9.3 C
New York
Thursday, May 13, 2021

Buy now

spot_img

ಕೊರೋನಾ ಬಿಕ್ಕಟ್ಟಿನಲ್ಲಿಯೂ ಕುಗ್ಗದ ಗಣಪತಿ ವಿಗ್ರಹದ ಬೇಡಿಕೆ: 158 ಗಣಪತಿ ವಿಗ್ರಹ ರಚಿಸಿದ ಬಸ್ರೂರಿನ ರಾಜೇಶ ಗುಡಿಗಾರ್

 

ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ರಾಜೇಶ ಗುಡಿಗಾರ್
ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ರಾಜೇಶ ಗುಡಿಗಾರ್

ಕುಂದಾಪುರ: ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಕೊರೋನಾ ದೊಡ್ಡ ಅಡ್ಡಿಯಾಗಿದೆ. ಸಾರ್ವಜನಿಕ ಗಣೇಶೋತ್ಸವಗಳ ಅಬ್ಬರವೇ ಇಲ್ಲ. ಸರಳವಾಗಿ ಶಾಸ್ತ್ರೋಕ್ತವಾಗಿ ಗಣೇಶ ವಿಗ್ರಹ ಪ್ರತಿಷ್ಠಾನೆ ವಿಸರ್ಜನೆಗಷ್ಟೆ ಸೀಮಿತವಾಗಿದೆ. ಕೊರೋನಾ ಆತಂಕದಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವಗಳ ಕತೆ ಏನು ಎನ್ನುವ ಸಹಜ ಪ್ರಶ್ನೆ ಕಾಡಿತ್ತು. ವಿಶೇಷವೆಂದರೆ ಈ ಬಾರಿ ಕಳೆದ ವರ್ಷಕ್ಕಿಂತ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಸ್ವತಃ ವಿಗ್ರಹ ತಯಾರಕರಾದ ಬಸ್ರೂರು ರಾಜೇಶ ಗುಡಿಗಾರರು.

ಪಾರಂಪರಿಕವಾಗಿ ಗಣಪತಿ ವಿಗ್ರಹ ರಚನೆ ಮಾಡುವ ರಾಜೇಶ ಗುಡಿಗಾರರು ಕಳೆದ ವರ್ಷ 155 ವಿಗ್ರಹಗಳನ್ನು ಬೇಡಿಕೆಯ ಆಧಾರದಲ್ಲಿ ತಯಾರಿಸಿ ಕೊಟ್ಟಿದ್ದರು. ಆದರೆ ಈ ಬಾರಿ ಕೊರೋನಾ ಆತಂಕದಲ್ಲಿಯೇ 158 ವಿಗ್ರಹಗಳಿಗೆ ಬೇಡಿಕೆ ಬಂದಿದೆಯಂತೆ. ಕಳೆದ ಬಾರಿಗಿಂತ 3 ವಿಗ್ರಹಗಳ ಬೇಡಿಕೆ ಹೆಚ್ಚು. ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ, ಅನ್ನದಾನ ಇತ್ಯಾದಿ ಆಡಂಬರದ ಆಚರಣೆಗಳಿಗೆ ಈ ಬಾರಿ ಇಲ್ಲ. ಸರಳವಾಗಿ ಮೆರವಣಿಗೆ ಇಲ್ಲದೇ ಗಣಪತಿ ಪ್ರತಿಷ್ಠಾಪಿಸಿ, ಅಂದೇ ವಿಸರ್ಜನೆ ಮಾಡಲಾಗಿತ್ತದೆ. ಸಂಪ್ರದಾಯವನ್ನು ನಿಲ್ಲಿಸಬಾರದು ಎನ್ನುವುದು ನಂಬಿಕೆ.

ಪರಂಪರೆಯ ಮುಂದುವರಿಸಿದ ಕಲಾವಿದ:
ಬಸ್ರೂರಿನ ಶಿಶು ಮಂದಿರದ ಹತ್ತಿರ ರಾಜೇಶ ಗುಡಿಗಾರ ಗಣೇಶ ವಿಗ್ರಹಗಳ ರಚನೆ ಮಾಡುತ್ತಾರೆ. ಪ್ರತೀ ವರ್ಷ 150ಕ್ಕೂ ಹೆಚ್ಚು ವಿಗ್ರಹಗಳ ರಚನೆ ಮಾಡುತ್ತಾರೆ. ಈ ವರ್ಷ 158 ಗಣೇಶ ವಿಗ್ರಹಗಳಿಗೆ ಬೇಡಿಕೆ ಪಡೆದುಕೊಂಡು ಸಿದ್ಧತಾ ಕಾರ್ಯ ಪೂರ್ಣಗೊಳಿಸಿದ್ದಾರೆ. ವಿವಿಧ ಆಕಾರ, ಸ್ವರೂಪಗಳ ಗಣಪತಿಯನ್ನು ರಚಿಸುವ ರಾಜೇಶ ಗುಡಿಗಾರ್ ಅದ್ಬುತ ಕಲಾವಿದ.

ತಾತನ ಕಾಲದಿಂದಲೂ ಈ ವೃತ್ತಿ ಅನೂಚಾನವಾಗಿ ಮುಂದುವರಿದುಕೊಂಡು ಬಂದಿದ್ದಾರೆ ರಾಜೇಶ್. ಮೋಹನ ಗುಡಿಗಾರ್ ಅವರಿಂದ ಈ ವಿದ್ಯೆ ಸಿದ್ಧಿಸಿಕೊಂಡ ರಾಜೇಶ ಗುಡಿಗಾರ್ ಅವರ ಅಸೀಮ ಆಸಕ್ತಿ, ಈ ಕಲೆಯ ಬಗ್ಗೆ ಇರುವ ಆಸ್ಮಿಯತೆ ಇದರಲ್ಲಿ ಮುಂದುವರಿಯುವಂತೆ ಮಾಡಿದೆ. ರಾಜೇಶ ಗುಡಿಗಾರ್ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ 1993ರಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ನಂತರ ಹೆಲ್ತ್ ಇನ್ಸ್‍ಪೆಕ್ಟರ್ ಡಿಪ್ಲಮೋ ಮಾಡಿದ್ದಾರೆ. ಬದುಕಿನ ಮುಂದೆ ಸಾಕಷ್ಟು ಅವಕಾಶಗಳು ಇದ್ದರೂ ಕೂಡಾ ಅವರು ಆಯ್ದುಕೊಂಡಿದ್ದು ಮಾತ್ರ ಪರಂಪರೆಯ ಈ ವೃತ್ತಿ. ಮಳೆಗಾಲದಲ್ಲಿ ಗಣೇಶ ವಿಗ್ರಹ ರಚನೆ, ಬೇರೆ ಸಮಯದಲ್ಲಿ ದೈವದ ವಿಗ್ರಹಗಳ ರಚನೆ, ಬಣ್ಣಗಾರಿಕೆ. ದಾರುಶಿಲ್ಪ ಹಾಗೂ ಮೃತ್ತಿಕೆಯಲ್ಲಿ ಅವರು ಅಪೂರ್ವ ಸಿದ್ಧಿ ಪಡೆದಿದ್ದಾರೆ. ಇವರು ತಯಾರಿಸುವ ಗಣಪತಿ ವಿಗ್ರಹಗಳಷ್ಟೆ ದಾರು ಕೆತ್ತನೆಯ ದೈವದ ವಿಗ್ರಹಗಳು ಅಷ್ಟೇ ಪ್ರಸಿದ್ದಿ ಪಡೆದಿದೆ.

ರಾಜೇಶ ಗುಡಿಗಾರ್ ಅವರಲ್ಲಿ ಅಡಕವಾಗಿರುವ ಪ್ರತಿಭೆಯ ಪ್ರಬುದ್ದತೆಯ ಹಿನ್ನೆಲೆ ಅಧ್ಯಾಪನಾ ಮತ್ತು ಸೂಕ್ಷ್ಮ ಗ್ರಾಹಿತ್ವ. ಯಾವುದೇ ವಿಗೃಹ ತಯಾರಿಯ ಬಗ್ಗೆ ಅವರಲ್ಲಿ ಸ್ಪಷ್ಟತೆ ಇರುತ್ತದೆ. ಕಲೆಯ ಬಗೆಗಿನ ತುಡಿತ, ಮರವಿರಲಿ, ಮಣ್ಣು ಇರಲಿ ರಚನೆಯಲ್ಲಿ ಸಚೇತನತೆಗೆ ಅವರು ನೀಡುವ ಒತ್ತು ಗಮನ ಸಳೆಯುತ್ತದೆ. ಸಿದ್ಧ ಮಾದರಿ (ಮೌವ್ಡ್) ಹೆಚ್ಚು ಬಳಕೆ ಮಾಡದೆ ಕುಂಚ ಕಲೆಗೆ ಆದ್ಯತೆ ನೀಡುತ್ತಾರೆ.

ಒಬ್ಬ ವ್ಯಕ್ತಿ 158 ಗಣಪತಿಯ ವಿಗ್ರಹ ರಚಿಸುವುದೆಂದರೆ ಸಣ್ಣ ವಿಚಾರವಲ್ಲ. ಇಷ್ಟೂ ಕೂಡಾ ಬೇಡಿಕೆ ಆಧಾರದಲ್ಲಿ ರಚಿಸುವುದೆ ಆಗಿದೆ. ಜೂನ್ ತಿಂಗಳಲ್ಲಿಯೇ ಬೇಡಿಕೆಗಳನ್ನು ಪಡೆದುಕೊಂಡು ಮಣ್ಣಿನೊಂದಿಗೆ ಕಸರತ್ತು ನಡೆಸಲು ಆರಂಭಿಸಿದರೆ ಮೂರು ತಿಂಗಳು ಮೂರು ತಿಂಗಳು ದಿನದ ಎಂಟು ಗಂಟೆಗೂ ಹೆಚ್ಚುಕಾಲ ಮಣ್ಣಿನೊಡನೆ ಸರಸವಾಡುತ್ತಲೆ ಇರಬೇಕು. ಗಣಪತಿ ವಿಗ್ರಹ ರಚನೆಗೆ ತಾಳ್ಮೆ ಬೇಕು. ಶೃದ್ದೆ ಬೇಕು. ಶೃದ್ದೆ, ತಾಳ್ಮೆ, ಭಕ್ತಿ ಎರಕಗೊಂಡರೆ ನಿರೀಕ್ಷೆಗೂ ಮೀರಿದ ಗಣಪತಿ ಪಡಿಮೂಡಿ ಬರುತ್ತಾನೆ.

ರಾಜೇಶ ಗುಡಿಗಾರ್ ಐದು ಅಡಿಯ ತನಕ ಗಣಪತಿ ತಯಾರಿಸುತ್ತಾರೆ. ಬಸ್ರೂರು ಹಾಗೂ ಕೋಟೇಶ್ವರದಲ್ಲಿ ತಯಾರಿಕಾ ಕೇಂದ್ರಗಳಿವೆ. ಗಣಪತಿಯ 90% ಕೆಲಸವನ್ನು ಇವರೇ ಸ್ವತಃ ಮಾಡುತ್ತಾರೆ. ಗ್ರಾಹಕರ ಬೇಡಿಕೆಯ ಪ್ರಕಾರ ಗಣಪತಿ ರಚಿಸುವ ಇವರು ಬೇರೆ ಬೇರೆ ಭಂಗಿಯ, ವಿನ್ಯಾಸದ, ಪುರಾಣದ ಮಹತ್ವಿಕೆ ಸಾರುವ ರೀತಿಯಲ್ಲಿ ಗಣಪತಿ ರಚಿಸುತ್ತಾರೆ. ಸರ್ಪದ ಮೇಲೆ, ಕಮಲದ ಮೇಲೆ, ಶಂಖದ ಮೇಲೆ, ಹಂಸದ ಮೇಲೆ, ಮೂಷಿಕದ ಮೇಲೆ ಕುಳಿತಿರುವ ಗಣಪತಿಯನ್ನು ತಯಾರಿಸುತ್ತಾರೆ.

ಬಣ್ಣದ ವಿಚಾರದಲ್ಲೂ ಅಷ್ಟೇ ಎಂದಿಗೂ ಸ್ವಾಭಾವಿಕ ಹಾಗೂ ಮಾಲಿನ್ಯ ರಹಿತವಾದ ಬಣ್ಣಗಳನ್ನೇ ಬಳಸುತ್ತಾರೆ. ನೀರಿಗೂ, ಜಲಚರಗಳಿಗೆ ಹಾನಿಯಾಗದ ಬಣ್ಣಗಳನ್ನು ಬಳಸಲಾಗುತ್ತದೆ. ಗ್ರಾಹಕರಿಗೂ ಅಷ್ಟೆ ನಿರ್ದಿಷ್ಟವಾದ ಧಾರಣೆಗೆ ಹಠ ಹಿಡಿಯದೆ ಸೇವೆಯ ರೀತಿಯಲ್ಲಿ ಗಣೇಶ ವಿಗ್ರಹವನ್ನು ನೀಡಿ ಸಾರ್ಥಕತೆ ಕಾಣುತ್ತಾರೆ.

ಪರಿಸರ ಸ್ನೇಹಿ ಬಣ್ಣಗಳ ಬಳಕೆ, ಪುರಾಣದಲ್ಲಿ ಚಿತ್ರಿತ ಗಣಪತಿಯನ್ನೇ ನಿರ್ಮಿಸುವುದು ಇವರ ವಿಶೇಷತೆ. ರಾಜೇಶ ಗುಡಿಗಾರರ ಪ್ರತಿಭಾವ್ಯಕ್ತಿಯ ಸೇವಾ ಕಾರ್ಯ ಗುರುತಿಸುವಂತಹದ್ದು. ಸರ್ಕಾರ, ಇಲಾಖೆಗಳು ಇಂಥಹ ಸಾಧಕರನ್ನು ಗುರುತಿಸುವ, ಗೌರವಿಸುವ ಕಾರ್ಯ ಮಾಡಿದರೆ ಕಲೆಗೆ ಬೆಲೆ ಸಿಕ್ಕಂತಾಗುತ್ತದೆ. ಮಾಹಿತಿಗೆ ಇವರ ದೂರವಾಣಿ ಸಂಖ್ಯೆ-7760007701.

(ಲೇಖನ: ನಾಗರಾಜ್ ವಂಡ್ಸೆ)

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!