spot_img
Monday, March 16, 2026
spot_img

ಯತ್ನಾಳ್‌ ಉಚ್ಛಾಟನಾ ಪ್ರಸಂಗ ಮತ್ತು ಹಿಂದೂ ಪಕ್ಷ

ಬಯಲಾಗಲಿದೆಯೇ 40 ಸಾವಿರ ಕೋ.ರೂ. ಕೋವಿಡ್‌ ಹಗರಣದ ದಾಖಲೆ !?

ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಯಡಿಯೂರಪ್ಪ ಅವರ ವಿರುದ್ಧ ಮುಲಾಜಿಲ್ಲದೇ ಟೀಕಿಸುತ್ತಿದ್ದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಉಚ್ಛಾಟನೆ ರಾಜಕೀಯ ವಲಯಕ್ಕೆ ಬಹಳ ದೊಡ್ಡ ಆಶ್ಚರ್ಯವನ್ನೇನೂ ಉಂಟು ಮಾಡಿಲ್ಲ. ಆದರೇ, ಸದ್ಯದ ಪರಿಸ್ಥಿತಿಯಲ್ಲಿ ಉಚ್ಛಾಟನೆ ಮಾಡುವ ಮನಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್‌ ಇದ್ದಿರಲಿಲ್ಲ ಎಂಬ ಅಭಿಪ್ರಾಯವಿದ್ದಿತ್ತು. ಹೈಕಮಾಂಡ್‌ ಮಟ್ಟದಲ್ಲಿ ಒಮ್ಮಿಂದೊಮ್ಮೆಲೆ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಈ ʼಉಚ್ಛಾಟನಾ ಪ್ರಸಂಗʼವೊಂದು ನಡೆದು ಹೋಗಿರುವುರು ಹುಬ್ಬೇರಿಸಿದೆ.

ರಾಜ್ಯ ಬಿಜೆಪಿ ರಾಜಕೀಯದ ಮಟ್ಟಿಗೆ ಇದೊಂದು ಸುದೀರ್ಘ ಕಾಲದ ಹಾಸ್ಯ ಪ್ರಸಂಗ ಎಂಬಂತೆಯೇ ಕಾಣಿಸಿತ್ತು. ಪಕ್ಷದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎನ್ನುವಾಗ ಉಚ್ಛಾಟನೆ ಮತ್ತು ಪಕ್ಷಕ್ಕೆ ಅಗತ್ಯವಿದೆ ಎನ್ನುವಾಗ ಉಚ್ಛಾಟನೆಯ ನಿರ್ಧಾರಗಳು ಅವಧಿ ಪೂರ್ಣ ಆಗುವ ಮೊದಲೇ ಅರ್ಧದಲ್ಲೇ ವಾಪಾಸು ಪಡೆಯುವ ಸಂಪ್ರದಾಯ ಬಿಜೆಪಿಯಲ್ಲಿ ಸಾಮಾನ್ಯ. ಉಚ್ಛಾಟನೆಗೊಂಡವರು ಪಕ್ಷಕ್ಕೆ ರಾಜಕೀಯವಾಗಿ ನೈತ್ಯಾತ್ಮಕ ಪರಿಣಾಮ ಬೀರಬಹುದು ಎಂಬಂತಹ ವಾತಾವರಣ ಕಾಣಿಸಿಕೊಂಡರೆ, ಅವರನ್ನು ಕರೆಸಿಕೊಂಡು ವ್ಯವಸ್ಥೆ ಮಾಡಿ, ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಂತೂ ಸಾಮಾನ್ಯ ಎಂಬಂತಿದೆ. ಇರಲಿ.

ಯತ್ನಾಳ್‌ ಉಚ್ಛಾಟನೆಯ ಬೆನ್ನಲ್ಲೇ ಪಂಚಮಸಾಲಿ ಸಮುದಾಯದ ಬಸವ ಮೃತ್ಯುಂಜಯ ಸ್ವಾಮೀಜಿ ಅವರು ಪರ ವಹಿಸಿ ಬೆಂಬಲ ಸೂಚಿಸಿದ್ದು ಮಾತ್ರವಲ್ಲದೇ, ರಾಜ್ಯವ್ಯಾಪಿ ಪ್ರತಿಭಟನೆಗೂ ಕರೆಕೊಟ್ಟಿದ್ದಾರೆ. ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಬಸವ ಮೃತ್ಯುಂಜಯ ಸ್ವಾಮೀಜಿ ಅಂದಿನ ಸರ್ಕಾರಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದ್ದರು. ಹಾಗಾಗಿ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯ ಯತ್ನಾಳರ ಉಚ್ಛಾಟನೆಯನ್ನು ವಿರೋಧಿಸಿ ಬಿಜೆಪಿ ಹೈಕಮಾಂಡ್‌ ವಿರುದ್ಧ ನಿಂತರೇ ಬಿಜೆಪಿಗೆ ಮತ್ತಷ್ಟು ನಷ್ಟವಾಗಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೇ, ಈ ವಿಚಾರವಾಗಿ ಪಂಚಮಸಾಲಿ ಸಮುದಾಯ ಮುಂದೆ ಬರುವ ಸಾಧ್ಯತೆ ಕಡಿಮೆಯಿದೆ ಎನ್ನುವ ಮಾತುಗಳೂ ಇವೆ.

ಯಡಿಯೂರಪ್ಪ ಅವರ ಮೇಲೆ ಕೋವಿಡ್‌ ಹೆಸರಿನಲ್ಲಿ ನಲವತ್ತು ಸಾವಿರ ಕೋಟಿ ರೂ. ಅಕ್ರಮವೆಸಗಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದರು. ಮಾತ್ರವಲ್ಲದೇ, ಪಕ್ಷದಿಂದ ಹೊರಹಾಕಿದರೇ, ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್‌ ಸಂದರ್ಭದಲ್ಲಿ ನಡೆದಿದ್ದ ಈ ನಲವತ್ತು ಸಾವಿರ ಕೋಟಿ ಹಗರಣದ ಬಗ್ಗೆ ದಾಖಲೆ ಬಯಲುಗೊಳಿಸುತ್ತೇನೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದ್ದರು. ಈಗ ಹೈಕಮಾಂಡ್‌ ಯತ್ನಾಳ್‌ ಅವರನ್ನು ಉಚ್ಛಾಟಿಸಿದೆ. ಯತ್ನಾಳ್‌ ಅವರಿಗೆ ತಾವು ಆಡಿರುವ ಮಾತಿನ ನೆನಪಿದೆಯೇ ? ಯಡಿಯೂರಪ್ಪ ಅವರದ್ದು ಹೊಂದಾಣಿಕೆ ರಾಜಕೀಯ ಎಂದು ಆರೋಪಿಸುವ ಯತ್ನಾಳ್‌, ತಮ್ಮ ಪ್ರಾಮಾಣಿಕತೆಯನ್ನು ತಾವು ಹೇಳಿದ ಮಾತಿನಂತೆಯೇ ಉಳಿಸಿಕೊಳ್ಳಬೇಕಿದೆ. ಯಡಿಯೂರಪ್ಪ ಅವರ ವಿರುದ್ಧ ಮಾಡಿರುವ ಕೋವಿಡ್‌ ಹಗರಣದ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಲಿ. ಇಲ್ಲವಾದರೇ, ಯತ್ನಾಳ್‌ ಅವರದ್ದೂ ಕೂಡ ಹೊಂದಾಣಿಕೆ ರಾಜಕಾರಣವೇ ಆಗುತ್ತದೆ.

ಯತ್ನಾಳ್‌ ತಾವು ಅತ್ಯಂತ ನೇರವಂತಿಕೆಯವರು, ಪ್ರಾಮಾಣಿಕರು ಎಂದು ಹೇಳಿಕೊಳ್ಳುವುದಾದರೇ, ಬಿಜೆಪಿ ಉಚ್ಛಾಟನೆ ಮಾಡಿರುವುದಕ್ಕೆ, ಬಿಜೆಪಿಗೆ ಪರ್ಯಾಯವಾಗಿ ʼಹಿಂದೂ ಪಕ್ಷʼವೊಂದನ್ನು ಕಟ್ಟುವುದು ಬೇಕಾಗಿಲ್ಲ. ಯಡಿಯೂರಪ್ಪ ಮೇಲೆ ಅವರು ಮಾಡಿರುವ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಿದರಷ್ಟೇ ಸಾಕು, ಅವರ ನಿರೀಕ್ಷೆಯಂತೆ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರ ರಾಜಕೀಯ ಭವಿಷ್ಯ ತಲೆಕೆಳಗಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೇ, ಯತ್ನಾಳ್‌ ಈಗ ಬಿಜೆಪಿಗೆ ಪರ್ಯಾಯವಾಗಿ ʼಹಿಂದೂ ರಾಜಕೀಯ ಪಕ್ಷʼವನ್ನು ಕಟ್ಟುವುದಕ್ಕಿಂತ ಮೊದಲು ಬಿಜೆಪಿ ಪಕ್ಷದ ಅಧಿಕಾರವಧಿಯಲ್ಲಿ ಆಗಿದೆ ಎಂದು ಅವರೇ ಹೊರಿಸಿರುವ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡುವ ಧೈರ್ಯ ತೋರಬೇಕಿದೆ.

ಇನ್ನು, ಯತ್ನಾಳ್‌ ಉಚ್ಛಾಟನೆಯಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪಕ್ಷದ ಕೆಲವು ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೇ, ಯತ್ನಾಳ್‌ ಉಚ್ಛಾಟನೆ ಬಿಜೆಪಿಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯಬೇಕಾದರೇ, ಚುನಾವಣೆಯೇ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಬದಲಾಯಿಸುವ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲ.

ಬರುವ ವಿಧಾನಸಭಾ ಚುನಾವಣೆಯವರೆಗೂ ಉಚ್ಛಾಟನೆ ಆದೇಶವನ್ನು ಹಿಂಪಡೆಯದಿದ್ದಲ್ಲಿ, ಯತ್ನಾಳ್ ಚುನಾವಣೆಗೆ ಪಕ್ಷಾಂತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕು. ಅಥವಾ ಅವರ ಉದ್ದೇಶಿತ ಪ್ರಾದೇಶಿಕ ಪಕ್ಷವನ್ನು ಕಟ್ಟುವುದಕ್ಕೆ ಬಹಳಷ್ಟು ಶ್ರಮವಹಿಸಬೇಕಿದೆ. ಈ ನಡುವೆ, ಈವರೆಗೆ ಯತ್ನಾಳ್ ಅವರನ್ನು ಬೆಂಬಲಿಸಿಕೊಂಡು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ, ಹರೀಶ್, ಮಾಜಿ ಸಚಿವ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರ ಮುಂದಿನ ನಿಲುವು ಏನು? ಎನ್ನುವುದೇ ಸದ್ಯದ ರಾಜಕೀಯ ಕುತೂಹಲ. ಈ ನಡುವೆಯೇ ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಬಹಿರಂಗವಾಗಿಯೇ ಸಹಾನುಭೂತಿ ತೋರುತ್ತಿರುವ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರಿಗೆ ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಮತ್ತು ವಿಜಯೇಂದ್ರ ವಿರೋಧಿ ಗುಂಪಿನಲ್ಲಿದ್ದ ಶಾಸಕ ಹರೀಶ್ ಅವರಿಗೂ ಕಾರಣ ಕೇಳಿ ಹೈಕಮಾಂಡ್ ನೋಟಿಸ್ ನೀಡಿದೆ. ಈ ಎಲ್ಲಾ ಬೆಳವಣಿಗೆಗಳು ಹೇಗೆ ಮುಂದೆ ತೆರೆದುಕೊಳ್ಳುತ್ತವೆ ಎನ್ನುವುದು ರಾಜಕೀಯ ಕುತೂಹಲ. ರಾಜ್ಯ ಬಿಜೆಪಿ ಮಟ್ಟಿಗೆ ಯತ್ನಾಳ್‌ ಅವರ ಉಚ್ಛಾಟನೆ ಮತ್ತು ಅದರ ಸುತ್ತ ಬೆಳೆದ ರಾಜಕೀಯ ಪ್ರಸಂಗ ಸದ್ಯದ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದ ಮೇಲೆ ಮಹತ್ವದ ವಿದ್ಯಾಮಾನವಾಗಿ ಪರಿಣಾಮವನ್ನೇನೂ ಬೀರದು ಎಂದೇ ಕಾಣಿಸುತ್ತದೆ.

ಈ ಮೇಲೆ ಉಲ್ಲೇಖಿಸಿದ ಹಾಗೆ ಯತ್ನಾಳ್‌ ಮುಂದಿನ ದಿನಗಳಲ್ಲಿ ʼಹಿಂದೂ ಪಕ್ಷʼವೊಂದನ್ನು ಕಟ್ಟುವುದಕ್ಕೆ ಮುಂದಾದರೇ, ಜನರಿಂದ ಯಾವ ಸ್ಪಂದನೆ ದೊರಕಲಿದೆ ಎನ್ನುವುದು ಪ್ರಶ್ನೆ. ಯತ್ನಾಳ್‌ ನೇರವಂತಿಕೆಯನ್ನು ಅಥವಾ ಮುಲಾಜಿಲ್ಲದೇ ಮಾತನಾಡುವುದನ್ನು ರಾಜಕೀಯವಾಗಿ ಬಹುಶಃ ಎಲ್ಲರೂ ಒಪ್ಪಬಹುದೇನೋ, ಆದರೆ, ಯತ್ನಾಳ್‌ ಅವರನ್ನು ಒಬ್ಬ ರಾಜಕೀಯ ಸಮರ್ಥ ನಾಯಕರನ್ನಾಗಿ ಇಡೀ ರಾಜ್ಯ ಒಪ್ಪಲಾರದು ಎಂದೇ ಕಾಣಿಸುತ್ತಿದೆ. ಯತ್ನಾಳ್‌ ಕೂಡ ಆ ಮುಖವಾಗಿ ತಮ್ಮ ರಾಜಕೀಯ ಜೀವನದಲ್ಲಿ ಬೆಳೆಯಲಿಲ್ಲ. ಬೆಳೆಯುವುದಕ್ಕೆ ಬಿಜೆಪಿ ಬಿಡಲೂ ಇಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಮುಂಪಂಕ್ತಿಯ ರಾಜಕೀಯದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಮಾಧ್ಯಮಗಳ ಹೇಳಿಕೆಯ ಮೂಲಕ ಅಷ್ಟೆ ಹೊರತು ಮತ್ತೇನಿಲ್ಲ.

ರಾಜ್ಯ ರಾಜಕಾರಣದ ಮಟ್ಟಿಗೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಸೆಣಸಾಡಿದವರ ಪೈಕಿ ಯಡಿಯೂರಪ್ಪ ಕೂಡ ಒಬ್ಬರು. ರಾಷ್ಟ್ರೀಯ ಪಕ್ಷಗಳಿಗೆ ಹೋಗುವ ಮತಗಳನ್ನು ಡಿವೈಡ್‌ ಮಾಡುವುದರಲ್ಲಷ್ಟೇ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಬೆಳೆದಿವೆ ಬಿಟ್ಟರೆ, ತಮಿಳುನಾಡು ಅಥವಾ ಕೇರಳದ ರಾಜಕಾರಣದಲ್ಲಿ ಇರುವ ಹಾಗೆ, ಅಥವಾ ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಬಿಹಾರ, ಜಾರ್ಖಾಂಡ್‌ ಸೇರಿ ಇತರೆ ಕೆಲವು ರಾಜ್ಯಗಳಲ್ಲಿ ಇರುವ ಪ್ರಾದೇಶಿಕ ಪಕ್ಷಗಳಿಗಿರುವಷ್ಟು ಬಲ ಕರ್ನಾಟಕದ ಪ್ರಾದೇಶಿಕ ಪಕ್ಷಗಳಿಗಿಲ್ಲ. ಇಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ನಾಯಕರೆಲ್ಲಾ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಮತ್ತೆ ರಾಜಕೀಯದಲ್ಲಿ ಮುಂಪಂಕ್ತಿಗೆ ಬರುವುದಕ್ಕಾಗಿ ರಾಷ್ಟ್ರೀಯ ಪಕ್ಷಗಳನ್ನೇ ಒಂದಲ್ಲಾ ಒಂದು ರೀತಿಯಲ್ಲಿ ಸೇರಿಕೊಂಡ ಉದಾಹರಣೆಗಳ ಪಟ್ಟಿ ದೊಡ್ಡದಿದೆ. ಯತ್ನಾಳ್‌ ಪ್ರಾದೇಶಿಕ ಪಕ್ಷವನ್ನು ಕಟ್ಟುವುದಕ್ಕೆ ಪ್ರಯತ್ನ ಮಾಡಿದರೇ, ಇದೇ ಪಟ್ಟಿಗೆ ಸೇರುತ್ತಾರೆ ಹೊರತು ಮತ್ತೇನೂ ಆಗುವುದಿಲ್ಲ.

ಪಂಚಮಸಾಲಿ ಲಿಂಗಾಯಿತ ಸಮುದಾಯವನ್ನೇ ತಮ್ಮ ಮತ ಬ್ಯಾಂಕ್ ಆಗಿ ಯತ್ನಾಳ್‌ ನೆಚ್ಚಿಕೊಂಡಿದ್ದಾರೆ. ಯತ್ನಾಳ್‌ ʼಸಮುದಾಯದ ನಾಯಕʼರಾಗಿ ಪ್ರಭಾವವನ್ನೂ ಬೆಳೆಸಿಕೊಂಡಿಲ್ಲ. ಹಿಂದೂ ಫೈರ್‌ ಬ್ರ್ಯಾಂಡ್‌ ಎಂಬ ರಾಜಕೀಯ ಪ್ರೇರಿತ ಬಿರುದು ಹಿಂದೂ ಮತಗಳಿರುವ ಕ್ಷೇತ್ರಗಳಲ್ಲಿ ಒಂದಿಷ್ಟು ಒಲವು ತೋರಬಹುದು ವಿನಃ ಮಹತ್ವದ ಪರಿಣಾಮ ಬಿಜೆಪಿಗೆ ಬೀರುವುದಿಲ್ಲ. ಇನ್ನು, ಬಿಜೆಪಿ ಅಥವಾ ಕಾಂಗ್ರೆಸ್‌, ಜೆಡಿಎಸ್ ಗೆ ಬದಲಾಗಿ ಯತ್ನಾಳ್‌ ಅವರೇ ಅನಿವಾರ್ಯ ಎಂಬಂತಹ ಯಾವ ವಾತಾವರಣವೂ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ. ಹಾಗಾಗಿ ಯತ್ನಾಳ್‌ ಅವರ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆಗೆ ಬಹಳ ದೊಡ್ಡ ಮಟ್ಟದಲ್ಲಿ ಬೆಂಬಲ ದೊರಕಲಿದೆ ಎಂದು ಖಂಡಿತ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈಗಂತೂ ಯತ್ನಾಳ್ ಮತ್ತು ಅವರನ್ನು ಬೆಂಬಲಿಸಿದವರ ಮುಂದಿನ ನಿರ್ಧಾರದ ಮೇಲೆ ಕುತೂಹಲವಂತೂ ಬೆಟ್ಟದಷ್ಟಿದೆ. ಕಾದು ನೋಡೋಣ.

ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!