Saturday, October 12, 2024

ಕೊನೆಗೂ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆ | ಮೂಲ ಕಾಂಗ್ರೆಸಿಗರಿಗೆ ಮಣೆ ಹಾಕದ ಕಾಂಗ್ರೆಸ್‌ ಸರ್ಕಾರ | ಸ್ಥಳೀಯರಿಗೂ ಅವಕಾಶವಿಲ್ಲ, ವಲಸಿಗ ಬಿಜೆಪಿಗರ ಮೇಲುಗೈ !

ಜನಪ್ರತಿನಿಧಿ (ಕೊಲ್ಲೂರು) : ಬಹುಚರ್ಚಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ  ನೂತನ ವ್ಯವಸ್ಥಾಪನ ಸಮಿತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯಲ್ಲಿ ಸ್ಥಾನ ಪಡೆಯುವುದಕ್ಕೆ ಪ್ರತಿ ಬಾರಿ ದೊಡ್ಡ ಪೈಪೋಟಿಯೇ ಇರುವುದು ಇಲ್ಲಿ ಸಾಮಾನ್ಯ. ಈ ಬಾರಿಯೂ ಸಮಿತಿಯ ಅಧ್ಯಕ್ಷ ಹುದ್ದೆಗೆ ಹಲವರ ಹೆಸರು ಕೇಳಿಬಂದಿತ್ತು. ಸದ್ಯ, ನಿರೀಕ್ಷೆಗೂ, ಊಹೆಗೂ ಮೀರಿ ಸಮಿತಿ ರಚನೆಯಾಗಿದೆ.

ಸದ್ಯ, ಒಂಬತ್ತು ಮಂದಿ ಇರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಮೂರು (3) ವರ್ಷಗಳ ಅವಧಿಗೆ ಆದೇಶ ಹೊರಡಿಸಿದೆ.

ಇಂದು(ಶುಕ್ರವಾರ) ಪ್ರಧಾನ ಅರ್ಚಕರನ್ನು ಒಳಗೊಂಡು, ಮಹಾಲಿಂಗ ವೆಂಕನಾಯ್ಕ್‌, ಧನಾಕ್ಷಿ, ಸುಧಾ ಕೆ, ಕೆ. ಬಾಬು ಶೆಟ್ಟಿ, ಸುರೇಂದ್ರ ಶೆಟ್ಟಿ,  ಅಭಿಲಾಷ್ ಪಿ. ವಿ, ಯು. ರಾಜೇಶ್‌ ಕಾರಂತ್‌, ರಘುರಾಮ ದೇವಾಡಿಗ ಅವರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.

ಷರತ್ತುಗಳನ್ನು ವಿಧಿಸಿ ಸಮಿತಿಗೆ ಆಯ್ಕೆ :
ಸಮಿತಿಗೆ ಆಯ್ಕೆಯಾದವರು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ 2011ರ ಸೆಕ್ಷನ್ 25(3) ಮತ್ತು (4)ರ ಅನರ್ಹತೆಗಳೊಂದಿಗೆ ಹಾಗೂ ಕಾಯ್ದೆಯ (2ನೇ ತಿದ್ದುಪಡಿ) ಕಲಂ 25(2) (2) “ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದಲ್ಲಿ ಅಂತವರ ಸದಸ್ಯತ್ವವು ಸಹಜವಾಗಿಯೇ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಮುಂದುವರಿದು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಿದೆ. ಆಯ್ಕೆಯಾದ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಇಲಾಖೆಯ ಕಛೇರಿಗೆ ನಡವಳಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದೆ, ಅಧ್ಯಕ್ಷರ ಹುದ್ದಗೆ ಈಗಾಗಲೇ ಪೈಪೋಟಿ ಇದ್ದು ಸಮಿತಿಗೆ ಆಯ್ಕೆಯಾಗಿರುವ ಕೆ. ಬಾಬು ಶೆಟ್ಟಿ ಹಾಗೂ ಯು. ರಾಜೇಶ್‌ ಕಾರಂತ್‌ ನಡುವೆ ಜಿದ್ದಾಜಿದ್ದಿನ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ.

ಇನ್ನು, ವ್ಯವಸ್ಥಾಪನಾ ಸಮಿತಿ ಸದಸ್ಯರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣಗಳು ಇರುವುದು ಕಂಡುಬಂದಲ್ಲಿ ಅಂತವರಿಗೆ ಈ ವ್ಯವಸ್ಥಾಪನಾ ಸಮಿತಿಯ ಆದೇಶವು ತನ್ನಂತಾನೇ ರದ್ದಾಗಲಿದೆ ಹಾಗೂ ಸಮಿತಿಗೆ ಆಯ್ಕೆಯಾಗಿರುವ ಸುರೇಂದ್ರಶೆಟ್ಟಿ ಅವರ ವಿರುದ್ಧ ಕುಂದಾಪುರ ಪೊಲೀಸ್ ಠಾಣಾ ಅ.ಕ್ರ ಸಂ.56/2018, ಕಲಂ 504, 353, 332, 341 ಜೊತೆಗೆ 34 ಐಪಿಸಿ ರಂತೆ ಹಾಗೂ ಬೆಂಗಳೂರಿನ ಆರ್ ಟಿ ನಗರ ಪೋಲೀಸ್ ಠಾಣೆಯಲ್ಲಿ ಅ.ಕ ಸಂ.255/2019, ಕಲಂ 507, 406, 420 ಐಪಿಸಿ ಪ್ರಕರಣ ದಾಖಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ಷರತ್ತುಗಳನ್ನು ವಿಧಿಸಿದ್ದಾರೆ.

ಮೂಲ ಕಾಂಗ್ರೆಸಿಗರಿಗೆ ಮಣೆ ಹಾಕದ ಕಾಂಗ್ರೆಸ್‌ ಸರ್ಕಾರ :
ವಿವಾದಿತ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕೊನೆಗೂ ರಚನೆಯಾಗಿದ್ದು, ಸಮಿತಿಯ ಆಯ್ಕೆಯಲ್ಲಿ ಮೂಲ ಕಾಂಗ್ರೆಸಿಗರನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಮರೆತಿದೆ ಎಂಬ ಅಪಸ್ವರ ಈಗ ಕೇಳಿಬಂದಿದೆ. ಸಮಿತಿಗೆ ಆಯ್ಕೆಯಾದ ಸದಸ್ಯರಲ್ಲಿ ಮಹಾಲಿಂಗ ವೆಂಕನಾಯ್ಕ್‌ ಅವರನ್ನು ಹೊರತುಪಡಿಸಿ ಉಳಿದವರರಾರೂ ಮೂಲ ಕಾಂಗ್ರೆಸಿಗರಲ್ಲ. ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದವರನ್ನೇ ಸಮಿತಿಗೆ ಆಯ್ಕೆ ಮಾಡಿರುವುದು ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಮಿತಿಗೆ ಆಯ್ಕೆಯಾದವರಲ್ಲಿ ಧನಾಕ್ಷಿ ಕಳೆದ ಬಾರಿ ಬಿಜೆಪಿಯಿಂದ ಜಿಲ್ಲಾ ಪಂಚಾಯತ್‌ ಚುನಾವಣೆಗೆ ಸ್ಪರ್ಧಿಸಿದವರು. ಉಳಿದಂತೆ ಸುಧಾ ಕೆ. ಯು. ರಾಜೇಶ್‌ ಕಾರಂತ ಕಾಂಗ್ರೆಸ್‌ ನಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿದ್ದೇ ಇಲ್ಲ. ಕೆ. ಬಾಬು ಶೆಟ್ಟಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಸುರೇಂದ್ರ ಶೆಟ್ಟಿ, ಕಾರ್ಕಳ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಆದಾಗ್ಯೂ ಅವರು ಹೊರಗಿನವರು ಎನ್ನುವ ಅಭಿಪ್ರಾಯವಿದೆ. ಇನ್ನು ರಘುರಾಮ ದೇವಾಡಿಗ ಇತ್ತೀಚೆಗಷ್ಟೇ ಅರಣ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ್ದರು. ಇನ್ನು, ಅಭಿಲಾಷ್ ಕೇರಳ ಮೂಲದವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಕ್ಷದಲ್ಲಿ ಪ್ರಭಾವಿಯಾಗಿ ಕಾಣಿಸಿಕೊಂಡವರನ್ನೇ ಸಮಿತಿಗೆ ಆಯ್ಕೆ ಮಾಡಿಕೊಂಡಿತ್ತು, ಆದರೇ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ ಸಮಿತಿಗೆ ಮೂಲ ಕಾಂಗ್ರೆಸಿಗರನ್ನು ಕೈಬಿಟ್ಟು ಬಿಜೆಪಿಯಿಂದ ವಲಸೆ ಬಂದವರಿಗೆ ಮಣೆ ಹಾಕಿ ಆದೇಶಿಸಿದೆ.

ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ರಚನೆಯ ಮಾಡುವಲ್ಲಿ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಹಗಲಿರುಳ ಶ್ರಮವಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಕೆ. ಬಾಬು ಶೆಟ್ಟಿ ಅವರನ್ನು ದೇವಸ್ಥಾನ ವ್ಯವಸ್ಥಾನ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ಮಾತುಕೊಟ್ಟಿದ್ದರು ಎನ್ನಲಾಗಿದೆ. ಹಾಗೆಯೇ, ಇಂದು ಕೆ. ಬಾಬು ಶೆಟ್ಟಿ ಅವರನ್ನೊಳಗೊಂಡ ಒಂಬತ್ತು ಮಂದಿ ಇರುವ ಸಮಿತಿ ರಚನೆಯಾಗಿದೆ.

ಕೊಲ್ಲೂರು ಭಾಗದಲ್ಲಿ ಸ್ಥಳೀಯ ಪ್ರಭಾವಿ ಕಾಂಗ್ರೆಸ್‌ ನಾಯಕರು ಹಲವಾರು ಮಂದಿ ಇದ್ದರೂ ಕೂಡ ಅವರ ಮಾತುಗಳನ್ನು ಸಮಿತಿ ಆಯ್ಕೆ ಮಾಡುವಲ್ಲಿ ಪರಿಗಣಿಸಿಲ್ಲ ಎಂಬ ಚರ್ಚೆ ಆರಂಭವಾಗಿದೆ.

ಒಟ್ಟಾರೆ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವದೆಂದರೇ ಆಳುವ ಪಕ್ಷಗಳಿಗೆ ದೊಡ್ಡ ತಲೆನೋವಾಗಿದೆ. ಇನ್ನು, ಮೇಲೆ ಕೊಲ್ಲೂರು ದೇವಸ್ಥಾನ ವ್ಯವಸ್ಥಾನ ಸಮಿತಿ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ವ್ಯವಸ್ಥಾಪನಾ ಸಮಿತಿಯ ಆಯ್ಕೆ ಮಂಡಳಿಯ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರುವುದಕ್ಕೂ ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!