spot_img
Friday, January 30, 2026
spot_img

ಅಗಲಿದ ‘ಲೆಜೆಂಡ್ ಆಲ್​ರೌಂಡರ್ ‘ ಸೈಯದ್ ಅಬಿದ್ ಅಲಿ

ಎಸ್. ಜಗದೀಶ್ಚಂದ್ರ ಅಂಚನ್, ಸೂಟರ್ ಪೇಟೆ

ಭಾರತದ ಲೆಜೆಂಡ್ ಆಲ್​ರೌಂಡರ್​, ಬಹುಮುಖ ಪ್ರತಿಭೆಯ  ಕೌಶಲ್ಯಯುತ ಆಟಗಾರ ಸೈಯದ್ ಅಬಿದ್ ಅಲಿ ಕ್ರಿಕೆಟ್ ಜಗತ್ತನ್ನು ಅಗಲಿದ್ದಾರೆ. ಅವರು ದೀರ್ಘ ಕಾಲದ ಅನಾರೋಗ್ಯದ ನಂತರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಾರ್ಚ್ -12ರಂದು ನಿಧನರಾದರು. ಕ್ಯಾಲಿಫೋರ್ನಿಯಾದ ಟ್ರೇಸಿಯನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದ ಅಬಿದ್ ಅಲಿ  ಅವರ ಅದ್ಭುತ ಪರಂಪರೆಯು ಯುವ ಆಟಗಾರರಿಗೆ ಶ್ರೇಷ್ಠತೆಯ ಸ್ಫೂರ್ತಿಯಾಗಿದೆ. ಬೌಲಿಂಗ್‌, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ಕೌಶಲದಿಂದಲೂ ಅವರು ಹೆಸರು ಮಾಡಿದ್ದರು. ಅತ್ಯುತ್ತಮ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದ ಅವರು ತಂಡದ ಅಗತ್ಯಕ್ಕೆ ಅನುಗುಣವಾಗಿ ಆಡುತ್ತಿದ್ದರು. ಅಗತ್ಯವಿದ್ದಾಗ ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಿರುವ  ಅಬಿದ್ ಅಲಿ ಅವರ ಸ್ಪಿನ್ ಜಾದೂ ತಂಡದ ಸ್ಪಿನ್ ವಿಭಾಗದ ಬಲವನ್ನು ಹೆಚ್ಚಿಸಿತ್ತು.ಇವರು ಎಂಎಕೆ ಪಟೌಡಿ, ಎಂಎಲ್ ಜೈಸಿಂಹ, ಅಬ್ಬಾಸ್ ಅಲಿ ಬೇಗ್ ಅವರೊಂದಿಗೆ ಹೈದರಾಬಾದ್​ನ ಪ್ರಸಿದ್ಧ ಕ್ರಿಕೆಟಿಗರ ಗುಂಪಿನ ಭಾಗವಾಗಿದ್ದರು.

ಅಬಿದ್ ಅಲಿ ಅವರು 1941ರ ಸೆಪ್ಟೆಂಬರ್ 9ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಅವರು 1946ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಶಾಲಾ ತಂಡಕ್ಕೆ ಆಯ್ಕೆಯಾಗಿದ್ದರು. ಶಾಲಾ ಮಟ್ಟದಲ್ಲಿ 3 ವರ್ಷಗಳ ಕಾಲ ಆಡಿದ ನಂತರ, ಅವರು 1958-59 ರಲ್ಲಿ ಹೈದರಾಬಾದ್ ಜೂನಿಯರ್ ತಂಡಕ್ಕೆ ಆಯ್ಕೆಯಾದರು. ನಂತರ ಮುಂದಿನ ವರ್ಷವೇ ಅವರಿಗೆ  ಹೈದರಾಬಾದ್‌ ರಾಜ್ಯ ತಂಡದಿಂದ ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ಸಿಕ್ಕಿತು. ಬಳಿಕ, 1967ರ ಡಿಸೆಂಬರ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ನಲ್ಲಿ ಅವರು ಟೆಸ್ಟ್ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಬಿದ್ 33 ರನ್ ಕಲೆಹಾಕಿದ್ದು ಮಾತ್ರವಲ್ಲದೆ, ಮೊದಲ ಇನ್ನಿಂಗ್ಸ್​ನಲ್ಲಿ 55 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದು ಬೌಲಿಂಗ್ ನಲ್ಲಿ ಮಿಂಚಿದರು . ಇದು ಆ ಸಮಯದಲ್ಲಿ ಯಾವುದೇ ಭಾರತೀಯ ಆಟಗಾರ ತನ್ನ ಚೊಚ್ಚಲ ಪಂದ್ಯದಲ್ಲೇ ನೀಡಿದ ಅತ್ಯುತ್ತಮ ಪ್ರದರ್ಶನವಾಗಿತ್ತು. ಅಬಿದ್ ಅಲಿ ಅದೇ ಸರಣಿಯ ಸಿಡ್ನಿ ಟೆಸ್ಟ್​​ನಲ್ಲಿ 78 ಮತ್ತು 81 ರನ್ ಗಳಿಸುವ ಮೂಲಕ ಬ್ಯಾಟಿಂಗ್ ನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು.

ಅಬಿದ್ ಅಲಿ ಅವರು ಅಪರೂಪದ ಸಾಧನೆಗೂ ಪಾತ್ರರಾಗಿದ್ದರು. ತಂಡದ ಇನಿಂಗ್ಸ್ ಆರಂಭಿಸಿದ್ದ ಅವರು ಬೌಲಿಂಗ್‌ನಲ್ಲೂ ಮೊದಲನೆಯವರಾಗಿ ದಾಳಿಗಿಳಿಯುತ್ತಿದ್ದರು. 1968ರಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಬಾರಿ, 1969ರಲ್ಲಿ ತವರಿನಲ್ಲಿ ಮೂರು ಸಲ, 1971ರ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲೂ ಎರಡು ಬಾರಿ ಈ ಪಾತ್ರ ನಿಭಾಯಿಸಿದ್ದಾರೆ. ಅಬಿದ್ ಅಲಿ 1967 ಮತ್ತು 1974 ರ ನಡುವೆ ಭಾರತಕ್ಕಾಗಿ 29 ಟೆಸ್ಟ್ ಪಂದ್ಯ ಆಡಿದ್ದು, 1018 ರನ್, 47 ವಿಕೆಟ್​ ಕಿತ್ತಿದ್ದಾರೆ. ವಿಕೆಟ್​ಗಳ ಮಧ್ಯೆ ವೇಗವಾಗಿ ಓಡಲು ಹೆಸರುವಾಸಿಯಾಗಿದ್ದ ಅವರು, ಅಂದು ಅತ್ಯುತ್ತಮ ಫೀಲ್ಡರ್​​ಗಳಲ್ಲಿ ಒಬ್ಬರಾಗಿದ್ದರು. ಅಬಿದ್ ಅಲಿ, 1971 ರಲ್ಲಿ ದಿ ಓವಲ್‌ನಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಗೆದ್ದ ಅಜಿತ್ ವಾಡೇಕರ್ ನೇತೃತ್ವದ ಭಾರತೀಯ ತಂಡದ ಸದಸ್ಯರಾಗಿದ್ದರು, ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 101 ರನ್‌ಗಳಿಗೆ ಆಲೌಟ್ ಮಾಡಿದರು. ನಾಲ್ಕು ವಿಕೆಟ್‌ಗಳ ಗೆಲುವು ಮತ್ತು ಇತರ ಎರಡು ಟೆಸ್ಟ್‌ಗಳು (ಲಾರ್ಡ್ಸ್ ಮತ್ತು ಓಲ್ಡ್ ಟ್ರಾಫರ್ಡ್) ಡ್ರಾದಲ್ಲಿ ಕೊನೆಗೊಂಡ ಕಾರಣ, ಭಾರತವು ಇಂಗ್ಲೆಂಡ್‌ನಲ್ಲಿ ತನ್ನ ಮೊದಲ ಸರಣಿ ಗೆಲುವು ದಾಖಲಿಸಿತು. ಈ ಐತಿಹಾಸಿಕ ಗೆಲುವನ್ನು ಅಬಿದ್ ಅಲಿ ತನ್ನ ಕ್ರಿಕೆಟ್ ಜೀವನದುದ್ದಕ್ಕೂ ಸ್ಮರಿಸುತ್ತಿದ್ದರು.

ಚೊಚ್ಚಲ ವಿಶ್ವಕಪ್ ನಲ್ಲಿ ಮಿಂಚು : 1974 ರಲ್ಲಿ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿದ ಅಜಿತ್ ವಾಡೇಕರ್ ನೇತೃತ್ವದ ಭಾರತೀಯ ತಂಡದ ಭಾಗವಾಗಿದ್ದರು ಅಬಿದ್ ಅಲಿ. ಅದು 55 ಓವರ್‌ಗಳ ಪಂದ್ಯವಾಗಿದ್ದು, ಭಾರತ ಸೋತಿತ್ತು. ಅಬಿದ್ ಅಲಿ 1975ರಲ್ಲಿ ನಡೆದ ಮೊದಲ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ಅವರು ಭಾರತದ ಪರ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಏಕದಿನ ಕ್ರಿಕೆಟ್ ನಲ್ಲಿ  ಅವರು ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಆ ಪಂದ್ಯದಲ್ಲಿ 98 ಎಸೆತಗಳಲ್ಲಿ 70 ರನ್ ಗಳಿಸಿ ಚೊಚ್ಚಲ ವಿಶ್ವಕಪ್ ನಲ್ಲಿ ಮಿಂಚಿದ್ದರು. ಅಬಿದ್ ಅಲಿ 5 ಏಕದಿನಗಳಲ್ಲಿ 93 ರನ್ ಮತ್ತು 7 ವಿಕೆಟ್ ಪಡೆದಿದ್ದಾರೆ. ದೇಶೀಯ ಮಟ್ಟದಲ್ಲಿ 212 ಪ್ರಥಮ ದರ್ಜೆ ಪಂದ್ಯಗಳಲ್ಲಿ 8,732 ರನ್, 397 ವಿಕೆಟ್ ಕಬಳಿಸಿದ್ದಾರೆ. ಗರಿಷ್ಠ ಸ್ಕೋರ್ ಅಜೇಯ 173ರನ್. 23 ರನ್ ನೀಡಿ 6 ವಿಕೆಟ್ ಕಬಳಿಸಿದ್ದು ಅವರ ಬೆಸ್ಟ್ ಬೌಲಿಂಗ್ ಪ್ರದರ್ಶನ ಆಗಿತ್ತು. ತಮ್ಮ ವೃತ್ತಿಜೀವನದಲ್ಲಿ 416 ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ಅವರು 13 ಶತಕಗಳು ಮತ್ತು 42 ಅರ್ಧಶತಕಗಳನ್ನು ಬಾರಿಸಿದ್ದರು.

ಫೀಲ್ಡಿಂಗ್​ಗೆ ಹೆಸರುವಾಸಿ : ಅಬಿದ್ ಅಲಿ ಅವರು ಕ್ಷೇತ್ರ ನಿರ್ವಹಣೆಯನ್ನು ಒಂದು ಕಲೆಯನ್ನಾಗಿಸಿ ಇದರಲ್ಲಿ ಶ್ರೇಷ್ಠತೆ ಸಾಧಿಸಿದ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಫೀಲ್ಡರ್. 70 ರ ದಶಕದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಆಟಗಾರರು ಸಾಮಾನ್ಯವಾಗಿ ತಮ್ಮ ಫಿಲ್ಡಿಂಗ್​ಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಆದರೆ, ಭಾರತ ತಂಡದಲ್ಲಿ ಫಿಟ್ನೆಸ್ ಮತ್ತು ಫೀಲ್ಡಿಂಗ್ ಮೇಲೆ ಗಮನ ಹರಿಸಿದ ಆಟಗಾರರು ಬಹಳ ಕಡಿಮೆ. ಆದರೂ ಅಬಿದ್ ಅಲಿ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಹೊರತುಪಡಿಸಿ ಫೀಲ್ಡಿಂಗ್ ಮತ್ತು ಫಿಟ್ನೆಸ್‌ಗೆ ಹೆಸರುವಾಸಿಯಾದ ಭಾರತದ ಮೊದಲ ಆಟಗಾರರಾಗಿದ್ದರು.

ಸಮರ್ಪಿತ ತರಬೇತುದಾರ : ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪಂದ್ಯಗಳನ್ನು ಆಡಿರುವ ಅಬಿದ್‌ ಒಬ್ಬ ಉತ್ತಮ ತರಬೇತುದಾರ ಮತ್ತು ಸಮರ್ಪಿತ ಮಾರ್ಗದರ್ಶಕರಾಗಿಯೂ ಹೆಸರುವಾಸಿಯಾಗಿದ್ದರು. 1980ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳುವ ಮೊದಲು ಅಬಿದ್ ಅಲಿ ಹೈದರಾಬಾದ್‌ನ ಜೂನಿಯರ್ ತಂಡಕ್ಕೆ ಕೆಲವು ವರ್ಷಗಳ ಕಾಲ ತರಬೇತಿ ನೀಡಿದ್ದರು. ಅವರು 1990 ರ ದಶಕದ ಕೊನೆಯಲ್ಲಿ ಮಾಲ್ಡೀವ್ಸ್ ಮತ್ತು 2002 ಮತ್ತು 2005 ರ ನಡುವೆ ಯುಎಇಗೆ ತರಬೇತುದಾರರಾಗಿದ್ದರು. ಯುಎಇಗೆ ತರಬೇತಿ ನೀಡುವ ಮೊದಲು, ಅವರು ರಣಜಿ ಟ್ರೋಫಿಯಲ್ಲಿ ದಕ್ಷಿಣ ವಲಯ ಲೀಗ್ ಗೆದ್ದ ಆಂಧ್ರ ತಂಡಕ್ಕೆ ತರಬೇತಿ ನೀಡಿದರು.  ಅಬಿದ್ ಅಲಿ  ನಂತರದ ವರ್ಷಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು.  ಅವರು ನಿವೃತ್ತಿಯಾಗುವ ಮೊದಲು ಸ್ಟ್ಯಾನ್‌ಫೋರ್ಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಭರವಸೆಯ ಯುವಕರಿಗೆ ತರಬೇತಿ ನೀಡಿದರು. ಕ್ರಿಕೆಟ್ ಅಭಿವೃದ್ಧಿಗೆ ಅವರ ಅವಿಶ್ರಾಂತ ಪ್ರಯತ್ನಗಳು ಮತ್ತು ಕೊಡುಗೆಗಾಗಿ ಉತ್ತರ ಅಮೆರಿಕನ್ ಕ್ರಿಕೆಟ್ ಲೀಗ್ ಮತ್ತು ಉತ್ತರ ಕ್ಯಾಲಿಫೋರ್ನಿಯಾ ಕ್ರಿಕೆಟ್ ಅಸೋಸಿಯೇಷನ್ ​​ ಯಾವಾಗಲೂ ಕೃತಜ್ಞರಾಗಿರಬೇಕು, ಇದು ಅವರ ಶಾಶ್ವತ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪರಿಶ್ರಮದಿಂದ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿದರು. ಅವರು ಅನೇಕ ಆಟಗಾರರಿಗೆ ಮಾರ್ಗದರ್ಶಕರಾಗಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!