spot_img
Thursday, December 12, 2024
spot_img

ಧನಾತ್ಮಕ ಚಿಂತನೆ ಯಶಸ್ಸಿನ ಮೆಟ್ಟಿಲು-ಡಾ. ಗುರುರಾಜ್ ಖರ್ಜಗಿ

ಬ್ರಹ್ಮಾವರದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಉದ್ಘಾಟನೆ

ಬ್ರಹ್ಮಾವರ, ಡಿ.12: (ಜನಪ್ರತಿನಿಧಿ ವಾರ್ತೆ) ವಿದ್ಯಾರ್ಥಿದಿಸೆಯಲ್ಲಿ ಸಿಗುವ ಮೌಲ್ಯಗಳು ವಿದ್ಯಾರ್ಥಿ ಜೀವನ ಪ್ರತಿಹಂತದಲ್ಲೂ ಇರುತ್ತದೆ. ಪ್ರೀತಿ ತುಂಬಿದ ಸ್ಪೂರ್ತಿಯ ಮಾತು, ಆತ್ಮವಿಶ್ವಾಸ, ದೇಶಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಲಸ ಶಿಕ್ಷಕರು ಮಾಡಬೇಕು. ಮೌಲ್ಯಗಳನ್ನು ನೀಡುವ ಚಟುವಟಿಕೆ ಆಧಾರಿತ ವಿಷಯಗಳು ಹೆಚ್ಚು ಪರಿಣಾಮಕಾರಿ. ವ್ಯಕ್ತಿಯ ಅಂತರ್ಯದ ಒಳ್ಳೆಯತನವನ್ನು ಹೊರ ತಗೆಯುವುದೇ ಶಿಕ್ಷಣ. ನಕರಾತ್ಮಕ ವಿಚಾರಗಳನ್ನು ತೆಗೆದು ಹಾಕಿ ಧನಾತ್ಮಕ ಚಿಂತನೆಗಳನ್ನು ತುಂಬಿಸುವುದರಂದ ಅದು ಯಶಸ್ಸಿನ ಮೆಟ್ಟಿಲಾಗುತ್ತದೆ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಖರ್ಜಗಿ ಹೇಳಿದರು.

ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್ ಟ್ರಸ್ಟ್ ಬೆಂಗಳೂರು ಪ್ರಾಯೋಜಿತ ಸಾರ್ವಜನಿಕ ಶಿಕ್ಷಣ ಇಲಾಖೆ ಅವರ ಸಹಕಾರದದೊಂದಿಗೆ ರೂ.೩ ಕೋಟ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಕೆಲಸಗಳ ಲೋಕಾರ್ಪಣೆ ಹಾಗೂ ಈ ಕಾಲೇಜನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ನಾಮಕರಣ ಸಮಾರಂಭದ ಹೊಸ ಕಟ್ಟಡ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕಲಿಯುವ ಹಸಿವು ಹೆಚ್ಚಿರುತ್ತದೆ. ಇಂತಹ ಕಲಿಕೆ ಹಸಿವಿರುವಲ್ಲಿ ಕಲಿಕಾ ಪೂರಕ ವಾತಾವರಣ ನಿರ್ಮಾಣ ಮಾಡಿಕೊಟ್ಟರೆ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಮುಂದೊಂದು ದಿನ ರಾಷ್ಟ್ರಪತಿ, ಪ್ರಧಾನಿ ಆಗಬಹುದು. ಅದಕ್ಕಾಗಿ ಡಾ.ಎಚ್.ಎಸ್ ಶೆಟ್ಟಿ ಅವರು ಕಲಿಕಾಪೂರಕವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಅವರು ತನ್ನ ತಂದೆಯ ಹೆಸರನ್ನು ಶಾಶ್ವತವಾಗಿಡುವ ಕೆಲಸ ಮಾಡಿದ್ದಾರೆ. ಎಂದರು.

ಅಂತಃಕರಣ, ಪ್ರೀತಿ, ಸಂಬಂಧಗಳ ಮೌಲ್ಯ ಭಾರತ ಹೊರತು ಪಡಿಸಿ ಬೇರೆಲ್ಲೂ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕಲಿಸಿದ ವಿಚಾರಗಳು ಮರೆತುಹೋಗಬಹುದು, ಅವರು ಶಾಲೆಯಲ್ಲಿ ಕಲಿತ ಜೀವನಮೌಲ್ಯಗಳು ಶಾಶ್ವತವಾಗಿರುತ್ತದೆ. ಮಾತೃಭಾಷೆಯ ಬಗ್ಗೆ ಪ್ರೀತಿ ಇರಲಿ, ಮತ್ತೊಂದು ಭಾಷೆಯ ಬಗ್ಗೆ ದ್ವೇಷ ಪಡಬಾರದು ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆಗೈದರು.

ಕಟ್ಟಡದ ಹಸ್ತಾಂತರವನ್ನು ಮಾಜಿ ಶಾಸಕ ಕೆ.ರಘುಪತಿ ಭಟ್ ನೆರವೇರಿಸಿ, ಇಂದು ಬ್ರಹ್ಮಾವರದಲ್ಲಿ ಸುವರ್ಣಕ್ಷರದಲ್ಲಿ ಬರೆದಿಡಬಹುದಾದ ದಿನ. ಡಾ.ಹೆಚ್.ಎಸ್ ಶೆಟ್ಟಿಯವರ ಮೂಲಕ ಬ್ರಹ್ಮಾವರಕ್ಕೆ ಕೆ.ಪಿ.ಎಸ್ ದೊರಕಿದೆ. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತನಕ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಮಕ್ಕಳ ಸಂಖ್ಯೆಗನುಗುಣವಾಗಿ ಹೆಚ್ಚಿನ ಶಿಕ್ಷಕರು, ಸೌಲಭ್ಯಗಳು ದೊರೆಯುತ್ತದೆ, ಇದು ಬ್ರಹ್ಮಾವರಕ್ಕೆ ಮಹತ್ವದ ಅಂಶ ಎಂದರು.

ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಹೆಚ್.ಎಸ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, 17 ವರ್ಷಗಳ ಹಿಂದೆ ಆರಂಭಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರೀಟೆಬಲ್ ಟ್ರಸ್ಟ್ ಇಲ್ಲಿಯ ತನಕ ೫೦ ಕೋಟಿ ರೂಪಾಯಿಗಳನ್ನು ಸಮಾಜಕ್ಕೆ ಅದರಲ್ಲೂ ಮುಖ್ಯವಾಗಿ ಶಿಕ್ಷಣಕ್ಕೆ ವಿನಿಯೋಗಿಸಲಾಗಿದೆ. ಇಲ್ಲಿ ೩ ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಸಂಬಂಧಪಟ್ಟ ಅಧಿಕಾರಿಗಳ ಅಸಡ್ಡೆಯಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಯಿತು. ಇದು ಸರ್ಕಾರಿ ಶಾಲೆ, ಒಳ್ಳೆಯ ಶಿಕ್ಷಣ ಇಲ್ಲಿಯ ಓದುವ ಮಕ್ಕಳಿಗೆ ಸಿಗಬೇಕು, ಅದಕ್ಕೆ ಪೂರಕ ಮೂಲಸೌಕರ್ಯಗಳು ಇರಬೇಕು ಎನ್ನುವ ನೆಲೆಯಲ್ಲಿ ಸುಸಜ್ಜಿತವಾದ ಕಟ್ಟಡ ಕಟ್ಟಲಾಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳಿದ ಅವರು, ಸಾಮಾಜಿಕ ಮಾಧ್ಯಮಗಳು ಸದುದ್ದೇಶಕ್ಕೆ ಬಳಕೆಯಾಗಬೇಕೆ ಹೊರತು ಆಧಾರರಹಿತ ಸುದ್ಧಿಗಳನ್ನು ಸಮಾಜದ ನಡುವೆ ಬಿತ್ತರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕ ಮಾರುತಿ, ಬ್ರಹ್ಮಾವರ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅರುಣ್ ಭಂಡಾರಿ, ಬ್ರಹ್ಮಾವರ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ರವೀಂದ್ರ ಉಪಾಧ್ಯಾಯ, ವಾರಂಬಳ್ಳಿ ಪಂಚಾಯತ್ ಅಧ್ಯಕ್ಷ ಬಿ.ಆರ್.ನಿತ್ಯಾನಂದ, ಬ್ರಹ್ಮಾವರ ಹೆಗ್ಗುಂಜೆ ರಾಜೀವ ಶೆಟ್ಟಿ, ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕ್ರಿಯಾಶೀಲ ದಾನಿಗಳ ಪ್ರತಿನಿಧಿಯ ಉಪಾಧ್ಯಕ್ಷ ಮೋಹನ್ ಶೆಟ್ಟಿ, ಉದ್ಯಮಿ ವಿಶ್ವನಾಥ ಮಟ್ಟಿ, ನ್ಯಾಯವಾದಿ ನಾಗರಾಜ ನಾಯಕ್, ಟ್ರಸ್ಟಿನ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಡಾ. ಗುರುರಾಜ್ ಖರ್ಜಗಿ ಅವರನ್ನು ಸನ್ಮಾನಿಸಲಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟ ಪಬ್ಲಿಕ್ ಸ್ಕೂಲ್ ವತಿಯಿಂದ ದಾನಿಗಳಾದ ಡಾ.ಹೆಚ್.ಎಸ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಟ್ಟಡದ ವಿನ್ಯಾಸ ರೂಪಿಸಿದ ಯೋಗೀಶ್ಚಂದ್ರ, ಇಂಜಿನಿಯರ್ ಉದಯಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಶಿಕ್ಷಣ ಮತ್ತು ಪ್ರೌಢಶಾಲಾ ಇಲಾಖೆ ಉಡುಪಿ ಜಿಲ್ಲೆ ಉಪ ನಿರ್ದೇಶಕ ಕೆ.ಗಣಪತಿ ಸ್ವಾಗತಿಸಿದರು. ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ರವೀಂದ್ರ ಉಪಧ್ಯಾಯ ವಂದಿಸಿದರು. ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!