಿಂದ ನೆರವು, ಸಾಲದ ರೂಪದಲ್ಲಿ ಕೋಟ್ಯಾಂತರ ರೂ. ನೀಡುತ್ತಲೇ ಬಂದಿದೆ. ಪಾಕ್‌, ಅಮೇರಿಕಾ ಈ ಬಾರಿಯೂ ತನ್ನ ಹಳೆಯ ಛಾಳಿಯನ್ನೇ ಮುಂದುವರಿಸಿವೆ. ಅಮೇರಿಕಾದಂತಹ ಪರೋಕ್ಷ ವೈರಿಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿರುವ ಸಂದರ್ಭದಲ್ಲಿ ಭಾರತ ಸರ್ಕಾರ ಅಮೇರಿಕಾದ ಮಧ್ಯಸ್ಥಿಕೆಗೆ ಒಪ್ಪಿರುವುದನ್ನು ಶತಮೂರ್ಖತನವೆಂದೇ ಹೇಳುವ ಅನಿವಾರ್ಯವಿದೆ.

ಇನ್ನು, ಇಂತಹ ಸಂದರ್ಭದಲ್ಲಿ ಇಂದಿರಾ ಗಾಂಧಿ ಹೆಸರು ಹೇಳಿ ಕಾಂಗ್ರೆಸ್ ರಾಜಕೀಯ ಮೈಲೇಜ್‌ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವುದು ಶುದ್ಧ ತಪ್ಪು. ಹಾಗಂತ ಮೋದಿ ಈ ಸಂದರ್ಭದಲ್ಲಿ ಇಂದಿರಾ ಗಾಂಧಿಯಂತೆ ದಿಟ್ಟತನ ತೋರಿಸಬೇಕಿತ್ತು ಎನ್ನುವುದನ್ನು ತಪ್ಪೆನ್ನುವುದಕ್ಕಾಗುವುದಿಲ್ಲ. ಬಿಜೆಪಿ ಇದನ್ನು ಒಪ್ಪಿಕೊಳ್ಳಬೇಕಿದೆ. ಸಂದರ್ಭಗಳು ಬೇರೆಯೇ ಆಗಿದ್ದರೂ ಇಂದಿರಾರಂತೆ ಮೋದಿಯೂ ದಿಟ್ಟತನ ತೋರಿಸಬೇಕಿತ್ತು. ತೋರಿಸಬಹುದು.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!