spot_img
Wednesday, January 22, 2025
spot_img

ರಾಜ್ಯದಲ್ಲಿ 2,37,079.24 ಎಕರೆ ಅರಣ್ಯ ಭೂಮಿ ಒತ್ತುವರಿ | ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಒತ್ತುವರಿ ಹೆಚ್ಚು : ರಾಜ್ಯ ಸರ್ಕಾರದ ಅಂಕಿಅಂಶಗಳ ಮಾಹಿತಿ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದಲ್ಲಿ ಸೆಪ್ಟೆಂಬರ್ 1 ರವರೆಗೆ ಸುಮಾರು 2,37,079.24 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಕೃತ ಅಂಕಿಅಂಶಗಳು ಮಾಹಿತಿ ನೀಡಿವೆ. ಈ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ 1,25,306 ಪ್ರಕರಣಗಳು ದಾಖಲಾಗಿವೆ ಎಂದು ಬಹಿರಂಗಪಡಿಸಿವೆ.

ಮೂರು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಒತ್ತುವರಿಯ ಒಟ್ಟು ಪ್ರಮಾಣ ಅತ್ಯಧಿಕವಾಗಿದೆ. ಒಟ್ಟು 1,39,055.99 ಎಕರೆ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ 1,07,477 ಪ್ರಕರಣಗಳು ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿದವುಗಳಾಗಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

28,103 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಕಳೆದ 10 ವರ್ಷಗಳಲ್ಲಿ ಅರಣ್ಯ ಇಲಾಖೆ ಸಾಧ್ಯವಾಗಿದೆ ಎಂದು ಅಂಕಿಅಂಶಗಳು ಉಲ್ಲೇಖಿಸಿದೆ. 2016-17ರಲ್ಲಿ ಅತಿ ಹೆಚ್ಚು 8,009 ಎಕರೆ ವಶಪಡಿಸಿಕೊಂಡಿದೆ. 2023-24ರಲ್ಲಿ 1,900 ಎಕರೆ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ.

ಅರಣ್ಯ ಹಕ್ಕು ಕಾಯಿದೆ ಹಾಗೂ ಜೀವನಾಧಾರದ ಹಕ್ಕನ್ನು ಮುಂದಿಟ್ಟುಕೊಂಡು ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ಅತಿಕ್ರಮಣ ತೆರವುಗೊಳಿಸದಂತೆ ಹಾಗೂ ಸ್ಥಳಾಂತರ ಮಾಡದಂತೆ ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ಧಾರ ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತು ಭೂಮಿಯ ವಿಸ್ತೀರ್ಣ ಹೆಚ್ಚಿರುವ ಕಾರಣ ಅವುಗಳನ್ನು ಹೊರಹಾಕದಿರಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

“ಈ ಪ್ರಕರಣಗಳನ್ನು ನಿರ್ವಹಿಸಲು ಸಾಕಷ್ಟು ಭೂಮಿ ಅಥವಾ ಸಂಪನ್ಮೂಲಗಳಿಲ್ಲ. ಅಲ್ಲದೆ, ಈ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಸಂಖ್ಯೆಯೂ ಅತಿ ಹೆಚ್ಚು,” ಎಂದು ಮೂಲಗಳು ತಿಳಿಸಿವೆ. ಒಟ್ಟು 10720.71 ಎಕರೆ ಅರಣ್ಯ ಭೂಮಿಯನ್ನು 30 ಎಕರೆಗೂ ಹೆಚ್ಚು ಒತ್ತುವರಿ ಮಾಡಿಕೊಂಡಿರುವ ಬಗ್ಗೆ 157 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ಹೇಳಿವೆ.

10-30 ಎಕರೆ ನಡುವಿನ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ 1,079 ಪ್ರಕರಣಗಳು, 3-10 ಎಕರೆ ಒತ್ತುವರಿ ಮಾಡಿಕೊಂಡಿರುವ ಸಂಬಂಧ 16,593 ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಅರಣ್ಯ ವೃತ್ತದಲ್ಲಿ 83,801.18 ಎಕರೆ ಒತ್ತುವರಿಯಾಗಿದ್ದು, 52,924 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 31,459.66 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, 8,576 ಪ್ರಕರಣಗಳು ದಾಖಲಾಗಿವೆ. ಇದಾದ ನಂತರ ಕೆನರಾ ಭಾಗದಲ್ಲಿ 29,881.72 ಎಕರೆ ಒತ್ತುವರಿಯಾಗಿದ್ದು, 21,655 ಪ್ರಕರಣಗಳು ದಾಖಲಾಗಿವೆ.

ಭೂಮಿ ವಶಪಡಿಸಿಕೊಳ್ಳುವುದು ಮತ್ತು ಒತ್ತುವರಿ ಗುರುತಿಸುವುದು ನಿರಂತರ ಪ್ರಕ್ರಿಯೆ. ಅಂಕಿ ಅಂಶ ಬದಲಾಗುತ್ತಲೇ ಇರುತ್ತದೆ. ಇಲಾಖೆಯು ಈಗ ತನ್ನ ಎಲ್ಲಾ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವ ಕೆಲಸ ಮಾಡುತ್ತಿದೆ ಮತ್ತು ಉಪಗ್ರಹ ಚಿತ್ರಗಳನ್ನು ಸಹ ಅತಿಕ್ರಮಣಗಳನ್ನು ಪತ್ತೆಹಚ್ಚಲು ಮತ್ತು ಭೂ ಬಳಕೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ಜನರು ನ್ಯಾಯಾಲಯಗಳನ್ನು ಸಂಪರ್ಕಿಸುವುದರಿಂದ ಮತ್ತು ಕಾನೂನು ಹೋರಾಟಗಳು ದೀರ್ಘಕಾಲ ನಡೆಯುವುದರಿಂದ ಭೂ ಒತ್ತುವರಿಯನ್ನು ತೆರವುಗೊಳಿಸುವುದು ಸುಲಭವಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!