spot_img
Friday, January 30, 2026
spot_img

ಧಾರ್ಮಿಕ ಸಂಘರ್ಷಗಳಲ್ಲಿ ಭಾರತ ಬಳಲದಿರಲಿ !

ಕೋಮು ಮನಸ್ಥಿತಿಯ ದಾಳಿ ಖಂಡನೀಯ | ಸರ್ಕಾರ ತನ್ನ ಲೋಪಗಳಿಗೆ ಉತ್ತರ ಕಂಡುಕೊಳ್ಳಲಿ.  

ದೇಶದ ಮೇಲೆ ಆಗಿರುವ ಭಯೋತ್ಪಾದಕ ದಾಳಿಯನ್ನು ಬಹುಶಃ ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಭಯೋತ್ಪಾದಕ ಮೂಲವನ್ನು ನಿರ್ಮೂಲನೆ ಮಾಡಬೇಕೆನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ದೇಶದ ಮೇಲೆ ಪದೆ ಪದೆ ಆಗುತ್ತಿರುವ ಪಾಕಿಸ್ತಾನಿ ಉಗ್ರರ ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವೇ ಮೂಲ ಕಾರಣ. ಬಿಜೆಪಿ, ಕಾಂಗ್ರೆಸ್ ಎನ್ನದೆ ಯಾವ ಸರ್ಕಾರ ಬಂದರೂ ಭಯೋತ್ಪಾದಕ ದಾಳಿಯನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗಿಲ್ಲ. ನಿರಂತರವಾಗಿ ಭಾರತ ದಾಳಿಯ ನೋವನ್ನುಣ್ಣುತ್ತಲೇ ಬಂದಿದೆ. ಯಾವುದೇ ಸರ್ಕಾರವಾಗಲಿ ಈ ಆಂತರಿಕ ವೈಫಲ್ಯದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು.

ಇಂತಹ ದಾಳಿ ಆದಾಗೆಲ್ಲಾ ಸಂಘಟಿತ ಬಲ ಬೇಕು. ಆದರೇ, ಅದು ಸಂಘರ್ಷಕ್ಕೆ ಎಡೆಮಾಡಿಕೊಡುವಂತಿರಬಾರದು. ದಾಳಿಗೆ ಪ್ರತಿಕಾರ ತೀರಿಸುವ ದಾರಿ ಬೇರೆಯೇ ಇದೆ. ಅದಕ್ಕೆ ಸೇನೆ, ಸರ್ಕಾರ, ರಾಜತಾಂತ್ರಿಕ ವ್ಯವಸ್ಥೆಗಳಿವೆ. ಇಂತಹ ದಾಳಿ ಆದಾಗ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುವುದು ಸಹಜ. ಆಕ್ರೋಶ ವ್ಯಕ್ತವಾಗುವುದು ಕೂಡ ಒಳ್ಳೆಯ ಬೆಳವಣಿಗೆ. ಆದರೇ, ಇಂತಹ ಸಂದರ್ಭಗಳನ್ನು ಲಾಭವುಣ್ಣುವ ದೃಷ್ಟಿಯಿಂದ ರಾಜಕೀಯವಾಗಿ ಬಳಸಿಕೊಳ್ಳುವುದು ಇತ್ತೀಚೆಗೆ ತೀರಾ ಸಾಮಾನ್ಯವೆಂಬಂತಾಗಿದೆ. ಇದು ಅತ್ಯಂತ ದುರದೃಷ್ಟಕರ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಇದ್ದರೂ ಉಗ್ರರನ್ನು ಪತ್ತೆಹಚ್ಚಿ ಸದೆಬಡಿಯುತ್ತೇವೆ, ಉಗ್ರರನ್ನು ಬೆಂಬಲಿಸುವವರನ್ನೂ ಮಟ್ಟ ಹಾಕುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಸೇನೆಗೆ ಪೂರ್ಣ ಅಧಿಕಾರ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಹೇಳಿವೆ. ಹೀಗಿರುವಾಗ ಈ ದಾಳಿಯ ಹಿನ್ನೆಲೆಯಲ್ಲಿ ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆಯಾಗುವಂತಹ ಚಟುವಟಿಕೆಗಳು ಚುರುಕು ಕಂಡಿರುವುದು ಆಘಾತಕಾರಿಯಾಗಿದೆ. ಯಾವುದೇ ಕಾಲವಾಗಲಿ, ಸಮಾಜ ತಾನಾಗಿಯೇ ಧರ್ಮಾಂಧವಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲಾಂತರದ ಬದಾಲಾವಣೆಯ ಜೊತೆಜೊತೆಗೆ ನಾವು ಅನುಸರಿಸಿಕೊಂಡು ಬಂದ ಸಾಂಸ್ಕೃತಿಕ ಜಗತ್ತು ಅಂದಿನಿಂದ ಇಂದಿನವರೆಗೂ ಕೊಂದು ಉಣ್ಣುವ ಲಾಭಕ್ಕಾಗಿ ಸಂಘರ್ಷವನ್ನು ಚಾಲ್ತಿಯಲ್ಲಿಟ್ಟುಕೊಂಡೇ ಬಂದಿದೆ. ತನ್ನನ್ನು ತಾನು ಶ್ರೇಷ್ಠ ಎಂದು ಹೇಳಿಕೊಳ್ಳುವುದರೊಂದಿಗೆ ತನ್ನೊಂದಿಗಿನ ಇತರೆ ಧರ್ಮಗಳನ್ನು, ಜಾತಿಗಳನ್ನು ತುಚ್ಛೀಕರಿಸುತ್ತಲೇ ಬಂದಿದೆ. ಈ ನಡೆ ಸ್ಥಾಪಿತ ಮತಧರ್ಮಗಳ ಕೋಮು ಭಾವನೆಗಳನ್ನು ಕಾರುತ್ತಲೇ ಬಂದಿದೆ. ಇಂತಹ ವಿಷಮ ಪರಿಸ್ಥಿತಿ ಸಮಾಜಕ್ಕೆ ಎಂದಿಗೂ ಕಹಿ ಉಣ್ಣಿಸುತ್ತಲೇ ಬಂದಿದೆ ಎಂದು ಹೇಳುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಭಯೋತ್ಪಾದನೆಗೆ ಧರ್ಮವಿಲ್ಲ, ಜಾತಿಯಿಲ್ಲ. ಭಾರತದ ನೆಲದಲ್ಲಿ ನಿಂತು ‘ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳುವ ಮನಸ್ಥಿತಿಯನ್ನು ಭಾರತವನ್ನು ಗೌರವಿಸುವವರು ಯಾರೂ ಒಪ್ಪುವುದಿಲ್ಲ. ಹಾಗಂತ ಹಾಗೆ ಹೇಳಿದವನನ್ನು ಒಂದು ಗುಂಪು ಸೇರಿ ಬಡಿದು ಕೊಲ್ಲುವುದನ್ನೂ ಬಹುಶಃ ಕಾನೂನು ವ್ಯವಸ್ಥೆ ಒಪ್ಪುವುದಿಲ್ಲ (ಮಂಗಳೂರಿನ ಕುಡುಪುವಿನಲ್ಲಿ ನಡೆದ ಘಟನೆ). ಭಯೋತ್ಪಾದನೆಗೆ ಖಂಡಿತ ಕ್ಷಮೆ ಇಲ್ಲ. ಭಾರತದ ನೆಲೆದಲ್ಲಿ ನಿಂತು ‘ಪಾಕಿಸ್ತಾನ ಜಿಂದಾಬಾದ್’ ಎಂದು ಬೊಗಳುವ ಯಾವನೇ ಆದರೂ ಅದು ಅಸಹನೀಯ. ವಿವಿಧ ಸೈದ್ಧಾಂತಿಕ ವಾದಗಳು ಇಂತಹ ಮನಸ್ಥಿತಿಗಳನ್ನು ಇಲ್ಲಿ ಪೋಷಿಸುತ್ತಿವೆ. ಇಂತಹ ಮನಸ್ಥಿತಿಯನ್ನು ವಿರೋಧಿಸುವುದಕ್ಕೆ ಪ್ರಚೋದನೆ ಮೂಲಕ ಇನ್ನೊಂದು ಸೈದ್ಧಾಂತಿಕ ಮನಸ್ಥಿತಿಯನ್ನೂ ವ್ಯವಸ್ಥಿತವಾಗಿ ಪೋಷಣೆ ಮಾಡಲಾಗುತ್ತಿದೆ. ಈ ಸೈದ್ಧಾಂತಿಕ ಭಿನ್ನಮತಗಳು ಧಾರ್ಮಿಕ ಸಂಘರ್ಷಗಳಾಗಿ ಪರಿವರ್ತನೆಯಾಗಿರುವುದು ದುರಂತವೇ ಸರಿ. ವರ್ತಮಾನದಲ್ಲಿ ನಿರ್ಮಾಣವಾಗುತ್ತಿರುವ ಈ ಉಭಯ ಸೈದ್ಧಾಂತಿಕ ವಿಷಯಗಳ ಭಿನ್ನಮತದ ಕಾರಣದಿಂದ ಮತಧರ್ಮಾಂಧತೆಗಳಿಂದ ಪ್ರಜ್ಞಾಪೂರ್ವಕವಾಗಿ ಹೊರಬರುವ ವ್ಯವಸ್ಥೆ ಸೃಷ್ಟಿಯಾಗುವ ಬದಲು, ಭವಿಷ್ಯವನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುವ ಬದಲು ಧಾರ್ಮಿಕ ಸಂಘರ್ಷದ ಕಾವು ಹೆಚ್ಚಿಸುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಉಭಯ ದಿಕ್ಕುಗಳಿಂದಲೂ ಪ್ರಚೋದನೆ ದಿನೆದಿನೆ ಹೆಚ್ಚಾಗುತ್ತಿರುವುದು ಆಘಾತಕಾರಿ.

ಯಾವನೋ ಎಡಬಿಡಂಗಿ ಭಾರತೀಯರ ರಕ್ತ ಹರಿಸುತ್ತೇವೆ ಎನ್ನುತ್ತಾನೆ, ಇನ್ನೊಬ್ಬ ಸಿಂಧೂ ನದಿ ನೀರು ನಿಲ್ಲಿಸಿದರೆ, ಭಾರತೀಯ ಉಸಿರು ನಿಲ್ಲಿಸುತ್ತೇವೆ ಅಂತಾನೆ. ಇನ್ನೊಬ್ಬ ವ್ಯಕ್ತಿ ಹಿಂದೂ ಮಹಿಳೆಯರು ಚಾಕು ಹಿಡಿದುಕೊಂಡು ಓಡಾಡಿ, ಹಿಂದೂಗಳು ಮನೆಯಲ್ಲಿ ರಕ್ಷಣೆಗಾಗಿ ತಲ್ವಾರು ಇಟ್ಟುಕೊಳ್ಳಿ ಅಂತಾನೆ. ಹೀಗೆ ಸಂಘರ್ಷ ಚಾಲ್ತಿಯಲ್ಲಿಡುವ ಮನಸ್ಥಿತಿಗಳು ಅಪಾರವಾಗಿ ನಮ್ಮ ನಡುವೆ ಬೆಳೆದು ನಿಂತಿವೆ.

ಧಾರ್ಮಿಕ ಸಂಘರ್ಷದ ಇತಿಹಾಸದಲ್ಲಿ ಮಾನವೀಯತೆ ಸತ್ತು ಮಲಗಿರುವ ಬಹಳ ದೊಡ್ಡ ಉದಾಹರಣೆಗಳಿವೆ. ಭಯೋತ್ಪಾದಕ ದಾಳಿಯಂತಹ ಘಟನೆಗಳು ನಡೆದಾಗ ತನ್ನ ನಿಲುವನ್ನು ಹೇರುವ, ತನ್ನನ್ನು ಬಲವಂತವಾಗಿ ಪಾಲಿಸುವಂತೆ, ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಮನಸ್ಥಿತಿ ಇಲ್ಲಿನ ಸ್ವಾಸ್ಥ್ಯ ಕಳೆಯುವಂತೆ ಮಾಡುತ್ತಿರಿವುದು ದುರದೃಷ್ಟಕರ.

ಕೊಲೆ ಮಾಡುವ ಮನಸ್ಥಿತಿ ಉಳ್ಳವ ಯಾರೇ ಆಗಲಿ ಆತನನ್ನು ಖಂಡಿಸುವಂತಹ, ವಿರೋಧಿಸುವಂತಹ ಮನಸ್ಥಿತಿ ಎಲ್ಲರಲ್ಲೂ ಇರಬೇಕು. ಪಾಕ್‌ ಉಗ್ರ ಸಂಘಟನೆಗಳ ಬ್ರೈನ್‌ ವಾಷ್‌ ಗೆ ಒಳಗಾಗಿ ಭಾರತವನ್ನು ಮುಸ್ಲೀಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಸ್ಥಾಪಿತ ಅಭಿಪ್ರಾಯಗಳನ್ನು ತಲೆಗೆ ತುಂಬಿಸಿಕೊಂಡು ಭಾರತದ ಮೇಲೆ ಧ್ವೇಷ ಕಾರುವ ಯಾವೊಬ್ಬನೂ ಕೂಡ ಮುಸ್ಲೀಮನೂ ಅಲ್ಲಾ ಅಥವಾ ಇನ್ನ್ಯಾವುದೋ ಧರ್ಮಕ್ಕೆ ಸೇರಿದವನಲ್ಲ. ಆತ ಭಯೋತ್ಪಾದಕ ಅಷ್ಟೇ. ಭಯೋತ್ಪಾದಕರೆಲ್ಲರೂ ಮುಸ್ಲೀಮರೇ ಆಗಿದ್ದಾರೆ ಎನ್ನುವ ವಾದವನ್ನೂ ಕೂಡ ಇಲ್ಲಿ ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. ಹಾಗಂತ ನಮ್ಮ ಅಕ್ಕಪಕ್ಕದಲ್ಲಿರುವ ಮುಸ್ಲೀಂ ಸಮುದಾಯದವರನ್ನು ಇದೇ ಕಾರಣಕ್ಕೆ ದ್ವೇಷದ ಭಾವನೆಯಿಂದ ನೋಡುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಸಂಘರ್ಷಕ್ಕೆ ದಾರಿ ಮಾಡದೇ ಇರದು. ಮುಸ್ಲೀಂ ಮೂಲಭೂತವಾದಿಗಳು ಹಿಂದೂ ಧರ್ಮದವರ ಮೇಲೆ ದ್ವೇಷ ಭಾವನೆಗಳನ್ನು ಪ್ರಚೋದಿಸುವಂತೆ ಮಾಡುವುದು ಕೂಡ ಹೇಯ ಮನಸ್ಥಿತಿ. ಈ ರೀತಿಯಲ್ಲಿ ಆಂತರಿಕ ಕೋಮು ದ್ವೇಷಗಳನ್ನು ಬಿತ್ತುವ ಉಭಯ ಸಿದ್ಧಾಂತಗಳ ಹುನ್ನಾರ ಈ ದೇಶದಲ್ಲಿ ನೆಮ್ಮದಿ ಕುಂದುವಂತೆ ಸದಾ ಮಾಡುತ್ತಲೇ ಬಂದಿದೆ. ಎನ್ನುವಲ್ಲಿಗೆ ಭಯೋತ್ಪಾದಕರ ಮನಸ್ಥಿತಿಯೂ, ಇವರ ಮನಸ್ಥಿತಿಯೂ ಒಂದು ಹಂತಕ್ಕೆ ಒಂದೇ ಎನ್ನುವುದರಲ್ಲಿ ಸಂಶಯವಿಲ್ಲ.

ದೇಶ ವಿಭಜನೆ ಆದಾಗಲಿಂದ ಈ ಧರ್ಮ ಸಂಘರ್ಷ ಚಾಲ್ತಿಯಲ್ಲಿದೆ. ಹಿಂದೂ, ಮುಸ್ಲೀಂ ದ್ವೇಷದ ಕಾರಣದಿಂದ ಈ ದೇಶದಲ್ಲಿ ಅನೇಕ ಸಾವು ನೋವುಗಳಾಗಿವೆ. ಕ್ಷುಲ್ಲಕ ಕುತಂತ್ರಗಳು ಹಿಂದೂ, ಮುಸ್ಲೀಂ ಎರಡೂ ಕಡೆಗಳಿಂದ ಅನೇಕ ಭಾರಿ ನಡೆದಿವೆ. ಮೂಲಭೂತವಾದಿಗಳು ಈ ವಿಷಮ ಸ್ಥಿತಿಯನ್ನು ಸದಾ ಪೋಷಿಸುತ್ತಲೇ ಬಂದಿದ್ದಾರೆ. ಸಮ ಸಮಾಜ ನಿರ್ಮಾಣ ಮಾಡಬೇಕಿದ್ದ ಉನ್ನತ ಸ್ಥಾನದಲ್ಲಿರುವವರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರಖರ ಹಿಂದುತ್ವವಾದಿಗಳು ಹಾಗೂ ಮುಸ್ಲೀಂವಾದಿಗಳ ತಲೆಗೆ ನಿರಂತರವಾಗಿ ದ್ವೇಷ ಭಾವನೆಗಳನ್ನು ತುಂಬುತ್ತಲೇ ಬಂದಿರುವುದೂ ಕೂಡ ಇಂತಹ ದಾಳಿಗಳಿಗೆ ಒಂದು ಕಾರಣ.  ಹಾಗಾಗಿ ಈ ರೀತಿ ಆಂತರಿಕವಾಗಿ ದ್ವೇಷ ಬಿತ್ತುವ ವ್ಯವಸ್ಥೆಯನ್ನು ಸರಿಪಡಿಸುವುದು ಬಹಳ ಮುಖ್ಯವಾಗಿದೆ.

‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಕವಿರಾಜ ಮಾರ್ಗದ ಧರ್ಮ ಸಹಿಷ್ಣುತೆಯ ಸಂದೇಶವನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ನಾವು ಮತ್ತೊಬ್ಬರ ವಿಚಾರವನ್ನು ಧರ್ಮವನ್ನು ಸಹಿಸಿಕೊಳ್ಳಬೇಕು ಅಥವಾ ಸಹನೆಯಿಂದ ಕಾಣಬೇಕು ಅದೇ ನಿಜವಾದ ಕಸವರ (ಸಂಪತ್ತು) ಎಂಬ ಮಾನವಧರ್ಮವನ್ನು ಪಾಲಿಸುವ ತುರ್ತಿದೆ.

ಒಟ್ಟಿನಲ್ಲಿ, ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಕೃತ್ಯ ಎಸಗಿದವರ ಮತ್ತು ಅದರ ಹಿಂದೆ ಇರುವ ಪ್ರಚೋದಕ ಶಕ್ತಿಯ ವಿರುದ್ಧ ಭಾರತ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ವೈಫಲ್ಯವೂ ಪ್ರಮುಖ ಕಾರಣವೆಂದು ನೇರವಾಗಿ ಕಾಣಿಸುತ್ತಿದೆ. ಈ ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸುವ ತುರ್ತಿದೆ. ಭಯೋತ್ಪಾದಕ ಚಟುವಿಕೆಗಳ ನಡೆಸುವ ಕೇಂದ್ರಗಳ ವಿರುದ್ಧ ಇಡೀ ಜಗತ್ತು ಒಂದಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಹೋರಾಡಬೇಕಿದೆ. ಆಗಿರುವ ಲೋಪಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ. ವೈಫಲ್ಯದ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕಿದೆ.

-ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!