Tuesday, October 22, 2024

ನ.1ರಿಂದ ನ.7ರ ತನಕ ಕುಂದಾಪುರದಲ್ಲಿ ಕನ್ನಡ ಹಬ್ಬ: ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಕುಂದಾಪುರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ನವಂಬರ್ 1ರಿಂದ 7ರ ತನಕ ಕನ್ನಡ ಹಬ್ಬ-ಕನ್ನಡ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಅದರ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಲಾಕ್ಷೇತ್ರದಲ್ಲಿ ನಡೆಯಿತು.

ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಇವತ್ತು ವಾತಾವರಣ ಬೇರೆ ಬೇರೆ ಕಾರಣಕ್ಕೆ ಕಲುಷಿತವಾಗುತ್ತಿದೆ. ಸೌಹಾರ್ದಮಯ ವಾತಾವರಣದಲ್ಲಿ ರಾಜಕೀಯ, ಜಾತಿ, ಮತ, ಧರ್ಮ ಹೊರತಾಗಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠವಾಗಿ ಆಚರಿಸಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ಇದಕ್ಕೆ ಕುಂದಾಪುರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು-ನುಡಿಯ ಹಬ್ಬವನ್ನು ವಿಭಿನ್ನವಾಗಿ, ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಚಿಂತನೆ ನಮ್ಮದು. ಹಾಗಾಗಿ ರಾಜ್ಯೋತ್ಸವ ಆಚರಣೆಗೆ ಪೂರಕವಾಗಿ ಅಕ್ಟೋಬರ್ 31ರಂದು ಕುಂದಾಪುರದಲ್ಲಿ ವೈಭವದ ಪುರಮೆರವಣಿಗೆ ನಡೆಯಲಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಕುಂದಾಪುರದ ಬಹುತೇಕ ಎಲ್ಲಾ ಸಂಘಟನೆಗಳು, ಕಾಲೇಜುಗಳ ವಿದ್ಯಾರ್ಥಿಗಳು, ಧಾರ್ಮಿಕ ಕ್ಷೇತ್ರಗಳ ಪ್ರಮುಖರು, ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ರಥೋತ್ಸವದಲ್ಲಿ ತಾಯಿ ಭುವನೇಶ್ವರಿಯ ಪ್ರತಿಮೆಯನ್ನು ಇಟ್ಟು ಎಳೆದುಕೊಂಡು ಹೋಗುವ ಪ್ರಕ್ರಿಯೆ ನಡೆಯುತ್ತದೆ. ಮೆರವಣಿಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಹತ್ತಿರ ಚಾಲನೆ ನೀಡಲಾಗುವುದು. ಇಲ್ಲಿಂದ ಹೊರಟು ಹೊಸ ಬಸ್ ನಿಲ್ದಾಣ ಮೂಲಕ ಶಾಸ್ತ್ರೀ ಸರ್ಕಲ್‌ಗೆ ಬಂದು, ಅಲ್ಲಿಂದ ಮರಳಿ ಬೋರ್ಡ್ ಹೈಸ್ಕೂಲ್‌ಗೆ ಬಂದು ಅಲ್ಲಿ ಸಂಪನ್ನಗೊಳ್ಳುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಶಾಸಕರು, ಸಂಸದರು, ಬೇರೆ ಪಕ್ಷಗಳ ಪ್ರಮುಖರು, ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ಪ್ರದರ್ಶನ, ದಾಸರ ಪದಗಳು, ಯಕ್ಷಗಾನ ಗಾನನಾಟ್ಯವೈಭವ, ನಾಟಕ, ಸಂಗೀತ, ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪದ ಆರ್.ದಿನಕರ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಬೀಜಾಡಿ ಸುರೇಶ ಶೆಟ್ಟಿ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸಸ್ ಡಿ‌ಅಲ್ಮೇಡಾ, ಎಂ.ಐ.ಟಿ ಮೂಡ್ಲಕಟ್ಟೆಯ ಸಿದ್ದಾರ್ಥ ಶೆಟ್ಟಿ, ಭಂಡಾರ್ಕಾಸ್ ಪ.ಪೂ ಕಾಲೇಜು ಪ್ರಾಂಶುಪಾಲರಾದ ಜಿ.ಎಂ.ಗೊಂಡಾ, ಲಯನ್ಸ್ ಕ್ಲಬ್‌ನ ರೋಹನ್, ಮಹಾಕಾಳಿ ದೇವಸ್ಥಾನದ ಜಯಾನಂದ ಖಾರ್ವಿ ಮೊದಲಾದವರು ಅನಿಸಿಕೆ ಹಂಚಿಕೊಂಡರು.

ಪುರಸಭಾ ಉಪಾಧ್ಯಕ್ಷೆ ವನಿತಾ ಬಿಲ್ಲವ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಅಬು ಮಹಮ್ಮದ್, ಪ್ರಭಾಕರ, ಗಿರೀಶ ಜಿ.ಕೆ, ಜುಡಿತ್ ಮೆಂಡೊನ್ಸಾ, ಗಿರಿಜಾ ಮಾಣಿಗೋಪಾಲ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.
ಕಲಾಕ್ಷೇತ್ರದ ರಾಜೇಶ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!