Thursday, November 21, 2024

ಕೊಲ್ಲೂರಿಗೆ ಡಿಸಿಎಂ ಡಿಕೆಶಿ ಭೇಟಿ | ಕೊಲ್ಲೂರು ಸಮಿತಿ ಬಗ್ಗೆ ಇರುವ ಅಸಮಾಧಾನವನ್ನು ತಳ್ಳಿಹಾಕಿದ ಶಿವಕುಮಾರ್‌

ಜನಪ್ರತಿನಿಧಿ (ಕುಂದಾಪುರ/ಕೊಲ್ಲೂರು) : ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು(ಗುರುವಾರ) ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯಾ ಅವರೊಂದಿಗೆ ಬಂದಿದ್ದ ಡಿಕೆಶಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ರಾಜು ಪೂಜಾರಿ ಸೇರಿ ಮತ್ತಿರರು ಇದ್ದರು.

ಅರ್ಚಕರಾದ ಎನ್. ನರಸಿಂಹ ಅಡಿಗ, ಶ್ರೀಧರ ಅಡಿಗ, ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ವರ ಅಡಿಗ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ವರದಿಗಾರರಿಗೆ ಸ್ಪಂದಿಸಿ, ನಕ್ಸಲ್ ವಿಕ್ರಂ ಗೌಡ ಎಂಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆಶಿ, ಪೊಲೀಸರು ಪೊಲೀಸರ ಕೆಲಸವನ್ನು ಮಾಡುತ್ತಾರೆ. ಗೃಹ ಸಚಿವ ಪರಮೇಶ್ವರ್ ಅವರ ಕೆಲಸ ಮಾಡುತ್ತಾರೆ. ನಾನು ರಾಜ್ಯದಲ್ಲಿ ನನ್ನ ಕೆಲಸ ಮಾಡುತ್ತೇನೆ. ರಾಜ್ಯದ ಜನರನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕೆಲಸ. ಕೇರಳ, ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಎಲ್ಲ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ.  ಪೊಲೀಸರ ಅವರ ಡ್ಯೂಟಿ ಮಾಡಿದ್ದಾರೆ ನಾನು ಹೆಚ್ಚು ಮಾತಾಡಲ್ಲ ಎಂದು ಅವರು ಹೇಳಿದ್ದಾರೆ.

ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಸರ್ಕಾರದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ. ಉಪಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ. ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ಅನ್ಯಾಯ ಮಾಡಲ್ಲ. ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಎಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರಂಟಿ ಜಾರಿ ನೋಡಿಕೊಳ್ಳಲು ತಾಲೂಕು ಸಮಿತಿಗಳಿವೆ. ರಾಜ್ಯಮಟ್ಟದ ಸಮಿತಿ ಕೂಡ ಇದೆ. ಅವರು ಉಸ್ತುವಾರಿ ಮಾಡಿ ನ್ಯಾಯ ಕೊಡುತ್ತಾರೆ. ವಿರೋಧ ಪಕ್ಷದವರು ಸುಖಸುಮ್ಮನೆ ಅಪಪ್ರಚಾರ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಲಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಅವರು, ಇನ್ನು ಗ್ಯಾರಂಟಿ 10 ವರ್ಷ ಇರುತ್ತದೆ. ಈ ಅವಧಿಯ ಮೂರು ವರ್ಷಗಳನ್ನು ಸೇರಿ, ಮುಂದಿನ ಅವಧಿಯ ಅವಧಿಯ ಐದು ವರ್ಷ, ಒಟ್ಟು ಎಂಟು ವರ್ಷಗಳ ನಾವೇ ಅಧಿಕಾರದಲ್ಲಿ ಇರುತ್ತೇವೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಯೋಚನೆ ನಮ್ಮ ಸರ್ಕಾರಕ್ಕಿಲ್ಲ ಎಂದವರು ಹೇಳಿದ್ದಾರೆ.

ಕೊಲ್ಲೂರು ಸಮಿತಿ ಬಗ್ಗೆ ಇರುವ ಅಸಮಾಧಾನವನ್ನು ತಳ್ಳಿಹಾಕಿದ ಡಿಕೆಶಿ
ನೂತನವಾಗಿ ರಚನೆಗೊಂಡ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಬಗ್ಗೆ ಕಾಂಗ್ರೆಸ್‌ ವಲಯದಲ್ಲೇ ಇದ್ದ ಅಸಮಧಾನದ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಚುನಾವಣೆಗೂ ಮುಂಚೆ ನಾವು ಮಾತುಕೊಟ್ಟಿದ್ದೇವು, ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಮಿತಿ ರಚನೆ ಮಾಡುತ್ತೇವೆ ಎಂದು ಹೇಳಿದ್ದೇವು. ಅಧಿಕಾರಕ್ಕೆ ಬಂದ ಕೆಲವು ಸಮಯದಲ್ಲಿ ಸಮಿತಿ ಮಾಡಿದ್ದೇವೆ ಎಂದಷ್ಟೇ ಹೇಳುವುದರ ಮೂಲಕ ಕಾಂಗ್ರೆಸ್‌ ಒಳಗಿನ ಅಸಮಾಧಾನವಿದೆ ಎಂಬ ಅಭಿಪ್ರಾಯವನ್ನು ಸಾರಾಸಗಟಾಗಿ ಅವರು ತಳ್ಳಿ ಹಾಕಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!