spot_img
Thursday, January 29, 2026
spot_img

ಸಾಯಿ ಸುದರ್ಶನ್  ಮ್ಯಾಚ್ ವಿನ್ನಿಂಗ್ ಬ್ಯಾಟರ್

-ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ

ತಮಿಳುನಾಡಿನ ಎಡಗೈ ಬ್ಯಾಟರ್  ಸಾಯಿ ಸುದರ್ಶನ್ ಈ ಬಾರಿಯ ಐಪಿಎಲ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಬ್ಯಾಟರುಗಳಲ್ಲಿ ಒಬ್ಬರು. ತನ್ನ ಆಕರ್ಷಕ ಬ್ಯಾಟಿಂಗ್ ಮೂಲಕ ಮನರಂಜಿಸುತ್ತಿರುವ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡದ ಬೆನ್ನೆಲುಬು ಆಟಗಾರ. ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಇವರು ಎದುರಾಳಿ ತಂಡಗಳ ಬೌಲರ್‌ಗಳನ್ನು ಬೆವರಿಳಿಸುವ ಪ್ರಚಂಡ ಬ್ಯಾಟರ್. ಇವರು ಈ ಬಾರಿಯ ಐಪಿಎಲ್‌ ಪಂದ್ಯದ ಪ್ರತಿಯೊಂದು ಪಂದ್ಯದಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇದೀಗ ಟ್ವೆಂಟಿ -20  ಕ್ರಿಕೆಟ್ ನಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ನಿಂದಲೇ ಐತಿಹಾಸಿಕ ದಾಖಲೆ ನಿರ್ಮಿಸಿ ಭಾರತದ ಪರ ಯಾರೂ ಮಾಡಿರದ ಸಾಧನೆಯನ್ನು ಮಾಡಿ ಸಾಯಿ ಸುದರ್ಶನ್ ಮಾಡಿರುವರು.

ಹೌದು, ಸಾಯಿ ಸುದರ್ಶನ್ ಈಗ ಚುಟುಕು ಕ್ರಿಕೆಟ್​​ನಲ್ಲಿ ವೇಗವಾಗಿ 2000 ರನ್ ಪೂರ್ಣಗೊಳಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡ ಚತುರ ಬ್ಯಾಟರ್. ಅವರು  2000 ರನ್ ಪೂರೈಸಲು ತೆಗೆದುಕೊಂಡಿದ್ದು ಕೇವಲ 54 ಇನ್ನಿಂಗ್ಸ್​ಗಳನ್ನು ಮಾತ್ರ. ಈ ಮೂಲಕ ಅವರು ಸಚಿನ್ ತೆಂಡುಲ್ಕರ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಇದರಿಂದ ಚುಟುಕು ಕ್ರಿಕೆಟ್ ನಲ್ಲಿ  ವೇಗವಾಗಿ 2000 ರನ್ ಪೂರೈಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಸುದರ್ಶನ್ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಶಾನ್ ಮಾರ್ಷ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.ಶಾನ್ ಮಾರ್ಷ್​​ 53 ಟ್ವೆಂಟಿ -20 ಇನ್ನಿಂಗ್ಸ್​​ಗಳಲ್ಲಿ ಎರಡು ಸಾವಿರ ರನ್​ಗಳ ಗಡಿ ದಾಟಿದ ಸಾಧನೆ ಮಾಡಿರುವರು.

ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡುಲ್ಕರ್ 58 ಇನ್ನಿಂಗ್ಸ್​​ಗಳಲ್ಲಿ ವೇಗದ ಎರಡು ಸಾವಿರ ರನ್‌ಗಳ ಮೈಲಿಗಲ್ಲು ತಲುಪಿದ್ದರು. ಆದರೆ, ಸಾಯಿ ಸುದರ್ಶನ್ ಈಗ ಅಮೋಘ ಆಟದೊಂದಿಗೆ ಸಚಿನ್ ದಾಖಲೆ ಮುರಿದು ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಸಾಯಿ ಸುದರ್ಶನ್ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ -2025ರಲ್ಲಿ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದು ತಮ್ಮ ಪ್ರಬುದ್ಧತೆಯ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಅವರು 29 ಪ್ರಥಮ ದರ್ಜೆ ಪಂದ್ಯಗಳಿಂದ 39.93 ಸರಾಸರಿಯಲ್ಲಿ 1,957 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ದಿಲ್ಲಿ ವಿರುದ್ದ ರಣಜಿ ಪಂದ್ಯದಲ್ಲಿ ದ್ವಿಶತಕವನ್ನು ಬಾರಿಸಿದ್ದು ಅಲ್ಲದೆ, ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಅನುಭವನ್ನು ಸಾಯಿ ಸುದರ್ಶನ್‌ ಹೊಂದಿದ್ದಾರೆ. 2023, 2024ರಲ್ಲಿ ಅವರು ಸರ್ರೆ ತಂಡದ ಒಂದು ಶತಕ ಹಾಗೂ ಒಂದು ಅರ್ಧಶತಕದ ಮೂಲಕ 281 ರನ್‌ಗಳನ್ನು ಕಲೆ ಹಾಕಿದ್ದರು.

ಈ ಸಾಧನೆಯ ಜೊತೆಗೆ, ಸಾಯಿ ಸುದರ್ಶನ್ ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಒಂದು ಬಾರಿಯೂ ಶೂನ್ಯಕ್ಕೆ ಔಟ್ ಆಗದೆ 2000 ರನ್‌ಗಳನ್ನು ಗಳಿಸಿದ ವಿಶ್ವದ ಆಟಗಾರನೆಂಬ ಹೆಗ್ಗಳಿಕೆಗೂ ಭಾಜನರಾಗಿರುವರು. 54 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ ಆರು ಬಾರಿ ಒಂದಂಕಿಯ ಸ್ಕೋರ್‌ಗೆ ಔಟಾಗಿದ್ದಾರೆ, ಇದು ಅವರ ಸ್ಥಿರತೆಯ ಆಟವನ್ನು ತೋರಿಸುತ್ತದೆ. ಐಪಿಎಲ್‌ನಲ್ಲಿ ಶೂನ್ಯಕ್ಕೆ ಔಟಾಗದೇ  ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಸಾಯಿಸುದರ್ಶನ್ ಗೆ  ಮೊದಲ ಸ್ಥಾನ. ಸುದರ್ಶನ್ 2021ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಟ್ವೆಂಟಿ -20 ಚೊಚ್ಚಲ ಪಂದ್ಯವನ್ನಾಡಿದ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನಾಡಿದರು. 2022ರ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅವರನ್ನು 20 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತ್ತು.

ಆರೆಂಜ್ ಕ್ಯಾಪ್ : ಸಾಯಿ ಸುದರ್ಶನ್ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಕಾರಣ , ಟೂರ್ನಿಯಲ್ಲಿ ಹೆಚ್ಚು ಬಾರಿ ಆರೆಂಜ್ ಕ್ಯಾಪನ್ನು ಧರಿಸುವ ಅವಕಾಶ ಸಿಕ್ಕಿತ್ತು. ಅವರು ಮೇ-2ರಂದು  ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 23 ಎಸೆತಗಳಿಂದ 48 ರನ್‌ ಗಳಿಸಿದಾಗ 500ರ ಗಡಿ ದಾಟಿದರು.ಸಾಯಿ ಸುದರ್ಶನ್‌ 10 ಪಂದ್ಯಗಳಿಂದ 50.44ರ  ಸರಾಸರಿಯಲ್ಲಿ  5 ಅರ್ಧಶತಕಗಳ ಮೂಲಕ  509 ರನ್ ಗಳಿಸಿದ್ದು ಮಾತ್ರವಲ್ಲ ಆರೆಂಜ್ ಕ್ಯಾಪ್ ನ್ನು ತಮ್ಮದಾಗಿಸಿ ಕೊಂಡಿದ್ದರು. ಆದರೆ, ಇದೀಗ 510ರನ್ ಗಳಿಸಿದ  ಮುಂಬೈ ಇಂಡಿಯನ್ಸ್  ಬ್ಯಾಟರ್  ಸೂರ್ಯಕುಮಾರ್ ಅವರಿಗೆ ಆರೆಂಜ್ ಕ್ಯಾಪ್  ಬಿಟ್ಟುಕೊಟ್ಟರು.

ಸಾಯಿ ಸುದರ್ಶನ್ ಕ್ರಿಕೆಟ್‌ ಪಯಣ : ಸಾಯಿ ಸುದರ್ಶನ್‌ ಚೆನ್ನೈ ಮೂಲದವರು. 2001ರ ಅಕ್ಟೋಬರ್ 15ರಂದು ಚೆನ್ನೈನಲ್ಲಿ ಜನಿಸಿದ ಸಾಯಿ ಸುದರ್ಶನ್ ತಮಿಳುನಾಡಿನ ವಿವಿಧ ವಯೋಮಾನದ  ಗುಂಪಿನ ಟೂರ್ನಮೆಂಟ್‌ಗಳಲ್ಲಿ ಆಡುವ ಮೂಲಕ ತಮ್ಮ ಕ್ರಿಕೆಟ್ ಪಯಣವನ್ನು ಆರಂಭಿಸಿದರು. 2021ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಟಿ20 ಚೊಚ್ಚಲ ಪಂದ್ಯವನ್ನಾಡಿದ ಅವರು, ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನಾಡಿದರು. 2022ರ ಐಪಿಎಲ್ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಅವರನ್ನು 20 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತು. ಈ ಪಂದ್ಯಾಟದಲ್ಲಿ ಅವರು ಆಡಿದ 5 ಪಂದ್ಯಗಳಲ್ಲಿ  ಗಳಿಸಿದ್ದು ಮಾತ್ರ 145ರನ್ . ಇನ್ನೂ 2023ರ ಐಪಿಎಲ್‌ನಲ್ಲೂ ಆಡಿದ 8 ಪಂದ್ಯಗಳಿಂದ 362 ರನ್ ಮಾತ್ರ ಗಳಿಸಿದರು. ಆದರೆ, ಈ ಪಂದ್ಯಾಟದ  ಫೈನಲ್‌ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 47 ಎಸೆತಗಳಲ್ಲಿ ಬಾರಿಸಿದ 96 ರನ್‌ಗಳ ಭರ್ಜರಿ ಆಟವನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಈ ಮೂಲಕ ತಮ್ಮ ಅಗಾಧ ಸಾಮರ್ಥ್ಯವನ್ನು ಅವರು  ಪ್ರದರ್ಶಿಸಿದರು. ಅವರ 2024ರ  ಐಪಿಎಲ್  ಅಭಿಯಾನವು ಸೂಪರ್ ಆಗಿತ್ತು. ಆಡಿದ  12 ಪಂದ್ಯಗಳಿಂದ 1 ಶತಕ , 2 ಅರ್ಧಶತಕದ ನೆರವಿನಿಂದ  527 ಬಾರಿಸಿದ್ದರು. ಇದೀಗ ನಡೆಯುತ್ತಿರುವ 2025ರ ಐಪಿಎಲ್‌ನಲ್ಲೂ  ಸ್ಥಿರ ಮತ್ತು ಆಕರ್ಷಕ ಶೈಲಿಯ ಬ್ಯಾಟಿಂಗ್‌ನಿಂದ ಗುಜರಾತ್ ಟೈಟಾನ್ಸ್ ತಂಡದ ಮ್ಯಾಚ್ ವಿನ್ನಿಂಗ್ ಬ್ಯಾಟರ್ ಆಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!