Sunday, October 13, 2024

ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ : ಸುಪ್ರೀಂ ಕೋರ್ಟ್‌

ಜನಪ್ರತಿನಿಧಿ (ಬೆಂಗಳೂರು/ನವದೆಹಲಿ) : ಪೂರ್ವಾಗ್ರಹ ಪೀಡಿತವಾಗಿ ಸ್ತ್ರೀದ್ವೇಷ ಪಸರಿಸುವ ಹಾಗೂ ಯಾವುದೇ ಸಮುದಾಯದ ಬಗ್ಗೆ ಯಾರೇ ನ್ಯಾಯಮೂರ್ತಿಗಳು ಹೇಳಿಕೆ ನೀಡುವಂತಿಲ್ಲ. ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು(ಬುಧವಾರ) ಖಡಕ್‌ ಆಗಿ ಹೇಳಿದೆ.

ರಾಜ್ಯ ಹೈಕೋರ್ಟ್‌ ನ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ಅವರು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಕುರಿತು ವಿಚಾರಣೆ ಪೂರ್ಣಗೊಳಿಸಿ ಸುಪ್ರೀಂ ಕೋರ್ಟ್‌ ಈ ಮೇಲಿನಂತೆ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್‌ ನ ಮುಖ್ಯನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್‌ ಅವರನ್ನೊಳಗೊಂಡ, ನ್ಯಾ. ಸಂಜೀವ್‌ ಖನ್ನಾ, ನ್ಯಾ. ಬಿ.ಆರ್‌ ಗವಾಯಿ, ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಋಷಿಕೇಶ್‌ ಅವರಿದ್ದ ಪಂಚ ಸದಸ್ಯ ನ್ಯಾಯಪೀಠ ಈ ಪ್ರಕರಣದ ವಿಚಾರಣೆಯನ್ನು ನಡೆಸಿತ್ತು.

ಇನ್ನು, ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ಅವರು ತಾವು ನೀಡಿರುವ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌ ನ ಪಂಚ ಸದಸ್ಯ ನ್ಯಾಯಪೀಠ, ಈ ಬಗ್ಗೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ದೂರಿನ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ.

ʼಭಾರತದ ಯಾವುದೇ ಭಾಗವನ್ನು ಪಾಕಿಸ್ತಾನವೆಂದು ಕರೆಯುವಂತಿಲ್ಲ. ಅದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆʼ ಎಂದು ನ್ಯಾಯಪೀಠ ಉಲ್ಲೇಖಿಸಿ ಅಭಿಪ್ರಾಯಪಟ್ಟಿದೆ.

ಸಾಂದರ್ಭಿಕ ಅವಲೋಕಿಸುವ ವಿಚಾರಗಳು ವೈಯಕ್ತಿಕ ಪಕ್ಷಪಾತವನ್ನು ಪ್ರತಿಬಿಂಬಿಸಬಹುದು. ವಿಶೇಷವಾಗಿ ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ವಿರುದ್ಧ ಹೇಳಲಾಗಿದೆ ಎಂದು ಗ್ರಹಿಸಬಹುದು. ಈ ಪೂರ್ವಾಗ್ರಹ ಪೀಡಿತ ಹೇಳಿಕೆಗಳು ನ್ಯಾಯಾಂಗ ಪ್ರಕ್ರಿಯೆಯ ಸಂದರ್ಭದಲ್ಲಿ ಯಾವುದೇ ಲಿಂಗದ್ವೇಷ ಅಥವಾ ನಮ್ಮ ಸಮಾಜದ ಯಾವುದೇ ವಿಭಾಗದ ವಿರುದ್ಧವಾಗಿದೆ ಎಂಬಂತೆ ಕಾಣಿಸಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಪಟ್ಟಿದೆ.

ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾ‌ರ್ ಜನರಲ್ ನೀಡಿದ ವರದಿಯನ್ನು ಗಮನಿಸಿದ ಕೋರ್ಟ್, ‘ನ್ಯಾ. ಶ್ರೀಶಾನಂದರ ಹೇಳಿಕೆ ವಿಷಯಕ್ಕೆ ಸಂಬಂಧಪಟ್ಟದ್ದಾಗಿರಲಿಲ್ಲ. ಹೀಗಾಗಿ ಅಂಥವುಗಳನ್ನು ವರ್ಜಿಸಬೇಕು’ ಎಂದು ಹೇಳಿರುವುದಲ್ಲದೆ, ಲಿಂಗ ಮತ್ತು ಸಮುದಾಯದ ವಿರುದ್ಧ ನ್ಯಾಯಾಧೀಶರ ಹೇಳಿಕೆಗೆ ಅಸಮ್ಮತಿಯನ್ನು ವ್ಯಕ್ತಪಡಿಸಿತು.

ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿರುವ ಪ್ರಕರಣ :
ನ್ಯಾಯಮೂರ್ತಿ ಶ್ರೀಶಾನಂದ ಅವರು ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ, ‘ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಂತಿದೆ’ ಎಂದು ಹೇಳಿದ್ದರು. ವಕೀಲೆಯೊಬ್ಬರಿಗೆ, ‘ನಿಮ್ಮ ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನೂ ನೀವು ಹೇಳಬಲ್ಲಷ್ಟು ಅವರನ್ನು ಅರಿತಿದ್ದೀರಿ’ ಎಂದು ವ್ಯಂಗ್ಯವಾಡಿದ್ದರು.

ಈ ಮೌಖಿಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಗಳಿಗೆ ಕಾರಣವಾಗಿದ್ದವು. ಇದರ ವಿಡಿಯೊ ತುಣುಕನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ‘ಈ ನ್ಯಾಯಮೂರ್ತಿಗೆ ಲಿಂಗ ಸಂವೇದನಾ ತರಬೇತಿ ನೀಡುವ ಅಗತ್ಯವಿದೆ’ ಎಂದಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!