spot_img
Thursday, December 12, 2024
spot_img

ಏನಾಯ್ತು ಕಾಶಿಯ ʼಜ್ಞಾನವಾಪಿʼಗೆ? | ಕಾಶಿಯ ಮೇಲಾದ ದಾಳಿಗಳು | ವಿಧ್ವಂಸಗೊಂಡ ವಾರಣಾಸಿ !

ವಾರಣಾಸಿ ಭಾರತದ ಪಾಲಿಗೆ ಅತಿ ಮಹತ್ವದ ಕ್ಷೇತ್ರ. ‌ಧಾರ್ಮಿಕ, ಆಧ್ಯಾತ್ಮಿಕ, ಪಾರಂಪರಿಕ, ಐತಿಹಾಸಿಕ, ಬೌದ್ಧಿಕ, ಪ್ರಾಕೃತಿಕ ಹೀಗೆ ಯಾವ ದೃಷ್ಟಿಯಿಂದ  ನೋಡಿದರೂ ಕಾಶಿ ಭಾರತದ ಪಾಲಿಗೆ, ಭಾರತೀಯರ ಪಾಲಿಗೆ ಹೆಚ್ಚಿನ ಮಹತ್ತನ್ನು ಹೊಂದಿರುವ ಸ್ಥಳವೆಂದರೆ ತಪ್ಪಾಗಲಾರದು. ಧರ್ಮ, ಜ್ಞಾನ, ಆಧ್ಯಾತ್ಮ, ಮನಶಾಂತಿ, ಮೋಕ್ಷ…. ಹೀಗೆ ಏನನ್ನೇ ಬಯಸಿ ಬಂದರೂ ಈ ಕ್ಷೇತ್ರದಲ್ಲಿ ಪರಿಹಾರ ಸಿಗುತ್ತದೆ, ಬಂದವರ ಮನದಲ್ಲಿರುವ ಪ್ರಶ್ನೆಗೆ ಉತ್ತರ ಸಿಕ್ಕೇ ಸಿಗುತ್ತದೆ ಎಂಬುದು ಈ ಕ್ಷೇತ್ರದ ವೈಶಿಷ್ಟ್ಯ. ಸಾಕ್ಷಾತ್‌ ಶಿವನೇ ಇಲ್ಲಿ ನೆಲೆ ನಿಂತು ಬಂದ ಭಕ್ತರನ್ನು ಆಲಿಸುತ್ತಾನೆ ಹಾಗೂ ಮುಕ್ತಿ ಬಯಸಿ ಬಂದವರಿಗೆ ತಾನೇ ಸ್ವತಃ ನಿಂತು ಮೋಕ್ಷದ ದಾರಿ ತೋರಿಸುತ್ತಾನೆ ಎಂದು ಪೌರಾಣಿಕ ದಾಖಲೆಗಳು ಹೇಳುತ್ತವೆ. ಅದಕ್ಕಾಗಿಯೇ ಇದನ್ನು ʼಅವಿಮುಕ್ತ ಕ್ಷೇತ್ರʼ ಎಂದೂ ಕರೆಯುತ್ತಾರೆ. ಅಷ್ಟೇ ಅಲ್ಲ, ಶಿವನ ತ್ರಿಶೂಲದ ಮಧ್ಯ ಭಾಗದಲ್ಲಿಯೇ ಕಾಶಿ ಇದೆಯೆಂದು ನಂಬಲಾಗಿದ್ದು, ಅದರಿಂದಾಗಿ ಈ ನೆಲಕ್ಕೆ ವಿಶೇಷ ಶಕ್ತಿ ಇದೆ, ಇಲ್ಲಿನ ವಾತಾವರಣದಲ್ಲಿ ವಿಶಿಷ್ಟ ಅನುಭೂತಿ ಇದೆ ಎಂಬ ಪ್ರತೀತಿಯೂ ಇದೆ. ಹಾಗೂ ಕಾಶಿಗೆ ಭೇಟಿ ನೀಡಿದ ಬಹುಪಾಲು ಜನರಿಗೆ ಈ ವಿಶೇಷ ಶಕ್ತಿ ಹಾಗೂ ಅನುಭೂತಿಯ ಅನುಭವವೂ ಆಗಿದೆ. ʼಕಂಕರ್‌ ಕಂಕರ್‌ ಮೆ ಶಂಕರ್‌ʼ ಅಂದರೆ ವಾರಣಾಸಿಯ ಪ್ರತೀ ಕಣದಲ್ಲೂ ಶಿವನಿದ್ದಾನೆ ಹಾಗೂ ಅದರಿಂದಲೇ ಭಕ್ತರಿಗೆ ಇಲ್ಲಿ ಅಲೌಕಿಕತೆಯ ಸ್ಪರ್ಶವಾಗುತ್ತದೆ ಮನಸ್ಸಿಗೆ ವೇದ್ಯವಾಗುವ ಸಂಗತಿ.

ಈಗಂತೂ ವಿಶ್ವನಾಥ ಕಾರಿಡಾರ್‌ ಮಾಡಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೊಸ ರೂಪ ನೀಡಲಾಗಿದೆ. ಹಳೆಯ ದೇವಸ್ಥಾನವನ್ನೇ ಉಳಿಸಿಕೊಂಡು ದೇವಾಲಯದ ಪ್ರಾಂಗಣವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಗಂಗೆಯಲ್ಲಿ ಮಿಂದು ನೇರವಾಗಿ ದೇವಸ್ಥಾನ ಪ್ರವೇಶಿಸುವ ವ್ಯವಸ್ಥೆಯಿದೆ. ಗಂಗಾ ಘಾಟ್‌ಗಳೂ ಸೇರಿದಂತೆ ಎಲ್ಲೆಲ್ಲೂ ಸ್ವಚ್ಛತೆ ಮನೆ ಮಾಡಿದೆ. ಒಟ್ಟಾರೆಯಾಗಿ ಇಡೀ ಸನ್ನಿಧಾನವೇ ಭಕ್ತಿ ಪರವಶತೆಯ ಪ್ರತಿರೂಪವಾಗಿ ನಿಂತಿದೆ.

ಇಂತಹ ದೈವೀ ಸದೃಶ ಸ್ಥಳಕ್ಕೆ ಒಂದು ಕರಾಳ ಇತಿಹಾಸವಿದೆ ಎಂದರೆ ಅದನ್ನು ನೀವು ನಂಬುತ್ತೀರಾ? ನಂಬಲೇಬೇಕು. ಕಾಶಿಗಿರುವ ಮಹತ್ವ, ಹಿಂದೂಗಳ ಮನಸ್ಸಲ್ಲಿ ಅದಕ್ಕಿರುವ ಪ್ರಾಧಾನ್ಯತೆಯನ್ನು ಅರಿತಿದ್ದ ಕೆಲ ದಾಳಿಕೋರರು ಕಾಲ ಕಾಲಕ್ಕೆ ಇಡೀ ಕಾಶಿಯನ್ನು ವಿನಾಶದಂಚಿಗೆ ದೂಡುವ ಪ್ರಯತ್ನ ಮಾಡಿದ್ದಾರೆ. ಮೂಲ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆಗೆ ಸವಾಲು ಹಾಕುವಂತಹ ಕೆಲಸಗಳನ್ನು ಇಲ್ಲಿ ಮಾಡಲಾಗಿದೆ. ಹಾಗೂ ಈ ಎಲ್ಲದರ ಪೈಕಿ ಮೊಘಲ್‌ ರಾಜನಾಗಿದ್ದ ಔರಂಗಜೇಬ್‌ನ ಕೆಲಸಗಳು ಕಾಶಿಯ ಅಸ್ತಿತ್ವವನ್ನೇ ನಡುಗಿಸಿಬಿಟ್ಟವು; ಹಾಗೂ ಅವನು ಕಾಶಿಯಲ್ಲೆಸಗಿದ ಕೃತ್ಯಗಳು ಈ ಕಾಲಕ್ಕೂ ಸಮಸ್ಯೆಯಾಗಿಯೇ ಉಳಿದಿವೆ ಎಂಬುದು ಮಾತ್ರ ಕಹಿ ಸತ್ಯ!

ಸುದ್ದಿಯಲ್ಲಿದೆ ʼಜ್ಞಾನವಾಪಿʼ

ಇತ್ತೀಚಿನ ನ್ಯೂಸ್‌ಗಳನ್ನು ನೀವು ನೋಡಿದ್ದರೆ ಖಂಡಿತವಾಗಿಯೂ ನಿಮಗೆ ʼಜ್ಞಾನವಾಪಿʼ ಮಸೀದಿಯ ಬಗ್ಗೆ ಗೊತ್ತಿರುತ್ತದೆ. ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಕುರಿತು ಕೇಸ್‌ ನಡೆಯತ್ತಿದೆ. ಜ್ಞಾನವಾಪಿ ಮಸೀದಿಯಲ್ಲಿ ಏನಿದೆ ಎಂಬುದರ ಬಗೆಗೆ ಸಮೀಕ್ಷೆ ನಡೆಸಲು ನ್ಯಾಯಾಲಯ ಆದೇಶ ನೀಡಿತ್ತು. ಹಾಗೂ ಕಳೆದ ವರ್ಷ 800 ಪುಟಗಳ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಲಯಕ್ಕೆ ಸಲ್ಲಿಸಿದೆ. ಬಳಿಕ ಅಲ್ಲಿರುವ ʼಶೃಂಗಾರ ಗೌರಿʼಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಮನ್ನಿಸಿ ಅದಕ್ಕೆ ಅವಕಾಶವನ್ನೂ ನೀಡಲಾಗಿದೆ. ಇದರ ಜೊತೆಗೆ ವಾದ ಪ್ರತಿವಾದಗಳು ನ್ಯಾಯಾಯದಲ್ಲಿ ನಡೆಯುತ್ತಿದ್ದು ʼಜ್ಞಾನವಾಪಿʼ ಹಿಂದೂಗಳಿಗೆ ಸೇರಿದ್ದೋ ಅಥವಾ ಮುಸ್ಲಿಮರಿಗೆ ಸೇರಿದ್ದೋ ಎಂಬುದರ ಬಗ್ಗೆ ಸುದೀರ್ಘ ಚರ್ಚೆಗಳೂ ಆಗುತ್ತಿವೆ.

ಏನಿದು ಜ್ಞಾನವಾಪಿ?

ನೀವು ಕಾಶಿ ದೇವಸ್ಥಾನಕ್ಕೆ ಹೋದರೆ ಅಲ್ಲಿ ದೇವಾಲಯದ ಪ್ರಾಂಗಣ ಹಾಗೂ ಮಸೀದಿಯ ಪ್ರಾಂಗಣ ಎರಡೂ ಪಕ್ಕ ಪಕ್ಕವೇ ಇದ್ದು, ಒಂದೇ ಗೋಡೆ ಅವೆರಡನ್ನೂ ಬೇರ್ಪಡಿಸಿದೆ. ಹಾಗೂ ಜ್ಞಾನವಾಪಿ ಎಂಬುದು ಒಂದು ಬಾವಿಯಾಗಿದ್ದು ಮಸೀದಿಯ ಆವರಣದಲ್ಲಿದೆ. ʼಜ್ಞಾನವಾಪಿʼಗೆ ಈ ಹೆಸರು ಬರಲೂ ಒಂದು ಕಾರಣವಿದೆ. ಈ ಬಾವಿಯ ತೀರ್ಥವನ್ನು ಸೇವಿಸಿದ ಮಾತ್ರಕ್ಕೆ  ಶ್ರೇಷ್ಠ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಕಥೆಯ ಪ್ರಕಾರ ರಾಜಕುಮಾರಿಯೊಬ್ಬಳು ಹೀಗೆ ಸುಮ್ಮನೆ ಕಾಶಿಯ ನಕ್ಷೆಯನ್ನು ಗಮನಿಸುತ್ತಿದ್ದ ಸಂದರ್ಭದಲ್ಲಿ ʼಜ್ಞಾನವಾಪಿʼಯನ್ನು ಸೂಚಿಸುತ್ತಿದ್ದ ಗುರುತಿನ ಮೇಲೆ ತನ್ನ ಬೆರಳನ್ನಿಟ್ಟಳಂತೆ. ಅಷ್ಟು ಮಾತ್ರಕ್ಕೆ ಅವಳಿಗೆ ಅಗಾಧ ಜ್ಞಾನ ಪ್ರಾಪ್ತಿಯಾಯಿತೆಂದು ಹೇಳುತ್ತಾರೆ. ಇಂತಹ ಮಹತ್ವವಿರುವ ʼಜ್ಞಾನವಾಪಿʼಯು ಕಾಶಿಯಲ್ಲಿದೆ. ಇಂದಿಗೂ ಅದು ಬತ್ತದ ಸೆಲೆಯಾಗಿ ಉಳಿದುಕೊಂಡಿದೆ ಹಾಗೂ ಅಲ್ಲಿ ನೀರಿನ ಚಿಲುಮೆ ಇನ್ನು ಜೀವಂತವಾಗಿದೆ ಎಂಬುದು ಸಮಾಧಾನಕರ ಸಂಗತಿ. ಇದೀಗ ಈ ಇಡೀ ಜ್ಞಾನವಾಪಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಮಸೀದಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಹಾಗೂ ಅದರ ಆಧಾರದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.

ಏಕೆ ಸಮೀಕ್ಷೆ?

ಜ್ಞಾನವಾಪಿಯಲ್ಲಿ ಸಮೀಕ್ಷೆ ನಡೆಸಲು ಬಲವಾದ ಕಾರಣವಿದೆ. ಹಾಗೂ ಆ ಕಾರಣವೇ ಔರಂಗಜೇಬ್‌! ಔರಂಗಜೇಬ್‌ ಒಬ್ಬ ಮತಾಂಧ ದೊರೆಯಾಗಿದ್ದ ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಆಧಾರಗಳಿವೆ. ಇಡೀ ಭರತ ಖಂಡದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಲು, ತನ್ನ ನಂಬಿಕೆಯನ್ನು ಇಲ್ಲಿನ ಜನರ ಮೇಲೆ ಹೇರಲು ಅವನು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಹೀಗಿರುವಾಗ ಮೂಲ ಭಾರತೀಯರು ಅಪಾರವಾಗಿ ನಂಬುತ್ತಿದ್ದ ಇಲ್ಲಿನ ದೇವಸ್ಥಾನಗಳನ್ನು ಅವನು ಬಿಟ್ಟಾನೆಯೇ? ಕೋಟ್ಯನುಗಟ್ಟಲೇ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾದ ವಾರಣಾಸಿ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಮೇಲೆ ಔರಂಗಜೇಬನ ಕಣ್ಣು ಬಿದ್ದದ್ದು ಸಹಜವೇ ಆಗಿತ್ತು.

ಯಾವುದೇ ನಂಬಿಕೆಯನ್ನು, ರೂಢಿಯನ್ನು ಕೊನೆಗೊಳಿಸಬೇಕೆಂದರೆ ಆ ನಂಬಿಕೆಗೆ, ರೂಢಿಗೆ ಆಧಾರವಾದ ಅಂಶವನ್ನು, ಜ್ಞಾನದ ಮೂಲವನ್ನೇ ಅಳಿಸಿಹಾಕಿಬಿಡಬೇಕಾಗುತ್ತದೆ. ನಾವು ನಂಬುವ ಕೆಲವು ಸಂಗತಿಗಳು ಕಣ್ಮುಂದೆ ಇಲ್ಲದಿದ್ದರೆ, ಅವುಗಳ ಅನುಭೂತಿ ನಮಗೆ ಆಗದಿದ್ದರೆ ಅದನ್ನು ಬಿಟ್ಟು ನಂಬಲರ್ಹವಾದ ಬೇರೆ ವಿಷಯಗಳನ್ನು ಮನಸ್ಸು ಅರಸುತ್ತದೆ. ಇದು ಮಾನವ ಸಹಜ ಗುಣ. ಅಷ್ಟೇ ಅಲ್ಲ, ನಂಬಿಕೆ, ರೂಢಿ, ಆಚರಣೆಗಳನ್ನು ಬೇರುಸಹಿತ ಕಿತ್ತೊಗೆಯಬೇಕೆಂದರೆ ಅದಕ್ಕೆ ಸಂಬಂಧಿಸಿದ ಇತಿಹಾಸವನ್ನು, ಜ್ಞಾನದ ಸೆಲೆಯನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಆಗ ಐತಿಹಾಸಿವಾಗಿ ಯಾವುದೇ ಆಧಾರವಿಲ್ಲದೇ ಜನಗಳು ಆ ಸಂಗತಿಯನ್ನೇ ಮರೆತುಬಿಡುತ್ತಾರೆ. ಹಾಗೂ ಮುಂದಿನ ತಲೆಮಾರುಗಳಿಗೆ ಇದ್ಯಾವುದರ ಪರಿಚಯವೂ ಇರುವುದಿಲ್ಲ! ಹಾಗೂ ಔರಂಗಜೇಬ್‌ ಮಾಡಿದ್ದೂ ಇದನ್ನೇ!!

ಕಾಶಿಗೆ ಯಾಕಿಷ್ಟು ಪ್ರಾಮುಖ್ಯತೆ?

ಕೋಟಿಗಟ್ಟಲೇ ಭಕ್ತರು, ಆಧ್ಯಾತ್ಮ ಸಾಧಕರು, ಹಠಯೋಗಿಗಳು, ಕಲಾವಿದರು ಸೇರಿದಂತೆ ಆಕ್ರಮಣಕಾರರ ಪಾಲಿಗೂ ಕಾಶಿ ಆಕರ್ಷಣೆಯ ಕೇಂದ್ರವಾಗಿತ್ತು. ಯಾಕೆಂದರೆ ಹಿಂದೂ ಧರ್ಮದಲ್ಲಿ ಬರುವ ಯಾವುದೇ ದೇವರು, ದೇವತೆ, ಜಾತಿ, ಉಪಜಾತಿ ಎಲ್ಲದಕ್ಕೂ ಆಧಾರವೊದಗಿಸಿದ್ದ, ಜ್ಞಾನ- ಆಧ್ಯಾತ್ಮ- ಭಕ್ತಿ- ಪರಂಪರೆ- ಸಂಸ್ಕೃತಿ-ಮೋಕ್ಷ ಸಾಧನೆ ಹೀಗೆ ಎಲ್ಲದರ ಸಂಗಮ ಬಿಂದುವಾಗಿದ್ದ, ಸಾಕ್ಷಾತ್‌ ಶಿವ ನೆಲೆಸಿರುವ ಕ್ಷೇತ್ರವೆಂದು ನಂಬಲಾಗಿದ್ದ ಕ್ಷೇತ್ರವದು. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಶಿಯ ಬಗೆಗಿರುವ ಒಂದು ಪ್ರತೀತಿ: ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ, ಕಾಶಿಯಲ್ಲಿ ತಮ್ಮ ಕೊನೆಯುಸಿರೆಳೆಯುವವರಿಗೆ ಸಾಕ್ಷಾತ್‌ ಶಿವನೇ ಬಂದು ಅವರ ಕಿವಿಯಲ್ಲಿ ರಾಮ ತಾರಕ ಮಂತ್ರವನ್ನು ಬೋಧಿಸುತ್ತಾನೆ. ಮಾತ್ರವಲ್ಲ ಅವರ ಅಂತಿಮ ಸಂಸ್ಕಾರಗಳನ್ನು ಸ್ವತಃ ಶಿವನೇ ಮಾಡುತ್ತಾನೆ. ಆ ಮೂಲಕ ಅಲ್ಲಿ ಪ್ರಾಣ ಬಿಟ್ಟವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೀಗಾಗಿ ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಕಾಶಿಯಲ್ಲಿರುವ  ಈ ವಿಶ್ವನಾಥ ಜ್ಯೋತಿರ್ಲಿಂಗವು ಮುಕ್ತಿ ಮಾರ್ಗವನ್ನು ಅನುಗ್ರಹಿಸುತ್ತದೆ ಎಂದು ಹೇಳಲಾಗುತ್ತದೆ. ಈ ಬಲವಾದ ಜ್ಞಾನ-ಆಧ್ಯಾತ್ಮ-ಸಂಸ್ಕೃತಿ ಹಾಗೂ ನಂಬಿಕೆಗಳ ದೃಷ್ಟಿಯಿಂದ ಆಕ್ರಮಣಕಾರರೂ ಸೇರಿದಂತೆ ಎಲ್ಲರ ಆಸಕ್ತಿಯ ಕೇಂದ್ರವಾಗಿತ್ತು ಕಾಶಿ.

ಕಾಶಿಯ ಮೇಲಾದ ದಾಳಿಗಳು

ಇಂತಹ ಕಾಶಿಯ ಮೇಲೆ ಕಾಲ ಕಾಲಕ್ಕೆ ಆಕ್ರಮಣಗಳಾಗುತ್ತಲೇ ಬಂದಿವೆ. ಭಾರತದಲ್ಲಿದ್ದ ಸಂಪತ್ತನ್ನು ಅರಸಿ ಬರುತ್ತಿದ್ದ ಆಕ್ರಮಣಕಾರರು ಕಾಶಿಯಂತಹ ದೇವಾಲಯಗಳನ್ನು ನಾಶ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಪ್ರತೀ ಆಕ್ರಮಣದ ಬಳಿಕವೂ ಕಾಶಿ ಪುಟಿದೆದ್ದು ನಿಂತಿದೆ. ಯಾರಾದರೂ ಆಕ್ರಮಣ ಮಾಡಿ ಅದನ್ನು ನಾಶ ಮಾಡಲು ಯತ್ನಿಸಿದರೆ ಅದರ ಹಿಂದೆಯೇ ಹಿಂದೂ ರಾಜರೋ, ಪ್ರಭಾವಿ ವ್ಯಕ್ತಿಗಳೋ ಅಥವಾ ಸ್ಥಿತಿವಂತರೋ ಅಲ್ಲಿ ದೇವಸ್ಥಾನವನ್ನು ಪುನರ್ನಿರ್ಮಿಸುತ್ತಿದ್ದರು. ಈ ಆಕ್ರಮಣಗಳ ಸಂದರ್ಭದಲ್ಲಿ ಎಷ್ಟೋ ಬ್ರಾಹ್ಮಣರು ಈ ದಾಳಿಕೋರರಿಂದಾಗಿ ಕಾಶಿಯನ್ನು ಬಿಟ್ಟು ಹೋಗುವ ಸಂದರ್ಭಗಳೂ ಬರುತ್ತಿದ್ದವು. ಮತ್ತೆ ಅಲ್ಲಿನ ಸ್ಥಿತಿ ಸರಿಯಾಗಿದೆ ಎನಿಸಿದ ತಕ್ಷಣ ಅವರು ಪುನಃ ಕಾಶಿಗೆ ಬಂದು ಸೇರುತ್ತಿದ್ದರು. ಹೀಗೆ ಕಾಶಿಯಿಂದ ಬೇರೆ ಸ್ಥಳಗಳಿಗೆ ಹಾಗೂ ಅಲ್ಲಿಂದ ಮತ್ತೆ ಕಾಶಿಗೆ ಬರುತ್ತಿದ್ದ ಎಷ್ಟೋ ಬ್ರಾಹ್ಮಣರು ಆಕ್ರಮಣದ ಬಳಿಕ ಬದಲಾಗುತ್ತಿದ್ದ ಕಾಶಿಯ ಸ್ವರೂಪವನ್ನು ವರ್ಣಿಸಿ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಲಕ್ಷ್ಮೀಧರನ ʼಕೃತ್ಯ ಕಲ್ಪತರುʼ, ವಾಚಸ್ಪತಿ ಮಿಶ್ರರ ʼತೀರ್ಥ ಚಿಂತಾಮಣಿʼ, ನಾರಾಯಣ ಭಟ್ಟರ ʼತ್ರಿಸ್ಥಲಿ ಸೇತುʼ ಹಾಗೂ ಮಿತ್ರ ಮಿಶ್ರರ ʼತೀರ್ಥ ಪ್ರಕಾಶʼ ಪ್ರಮುಖವಾದವು. ಈ ಎಲ್ಲ ಗ್ರಂಥಗಳಲ್ಲಿಯೂ ಕಾಶಿಯ ಬಗೆಗೆ ಗಮನಾರ್ಹ ಉಲ್ಲೇಖಗಳಿರುವುದನ್ನು ಗುರುತಿಸಬಹುದು.

ಆದರೆ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದ ಕಾಶಿಯ ಅಸ್ತಿತ್ವಕ್ಕೆ ಹೆಚ್ಚು ಧಕ್ಕೆ ಬಂದದ್ದು ಔರಂಗಜೇಬನ ಕಾಲಘಟ್ಟದಲ್ಲಿ. ಕಾಶಿಯನ್ನು ವಿನಾಶಗೊಳಿಸಲು ಅವನು ಪ್ರಯತ್ನಗಳನ್ನು ಮಾಡುತ್ತಲೇ ಇದ್ದನು. 1656ರಲ್ಲಿ ಕಾಶಿಯಲ್ಲಿನ ಕೃತ್ತಿವಾಸೇಶ್ವರ ದೇವಾಲಯವನ್ನು ನೆಲಕ್ಕುರುಳಿಸಲಾಗಿತ್ತು. ಮತ್ತೆ 1664ರಲ್ಲಿ ಔರಂಗಜೇಬನ ಸೈನ್ಯ ಇಂತಹದ್ದೇ ಉದ್ಧಟತನವನ್ನು ತೋರಲು ಬಂದಾಗ ಮಹಾನಿರ್ವಾಣಿ ಅಖಾಡದ ನಾಗಾ ಸಾಧುಗಳು ತಮ್ಮ ಆರಾಧ್ಯ ದೈವವಾದ ಕಾಶಿ ವಿಶ್ವನಾಥನ ಆಲಯವನ್ನು ರಕ್ಷಿಸಲು ಔರಂಗಜೇಬನ ಸೈನ್ಯಕ್ಕೆ ಸೆಡ್ಡು ಹೊಡೆದು ನಿಂತಿದ್ದರು!

ಹೀಗೆ ಆಕ್ರಮಣ ಹಾಗೂ ರಕ್ಷಣೆಗಳ ಮಧ್ಯೆ ಇದ್ದ ಕಾಶಿಗೆ ಬಲವಾದ ಪೆಟ್ಟು ಬಿದ್ದದ್ದು 1669ರಲ್ಲಿ!

ವಿಧ್ವಂಸಗೊಂಡ ವಾರಣಾಸಿ!!

ಕಾಶಿಯನ್ನು ಹಾಗೂ ಅದಕ್ಕೆ ಹೊಂದಿಕೊಂಡ ಸಂಸ್ಕೃತಿಯನ್ನು ವಿನಾಶ ಮಾಡಲು ಬಯಸಿದ್ದ ಔರಂಗಜೇಬನು 1669ರಲ್ಲಿ ಕಾಶೀ ವಿಶ್ವನಾಥ ದೇವಸ್ಥಾನವನ್ನು ಕೆಡವಲು ಫರ್ಮಾನು ಹೊರಡಿಸಿದ. ಕಾಶಿಗೆ ನುಗ್ಗಿದ ಅವನ ಸೈನ್ಯ ಕಾಶಿಯನ್ನು ಕ್ರೂರವಾಗಿ ಬಲಿ ಪಡೆಯಿತು. ಈ ಸಂದರ್ಭದಲ್ಲಿ ಕಾಶಿಯಲ್ಲಿದ್ದ ಒಂದು ಸಾವಿರ ದೇವಾಲಯಗಳನ್ನು ನಾಶಗೊಳಿಸಲಾಯಿತು ಎಂದು ದಾಖಲೆಗಳು ಹೇಳುತ್ತವೆ. ಅಂತಿಮವಾಗಿ ಕಾಶಿ ವಿಶ್ವನಾಥ ದೇವಾಲಯಕ್ಕೆ ನುಗ್ಗಿದ ಈ ದಾಳಿಕೋರರು ದೇವಾಲಯವನ್ನು ವಿಧ್ವಂಸಗೊಳಿಸಿದರು. ದೇಗುಲದ ಗೋಪುರವನ್ನು ನಾಶ ಮಾಡಲಾಯಿತು. ಬಳಿಕ ಅದೇ ದೇಗುಲದ ಅಡಿಪಾಯ ಹಾಗೂ ಗೋಡೆಗಳ ಮೇಲೆ ಮಸೀದಿಯ ಗುಮ್ಮಟವನ್ನು ನಿರ್ಮಿಸಲಾಯಿತು. ಇದೆಲ್ಲವನ್ನೂ ಔರಂಗಜೇಬನ ಕಾಲದಲ್ಲಿ ನಡೆದ ಘಟನೆಗಳನ್ನು ದಾಖಲಿಸಲಾಗುತ್ತಿದ್ದ ಮಾಸಿರ್‌-ಎ-ಆಲಂಗಿರಿಯಲ್ಲಿ ಹೆಮ್ಮೆಯಿಂದ ವರ್ಣಿಸಲಾಗಿದೆ!

ಆದರೆ ಒಂದೊಮ್ಮೆ ಅದು ದೇವಾಲಯವಾಗಿತ್ತು ಎಂದು ಸೂಚಿಸಲಾಗುವ ಎಲ್ಲ ಚಿಹ್ನೆಗಳೂ ಅಲ್ಲಿ ಹಾಗೆಯೇ ಉಳಿದವು. ಆವರಣದಲ್ಲಿದ್ದ ಅರಳಿಮರ, ಅದು ದೇವಸ್ಥಾನವೆಂದು ಸೂಚಿಸುತ್ತಿದ್ದ ವಿವಿಧ ಭಾಷೆಗಳ ಶಾಸನಗಳು, ಶೃಂಗಾರಗೌರಿಯ ವಿಗ್ರಹ, ತ್ರಿಶೂಲದ ಕೆತ್ತನೆ, ಹಿಂದೂ ಧರ್ಮವನ್ನು ಸೂಚಿಸುತ್ತಿದ್ದ ವಿವಿಧ ಚಿಹ್ನೆಗಳು, ಗೋಡೆಗಳನ್ನು ನಿರ್ಮಿಸಲಾಗಿದ್ದ ವಾಸ್ತುಶಿಲ್ಪ ಶೈಲಿ, ಮಸೀದಿಯೆಂದು ಕರೆಯಲಾಗುವ ಕಟ್ಟಡದ ಪಶ್ಚಿಮ ಗೋಡೆಯಲ್ಲಿರುವ ಖಂಡಹಾರ್‌ ಎಲ್ಲವೂ ಅದೊಮ್ಮೆ ಕಾಶಿ ವಿಶ್ವನಾಥನ ದೇವಾಲಯವಾಗಿತ್ತು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಮಸೀದಿಯ ಆವರಣದೊಳಕ್ಕೆ ಸೇರಿಕೊಂಡ ಜ್ಞಾನವಾಪಿ ಬಾವಿ ಹಾಗೂ ಮಸೀದಿಯ ದಿಕ್ಕಿಗೆ ಮುಖ ಮಾಡಿ ನಿಂತ ನಂದಿ ವಿಗ್ರಹ ಅಲ್ಲಿ ನಡೆದ ಕರಾಳ ಘಟನೆಯ ಮೂಕ ಸಾಕ್ಷಿಯಾಗಿ ನಿಂತಿದ್ದವು.

ಇತಿಹಾಸಕಾರರು ಹೇಳುವ ಪ್ರಕಾರ, ಔರಂಗಜೇಬನು ದೇವಾಲಯದ ಪಳೆಯುಳಿಕೆಗಳ ಮೇಲೆಯೇ, ಅಲ್ಲಿನ ಗೋಡೆಗಳ ಮೇಲೆಯೇ ಗುಮ್ಮಟವನ್ನು ನಿರ್ಮಿಸಿ ಅದನ್ನು ಮಸೀದಿಯೆಂದು ಕರೆದ. ಅವನು ಹಾಗೆ ಮಾಡುವುದಕ್ಕೆ ಅವನದ್ದೇ ಆದ ಒಂದು ವಿಚಿತ್ರ ಕಾರಣವಿತ್ತು! ಇದೆಲ್ಲವನ್ನು ಅಧ್ಯಯನ ಮಾಡಿದ ತಜ್ಞರು ಹೇಳುವುದೆಂದರೆ, ತಮ್ಮ ದೇವಾಲಯವನ್ನು ರಕ್ಷಿಸಿಕೊಳ್ಳಲಾಗಲಿಲ್ಲ ಎಂದು ಕಾಶಿ ವಿಶ್ವನಾಥನ ಭಕ್ತರು ದಿನವೂ ಪರಿತಪಿಸಬೇಕು. ಬದಲಾದ ಸ್ವರೂಪದಲ್ಲಿದ್ದ ಆ ಕಟ್ಟಡವನ್ನು ನೋಡಿದಾಗೆಲ್ಲ ಆ ಭಕ್ತರಿಗೆ ದಾಳಿಯಾದ ಕರಾಳ ದಿನ ನೆನಪಿಗೆ ಬರಬೇಕು. ಎಲ್ಲರನ್ನು ರಕ್ಷಿಸುವೆನು ಎನ್ನುವ ಆ ಶಿವ ತನ್ನನ್ನೇಕೆ ರಕ್ಷಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಅವನ ಆರಾಧಕರಿಗೆ ಮೂಡಬೇಕು. ಆ ಮೂಲಕ ಅವರ ನಂಬಿಕೆಯ ತಳಹದಿಯನ್ನೇ ಅಲ್ಲಾಡಿಸುವ ತಂತ್ರ ಅವನ ಯೋಜನೆಯ ಹಿಂದಿದ್ದಿರಲೂಬಹುದು! ಅಂತೂ ಔರಂಗಜೇಬ ಕೋಟ್ಯಂತರ ಭಕ್ತರ ಆರಾಧ್ಯದೈವವನ್ನು, ಅವನ ಆಲಯವನ್ನು ನಿರ್ನಾಮ ಮಾಡುವ ಯತ್ನವನ್ನಂತೂ ಮಾಡಿದ್ದ. ಆದರೆ ದೇವಾಲಯದ ಮೇಲೆ ತಾನು ಹೊಸದಾಗಿ ನಿರ್ಮಿಸಿದ್ದ ಮಸೀದಿಗೆ ʼಜ್ಞಾನವಾಪಿ ಮಸೀದಿʼ ಎಂದೇ ಕರೆದ!

ನಂತರದಲ್ಲಿ ನಡೆದದ್ದೇನು?

1669ರಲ್ಲಿ ಔರಂಗಜೇಬನು ದೇವಾಲಯವನ್ನು ವಿಧ್ವಂಸಗೊಳಿಸಿದ್ದೇನೋ ನಿಜ. ಆದರೆ ಈ ಬಾರಿಯೂ ಭಕ್ತರು ಕಾಶಿಯನ್ನು ಪುನಃ ಪಡೆಯುವ ಪ್ರಯತ್ನವನ್ನು ಮಾಡುತ್ತಲೇ ಬಂದರು. ಅದಾಗಲೇ ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರಿಂದ ಈ ಹೋರಾಟ ಬೇರೆಯದೇ ಸ್ವರೂಪವನ್ನು ಪಡೆಯಿತು. ಕಾಲ ಕಾಲಕ್ಕೂ ಆ ಇಡೀ ಜ್ಞಾನವಾಪಿ ಪ್ರಾಂಗಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಕರಣಗಳು ಹುಟ್ಟುತ್ತಲೇ ಬಂದವು.

ಈ ಮಧ್ಯೆ ರಾಮಜನ್ಮಭೂಮಿ ವಿವಾದದ ಬಳಿಕ ಅಂದಿನ ಉತ್ತರ ಪ್ರದೇಶ ಸರ್ಕಾರದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿದ್ದ ʼಶೃಂಗಾರ ಗೌರಿʼಗೆ ಸಲ್ಲಿಸುತ್ತಿದ್ದ ಪೂಜೆಯನ್ನು ನಿಲ್ಲಿಸಬೇಕಾಯಿತು. ಜ್ಞಾನದ ಸೆಲೆಯೆಂದೇ ವರ್ಣಿತವಾಗಿದ್ದ ಜ್ಞಾನವಾಪಿ ಬಾವಿಯಲ್ಲಿ ಅಲ್ಲಿದ್ದ ಶಿವಲಿಂಗದ ಮೇಲೆಯೇ ಕಾಲುಗಳನ್ನು ತೊಳೆಯುವುದು, ಬಾಯಿ ಮುಕ್ಕಳಿಸಿ ಅದರ ಮೇಲೆ ಉಗುಳುವುದನ್ನು ಮುಂದುವರೆಸಲಾಯಿತು. ಇದೆಲ್ಲವನ್ನೂ ಪ್ರಶ್ನಿಸಬೇಕೆಂದು ಶಿವಭಕ್ತರು ತಯಾರಾಗುತ್ತಿದ್ದ ಸಮಯದಲ್ಲಿಯೇ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಮುಂದಿಟ್ಟು ಇಡೀ ಪ್ರಕರಣಕ್ಕೆ ಹೊಸ ಆಯಾಮವನ್ನೇ ನೀಡುವ ಪ್ರಯತ್ನ ಮಾಡಲಾಯಿತು!

ಮತ್ತೆ ಸುದ್ದಿಗೆ ಬಂತು ʼಜ್ಞಾನವಾಪಿʼ

ಆದರೆ ಹರಿಶಂಕರ್‌ ಜೈನ್‌ ಹಾಗೂ ವಿಷ್ಣುಶಂಕರ್‌ ಜೈನ್‌ ಎಂಬ ಅಡ್ವೋಕೇಟ್‌ಗಳು ಮತ್ತೆ ಈ ಕಾಶಿ ವಿಶ್ವನಾಥ ಮಂದಿರದ ಪ್ರಕರಣಕ್ಕೆ ಜೀವ ಕೊಟ್ಟಿದ್ದು ಪ್ರಕರಣ ಇದೀಗ ದೇಶದ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಅಲ್ಲಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಆದೇಶ ನೀಡಲಾಗಿದೆ. ಹಾಗೂ ಈಗಾಗಲೇ ತಿಳಿಸಿದಂತೆ ಕಳೆದ ವರ್ಷವೇ ಇದರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ  ಮಸೀದಿಯ ಪರವಾಗಿ ನಿಂತವರು ಹೇಳಿದ್ದು: ʼಸಮೀಕ್ಷೆಯ ಸಂದರ್ಭದಲ್ಲಿ ಜ್ಞಾನವಾಪಿ ಬಾವಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದೊಂದು ಕಾರಂಜಿʼ ಎಂದು!

ಸಮೀಕ್ಷೆ ಏನು ಹೇಳುವುದೋ, ವೈಜ್ಞಾನಿಕ ಪರೀಕ್ಷಾ ವಿಧಾನಗಳು ಏನು ಹೇಳುತ್ತವೆಯೋ ಅಥವಾ ಅದೆಲ್ಲದರ ಆಧಾರದಲ್ಲಿ ನ್ಯಾಯಾಲಯ ಏನು ತೀರ್ಪು ನೀಡುವುದೋ ಗೊತ್ತಿಲ್ಲ! ಆದರೆ ಮಸೀದಿಯತ್ತ ಮುಖ ಮಾಡಿ ನಿಂತ ನಂದಿ ಮಾತ್ರ ಎಂದಿಗೂ ಸುಳ್ಳನ್ನು ಹೇಳುವುದಿಲ್ಲ!!

(ಈ ಲೇಖನದಲ್ಲಿ ಬರುವ ಔರಂಗಜೇಬನ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಭಾರತದ ಖ್ಯಾತ ಇತಿಹಾಸಕಾರ‌ ಹಾಗೂ ವಾರಣಾಸಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಡಾ.ವಿಕ್ರಮ್‌ ಸಂಪತ್ ಅವರ Waiting for Shiva: Unearthing the Truth of Kashi’s Gyanavapi  (ಕನ್ನಡದಲ್ಲಿ- ಶಿವನಿಗಾಗಿ ಕಾಯುತ್ತ: ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ) ಎಂಬ ಗ್ರಂಥವನ್ನು, ವಿಶೇಷ ಉಪನ್ಯಾಸವನ್ನು ಹಾಗೂ ಡಾ.ಆನಂದ್‌ ರಂಗನಾಥನ್‌, ಹರಿಶಂಕರ್‌ ಜೈನ್‌ ಹಾಗೂ ವಿಷ್ಣು ಶಂಕರ್‌ ಜೈನ್‌ ಅವರ ಉಪನ್ಯಾಸಗಳನ್ನು ಆಧರಿಸಲಾಗಿದೆ.

ಹಾಗೂ ಸ್ವತಃ ನಾನು ವಾರಣಾಸಿಗೆ ಭೇಟಿ ನೀಡಿ ಕೆಲವು ಪ್ರಾಥಮಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಬರೆಯಲಾಗಿದೆ.)


 -ಶ್ರೀಗೌರಿ ಎಸ್‌.ಜೋಶಿ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!