Saturday, October 12, 2024

ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರವನ್ನು ಮೂದಲಿಸಲು ಯಾವ ನೈತಿಕತೆ ಇದೆ? : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು/ಮಾಗಡಿ) : ಬೆಂಗಳೂರಿನ ಹೊರವಲಯದಲ್ಲಿರುವ ಮಾಗಡಿ ಬಹಳ ಪ್ರಮುಖ ಪಟ್ಟಣ. ಮಾಗಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ – ಬೆಂಬಲವನ್ನು ಕೊಡಲಿದೆ. ಕೆಂಪೇಗೌಡರ ರಾಜಧಾನಿಯಾಗಿದ್ದ ನಗರ. ಮಾಗಡಿ ಅಭಿವೃದ್ಧಿಯಾಗಬೇಕು ಎನ್ನುವ ವಾದದಲ್ಲಿ ನನ್ನ ಸಹಮತವೂ ಇದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಆಚರಣೆಗೆ ತಂದು ಪ್ರಾಧಿಕಾರವನ್ನೂ ರಚನೆ ಮಾಡಿದ್ದೆ. ಇದರ ಉದ್ದೇಶ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಬೇಕು ಎನ್ನುವುದಾಗಿತ್ತು. ಒಕ್ಕಲಿಗರ ನಾಯಕರು ಎಂದು ಹೇಳಿಕೊಳ್ಳುವವರು ಇದನ್ನು ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಶುಕ್ರವಾರ) ಮಾಗಡಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ನೂತನ ಶಿಬಿರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದವರು. ಅವರ ಜಯಂತ್ಯೋತ್ಸವವನ್ನು ಆಚರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ 2016-17 ರಲ್ಲಿ ಆಚರಣೆಗೆ ತಂದಿದ್ದು ನಮ್ಮ ಸರ್ಕಾರ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಬಿಜೆಪಿ ಪಕ್ಷದವರು ಆರೋಪಿಸುತ್ತಿದ್ದಾರೆ. ಹಾಗಾದರೆ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂ.ಗಳ ಅನುದಾನವನ್ನು ಹೇಗೆ ಮೀಸಲಿಡಲಾಗಿದೆ ಎಂದು ಹೇಳಲಿ? ಎಂದು ಬಿಜೆಪಿಯನ್ನು ಅವರು ಟೀಕಿಸಿದ್ದಾರೆ.

ಬಿಜೆಪಿಯವರು ಹಾಲಿಗೆ ಬೆಲೆ ಏರಿಸಲಾಗಿದೆ ಎಂದು ಆರೋಪಿಸಿದರು, ರೈತರಿಗೆ ಹಾಲು ಖರೀದಿಸಿ, ಅವರಿಗೆ ಹಣ ನೀಡುವುದು ಬೇಡವೇ? ಹಾಲಿನ ಪ್ರಮಾಣ ಹೆಚ್ಚಿಸಿ, ಅದಕ್ಕೆ ಸಮನಾಗಿ ಬೆಲೆ ಹೆಚ್ಚಿಸಿ ರೈತರಿಗೆ ನೆರವಾಗಿದ್ದು ತಪ್ಪಾ? ಹಾಲಿಗೆ 5.೦೦ ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ಕೆಲವರು ತಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ ಎಂದು ಪರೋಕ್ಷವಾಗಿ ಜೆಡಿಎಸ್‌ ನಾಯಕರಿಗೆ ಕಟುವಾಗಿ ಟೀಲಿಸಿದರು.

ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರಾಜ್ಯದ ಸುಮಾರು 1.20 ಲಕ್ಷ ಕುಟುಂಬಗಳಿಗೆ ವಾರ್ಷಿಕವಾಗಿ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಗ್ಯಾರಂಟಿಗಳ ಮೂಲಕ ಒದಗಿಸಲಾಗುತ್ತಿದೆ ಎಂದರು.

ನೆಹರೂ, ಇಂದಿರಾಗಾಂಧಿ ಸೇರಿದಂತೆ ಹಲವು ನಾಯಕರು ದೇಶಕ್ಕಾಗಿ ದುಡಿದಿದ್ದಾರೆ. ನರೇಂದ್ರ ಮೋದಿ ಸುಳ್ಳು ಹೇಳುತ್ತಾರೆ ಎಂದು ಈ ಬಾರಿ ಮೋದಿಯವರಿಗೆ ನೀವು ವೋಟು ನೀಡಿದ್ದೀರ? ಭಾರತದ ಮೇಲಿನ ಸಾಲ 182 ಲಕ್ಷ ಕೋಟಿಯನ್ನು ಮೀರುತ್ತಿದೆ. ಹಿಂದೆ ಸಾಲದ ಮೊತ್ತ 53.11 ಲಕ್ಷ ಕೋಟಿ ಇತ್ತು, ಕಳೆದ 10 ವರ್ಷದಲ್ಲಿ 182 ಲಕ್ಷ ಕೋಟಿ ರೂ.ಗೆ ತಲುಪಿದೆ. ಗರೀಬಿ ಹಠಾವೋ, ಆಹಾರ ಸ್ವಾವಲಂಬನೆಯಂತ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದ್ದರೆ, ಮೋದಿ ಸರ್ಕಾರ ಜನರ ತಲೆಗೆ ಸಾಲವನ್ನು ಹೇರಿದೆ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸಿಎಂ ಕಟುವಾಗಿ ಟೀಕಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಸುಳ್ಳು ಹಬ್ಬಿಸಿದರು, ಕೊನೆಗೆ ನಾವು ಜನರಿಗೆ ಸತ್ಯ ತಿಳಿಸಿದೆವು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89.62 ಕೋಟಿ ಮೊತ್ತದ ಅವ್ಯವಹಾರವಾಗಿದ್ದು, ಅದರಲ್ಲಿ 56 ಕೋಟಿ ವಸೂಲು ಮಾಡಲಾಗಿದೆ. ಆದರೂ ಅಭಿವೃದ್ಧಿ ನಿಗಮಕ್ಕೆ ಈ ಮುಂಚೆ ನಿಗದಿಪಡಿಸಿರುವಂತೆ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು ಎಂದೂ ಅವರು ಹೇಳಿದರು.

ಎಸ್ ಸಿ ಎಸ್ ಪಿ / ಟಿಎಸ್ ಪಿ ಕಾನೂನನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಈ ರೀತಿಯ ಜನಪರ ಕಾನೂನು ಬಿಜೆಪಿ ಆಡಳಿತದಲ್ಲಿರುವ ಯಾವುದೇ ರಾಜ್ಯದಲ್ಲಿ ಜಾರಿಯಾಗಿಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರವನ್ನು ಮೂದಲಿಸಲು ಯಾವ ನೈತಿಕತೆ ಇದೆ? ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ  ಜನಸಂಖ್ಯೆಗೆ ಅನುಗುಣವಾಗಿ ಅವರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡುವ ಕಾನೂನು ಮಾಡಿದವರು ನಾವು. ಬಿಜೆಪಿಯವರು ಬಡವರ ಹಾಗೂ ರೈತರ ವಿರೋಧಿಗಳಾಗಿದ್ದಾರೆ. ಬಿಜೆಪಿ ಸರ್ಕಾರ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿದೆ. ಮೋದಿ ಅವರು ಬಂಡವಾಳಶಾಹಿಗಳ ಪರವಾಗಿದ್ದಾರೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಹಳಷ್ಟು ಹಗರಣಗಳು ನಡೆದಿವೆ. ಸುಳ್ಳು ಹೇಳುವ ಬಿಜೆಪಿ ಪಕ್ಷವನ್ನು ನಂಬಬೇಡಿ. ನಮ್ಮ ಸರ್ಕಾರ ಸದಾ ಬಡಜನರ ಪರವಾಗಿದೆ ಎಂದರು.

ಶಕ್ತಿ ಯೋಜನೆಯಡಿ 3.50 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದುವರೆಗೆ 287 ಕೋಟಿ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದಿದ್ದಾರೆ. ನಾನು ಬಡವರ ಏಳಿಗೆಗಾಗಿಯೇ ಅಧಿಕಾರದಲ್ಲಿರುವುದು. ನಮ್ಮ ಸರ್ಕಾರ ಹಾಲು ಉತ್ಪಾದಕರ, ದಲಿತರ, ಅಲ್ಪಸಂಖ್ಯಾತರ, ಬಡವರ ಪರವಾಗಿದೆ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ರಾಜ್ಯದ ಜನರ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!