spot_img
Sunday, February 15, 2026
spot_img

ಬ್ರಹ್ಮಾವರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಮನ್ಮಹಾರಥೋತ್ಸವ

ಜನಪ್ರತಿನಿಧಿ ವಾರ್ತೆ] ಬ್ರಹ್ಮಾವರ, ಏ.18: ಚಾರಿತ್ರಿಕ ಪ್ರಸಿದ್ಧ ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಮನ್ಮಹಾರಥೋತ್ಸವ ಏ.18 ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಅಧಿವಾಸ ಹೋಮ, ಶತ ರುದ್ರಾಭಿಷೇಕ, ಪ್ರಸನ್ನ ಪೂಜೆ, ಮಹಾ ಮಂಗಳಾರತಿ ನಡೆಯಿತು. ಶುಭ ಮುಹೂರ್ತದಲ್ಲಿ ಶ್ರೀ ದೇವರ ಶ್ರೀ ಮನ್ಮಹಾರಥಾರೋಹಣ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಕೋಟ ವೇ.ಮೂ.ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಏ.12ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ಏ.೧೯ರಂದು ಓಕುಳಿ ಸೇವೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಏ.12ರಿಂದ ನಿರಂತರವಾಗಿ ಶ್ರೀ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉಮಾ ಮಹೇಶ್ವರ ಬಯಲು ರಂಗಮಂಟಪದಲ್ಲಿ ಪ್ರತಿದಿನ ಸಂಜೆ 6 ಗಂಟೆಯಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ಏ.12ರಂದು ಶ್ರೀ ದಶಾವತಾರ ಯಕ್ಷ-ಶಿಕ್ಷಣ ಕೇಂದ್ರ ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿಗಳು, ಸದಸ್ಯರಿಂದ ಘೋರ ಭೀಮ, ವೀರ ವೃಷಸೇನ, ಏ.13ರಂದು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇವರಿಂದ ನೃತ್ಯ ಕೌಸ್ತುಭ ಹಾಗೂ ನೃತ್ಯ ರೂಪಕ, ಏ.೧೪ರಂದು ನಾಟ್ಯ ಸೌರಭ ಕಲಾಕೇಂದ್ರ ಚಾಂತಾರು ಇವರಿಂದ ನೃತ್ಯಂ-ಶಿವರ್ಪಾಣಂ, ಏ.15ರಂದು ಅಜಪುರ ಯಕ್ಷಗಾನ ಸಂಘದಿಂದ ಕುಶಲವ ಕುಟುಂಬ, ಅಜಪುರ ಮಕ್ಕಳ ಮೇಳದ ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಸೇನ ಕಾಳಗ ಯಕ್ಷಗಾನ ಪ್ರದರ್ಶನ, ಏ.16 ರಂದು ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ, ಏ.17ರಂದು ಸ್ಯಾಕ್ಷೆಪೋನ್ ಕಛೇರಿ, ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಇವರಿಂದ ರುಕ್ಮಿಣಿ ಸ್ವಯಂವರ ಯಕ್ಷಗಾನ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಸಮಿತಿ ಪ್ರಮುಖರು, ಅರ್ಚಕರು, ಸಿಬ್ಬಂದಿಗಳು, ಮಾಗಣಿಯ ಭಕ್ತಾದಿಗಳು ಉಪಸ್ಥಿತರಿದ್ದರು.

ಬ್ರಹ್ಮಾವರ ಹಬ್ಬ: ಈ ದೇವಸ್ಥಾನ ಬ್ರಹ್ಮಾವರದ ಪ್ರಧಾನ ದೇವಸ್ಥಾನ. ಇಲ್ಲಿನ ರಥೋತ್ಸವವನ್ನು ಬ್ರಹ್ಮಾವರ ಹಬ್ಬವೆಂದೇ ಕರೆಯಲಾಗುತ್ತದೆ. ರಾಜರ ಕಾಲದ ವೈಭವಕ್ಕೆ ಸಾಕ್ಷಿಯಾದ ಈ ದೇವಸ್ಥಾನ ಚಾರಿತ್ರಿಕವಾಗಿ ಶ್ರೀಮಂತವಾದ ದೇವಸ್ಥಾನ. ಅಪರೂಪದ ಗಜಪೃಷ್ಠ ಶೈಲಿಯ ಈ ದೇವಸ್ಥಾನದ ಮೇಲ್ಬಾಗದಲ್ಲಿ ಕೆಂಪು ಕಲ್ಲಿನಿಂದ ಕಡೆದ ಶಿಲ್ಪಕಲೆಯನ್ನು ಕಾಣಬಹುದು. ಐದು ಸುತ್ತು ಪೌಳಿಗಳನ್ನು ಹೊಂದಿರುವ ಈ ದೇವಸ್ಥಾನದಲ್ಲಿ ಎರಡು ಶಾಸನ ದಾಖಲೆಗಳಿವೆ. ಮೊದಲ ಶಾಸನ ಕ್ರಿ.ಶ. 1254ರದ್ದು, ಇದು ಕರಾವಳಿಯನ್ನು ಆಳಿದ ಆಳುಪರಾಜ ವೀರಪಾಂಡ್ಯದೇವ ಆಳುಪೇಂದ್ರನದ್ದು. ಬ್ರಹ್ಮಾವರದ 102 ಮಹಾಜನರನ್ನು ಈ ಶಾಸನ ಉಲ್ಲೇಖಿಸುತ್ತದೆ. ಬ್ರಹ್ಮಾವರದಲ್ಲಿ ಇಂತಹ ಉಲ್ಲೇಖ ಮೊದಲ ಬಾರಿಗೆ ದೊರೆಯುವುದು ಈ ಶಾಸನದಲ್ಲಿ. ಕರ್ನಾಟಕದ ಇತಿಹಾಸವನ್ನು ಗಮನಿಸಿದರೆ ಮಹಾಜನರು ಎಂಬ ಸಭೆ ೬ನೇ ಶತಮಾನದಿಂದಲೇ ಇದ್ದುದು ಈ ಶಾಸನದಿಂದ ತಿಳಿದುಬರುತ್ತದೆ.

ಈ ಮಹಾತೋಬಾರ ಮಹಾಲಿಂಗೇಶ್ವರ ದೇವಾಲಯವು ಬ್ರಹ್ಮಾವರದ ಹಿರಿಯ ದೇವಾಲಯ ಎಂಬುದಾಗಿ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಈ ದೇವಸ್ಥಾನ ಕ್ರಿ.ಶ. 9ನೆಯ ಶತಮಾನದ್ದೆಂದು ಇತಿಹಾಸಕಾರರು ಅಂದಾಜಿಸುತ್ತಾರೆ. ಈ ದೇವಸ್ಥಾನದ ಭವ್ಯವಾದ ನೋಟ, ಪ್ರಾಂಗಣ ಪ್ರವೇಶ ಮಾಡುತ್ತಲೇ ಶತಶತಮಾನಗಳ ಹಿಂದೆ ಕರೆದೊಯ್ಯುತ್ತದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!