spot_img
Wednesday, December 11, 2024
spot_img

ಮುರುಡೇಶ್ವರ ದುರಂತ : ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ | ಆರು ಶಿಕ್ಷಕರ ವಿರುದ್ಧ ಕ್ರಮ

ಜನಪ್ರತಿನಿಧಿ (ಉತ್ತರ ಕನ್ನಡ/ಬೆಂಗಳೂರು) : ಶೈಕ್ಷಣಿಕ ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಲುಕಿ ವಿದ್ಯಾರ್ಥಿಗಳು ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಹಾಗೂ ಆರು ಶಿಕ್ಷಕರ ತಂಡ ಮಂಗಳವಾರ ತಮ್ಮ ಶಾಲಾ ಶೈಕ್ಷಣಿಕ ಪ್ರವಾಸದ ಅಂಗವಾಗಿ ಮುರುಡೇಶ್ವರಕ್ಕೆ ತೆರಳಿತ್ತು. ಪೊಲೀಸರ ಪ್ರಕಾರ, ಸಂಜೆ 5.30ರ ಸುಮಾರಿಗೆ ಶಿಕ್ಷಕರು, ವಿದ್ಯಾರ್ಥಿಗಳ ಜೊತೆಗೆ ಬೀಚ್‌ಗೆ ತೆರಳಿದರು. ಜೀವರಕ್ಷಕರ ಎಚ್ಚರಿಕೆಯ ಹೊರತಾಗಿಯೂ, ಏಳು ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಈ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳನ್ನು ಜೀವರಕ್ಷಕರು ರಕ್ಷಣೆ ಮಾಡಿದ್ದರು. ಆದರೆ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದರು.

ನಿನ್ನೆಯೇ ಓರ್ವ ವಿದ್ಯಾರ್ಥಿನಿ ಶ್ರವಂತಿ ಮೃತದೇಹವನ್ನು ಹೊರತೆಗೆಯಲಾಗಿತ್ತು. ಇಂದು ಜೀವರಕ್ಷಕರು, ಗೃಹ ರಕ್ಷಕರು, ಮೀನುಗಾರರು ಮತ್ತು ಪೊಲೀಸರನ್ನು ಒಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದು ಬೆಳಿಗ್ಗೆ ಮೂವರು ಬಾಲಕಿಯರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಪ್ರಕರಣವನ್ನು ದಾಖಲಿಸಲಾಗಿದ್ದು ಎಲ್ಲಾ ಆರು ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಉತ್ತರ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ತಿಳಿಸಿದ್ದಾರೆ.

ನಂತರ ಶಿಕ್ಷಕರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮೃತ ವಿದ್ಯಾರ್ಥಿನಿಯರನ್ನು 15 ವರ್ಷದ ಶ್ರವಂತಿ, ದೀಕ್ಷಾ, ಲಾವಣ್ಯ ಮತ್ತು ಲಿಪಿಕಾ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಸಂತ್ರಸ್ತ ಪೋಷಕರಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ‘X’ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ದುರಂತದಲ್ಲಿ ಸಾವನ್ನಪ್ಪಿದ ನಾಲ್ವರು ವಿದ್ಯಾರ್ಥಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ನಾನು ಉತ್ತರ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಡಳಿತಕ್ಕೆ ವಿದ್ಯಾರ್ಥಿನಿಯರ ಮೃತದೇಹಗಳನ್ನು ಅವರ ಊರುಗಳಿಗೆ ಸಾಗಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರವಾಸದ ಸಮಯದಲ್ಲಿ ಶಿಕ್ಷಕರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸದಂತೆ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!