spot_img
Friday, January 30, 2026
spot_img

ಮಕ್ಕಳ ಬೇಸಿಗೆ ರಜೆ: ಮಕ್ಕಳ ಮೇಲೆ ನಿಗಾ ಇರಲಿ

ವಿದ್ಯಾರ್ಥಿಗಳ ಬೇಸಿಗೆ ರಜೆ ಆರಂಭವಾಗುತ್ತಿದೆ. ಎರಡು ತಿಂಗಳು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ. ಈ ಎರಡು ತಿಂಗಳು ಪೋಷಕರಿಗೆ ಮಕ್ಕಳನ್ನು ನಿಯಂತ್ರಿಸುವುದೇ ಸವಾಲು. ಪೋಷಕರು ಮಕ್ಕಳಿಗೆ ಏನೇ ನೀತಿ ಪಾಠ ಹೇಳಿದರೂ ಅದನ್ನು ಕೇಳಿ ಹಾಗೇ ನಡೆಯುವ ಪ್ರಾಯ ಮಕ್ಕಳದ್ದಲ್ಲ. ಮಕ್ಕಳಿಗೆ ತುಂಟಾಟದ ಪ್ರಾಯದಲ್ಲಿ ಪೋಷಕರ ಸಲಹೆ ಸೂಚನೆಯೂ ಗಮನಕ್ಕೆ ತಗೆದುಕೊಳ್ಳುವುದಿಲ್ಲ. ಆಟ, ಆಕರ್ಷಣೆಯಲ್ಲಿ ಮಕ್ಕಳು ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಇವತ್ತಿನ ದಿನಗಳಲ್ಲಿ ಸ್ವಾಭಾವಿಕವಾಗಿದೆ. ಬೇಸಿಗೆಯ ರಜಾವಧಿಯ ಈ ಸಮಯದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅನೇಕ ಅಪಾಯಕಾರಿ ಘಟನೆಗಳು ಮತ್ತೆ ಮತ್ತೆ ಜಾಗೃತಿಯ ಪಾಠ ಕಲಿಸುತ್ತದೆ. ಆದರೆ ಮತ್ತೆ ಮತ್ತೆ ನಿರ್ಲಕ್ಷ್ಯ ಸಮಾಜದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ, ಹಾಗಾಗಿ ಪ್ರತಿಯೋರ್ವ ಪೋಷಕರು ಕೂಡಾ ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇಡಲೇಬೇಕು. ಮಕ್ಕಳಿಗೆ ನೀರು, ಬೆಟ್ಟ ಗುಡ್ಡ, ಮರ, ಸೈಕಲ್ ಇವೆಲ್ಲಾ ಸಾಮಾನ್ಯ ಆಕರ್ಷಣೆ. ಬಾಲ್ಯವೇ ಅದು. ಹಾಗಂತ ಮೊದಲಿನಂತೆ ಈಗಿಲ್ಲ. ಮೊದಲು ಸಣ್ಣ ಪ್ರಾಯದಿಂದ ಪ್ರಕೃತಿಯೊಂದಿಗೆ ಇರುವಂತಿತ್ತು. ಇಂದು ಹಾಗಿಲ್ಲ, ಬೆಳಿಗ್ಗೆ ಎದ್ದೊಡನೆ ಸ್ಕೂಲ್ ಬಸ್ ಏರಿದರೆ ಮಗು ಮನೆಗೆ ಬರುವುದು ಸ್ಕೂಲ್ ಮುಗಿಸಿ, ಟ್ಯೂಷನ್ ಮುಗಿಸಿ ಸೂರ್ಯ ಮುಳುಗಿದ ಬಳಿಕವೇ. ಹಾಗಾಗಿ ಅವಘಢಗಳನ್ನು ಎದುರಿಸುವ ಸಾಮಾನ್ಯ ಕೌಶಲ್ಯಗಳ ಅರಿವು ಆ ಮಗುವಿಗೆ ಇರುವುದಿಲ್ಲ. ಉದಾಹರಣೆಗೆ ಈಜುವುದಾಗಲಿ, ಮರ ಏರುವುದಾಗಲಿ, ಅಪಾಯ ಸನ್ನಿವೇಶ ಬಂದಾಗ ಪಾರಾಗುವುದಾಗಲಿ ಈ ಬಗ್ಗೆ ಅನುಭವವೇ ಇರುವುದಿಲ್ಲ. ಹಾಗಾಗಿ ಬೇಸಿಗೆ ರಜೆಯಲ್ಲಿ ಮಕ್ಕಳ ದುರಂತತೆಗಳನ್ನು ಗಮನಿಸುತ್ತೇವೆ. ನೀರಿನಲ್ಲಿ ಈಜಲು ಹೋಗಿ ನೀರು ಪಾಲಾಗುವ ಘಟನೆ, ಮರದಿಂದ ಬಿದ್ದು ಮಕ್ಕಳ ಸಾವು, ಸೈಕಲ್ ಆಡುವಾಗ ಅಪಘಾತ ಇತ್ಯಾದಿ ಇತ್ಯಾದಿಗಳು. ನೀರು ಕಂಡಾಗ ಮಕ್ಕಳು ಬಿಸಿಲ ಝಳವೋ ಸಹಜ ಆಕರ್ಷಣೆಯಿಂದಲೊ ಕೆರೆ, ಹೊಳೆಗಳಲ್ಲಿ ಆಟ ಆಡಲು ಮಕ್ಕಳು ಇಳಿಯುತ್ತಾರೆ. ಅದರ ಅಲ್ಲಿನ ಅಪಾಯದ ಕಲ್ಪನೆಯೇ ಅವರಿಗೆ ಇರುವುದಿಲ್ಲ. ಕೆಲವೆಡೆ ಕಲ್ಲು ಕೋರೆ, ಕೊಜೆ ಹೊಂಡಗಳು, ಮದಗಗಳಲ್ಲಿ ನೀರು ಇರುತ್ತದೆ. ಅವು ಅಸುರಕ್ಷಿತವಾಗಿರುತ್ತದೆ. ಅಪಾಯಕಾರಿಯಾದ ಆಟಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು, ಉಯ್ಯಾಲೆ, ಈಟಿ ಎಸೆತ, ಮರಕೋತಿಯಾಟ ಮುಂತಾದ ಆಟಗಳ ಬಗ್ಗೆ ಮಕ್ಕಳಿಗೆ ಎಚ್ಚರಿಕೆ ನೀಡಬೇಕು, ನಿರ್ಲಕ್ಷ್ಯ ಮಾಡಿದರೆ ಮಕ್ಕಳ ಜೀವವನ್ನು ಕಳೆದುಕೊಳ್ಳಬೇಕಾದ ಸಂಭವವೂ ಬರಬಹುದು. ಬೇಸಿಗೆಯ ರಜೆಯನ್ನು ಮಕ್ಕಳು ಅತಿಯಾದ ಸ್ವಚ್ಛಂದವಾಗಿ ಬಳಸಿಕೊಳ್ಳದೇ ಸದ್ವಿನಿಯೋಗ ಮಾಡಿಕೊಂಡರೆ ಒಳ್ಳೆಯದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!