spot_img
Friday, January 30, 2026
spot_img

ಈ ಸಮಾಜದಲ್ಲಿರುವ ಪಾತಕಿತನ ನಿರ್ಮೂಲನೆಯಾಗಲಿ !

ಧಾರ್ಮಿಕ ಸಂಘರ್ಷ ಸಮಾಜಕ್ಕೆ ಒಳಿತಲ್ಲ | ಸಾಮರಸ್ಯ ವೃದ್ಧಿಯಾಗಲಿ. 

ಕರಾವಳಿಯಲ್ಲಿ ಕೋಮು ಗಲಭೆ ಸ್ಫೋಟಗೊಳಿಸುವ ಎಲ್ಲಾ ರೀತಿಯ ವ್ಯವಸ್ಥೆಗಳು ಇವೆ. ಕೋಮು ಗಲಭೆಗಳಲ್ಲಿ ಹಲವರು ಬಲಿಯಾಗಿದ್ದಾರೆ. ಬಹಳಷ್ಟು ಮಂದಿ ನೊಂದಿದ್ದಾರೆ. ಸತ್ತವರ ಮನೆ, ಕುಟುಂಬ ಚಿಂತೆಯಲ್ಲಿ ಮುಳುಗಿ ಹೋಗಿವೆ. ಇದೇ ವಿಷಯಗಳಿಗೆ ಹಪಹಪಿಸುವ ಚೀಪ್‌ ಪಾಲಿಟಿಕ್ಸ್‌ ಇಲ್ಲಿ ವ್ಯಾಪಕವಾಗಿ ಬೆಳೆದು ನಿಂತಿವೆ. ಸಂಘರ್ಷವನ್ನು ತಡೆಯುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಬದಲು ಸಂಘರ್ಷದಲ್ಲಿ ಭಾಗಿಯಾಗುವವರನ್ನು ಓಲೈಸಲು ರಾಜಕೀಯ ವ್ಯವಸ್ಥೆ ಏನು ಬೇಕಾದರೂ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ರಾಜಕೀಯ ಪಕ್ಷಗಳು ಮತ್ತು ಸರ್ಕಾರದ ಉದ್ದೇಶ ಸಾಮಾಜಿಕ ಸ್ವಾಸ್ಥ್ಯ ಉಳಿಸುವುದೇ ಆಗಿದ್ದರೇ ಈ ಎಲ್ಲಾ ಸಂಘರ್ಷಗಳನ್ನು ಪೋಷಿಸುವ ಧೋರಣೆ ಇರುತ್ತಿರಲಿಲ್ಲ.

ಸೈದ್ಧಾಂತಿಕ ಸಂಘರ್ಷಕ್ಕೆ ಬೇಕಾಗಿ ಗೂಂಡಾಗಳನ್ನು ಖರೀದಿಸುವ ಮತ್ತು ಅವರನ್ನು ಬೆಳೆಸುವ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಇಂತಹ ಗೂಂಡಾಗಳಲ್ಲಿ ಹೆಚ್ಚಿನವರು ಯುವಕರೇ ಇದ್ದಾರೆ ಎನ್ನುವುದು ಅತ್ಯಂತ ದುರಂತದ ಸಂಗತಿ. ಸೈದ್ಧಾಂತಿಕ ಸಂಘರ್ಷಗಳನ್ನು ಮಾಡುವುದಕ್ಕೆ, ಹತ್ಯೆ, ಗಲಾಟೆ, ದೊಂಬಿಯಂತಹ ಹೀನ ಕೃತ್ಯಗಳನ್ನು ಮಾಡುವುದಕ್ಕೆ ಗೂಂಡಾಗಳನ್ನು ಮುಂದೆ ಬಿಟ್ಟು ರಾಜಕೀಯ ಮಾಡುವ ವ್ಯವಸ್ಥೆಯಿಂದಲೇ ಸಮಾಜ ಇಂದು ನೆಮ್ಮದಿ ಕಳೆದುಕೊಂಡಿದೆ. ಎರಡೂ ಕಡೆಯ ಸೈದ್ಧಾಂತಿಕವಾದಿಗಳು ಸಮಾಜದಲ್ಲಿ ಹಿಂಸೆ ಹೆಚ್ಚಾಗುವಂತೆ ಬಳಸಿಕೊಳ್ಳುತ್ತಾರೆ.

ಹಿಂದೂಗಳನ್ನು ಮುಸ್ಲೀಮರು ಶತ್ರುಗಳೆಂದು, ಮುಸ್ಲೀಮರನ್ನು ಹಿಂದೂಗಳು ಶತ್ರುಗಳೆಂದು ಕಾಣುವ ಮತ್ತು ಮನಸ್ಸು, ತಲೆ ತುಂಬಾ ದ್ವೇಷ ತುಂಬುವ ವ್ಯವಸ್ಥಿತ ಶಕ್ತಿಯೇ ಎರಡು ಸಿದ್ಧಾಂತಗಳ ಹಿಂದೆ ಇವೆ. ಅಸಂತೃಪ್ತ ಯುವಕರನ್ನು ಸಂಕುಚಿತಗೊಳಿಸಿ ದ್ವೇಷಪೂರಿತ ರಾಜಕೀಯಕ್ಕೆ ಬಳಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕಳೆದುಹೋಗುವಂತೆ ಮಾಡುವ ರಾಜಕೀಯ ಪ್ರೇರಿತ ಸಂಘಟನೆಗಳು ನಮ್ಮ ನಡುವೆ ಹಲವಾರು ಇವೆ. ಸೇಡಿನ ಉದ್ದೇಶಗಳಿಗೆ ಯುವಕರನ್ನು ಸಂಘಟಿಸುವ ಈ ರೀತಿಯ ಸಂಘಟನೆಗಳು ನಮ್ಮ ಸಮಾಜಕ್ಕೆ ಅತ್ಯಂತ ಮಾರಕ.

ಸದ್ದಿಲ್ಲದೆ ಆರಂಭ ಪಡೆದು ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಸಂಘರ್ಷಗಳು ಧಾರ್ಮಿಕ ಸ್ಪರ್ಶ ಪಡೆದುಕೊಂಡು ಯಾರ ಊಹೆಗೂ ನಿಲುಕದ ವೇಗದಲ್ಲಿ ಎರಡು ಧರ್ಮಗಳ ಜನರ ನಡುವೆ ಸಂಘರ್ಷವಾಗಿ, ದ್ವೇಷವಾಗಿ ಬದಲಾಗಿ ಇಡೀ ಸಮಾಜದ ಬದುಕನ್ನೇ ದುಸ್ತರಗೊಳಿಸುತ್ತದೆ ಎಂದರೇ, ಇದರ ಹಿಂದೆ ಯಾವುದೋ ರಾಜಕೀಯ ಲಾಭಕ್ಕಾಗಿ ಕಾಯುವ ಮನಸ್ಥಿತಿ ಎಷ್ಟು ಗಟ್ಟಿಯಾಗಿ ಈ ನೆಲದಲ್ಲಿ ಬೇರೂರಿದೆ ಎನ್ನುವುದನ್ನು ಬಹುಶಃ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಹಿಂದೂ ಮತ್ತು ಮುಸ್ಲೀಮರ ಸಾಮರಸ್ಯವನ್ನು ದೂರ ಮಾಡುವ ಹುನ್ನಾರ ಉಭಯ ಸೈದ್ಧಾಂತಿಕವಾದಿಗಳು ಅನವರತ ಮಾಡುತ್ತಿದ್ದಾರೆ. ಗಲಭೆ, ಚೂರಿ, ತಲ್ವಾರು, ಕಲ್ಲು ತೂರಾಟಗಳು ನಡೆದಿರುವುದಕ್ಕೆ ಇಲ್ಲಿ ಲೆಕ್ಕವೇ ಇಲ್ಲ. ಒಂದು ಧರ್ಮದ ಸಾಮಾನ್ಯನೊಬ್ಬ ಇನ್ನೊಂದು ಧರ್ಮದ ಸಾಮಾನ್ಯನ ಮುಖ ನೋಡಿದರೇ ವಿಷ ಕಾರುವಂತೆ ಸೈದ್ಧಾಂತಿಕವಾದಿಗಳು, ಮೂಲಭೂತವಾದಿಗಳು ವ್ಯವಸ್ಥಿತವಾಗಿ ದ್ವೇಷ ಬಿತ್ತಿದ್ದಾರೆ. ಈ ಅಹಿತಕರ ಸಂಗತಿಗಳ ಬಗ್ಗೆ ಯಾರೂ ಧ್ವನಿ ಎತ್ತದೆ ಮೌನವಾಗಿದ್ದು, ಸಮೂಹಸನ್ನಿಗೆ ಒಳಗಾಗುತ್ತಿರುವುದು ಕೂಡ ದುರದೃಷ್ಟಕರ ಸಂಗತಿ.

ಕೊಲೆ ಮಾಡುವ ಮನಸ್ಥಿತಿಯನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಅದು ಒಬ್ಬ ಹಿಂದೂವೇ ಆಗಲಿ, ಮುಸಲ್ಮಾನನೇ ಆಗಲಿ ಕೊಲೆ ಮಾಡುವ ದ್ವೇಷವನ್ನು ತನ್ನೊಳಗೆ ತುಂಬಿಕೊಳ್ಳುತ್ತಾನೆ ಎನ್ನುವುದಾದರೇ ಆತನನ್ನು ಯಾರೂ ಒಪ್ಪುವುದಿಲ್ಲ. ಬಹುಶಃ ಅಂತಹ ವ್ಯಕ್ತಿಯನ್ನು ಒಪ್ಪುವ, ಪ್ರಚೋದಿಸುವ ವ್ಯವಸ್ಥೆ ಬೇರೆಯೇ ಇದೆ. ಹಿಂಸೆಯನ್ನು ಪ್ರಚೋದಿಸುವ ಮನೋಧೋರಣೆ ಈ ಸಮಸಮಾಜ ನಿರ್ಮಾಣದ ಕನಸಿಗೆ ಅತ್ಯಂತ ಮಾರಕ. ಇತ್ತೀಚೆಗೆ ರೌಡಿಶೀಟರ್ ಎಂಬ ಕಾರಣಕ್ಕೆ ಸುಹಾಸ್ ಶೆಟ್ಟಿಯ ಕೊಲೆಯನ್ನು ಮತ್ತು ಇದಕ್ಕೂ ಕೆಲವೇ ದಿನಗಳ ಹಿಂದೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿರುವ ಅಶ್ರಫ್‌ ನ ಗುಂಪು ಹತ್ಯೆಯನ್ನು ಸಂಭ್ರಮಿಸುವ ಮನಸ್ಥಿತಿಯೂ ಕಂಡುಬಂತು. ಕೊಲೆ ಯಾರದ್ದೇ ಆಗಲಿ, ಅದು ಕೊಲೆ ಅಷ್ಟೆ. ಅಂತದ್ದನ್ನು ಸಂಭ್ರಮಿಸುವ ಮನಸ್ಥಿತಿ ಕೂಡ ಅಪಾಯಕಾರಿ.

ಕರಾವಳಿಯಲ್ಲಿ ಮತೀಯ ರಾಜಕಾರಣ ಎಲ್ಲೆ ಮೀರುತ್ತಿದೆ. ಕೊಲೆಯಲ್ಲಿ ಭಾಗಿಯಾದವರನ್ನು ಹಿಡಿದು ಶಿಕ್ಷಿಸುವ ಕಾನೂನು, ವಿಚಾರಣೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾವಿನ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಸರತ್ತಿನಲ್ಲಿ ಕೆಲವರು ಎಂದಿನಂತೆ ನಿರತರಾಗಿರುವುದು ವಿಷಾದನೀಯ.

ಒಂದು ಕೊಲೆಗೆ, ಮತ್ತೊಂದು ಕೊಲೆ ಮಾಡಿಯೇ ತೀರಬೇಕು ಎಂಬ ಮನಸ್ಥಿತಿಯನ್ನು ಬಲವಂತಾಗಿ ಹೇರಲಾಗಿದೆ. ವ್ಯವಸ್ಥಿತವಾಗಿ ಈ ಸಮಾಜದ ಭವಿಷ್ಯದ ಹಾದಿಯನ್ನು ತಪ್ಪು ದಾರಿಗೆ ಕೊಂಡೊಯ್ಯಲಾಗುತ್ತಿದೆ. ಇಂತಹದ್ದನ್ನು ನಿಗ್ರಹಿಸುವ ಕೆಲಸದಲ್ಲಿ ಸರ್ಕಾರವಿರಲಿ, ಪೊಲೀಸ್‌ ಇಲಾಖೆಯಿರಲಿ ಮನಸ್ಸು ಮಾಡುತ್ತಿಲ್ಲ. ಧರ್ಮ ರಾಜಕಾರಣ ದ್ವೇಷವನ್ನು ಅಮಾಯಕರ ಮನಸ್ಸಿನೊಳಗೆ ತುಂಬಿದೆ. ಕೆಲವು ಮಾಧ್ಯಮಗಳು ಇಂತಹ ಸೂಕ್ಷ್ಮ ವಿಚಾರಗಳನ್ನು ಇನ್ನಷ್ಟು ಪ್ರಚೋದಿಸುವಂತೆ ಮಾಡುತ್ತಿರುವುದು ಕೂಡ ವಿಷಾದನೀಯ.

ರಾಜಕೀಯ ನಾಯಕರು ಈ ಎರಡು ಕೊಲೆ ಪ್ರಕರಣಗಳಲ್ಲಿ ತರಹೇವಾರಿ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬ ರೌಡಿಶೀಟರ್‌ ನನ್ನು ಧರ್ಮ ರಕ್ಷಕ ಎಂದು ಬಿಂಬಿಸುವ ಮನಸ್ಥಿತಿ ಈ ಸಮಾಜಕ್ಕೆ ಯಾವ ಸಂದೇಶ ನೀಡಿದಂತಾಯಿತು ಎನ್ನುವುದನ್ನು ಪ್ರಜ್ಞಾವಂತ ನಾಗರಿಕರು ಅರ್ಥೈಸಿಕೊಳ್ಳಬೇಕಿದೆ. ದೇಶದ ನೆಲದಲ್ಲಿ ನಿಂತು ಒಬ್ಬ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುತ್ತಾನೆ ಎಂದರೇ ಆತನದ್ದು ಭಾರತದ ವಿರುದ್ಧ ಎಂತಹ ದ್ವೇಷದ ಮನಸ್ಥಿತಿ ಇರಬಹುದು ? ನಡು ರಸ್ತೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗುವಷ್ಟರ ಮಟ್ಟಿಗೆ ವೈಷಮ್ಯವನ್ನು ಕಟ್ಟಿಕೊಂಡಿದ್ದನೆಂದರೇ ಆತನ ಹಿನ್ನೆಲೆ ಏನಿರಬಹುದು ಎನ್ನುವುದನ್ನು ಸಮಾಜ ಕೂಲಂಕುಶವಾಗಿ ಅರ್ಥೈಸಿಕೊಳ್ಳಬೇಕಿದೆ.

ರೌಡಿಯಾಗಿ ಗುರುತಿಸಿಕೊಂಡ ಸುಹಾಸ್, ಹೆತ್ತವರಿಗೆ ಮಗನಷ್ಟೇ. ಆತ ಸಮಾಜಕ್ಕೆ ಹಿತಕಾಯುವವನಾಗಿ ಗುರುತಿಸಿಕೊಂಡಿಲ್ಲ ಅಲ್ಲವೇ ? ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿ ಗುಂಪು ಹಲ್ಲೆಗೆ ಬಲಿಯಾದ ಕೇರಳ ಮೂಲದ ಅಶ್ರಫ್‌ ಕೂಡ ಅವನ ಹೆತ್ತವರಿಗೆ ಮಗ ಇರಬಹುದು. ಆತ, ಈ ದೇಶದ ಮೇಲೆ ಗೌರವವಿಟ್ಟುಕೊಂಡು ದೇಶಭಕ್ತಿ ಮೆರೆದಿಲ್ಲ ಅಲ್ಲವೇ ? ಸಮಾಜ ಅರ್ಥೈಸಿಕೊಳ್ಳಬೇಕಿದೆ. ಇಂತಹ ಘಟನೆಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವವರೂ ಕೂಡ ಇನ್ನಾದರೂ ಸಮಾಜದ ಸ್ವಾಸ್ಥ್ಯ ಉಳಿಸುವಂತಹ ಕೆಲಸ ಮಾಡಬೇಕಿದೆ. ಮನುಷ್ಯತ್ವವುಳ್ಳವರು ಇಂತಹ ಕೊಲೆಗಳನ್ನು, ಧಾರ್ಮಿಕ ಸಂಘರ್ಷಗಳನ್ನು, ಹತ್ಯೆಗಳನ್ನು ಸಂಭ್ರಮಿಸುವುದಿಲ್ಲ. ಈ ದೇಶದಲ್ಲಿ, ಈ ಮಣ್ಣಿನಲ್ಲಿ ಸುಹಾಸ್‌ ಗೂ ಬದುಕುವ ಹಕ್ಕಿತ್ತು, ಅಶ್ರಫ್‌ ಗೂ ಬದುಕುವ ಹಕ್ಕಿತ್ತು. ಅಥವಾ ಈ ಹಿಂದೆ ಇಂತಹುದೇ ಕೋಮು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಬದುಕುವ ಹಕ್ಕಿತ್ತು. ಅದನ್ನು ಸಮಾಜ ಅಗತ್ಯವಾಗಿ ಅರ್ಥೈಸಿಕೊಳ್ಳಬೇಕಿದೆ. ದ್ವೇಷ, ಕೊಲೆ, ಪ್ರತಿಕಾರಗಳ ಹಿಂದೆ ಬಿದ್ದ ಮನುಷ್ಯ ಅವನ್ನೇ ತನ್ನ ಬೆನ್ನಿಗೆ ಅಂಟಿಸಿಕೊಂಡೇ ಬದುಕಬೇಕಾಗುತ್ತದೆ ಎನ್ನುವುದಂತೂ ಸತ್ಯ.

ಇನ್ನು, ಪರಸ್ಪರ ಪ್ರೀತಿಸಿ ಎಂದೇ ಎಲ್ಲಾ ಜಗತ್ತಿನ ತತ್ವಜ್ಞಾನಿಗಳು ಹೇಳಿದ್ದಾರೆ. ಎಲ್ಲಾ ಧರ್ಮಗಳು ಪರಧರ್ಮ ಸಹಿಷ್ಣುತೆಯನ್ನು ಬೋಧನೆ ಮಾಡಿವೆ. ಸೈದ್ಧಾಂತಿಕವಾದಿಗಳು, ಮೂಲಭೂತವಾದಿಗಳು ಮಾತ್ರ ಇಲ್ಲಿ ಪ್ರತ್ಯೇಕವಾದವನ್ನು ನಿರಂತರ ಮಂಡಿಸುತ್ತಲೇ ಬಂದಿದ್ದಾರೆ. ಪ್ರತ್ಯೇಕತೆ ಅಖಂಡತೆಯನ್ನು ಮೀರುವಷ್ಟು ದೊಡ್ಡದಲ್ಲ. ಬೇರ್ಪಡಿಸಿದ ಯಾವುದೂ ಕೂಡ ಶಾಶ್ವತವಾಗಿ ಸುಖವನ್ನು ಕಂಡ ಉದಾಹರಣೆಯೇ ಇಲ್ಲ.

ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳು ನಿಲ್ಲಬೇಕು. ಪಾತಕಿತನವನ್ನು ರೂಢಿಸಿಕೊಂಡ ಮನಸ್ಥಿತಿಗಳ ನಿರ್ಮೂಲನೆಯಾಗಬೇಕು. ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದ ಅವರು ಹೇಳುವ ಹಾಗೆ, ʼಯಾವುದೇ ಧರ್ಮ ಎಲ್ಲೆಡೆಗಳಲ್ಲಿ ಮಾನ್ಯತೆ ಪಡೆಯುವುದು ಆ ಧರ್ಮದಲ್ಲಿರುವ ಸಮಾನತೆ, ಮಾನವೀಯತೆ ಅಂಶಗಳ ಆಧಾರದಲ್ಲಿʼ ಎಂಬ ಮಾತು ಈಗ ತುರ್ತಿದೆ ಅನ್ನಿಸುತ್ತಿದೆ. ಸಮಾಜ ಪ್ರಜ್ಞಾಪೂರ್ವಕವಾಗಿ ಯೋಚಿಸಲಿ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!