spot_img
Wednesday, December 4, 2024
spot_img

ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ | ದ್ವೇಷದಿಂದ ಸಮಾಜ ಛಿದ್ರ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬಳ್ಳಾರಿ) : ಮನುಷ್ಯತ್ವ ದ್ವೇಷಿ – ಧರ್ಮದ್ರೋಹಿಗಳ ಬಗ್ಗೆ ಎಚ್ಚರ ಇರಲಿ. ಭಾರತ ಬಹುತ್ವದ ದೇಶ. ಸರ್ವಧರ್ಮ‌ ಸಮನ್ವಯ ಭಾರತದ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ. ಧರ್ಮದ ಅರ್ಥ ಬಹಳ ಸರಳ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಮಯ್ಯ ಹೇಳಿದರು.

ಇಂದು(ಬುಧವಾರ) ಬಳ್ಳಾರಿಯ ಧರ್ಮಕ್ಷೇತ್ರದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಧರ್ಮವನ್ನು ಪಾಲಿಸೋಣ. ಎಲ್ಲ ಧರ್ಮಗಳನ್ನೂ ಗೌರವಿಸುವ ಸಹಿಷ್ಣುತೆ ಬೆಳೆಸಿಕೊಳ್ಳಿ ಎನ್ನುವುದೇ ನಮ್ಮ‌ ಸಂವಿಧಾನದ ಮಹಾನ್ ಮೌಲ್ಯ. ಇದನ್ನು ಪಾಲಿಸುವುದೇ ನಾವು ಸ್ವಾಮಿ ವಿವೇಕಾನಂದರಿಗೆ, ಸಂವಿಧಾನಕ್ಕೆ ನೀಡುವ ಮಹೋನ್ನತ ಗೌರವ. ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ ಎಂದರು.

ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಇಡೀ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ನಮ್ಮ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿತು. ನಾನು ವೀರಮಕ್ಕಳ ಕುಣಿತಕ್ಕೆ ಸೇರಿ ಶಿಕ್ಷಣದಿಂದ ವಂಚಿತನಾಗಿದ್ದೆ. ಆದರೆ ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ ಎಂದರು.

ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಸಂಸ್ಥೆಗಳು ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೂ ಶಿಕ್ಷಣ ಕೊಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ. ದೇವ ಒಂದೇ ನಾಮ ಹಲವು ಎನ್ನುವುದು ಎಲ್ಲರ ನಂಬಿಕೆ. ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶ ಎಂದು ಬಸವಾದಿ ಶರಣರು ಹೇಳಿದ್ದು ಈ ಕಾರಣಕ್ಕಾಗಿಯೇ ಎಂದವರು ಹೇಳಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!