spot_img
Friday, January 30, 2026
spot_img

ಹಂಗಾರಕಟ್ಟೆಯ ಪುರಾತನ ಬಂದರಿನಲ್ಲಿ ನಿರ್ಮಾಣವಾಯಿತು ಗ್ಯಾಂಬ್ಲಿಂಗ್ ಹಡಗು !

ಗೋವಾದಲ್ಲಷ್ಟೇ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೆಸಿನೋ

 ಇತ್ತೀಚೆಗಷ್ಟೇ ಕರಾವಳಿಯ ಪುರಾತನ ಬಂದರಿನಲ್ಲಿ‌ ಐಷಾರಾಮಿ ಬೃಹತ್ ಹಡಗು ನೀರಿಗೆ ಇಳಿಯುವ ವಿಡಿಯೋ ಒಂದು ಸಾರ್ವಜನಿಕರ ಗಮನ ಸೆಳೆದಿದೆ. ಬಿಳಿ ಬಣ್ಣದ ಬೃಹತ್ ಅಪಾರ್ಟ್ ಮೆಂಟ್ ನಂತೆ ಕಂಗೊಳಿಸುವ ಈ ಬೃಹತ್‌ ಗಾತ್ರದ ಹಡಗು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐರೋಡಿ ಗ್ರಾಮದಲ್ಲಿರುವ ಹಂಗಾರಕಟ್ಟೆ ಪುರಾತನ ಬಂದರಿನಲ್ಲಿ ನಿರ್ಮಾಣವಾಗಿದೆ. ಇನ್ನೂ ಸಂಪೂರ್ಣ ಕಾರ್ಯ ಮುಗಿದಿಲ್ಲ ಎಂದು ಹೇಳಲಾಗುತ್ತಿದ್ದು, ಉಳಿದ ಕಾರ್ಯಗಳನ್ನು ಪೂರೈಸುವ ಉದ್ದೇಶದಿಂದ ನೀರಿಗೆ ಇಳಿಸಲಾಗಿದೆ ಎನ್ನಲಾಗುತ್ತಿದೆ.

ವಿಶ್ವದ ಎರಡನೇ ಅತೀ ದೊಡ್ಡ ಸರ್ವ ಖುತು ಬಂದರು ‌ಉಡುಪಿ ಕೇವಲ‌ ಮೀನುಗಾರಿಕೆಗೆ ಮಾತ್ರ ಸೀಮಿತವಲ್ಲ, ಜಗತ್ತೇ ತಿರುಗಿನೋಡುವಂತ ಐಷಾರಾಮಿ ಹಡಗು ತಯಾರಿಕೆಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದೆ. ಈ‌ ಹಿಂದೆ ಸಿಂಗಾಪೂರ್ ಗಾಗಿ ರವಾನೆಯಾದ ಫ್ಯೂಗ್ರೋ ಸ್ಕೌಟ್ ಹೆಸರಿನ ಸಂಶೋಧನಾ ಹಡಗು ಉಡುಪಿಯ ಮಲ್ಪೆ ಬಂದರಿನ ಟೆಗ್ಮಾ‌ಶಿಪ್ ಯಾರ್ಡ್ ನಲ್ಲಿ ನಿರ್ಮಾಣವಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇದೀಗ ಉಡುಪಿ ಜಿಲ್ಲೆಯ ಅತ್ಯಂತ ಪುರಾತನ ನೈಸರ್ಗಿಕ ಬಂದರು ಹಂಗಾರಕಟ್ಟೆಯಲ್ಲಿ ಬೃಹತ್ ಗಾತ್ರದ ಡೆಲ್ಟಿನ್‌ ರೋಯಾಲೆ ಕ್ಯಾಸಿನೋ ಕ್ರೋಸ್ ಹಡಗನ್ನು ತಯಾರು ಮಾಡಲಾಗಿದೆ.

ಕೆಸಿನೋ ಜೂಜು ಅಡ್ಡೆಗೆ ಅನುಮತಿ ಇಲ್ಲ !
ಗೋವಾದ ಸಮುದ್ರತೀರದಲ್ಲಿ ಲಂಗರು ಹಾಕುವ ಗ್ಯಾಂಬ್ಲಿಂಗ್ ಹಡಗಾಗಿದ್ದು, ಇದರಲ್ಲಿ ನಡೆಯುವ ಜೂಜು ಅಡ್ಡೆ ಇರಲಿದೆ. ಸಾಮಾನ್ಯವಾಗಿ ಜೂಜಾಟಕ್ಕೆ ಭಾರತದಲ್ಲಿ ಅನುಮತಿ ಇಲ್ಲ. ಆದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗೋವಾ ಸರ್ಕಾರ ಬೃಹದಾಕಾರದ ಹಡಗಿನಲ್ಲಿ ಜೂಜಾಟ ನಡೆಸುತ್ತಿದೆ.

ಕೆಸಿನೋ ನಡೆಸಿದರೆ ಶಿಕ್ಷೆ !? :
ಸಾರ್ವಜನಿಕ ಜೂಜಿನ ಕಾಯಿದೆ 1867 ಕ್ಯಾಸಿನೊಗಳನ್ನು ನಡೆಸುವುದನ್ನು ನಿಷೇಧಿಸುತ್ತದೆ. ಈ ಕಾನೂನನ್ನು ಉಲ್ಲಂಘಿಸಿದರೆ ದಂಡ ರೂ. 200 ಅಥವಾ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಗೋವಾ ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ ಜೂಜು ಸರ್ಕಾರದ ಬೊಕ್ಕಸ ತುಂಬಿಸುವ ಮೂಲವೂ ಆಗಿ ಪರಿವರ್ತೆಯಾಗಿದೆ. ಹಾಗಾಗಿ ಗೋವಾದಲ್ಲಿ ಪ್ರವಾಸೋದ್ಯಮದ ದೃಷ್ಟಿಯಲ್ಲಿ ಬೃಹದಾಕಾರದ ಹಡಗುಗಳಲ್ಲಿ ಕೆಸಿನೋ ನಡೆಸುತ್ತದೆ.

ಕೋಟಿ ಲೆಕ್ಕದಲ್ಲಿ ಸರ್ಕಾರಕ್ಕೆ ಆದಾಯ :
100 ಚದರ ಮೀಟರ್ ಪ್ರದೇಶದವರೆಗಿನ ಆನ್‌ಶೋರ್ ಕೆಸಿನೊದ ವಾರ್ಷಿಕ ಪರವಾನಗಿ ಶುಲ್ಕವನ್ನು 50 ಲಕ್ಷ ರೂ.ಗಳಿಂದ 4 ಕೋಟಿ ರೂ.ಗಳಿಗೆ 2017ರಲ್ಲಿ ಮಾರ್ಚ್ 24 ರಂದು ರಾಜ್ಯ ಬಜೆಟ್ ಮಂಡಿಸುವಾಗ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬಜೇಟ್‌ ಮಂಡಿಸುವ ವೇಳೆ ಹೆಚ್ಚಿಸಿದ್ದರು. ಅದೇ ರೀತಿ, ಎಲ್ಲಾ ಇತರ ವರ್ಗದ ಆನ್‌ಶೋರ್ ಕೆಸಿನೊಗಳ (ಅವುಗಳ ವಿಸ್ತೀರ್ಣವನ್ನು ಆಧರಿಸಿ ಶುಲ್ಕ ಪಾವತಿಸಬೇಕಾಗುತ್ತದೆ) ವಾರ್ಷಿಕ ಶುಲ್ಕವನ್ನು 50 ಲಕ್ಷ ರೂ.ಗಳಿಂದ ಹೆಚ್ಚಿಸಲಾಗಿದೆ.

ಕಡಲಾಚೆಯ ಕೆಸಿನೊಗಳಿಗೆ, ಹಡಗುಗಳ ಸಾಮರ್ಥ್ಯವನ್ನು ಅವಲಂಬಿಸಿ ಸುಮಾರು ರೂ. 1.50 ಕೋಟಿ ಹೆಚ್ಚಳವಾಗಿದೆ. ಉದಾಹರಣೆಗೆ, 200 ಪ್ರಯಾಣಿಕರ ಸಾಮರ್ಥ್ಯವಿರುವ ಹಡಗು ಸರ್ಕಾರಕ್ಕೆ ರೂ. 10 ಕೋಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ 200 ರಿಂದ 400 ಜನರ ನಡುವಿನ ಸಾಮರ್ಥ್ಯವಿರುವ ಹಡಗುಗಳಿಗೆ ರೂ. 11 ಕೋಟಿ ಶುಲ್ಕ ವಿಧಿಸಲಾಗುತ್ತದೆ ಮತ್ತು 400 ಕ್ಕಿಂತ ಹೆಚ್ಚಿನ ಪ್ರಯಾಣಿಕರ ಸಾಮರ್ಥ್ಯವಿರುವ ಹಡಗುಗಳು ರೂ. 12 ಕೋಟಿ ಪಾವತಿಸಬೇಕಾಗುತ್ತದೆ. ಕೆಸಿನೊ ಪರವಾನಗಿ ವರ್ಗಾವಣೆ ಶುಲ್ಕವನ್ನು ಆಫ್‌ಶೋರ್ ಕ್ಯಾಸಿನೊಗಳಿಗೆ 20 ಕೋಟಿ ರೂ.ಗಳಿಗೆ ಮತ್ತು ಆನ್‌ಶೋರ್ ಕ್ಯಾಸಿನೊಗಳಿಗೆ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಆ ಬಳಿಕ ಶುಲ್ಕ ಬದಲಾವಣೆಯ ಮಾಹಿತಿ ಲಭ್ಯವಿಲ್ಲ.

ಗೋವಾ ಸರ್ಕಾರಕ್ಕೆ ಕೆಸಿನೋಗಳಿಂದ ಬರಬೇಕಿದೆ 110 ಕೋಟಿ ರೂ. !
ಮಾರ್ಚ್ 31 ರೊಳಗೆ ರಾಜ್ಯ ಸರ್ಕಾರವು ಕೆಸಿನೊಗಳಿಂದ ಬಾಕಿ ಇರುವ ಗರಿಷ್ಠ ಮೊತ್ತವನ್ನು ವಸೂಲಿ ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು. ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ವಿವಿಧ ಕೆಸಿನೊಗಳಿಂದ ಬಾಕಿ ಇರುವ ಆದಾಯ 350 ಕೋಟಿ ರೂ.ಗಳಾಗಿದ್ದು, ಅದರಲ್ಲಿ 110 ಕೋಟಿ ರೂ.ಗಳು ನ್ಯಾಯಾಲಯದ ಪ್ರಕರಣಗಳಿಂದಾಗಿ ಬಾಕಿ ಉಳಿದಿವೆ ಎಂದು ಹೇಳಿದ್ದಾರೆ. ಆದರೇ, ಕೆಸಿನೋಗಳಿಂದ ಬರಬೇಕಿರುವ ಬಾಕಿ ಮೊತ್ತವನ್ನು ಗೋವಾ ಸರ್ಕಾರ ಈ ವರೆಗೆ ವಸೂಲಿ ಮಾಡಿಲ್ಲ ಎನ್ನುವ ಮಾಹಿತಿ ಇದೆ.

ಲೇ – ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!