spot_img
Friday, January 17, 2025
spot_img

ತೆರಿಗೆ ಕಟ್ಟುವವರಿಗೆ ಅನ್ನಭಾಗ್ಯದ ಅಗತ್ಯ ಇಲ್ಲ ಅಲ್ಲವೇ? | ನಮ್ಮ ರೈತ ಸಮುದಾಯಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರ ಬರಬೇಕು : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ ಅನ್ನಭಾಗ್ಯ ನನಗೆ ಸಿಗಬಾರದು. ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೇ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾಗಿದೆ. ತೆರಿಗೆ ಕಟ್ಟುವವರಿಗೆ ಅನ್ನಭಾಗ್ಯದ ಅಗತ್ಯ ಇಲ್ಲ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಕಸಬಾ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಜಿಡಿಪಿಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್. ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ರೈತರ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ನಮ್ಮ ಉತ್ಪಾದನೆಗೆ ನಾವೇ ಬೆಲೆ ನಿಗದಿ ಮಾಡುವಂತಾಗಬೇಕು. ಕೈಗಾರಿಕೋದ್ಯಮಿಗಳು ಅವರು ತಯಾರಿಸಿದ ವಸ್ತುಗಳಿಗೆ ಅವರೇ ಬೆಲೆ ನಿಗದಿ ಮಾಡುತ್ತಾರೆ. ಇದೇ ಅಧಿಕಾರ ನಮ್ಮ‌ ರೈತರಿಗೂ ಸಿಗಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ಯಶಸ್ವಿ ಆಗಬೇಕಾದರೆ ದೇಶದ 140 ಕೋಟಿ ಜನರಿಗೂ ಸಕಲ ಸಹಕಾರ ಕೊಡಬೇಕು. ನಮ್ಮ ರೈತ ಸಮುದಾಯಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರ ಬರಬೇಕು. ಆಗ ತಾರತಮ್ಯ ನಿವಾರಣೆ ಆಗುತ್ತದೆ ಎಂದರು.

ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯ. ಈ ಕಾರಣಕ್ಕೆ ನಾವು ಅನ್ನಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.

ಬಡ ಕುಟುಂಬದವರ ಮತ್ತು ನಮ್ಮ ಹೆಣ್ಣು ಮಕ್ಕಳ ಹಣ ಉಳಿತಾಯ ಆಗಲಿ ಎನ್ನುವ ಕಾರಣದಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ನಮ್ಮ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಕೈಯಲ್ಲಿ ಕಾಸಿದ್ದರೆ ತಾನೆ ನಮ್ಮ ಜನ ಖರೀದಿಗೆ ಹೋಗೋದು. ಅದಕ್ಕೆ ಜನರ ಕೈಯಲ್ಲಿ ಕಾಸು ಇರುವ ಯೋಜನೆ ಜಾರಿ ಮಾಡಿದ್ದೇವೆ. ಇನ್ನೂ, ಕೆ.ಆರ್.ಪೇಟೆಯಲ್ಲಿ ಹಾಳಾಗಿರುವ ರಸ್ತೆ, ಕೆರೆ, ಸೇತುವೆಗೆ ಹಣ ಕೊಡಬೇಕು ಎನ್ನುವ ಮನವಿ ಬಂದಿದೆ. ನಾವು ಬೇಡಿಕೆಗೆ ತಕ್ಕಷ್ಟು ಹಣವನ್ನು ಖಂಡಿತ ಬಿಡುಗಡೆ ಮಾಡುತ್ತೇವೆ.

ರಾಜ್ಯದಲ್ಲಿ ಪ್ರತೀ ಲೀಟರ್ ಹಾಲಿಗೆ 5 ರೂಪಾಯಿ ಸಹಾಯಧನ ಜಾರಿ ಮಾಡಿದ್ದು ನಾವು. ದಿನಕ್ಕೆ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಅಂದರೆ ಪ್ರತೀ ದಿನ 5 ಕೋಟಿ ರೂಪಾಯಿಯನ್ನು ಹಾಲು ಉತ್ಪಾದಕರಿಗೆ ಕೊಡುತ್ತಿದ್ದೇವೆ. ನಾವು ಒಂದು ಕಡೆ ರೈತರಿಗೆ ಶಕ್ತಿ ತುಂಬುತ್ತಿದ್ದೇವೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ರಾಜ್ಯದ ರೈತರಿಗೆ ನಬಾರ್ಡ್‌ನಿಂದ ಕೊಡುವ ಸಬ್ಸಿಡಿ ಸಾಲದ ಪ್ರಮಾಣವನ್ನು ಶೇ.58 ರಷ್ಟು ಕಡಿತಗೊಳಿಸಿದೆ. ಬರೀ ಭಾಷಣ ಮಾಡಿದರೆ ರೈತರ ಬದುಕು ಉದ್ಧಾರ ಆಗಲ್ಲ ಎಂದವರು ಹೇಳಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!