spot_img
Wednesday, January 22, 2025
spot_img

ಸುಳ್ಳು ಪ್ರೊಪಗಾಂಡದ ಮೂಲಕ ಧಾರ್ಮಿಕ ಭಾವನೆ ಕೆರಳಿಸಿ ಕೋಮು ಸಂಘರ್ಷ ಸೃಷ್ಟಿ ಮಾಡುವುದು ಬಿಜೆಪಿಯ ಹುಟ್ಟುಗುಣ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) :  ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರವೂ ರಾಜ್ಯ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಅಧಿಕಾರಿಗಳು ಎಚ್ಚರ ವಹಿಸಿ ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ನಾನು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ? ಎಂದವರು ಪ್ರಶ್ನಿಸಿದ್ದಾರೆ.

ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ನೋಟಿಸ್ ನೀಡಿ ವಿವರ ಪಡೆಯುವುದು ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ.  ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಯೂ ನೋಟಿಸ್ ನೀಡಲಾಗಿತ್ತು. ಈ ವಿವರಗಳನ್ನು ನನ್ನ ಸಹದ್ಯೋಗಿಗಳಾಗಿರುವ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ ಮೊದಲಾದವರು ಮಾಧ್ಯಮಗಳಿಗೆ ನೀಡಿದ್ದಾರೆ.

ಬಿಜೆಪಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ‘‘ವಕ್ಫ್ ಆಸ್ತಿ ಅಲ್ಲಾಹುಗೆ ಸೇರಿದ್ದು, ಆ ಆಸ್ತಿಯನ್ನು ಹಲವರು ಕಬಳಿಸಿದ್ದಾರೆ, ಅದನ್ನು ಒಂದೊಂದು ಇಂಚು ಬಿಡದೆ ವಾಪಸು ಪಡೆಯಬೇಕು, ಇಲ್ಲದೆ ಇದ್ದರೆ ಅಲ್ಲಾಹುವಿನ ದೃಷ್ಟಿಯಲ್ಲಿ ನೀವು ತಪ್ಪಿತಸ್ಥರಾಗುತ್ತಿರಿ’’ ಎಂದು ಹೇಳಿರುವ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ, ಇದು ಬಿಜೆಪಿ ನಾಯಕರ ಅತ್ಮವಂಚನೆಯ ನಡವಳಿಕೆಯನ್ನು ಬಯಲು ಮಾಡಿದೆ ಎಂದರು.

ರಾಜ್ಯ ಬಿಜೆಪಿಯಲ್ಲಿ  ಸರಣಿ ಪಟಾಕಿಗಳಂತೆ ಪ್ರತಿನಿತ್ಯ ಭಿನ್ನಮತ ಸ್ಪೋಟಗೊಳ್ಳುತ್ತಿದೆ. ಪರಸ್ಪರ ಆರೋಪಗಳನ್ನು ಮಾಡುವ ಮೂಲಕ ಈ ಪಕ್ಷದ ನಾಯಕರು ರಾಜ್ಯದ ಜನರ ಎದುರು ಬೆತ್ತಲಾಗುತ್ತಿದ್ದಾರೆ. ಈ ಜಗಳ ಬಗೆಹರಿಸುವ ಯಾವ ಪ್ರಯತ್ನವನ್ನೂ ಮಾಡದ ಅವರ ಪಕ್ಷದ ಹೈಕಮಾಂಡ್ ದೂರ ನಿಂತು ಚಂದ ನೋಡುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡಿನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲದ ಹಾಗಿದೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸಿ ಜನರ ಗಮನ ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಎಲ್ಲ ಜಾತಿ ಮತ್ತು ಧರ್ಮದಲ್ಲಿರುವ  ಬಡವರು, ರೈತರು, ಮಹಿಳೆಯರು, ಕಾರ್ಮಿಕರು ಫಲಾನುಭವಿಗಳಾಗಿರುವ ನಮ್ಮ ಗ್ಯಾರಂಟಿ ಯೋಜನೆಗಳು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ತೆರಿಗೆ ಹಂಚಿಕೆ, ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿ ಕಡಿತ ಮಾಡಿ ರಾಜ್ಯವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಸಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮಾಡಬೇಕೆನ್ನುವುದು ಬಿಜೆಪಿಯ ಹುನ್ನಾರವಾಗಿದೆ.

ಇದಕ್ಕಾಗಿ ಒಂದೆಡೆ ಪ್ರಧಾನಿ  ನರೇಂದ್ರ ಮೋದಿಯವರಿಂದ ಹಿಡಿದು ರಾಜ್ಯದ ಸಣ್ಣಪುಟ್ಟ ನಾಯಕರ ವರೆಗೆ ಎಲ್ಲರೂ  ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ನ್ಯಾಯಬದ್ಧವಾಗಿ ನಮಗೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯಲ್ಲಿನ ಪಾಲು ಮತ್ತು ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ. ಇಂತಹ ಬೆದರಿಕೆ ಮತ್ತು ಒತ್ತಡದ ತಂತ್ರಕ್ಕೆ ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನುಡಿದಂತೆ ನಡೆಯುತ್ತೇವೆ ಮತ್ತು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ.

ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಧ್ಯಮಗಳ ಮೂಲಕ ಎಷ್ಟೇ ಸುಳ್ಳು ಆರೋಪಗಳನ್ನು ಮಾಡಿದರೂ ಈ ಯೋಜನೆಗಳಿಂದ ಸಂತೃಪ್ತರಾಗಿರುವ ಫಲಾನುಭವಿಗಳು ಇದಕ್ಕೆ ಕಿವಿಗೊಡದೆ ಇರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

ಸುಳ್ಳು ಪ್ರೊಪಗಾಂಡದ ಮೂಲಕ  ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೋಮು ಸಂಘರ್ಷವನ್ನು ಸೃಷ್ಟಿ ಮಾಡಿ ಅದರಿಂದ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಹುಟ್ಟು ಗುಣವಾಗಿದೆ. ಇದರ ಹೊರತಾಗಿ ಈ ಪ್ರತಿಭಟನೆಯಲ್ಲಿ ಯಾವ ರೈತರ ಹಿತಾಸಕ್ತಿಯ ರಕ್ಷಣೆಯ ಸದುದ್ದೇಶ ಇಲ್ಲ. ಈ ಪ್ರತಿಭಟನೆಯಿಂದ ರಾಜ್ಯದ ಸೌಹಾರ್ದತೆಗೆ ಭಂಗ ಉಂಟಾಗಬಹುದೇ ಹೊರತು ರೈತರಿಗೆ ಯಾವ ಲಾಭವೂ ಇಲ್ಲ ಎನ್ನುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕು.

ರಾಜ್ಯದ ಪ್ರಜ್ಞಾವಂತ ಜನತೆ ಇಂತಹ ಕಿಡಿಗೇಡಿತನದ ರಾಜಕೀಯವನ್ನು ತಿರಸ್ಕರಿಸಿ ನಮ್ಮ ಅಭಿವೃದ್ದಿ ಪರ ರಾಜಕೀಯದ ಪರವಾಗಿ ನಿಲ್ಲಬೇಕೆಂದು ಮನವಿ ಮಾಡುತ್ತೇನೆ ಎಂದವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!