Friday, October 18, 2024

ಮಳೆಗೆ ರಾಜಧಾನಿ ಬೆಂಗಳೂರು ತತ್ತರ | ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿದ್ದು, ಈ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಬ್ರ್ಯಾಂಡ್ ಬೆಂಗಳೂರು ಯೋಜನೆಯ ವೈಫಲ್ಯವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರತಿ ಪಕ್ಷಗಳು ಆಕ್ರೋಶಗೊಂಡಿವೆ.

ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರಮುಖವಾಗಿ ಐಟಿ ಕಾರಿಡಾರ್ ಗಳಲ್ಲಿ ಕೃತಕ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಹಾಗೂ ವೈಟ್‌ಫೀಲ್ಡ್‌ ಜಲಾವೃತಗೊಂಡಿದ್ದು, ಸಂಚಾರ ದಟ್ಟಣೆ  ಸೃಷ್ಟಿಯಾಗಿದೆ. ಇದನ್ನು ವಿರೋಧಿಸಿ ಪ್ರತಿ ಪಕ್ಷಗಳ ನಾಯಕರು ಕಿಡಿ ಕಾರಿದ್ದಾರೆ.

ರಾಜ್ಯ ರಾಜಧಾನಿಯಲ್ಲಿಯೇ ಸುವ್ಯವಸ್ಥಿತ ಮೂಲಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ವಿರೋಧ ಪಕ್ಷದ ನಾಯಕರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ದೂರದೃಷ್ಟಿಯಿಂದ ಬೆಂಗಳೂರು ನಗರಕ್ಕೆ ಮಾಹಿತಿ ತಂತ್ರಜ್ಞಾನದ ಅಡಿಪಾಯ ಹಾಕಿದರು. ಆ ನಂತರ ಬಂದ ಕಾಂಗ್ರೆಸ್ ಸರಕಾರ ದೇವೇಗೌಡರ ದಿಸೆಯಿಂದ ಚಿನ್ನದ ಬೆಲೆ ಬಂದ ಭೂಮಿಯನ್ನು ಕೊಳ್ಳೆ ಹೊಡೆಯಲು ರಿಯಲ್ ಎಸ್ಟೇಟ್ ದಂಧೆಗೆ ನಾಂದಿ ಹಾಡಿತು .ಆ ರಿಯಲ್ ಎಸ್ಟೇಟ್ ದಂಧೆಯ ರಕ್ಕಸ ರೂಪವೇ ಡೂಪ್ಲಿಕೇಟ್ ಸಿಎಂ ಬ್ರ್ಯಾಂಡ್ ಬೆಂಗಳೂರು. ಬ್ರ್ಯಾಂಡ್ ಬೆಂಗಳೂರು ಮುಳುಗುತ್ತಿದೆ. ಡೂಪ್ಲಿಕೇಟ್ ಸಿಎಂ ಫೋಟೋಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ. ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂದು ವ್ಯಂಗ್ಯವಾಡಿದೆ.

ರಾಜ್ಯ ಬಿಜೆಪಿ ಟ್ವೀಟ್ ಮಾಡಿ, ಒಂದೇ ಒಂದು ಮಳೆಗೆ ಆ ದಿನಗಳ ಡಿಕೆ.ಶಿವಕುಮಾರ್ ಅವರ ಬ್ರ್ಯಾಂಡ್‌ ಬೆಂಗಳೂರಿನ ಅಸಲಿಯತ್ತು ಬಟ ಬಯಲಾಗಿದೆ. ಭ್ರಷ್ಟಾಚಾರ ಮಾಡುತ್ತಲೇ ಕಾಲ ಕಳೆಯುತ್ತಿರುವ ಕಾಂಗ್ರೆಸ್ ಸರ್ಕಾರ, ಒಂದೂ ಅಭಿವೃದ್ಧಿ ಮಾಡದ ಪರಿಣಾಮ ರಾಜಧಾನಿ ಬೆಂಗಳೂರು ಮುಳುಗಿ ಹೋಗಿದೆ. ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಿನಲ್ಲಿ ಮುಳುಗಿಸಿದೆ ಕಾಂಗ್ರೆಸ್ ಸರ್ಕಾರ. ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಲೂಟಿ ಹೊಡೆದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು ಸಿಎಂ ಕನಸಿನ ಕುರ್ಚಿಯ ಆಸೆ ಬಿಟ್ಟು ಜನತೆಯ ಸಂಕಷ್ಟಕ್ಕೆ ಇನ್ನಾದರೂ ಸ್ಪಂದಿಸಲಿ ಎಂದು ಹೇಳಿದೆ.

ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ಪ್ರಕೃತಿಯನ್ನು ನಿಯಂತ್ರಿಸುವುದು ಅಸಾಧ್ಯ, ಮಳೆಯ ಅನಾಹುತ ನಿರ್ವಹಣೆಗೆ ಸರಕಾರ ಕೈಲಾದಷ್ಟು ಪ್ರಯತ್ನ ಮಾಡುತ್ತಿದೆ, ಪ್ರತಿಪಕ್ಷಗಳು ಬೆಂಗಳೂರಿನ ಘನತೆಗೆ ಮಸಿ ಬಳಿಯುವುದನ್ನು ನಿಲ್ಲಿಸಬೇಕು. ಹೆಚ್ಚು ಮಳೆಯಾಗುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬಿಬಿಎಂಪಿ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಗೃಹ ಸಚಿವ ಜಿ ಪರಮೇಶ್ವರ ಅವರು ಮಾತನಾಡಿ, ಮಳೆಯ ನೀರು ನೆಲದಲ್ಲೇ ಹರಿಯಬೇಕು , ಅದನ್ನು ಆಕಾಶಕ್ಕೆ ವಾಪಸು ಕಳುಹಿಸಲು ಆಗುತ್ತದೆಯೇ? ಎಂತಹ ಸುಸಜ್ಜಿತ ನಗರವಾದರೂ ಇಂತಹ ಮಳೆಗೆ ಅಸ್ತವ್ಯಸ್ಥವಾಗಲಿದೆ. ನಗರದಲ್ಲಿ ಅಕ್ಟೋಬರ್‌ನಲ್ಲಿ ಹೀಗೆ ಮಳೆ ಆಗಿರುವುದು ಆಶ್ಚರ್ಯಕರ. ಹೀಗಾಗಿ ಅಸ್ತವ್ಯಸ್ಥವಾಗಿದೆ. ನ್ಯೂಯಾರ್ಕ್, ಲಂಡನ್‌ನಲ್ಲಿ ಇಂತಹ ಮಳೆ ಬಂದಾಗಲೂ ಹೀಗೆ ಆಗುತ್ತದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಈ ನಡುವೆ ಡಿಕೆ.ಶಿವಕುಮಾರ್ ಅವರ ಹೇಳಿಕೆಗೆ ಕಿಡಿಕಾರಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ವಿರೋಧ ಪಕ್ಷದಲ್ಲಿದ್ದಾಗ ಬೆಂಗಳೂರಿನ ಬಗ್ಗೆ ತಾವು ಏನೇನು ನುಡಿಮುತ್ತುಗಳನ್ನು ನುಡಿದಿದ್ದೀರಿ, ತಮ್ಮ ಶಿಷ್ಯರ ಕೈಯಲ್ಲಿ ಎಂತೆಂಥ ಬೀದಿನಾಟಕ ಮಾಡಿಸಿದ್ದೀರಿ ಎಂಬುದನ್ನ ಒಮ್ಮೆ ನೆನಪಿಸಿಕೊಳ್ಳಿ ಡಿಕೆ.ಶಿವಕುಮಾರ್ ಅವರೇ. ವಿರೋಧ ಪಕ್ಷದಲ್ಲಿದ್ದಾಗ ಸರ್ಕಾರದ ಕಾಲೆಳೆಯುವುದು, ಇಲ್ಲಸಲ್ಲದ ಆರೋಪ ಮಾಡುವುದು, ಅಧಿಕಾರದಲ್ಲಿದ್ದಾಗ ದೊಡ್ಡ ಮುತ್ಸದ್ಧಿಯಂತೆ ವಿಪಕ್ಷಗಳಿಗೆ ನೀತಿ ಪಾಠ ಹೇಳುವದು, ಈ ನಾಟಕ ನಿಮಗೆ ಸರಿಹೊಂದುವುದಿಲ್ಲ. ಇವತ್ತಿನ ಬೆಂಗಳೂರಿನ ಪರಿಸ್ಥಿತಿಗೂ ನಿಮ್ಮ ಕಮಿಷನ್ ದುರಾಸೆಯೇ ಕಾರಣನಾ? ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆಗೆ ಬೋಟ್ ವ್ಯವಸ್ಥೆ ಮಾಡಿದ್ದೀರಾ? ಬ್ರ್ಯಾಂಡ್ ಬೆಂಗಳೂರು ಅಂತ ಬುರುಡೆ ಬಿಡುವ ಬದಲು ಮೊದಲು ಮಳೆಯಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಿ. ವಿಪಕ್ಷಗಳಿಗೆ ನೀತಿ ಪಾಠ ಹೇಳುವುದನ್ನು ಬಿಟ್ಟು ತಮ್ಮ ಕರ್ತವ್ಯ ನಿರ್ವಹಣೆ ಮಾಡಿ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಹಣ ಮಂಜೂರು ಮಾಡದೆ ಕೇವಲ ‘ಬ್ರಾಂಡ್ ಬೆಂಗಳೂರು’ ಪ್ರಚಾರ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮಳೆ ನೀರು ಚರಂಡಿ ಕಾಮಗಾರಿಗೆ 800 ಕೋಟಿ ಮಂಜೂರು ಮಾಡಿದ್ದೆ. ಕಾಮಗಾರಿ ಆರಂಭವಾಗಿತ್ತು ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!