spot_img
Thursday, December 12, 2024
spot_img

PDO, VAO ಅಂತಹ ಹುದ್ದೆಗಳ ಪರೀಕ್ಷಾ ಪಠ್ಯಕ್ರಮ ಪರಿಷ್ಕರಣೆ ಅಗತ್ಯ !

ನಿರ್ದಿಷ್ಟ ಹುದ್ದೆಗಳ ಪರೀಕ್ಷೆಗಳಿಗೆ ನಿರ್ದಿಷ್ಟ ವಿಷಯಗಳಿಗಷ್ಟೇ ಪ್ರಾಶಸ್ತ್ಯ ನೀಡಲಿ

ಜನಪ್ರತಿನಿಧಿ
ಶ್ರೀರಾಜ್‌ ವಕ್ವಾಡಿ

ರಾಜ್ಯದಲ್ಲಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಕನಸಿನಲ್ಲಿ ಲಕ್ಷಾಂತರ ಮಂದಿ ಕೆಪಿಎಸ್‌ಸಿ, ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ. ದಿನಗಟ್ಟಲೇ ಓದಿ ಪರೀಕ್ಷೆಗಳಿಗೆ ತಯಾರಾಗುತ್ತಾರೆ. ಇತ್ತೀಚೆಗಿನ ಪರೀಕ್ಷೆಗಳಲ್ಲಿ ಎಷ್ಟೇ ಓದಿದರೂ ಉತ್ತೀರ್ಣರಾಗುವುದು ಬಹಳ ಕಷ್ಟ. ಇದಕ್ಕೆ ಪರೀಕ್ಷೆಗಳು ಬರೆಯುತ್ತಿರುವ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದೂ ಕೂಡ ಒಂದು ಕಾರಣ. ಇತ್ತೀಚೆಗೆ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಮಾದರಿ, ಪಠ್ಯಕ್ರಮ ಕಠಿಣಾತೀಕಠೀಣ ಎನ್ನುವ ಹಾಗೆ ಬರುತ್ತಿದ್ದು, ಪರೀಕ್ಷಾರ್ಥಿಗಳ ಪಾಲಿಗೆ ನಿಜಕ್ಕೂ ಭ್ರಮನಿರಸನ ಮೂಡಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ವರ್ಷಗಳು ಕಳೆದ ಹಾಗೆ ಸ್ಪರ್ಧಾ ಜಗತ್ತು ಒಂದು ಸವಾಲೇ ಸರಿ. ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮವೂ ಕೂಡ ಪರೀಕ್ಷಾರ್ಥಿಗಳ ಪಾಲಿಗೆ ದೊಡ್ಡ ಭಾರವೇ ಆಗಿದೆ ಎಂದರೆ ತಪ್ಪಿಲ್ಲ. ಗ್ರೂಪ್‌ ಸಿ  ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳು ಕೂಡ ಈಗ ಪ್ರೊಬೇಷನರಿ ಹುದ್ದೆಗಳಿಗೆ, ಕೆಎಎಸ್‌ ಪರೀಕ್ಷೆಗೆ ಸರಿಸಮ ಎನ್ನುವ ಹಾಗೆ ನಡೆಯುತ್ತಿರುವುದು, ಸ್ಪರ್ಧಾ ಜಗತ್ತಿನ ಸೂಚ್ಯ ರೂಪ ಎಂದರೆ ತಪ್ಪಿಲ್ಲ. ಆದರೇ ಇದು ಗ್ರೂಪ್‌ ಸಿ ಹುದ್ದೆಗಳನ್ನು ಪಡೆಯಬೇಕು ಎನ್ನುವ ಕನಸಿನೊಂದಿಗೆ ಪರೀಕ್ಷೆಗಳನ್ನು ಬರೆದ ಪರೀಕ್ಷಾರ್ಥಿಗಳ ಪಾಲಿಗೆ ನಿರಾಸೆ ಮೂಡಿಸಿರುವುದಂತೂ ಸುಳ್ಳಲ್ಲ. PDO, VAO ಪರೀಕ್ಷೆಗಳ ಪಠ್ಯಕ್ರಮಗಳ ಪರೀಷ್ಕರಣೆ ಮಾಡುವ ತುರ್ತು ಅಗತ್ಯವಿದೆ ಎಂದು ಕಾಣಿಸುತ್ತಿದೆ. ಒಂದು ನಿರ್ದಿಷ್ಟ ಹುದ್ದೆಗೆ ಪರೀಕ್ಷೆ ನಡೆಸುವಾಗ ಆ ಹುದ್ದೆಗೆ ಸಂಬಂಧಿಸಿದಂತೆಯೇ ಪಠ್ಯಕ್ರಮಗಳನ್ನು ತಯಾರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.

ಕೆಪಿಎಸ್‌ಸಿ ಇತ್ತೀಚೆಗೆ ನಡೆಸಿದ PDO, VAO ಪರೀಕ್ಷೆಗಳ ಪಠ್ಯಕ್ರಮದ ಬಗ್ಗೆ ಈಗ ಅಲ್ಲಲ್ಲಿ ಪರೀಕ್ಷಾರ್ಥಿಗಳಿಂದ ಆಕ್ಷೇಪಗಳು ಕೇಳಿ ಬರುತ್ತಿವೆ. ಗ್ರಾಮ ಪಂಚಾಯತ್‌, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಬಗ್ಗೆ ಅಪರಿಮಿತವಾಗಿ ತಿಳಿದುಕೊಳ್ಳಬೇಕಿರುವ ಈ ಹುದ್ದೆಗಳ ಪರೀಕ್ಷೆಗಳಲ್ಲಿ ನಿರ್ದಿಷ್ಟ ವಿಷಯಗಳಿಗಿಂತ ಉಳಿದ ವಿಷಯಗಳೇ ತುಂಬಿರುವ ಪಠ್ಯಕ್ರಮಗಳನ್ನು, ಪ್ರಶ್ನೆಪತ್ರಿಕೆಗಳನ್ನು ತಯಾರಿಸುತ್ತಿರುವುದು ನಿಜಕ್ಕೂ ಪ್ರಶ್ನಾರ್ಹವಾಗಿದೆ. ʼಮೊದಲನೇ ಪ್ರಶ್ನೆ ಪತ್ರಿಕೆಗೆ ʼಸಾಮಾನ್ಯ ಜ್ಞಾನʼವೆಂದು ಹೆಸರು. ಪ್ರಶ್ನೆಗಳನ್ನು ಗಮನಿಸಿದರೇ, ಪ್ರಶ್ನೆ ಪತ್ರಿಕೆಯ ಹೆಸರನ್ನೇ ಬದಲಾಯಿಸಬೇಕೋ ಎಂಬಂತೆ ಕಾಣಿಸುತ್ತಿದೆʼ ಎಂದು ಹೇಳುತ್ತಾರೆ ಇತ್ತೀಚೆಗೆ ಕೆಪಿಎಸ್‌ಸಿ ನಡೆಸಿದ PDO ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದ ಉಡುಪಿ ಜಿಲ್ಲೆಯ ಹೆಸರು ಬಹಿರಂಗಗೊಳಿಸಲು ಇಷ್ಟಪಡದ ಅಭ್ಯರ್ಥಿಯೊಬ್ಬರು.

ಮೊದಲನೇ ಪ್ರಶ್ನೆ ಪತ್ರಿಕೆ (ಸಾಮಾನ್ಯ ಜ್ಞಾನ)ಯಲ್ಲಿ  ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಘಗಳ ವಿಷಯಗಳಿಗೆ ಸಂಬಂಧಿಸಿದಂತೆ ಕೇವಲ ಐದು ಅಂಕಗಳ ಪ್ರಶ್ನೆಗಳನ್ನು ಹೊರತಾಗಿ ಮತ್ತೇನೂ ಇಲ್ಲ. ಎರಡನೇ ಪ್ರಶ್ನೆ ಪತ್ರಿಕೆಗೆ ನಿರ್ದಿಷ್ಟ ವಿಷಯಗಳೆಂದು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್‌, ಕಂಪ್ಯೂಟರ್‌ ಸೈನ್ಸ್‌ ವಿಷಯಗಳ ಪಠ್ಯಕ್ರಮವಿದೆ. ʼಒಬ್ಬ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾಗಬೇಕಾಗಿರುವವ ನಿರ್ದಿಷ್ಟ ವಿಷಯಗಳೆಂದು ಕನ್ನಡ, ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಷಯಗಳನ್ನು ತಿಳಿದುಕೊಂಡಿರಬೇಕೋ ಅಥವಾ ಪಂಚಾಯತ್‌ ರಾಜ್‌ ಹಾಗೂ ಗ್ರಾಮ ಪಂಚಾಯತ್‌ಗೆ ಸಂಬಧಿಸಿದಂತಹ ವಿಷಯಗಳ ಬಗ್ಗೆ ಜ್ಞಾನ ಹೊಂದಿರಬೇಕೋ ಎಂದು ತಿಳಿಯದಂತಾಗಿದೆʼ. ʼPDO ಪರೀಕ್ಷೆ ಬರೆಯುವವ ಹಾಗೂ PDO ಆಗಿ ನೇಮಕಗೊಳ್ಳುವವ ಪರೀಕ್ಷೆಗೆ ಪಂಚಾಯತ್‌ ರಾಜ್‌ ಹಾಗೂ ಪಂಚಾಯತ್‌ ಗೆ ಸಂಬಂಧಿಸಿದ ವಿಷಯಗಳಿಗಿಂತ ಹೆಚ್ಚು ಉಳಿದಿರುವ ವಿಷಯಗಳನ್ನು ತಿಂಗಳುಗಟ್ಟಲೇ ಕೂತು ಓದಬೇಕಾದ ಸ್ಥಿತಿಯನ್ನು ಸಂಬಂಧಪಟ್ಟ ಪರೀಕ್ಷಾ ಆಯೋಗ ತಂದಿಟ್ಟಿದೆʼ ಎಂದು ಆಕ್ರೋಶ ಹೊರ ಹಾಕುತ್ತಾರೆ ಇತ್ತೀಚೆಗೆ PDO ಪರೀಕ್ಷೆಯನ್ನು ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಇನ್ನೋರ್ವ ಹೆಸರು ಹೇಳಲು ಬಯಸದ ಅಭ್ಯರ್ಥಿ.

ಮೊದಲನೇ ಪ್ರಶ್ನೆ ಪತ್ರಿಕೆಯ ಪಠ್ಯಕ್ರಮ : ಪ್ರಸ್ತುತ ಘಟನೆಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳದಲ್ಲಿ ವಿಷಯಗಳು, ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜದ ಇತಿಹಾಸ ಮತ್ತು ಅದರ ಬೆಳವಣಿಗೆಗಳಲ್ಲಿನ ವಿಷಯಗಳು, ಭಾರತ ಮತ್ತು ಕರ್ನಾಟಕದ ಇತಿಹಾಸ, ಭಾರತದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ, ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವಾತಂತ್ರ್ಯದ ನಂತರ ಕರ್ನಾಟಕದಲ್ಲಿ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು, ಕರ್ನಾಟಕದ ಆರ್ಥಿಕತೆಯ ವಿಷಯಗಳು, ಅದರ ಸಾಮರ್ಥ್ಯಗಳು ಮತ್ತು ದೌರ್ಬಲ್ಯ ಪ್ರಸ್ತುತ ಸ್ಥಿತಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಘಗಳ ವಿಷಯಗಳು, ಕರ್ನಾಟಕದ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ವಿಷಯಗಳು, ಪರಿಸರ ಸಮಸ್ಯೆಗಳು ಮತ್ತು ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು, ಮಾನಸಿಕ ಸಾಮರ್ಥ್ಯದ ವಿಷಯಗಳು.

ಎರಡನೇ ಪ್ರಶ್ನೆ ಪತ್ರಿಕೆಯ ವಿಷಯಗಳು (ನಿರ್ದಿಷ್ಟ ಪ್ರಶ್ನೆ ಪತ್ರಿಕೆ) :   

ಸಾಮಾನ್ಯ ಕನ್ನಡ : ಕನ್ನಡ ವ್ಯಾಕರಣ, ಶಬ್ದಕೋಶ, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಗ್ರಹಿಸುವ ಶಕ್ತಿ ಮತ್ತು ಸರಿಯಾದ ಮತ್ತು ತಪ್ಪು ಬಳಕೆಯ ನಡುವೆ ವ್ಯತ್ಯಾಸ ಕಂಡು ಹುಡುಕುವ ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯಗಳು, ಹಳೆಗನ್ನಡ, ಕನ್ನಡ ಸಾಹಿತ್ಯ.

ಸಾಮಾನ್ಯ ಇಂಗ್ಲಿಷ್‌ : ಇಂಗ್ಲಿಷ್ ವ್ಯಾಕರಣ, ಶಬ್ದಕೋಶ, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಇಂಗ್ಲಿಷ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಗ್ರಹಿಸುವ ಶಕ್ತಿ ಮತ್ತು ಸರಿಯಾದ ಮತ್ತು ತಪ್ಪಾದ ಬಳಕೆಯನ್ನು ಕಂಡು ಹಿಡಿಯುವ ಸಾಮರ್ಥ್ಯದ ಪ್ರಶ್ನೆಗಳು, ಇಂಗ್ಲಿಷ್‌ ಸಾಹಿತ್ಯ.

ಕಂಪ್ಯೂಟರ್‌ ಸೈನ್ಸ್‌ : ಕಂಪ್ಯೂಟರ್ ಸಿಸ್ಟಮ್ನ ಫಂಡಮೆಂಟಲ್‌ ಸಿಸ್ಟಮ್‌, ಆಪರೇಟಿಂಗ್ ಸಿಸ್ಟಮ್, ಎಂಎಸ್ ಆಫೀಸ್‌, ಕೀಬೋರ್ಡ್ ಶಾರ್ಟ್‌ಕಟ್‌ಗಳು ಮತ್ತು ಅವುಗಳ ಉಪಯೋಗಗಳು, ಕಂಪ್ಯೂಟರ್ ಟರ್ಮ್ಸ್‌, ಕಂಪ್ಯೂಟರ್ ನೆಟ್ವರ್ಕ್ಸ್, ಸೈಬರ್ ಭದ್ರತೆ, ಇಂಟರ್ನೆಟ್.

ಪಠ್ಯಕ್ರಮ ಬದಲಾಗಲಿ :

PDO, VAO ಅಂತಹ ಹುದ್ದೆಗಳಿಗೆ ಪರೀಕ್ಷೆಗಳನ್ನು ಬರೆಯುವವ ಕನ್ನಡ ಕಡ್ಡಾಯ ಪರೀಕ್ಷೆಗಳನ್ನು ಬರೆಯಲೇಬೇಕು. ಕನ್ನಡ ಸಾಹಿತ್ಯ, ಸಮನಾರ್ಥಕ ಪದ, ವಿರುದ್ಧಾರ್ಥಕ ಪದ, ತತ್ಸಮ ತದ್ಭವ, ವಾಕ್ಯ ರಚನೆ, ಪ್ರಬಂಧ ರಚನೆ, ಭಾಷಾಂತರ, ಸಂಕ್ಷಿಪ್ತ ಬರಹ ಎಲ್ಲವೂ ಒಬ್ಬ ಅಭ್ಯರ್ಥಿ ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಬರೆದಿರುತ್ತಾನೆ. ಆದಾಗ್ಯೂ ಅವೇ ವಿಷಯ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿರ್ದಿಷ್ಟ ವಿಷಯವೆಂದು ಬದಲಿ ಹೆಸರಿನೊಂದಿಗೆ ಯಾಕೆ ಎನ್ನುವುದು ಪರೀಕ್ಷಾ ಅಭ್ಯರ್ಥಿಗಳ ಮುಂದಿರುವ ಪ್ರಶ್ನೆ. ಇಂತಹ ನಿರ್ದಿಷ್ಟ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆಯೇ ಪಠ್ಯಕ್ರಮಗಳನ್ನು, ಪ್ರಶ್ನೆಗಳನ್ನು ತಯಾರಿಸುವುದು ಸೂಕ್ತ. ಸಾಮಾನ್ಯ ಜ್ಞಾನದ ಪ್ರಶ್ನೆಪತ್ರಿಕೆಯನ್ನೂ ಇಂತಹ ಹುದ್ದೆಗಳ ಪರೀಕ್ಷೆಗಳಿಗೆ ಸರಳಗೊಳಿಸುವುದರ ಬಗ್ಗೆ ಆಯೋಗ/ಪ್ರಾಧಿಕಾರ ಗಮನ ಹರಿಸಬೇಕಿದೆ ಎನ್ನುವುದು ಪರೀಕ್ಷಾ ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!