Monday, September 9, 2024

ಕರ್ನಾಟಕ ರಾಜಕಾರಣದ ಶ್ರೇಷ್ಠ ಸಂತನಿಗೆ 75 ವರ್ಷ

ಕೆ. ಪ್ರತಾಪಚಂದ್ರ ಶೆಟ್ಟಿಯವರು ಕರ್ನಾಟಕ ಕಂಡ ರಾಜಕಾರಣದ ಓರ್ವ ಶ್ರೇಷ್ಠ ಸಂತ. ಶುದ್ಧ ಹಸ್ತ, ನೇರ ನಡೆ-ನುಡಿಯ, ಸಜ್ಜನ, ರಾಜಕೀಯ ಮುತ್ಸದ್ಧಿ. ಮಾತು ಮತ್ತು ಕೃತಿಗೆ ಹತ್ತಿರದವರಾಗಿ ಸರಳತೆ ಮತ್ತು ಸಚ್ಚಾರಿತ್ರ‍್ಯದ ರಾಜಕೀಯ ಬದುಕು ಕಂಡುಕೊಂಡವರು. ರಾಜಕೀಯವನ್ನು ವ್ರತವನ್ನಾಗಿ ಆಚರಿಸಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರಾದ ಇವರು ತನ್ನ ಶಾಸಕತ್ವದ ಅವಧಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದವರು. ಉತ್ತಮ ಸಂಸದೀಯ ಪಟುವಾಗಿ ಶಾಸನ ಸಭೆಗಳ ಅಧಿವೇಶನ ಮತ್ತು ವಿವಿಧ ಸಮಿತಿ ಸಭೆಗಳಲ್ಲಿ ಆಳವಾಗಿ ಅಧ್ಯಯನ ನಡೆಸಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದವರು.

ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಹಾಗೂ ಕೆ. ಪ್ರತಾಪಚಂದ್ರ ಶೆಟ್ಟಿಯವರು ಜೊತೆಯಲ್ಲೇ ೧೯೮೩ರಲ್ಲಿ ವಿಧಾನಸಭೆ ಪ್ರವೇಶಿಸಿದವರು. ಕೆ. ಪ್ರತಾಪಚಂದ್ರ ಶೆಟ್ಟಿಯವರು ನಂಬಿದವರನ್ನು ಎಂದೂ ಕೈ ಬಿಟ್ಟವರಲ್ಲ. ನೇರ ನಡೆ ನುಡಿಯ ವ್ಯಕ್ತಿಯಾದ್ದರಿಂದ ಇಂದು ಕೂಡಾ ಫಲಾಪೇಕ್ಷೆ ಇಲ್ಲದೇ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ ಒಮ್ಮೆಯೂ ಕೂಡ ಮಂತ್ರಿಯಾಗಿಲ್ಲ. ಸ್ವಂತ ಜಿಲ್ಲೆಯಲ್ಲಿ, ಸ್ವ ಪಕ್ಷದ ಹಾಗೂ ತನಗಿಂತ ವಯಸ್ಸಿನಲ್ಲಿ ಮತ್ತು ಪಕ್ಷ ರಾಜಕೀಯದಲ್ಲಿ ಕಿರಿಯರಾದವರು ಬೇರೆ ಬೇರೆ ಪ್ರಭಾವದಿಂದ ಮಂತ್ರಿಯಾಗಿ ಮತ್ತು ಬೇರೆ ಬೇರೆ ಹುದ್ದೆ ಪಡೆದು ತನ್ನ ಎದುರಲ್ಲೇ ಸರಕಾರಿ ಕಾರಿನಲ್ಲಿ ತಿರುಗಾಡಿದರೂ ತಾನು ಸ್ಥಿತಪ್ರಜ್ಞನಾಗಿ ಜನ ಸಾಮಾನ್ಯರ ಪರ ಕೆಲಸ ಮಾಡಿದ ವ್ಯಕ್ತಿ ಎಂದರೆ ಪ್ರತಾಪಚಂದ್ರ ಶೆಟ್ಟಿಯವರು. ಆಸ್ಕರ್ ಫೆರ್ನಾಂಡಿಸ್ ಅವರ ಪ್ರಭಾವದ ಮೂಲಕ ಮಂತ್ರಿಯಾಗಬಹುದಾಗಿತ್ತಾದರೂ ಅವರನ್ನು ತನ್ನ ಸ್ವಂತ ಲಾಭಕ್ಕೆ ಎಂದೂ ಬಳಸಿಕೊಂಡವರಲ್ಲ.

ಶಾಸಕನಾಗಿ ಕ್ಷೇತ್ರದ, ಉಡುಪಿ ಜಿಲ್ಲೆಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳಾದ ಅಕ್ರಮ ಸಕ್ರಮ, ಮೂರ್ತೆದಾರರ ಹೋರಾಟದಂತಹ ಅನೇಕ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅಕ್ರಮ ಸಕ್ರಮ ಯೋಜನೆ ಅನುಷ್ಠಾನಕ್ಕೆ ತನ್ನ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಹೋಗಿ ಸ್ವತಃ ಗ್ರಾಮಸ್ಥರ ಅರ್ಜಿ ಸ್ವೀಕಾರ ಮಾಡಿ ಅದನ್ನು ತಾಲೂಕು ಕಚೇರಿಗೆ ತಲುಪಿಸಿ ಸ್ವೀಕೃತಿ ರಶೀದಿಯನ್ನು ಅಂಚೆ ಮೂಲಕ ಅರ್ಜಿದಾರರಿಗೆ ಕಳುಹಿಸಿ ನಂತರ ಗ್ರಾಮ ಪಂಚಾಯತ್ ಗೆ ತೆರಳಿ ಅಲ್ಲೇ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಭೂ ಮಂಜೂರಾತಿ ಮಾಡಿಸಿ ಅರ್ಜಿದಾರರಿಗೆ ಹಕ್ಕುಪತ್ರ ಮತ್ತು ಖಖಿಅ ಗ್ರಾಮದಲ್ಲೇ ಸಿಗುವಂತೆ ಮಾಡಿದ್ದವರು.

ವಾರವಿಡೀ ತನ್ನ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುತ್ತಿದ್ದವರು. ಶನಿವಾರ ಕಾಂಗ್ರೆಸ್ ಕಚೇರಿಗೆ ಮತ್ತು ಪ್ರವಾಸಿ ಬಂಗ್ಲೆಗೆ ತನ್ನನ್ನು ಹುಡುಕಿ ಬಂದ ಜನರನ್ನು ತಹಶೀಲ್ದಾರ ಕಛೇರಿಗೆ ಕರೆದುಕೊಂಡು ಹೋಗಿ ತಹಶೀಲ್ದಾರರ ಸಮ್ಮುಖದಲ್ಲೇ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದ ವಿಷಯ ಇಂದಿಗೂ ಜನಜನಿತ.

ಶಾಸಕರಾಗಿದ್ದಾಗ ದೀನ ದಲಿತರ, ಬಡವರ ಪರ ಹೋರಾಟ ಮಾಡಿದ್ದರಿಂದ ಅನೇಕ ಶ್ರೀಮಂತರು ರಾಜಕೀಯ ಎದುರಾಳಿಗಳಾದರು. ತನ್ನನ್ನು ನಂಬಿದ್ದವರನ್ನು ಕೊನೆ ತನಕ ಕೈಬಿಡುತ್ತಿಲ್ಲವಾದುದರಿಂದ ಅನೇಕರು ಇವರನ್ನೇ ನಂಬಿ ಬಿಟ್ಟರು. ಕೊನೆಗೂ ೧೯೯೯ರ ವಿಧಾನಸಭಾ ಚುನಾವಣೆಯಲ್ಲಿ ಅತಿಯಾದ ಆತ್ಮ ವಿಶ್ವಾಸ ಮತ್ತು ತನ್ನ ಹತ್ತಿರದಲ್ಲೇ ಇದ್ದ ಫಲಾಪೇಕ್ಷಿತ ವ್ಯಕ್ತಿಗಳಿಂದ ಮತ್ತು ತನ್ನ ಎದುರಾಳಿಗಳ ಅಧರ್ಮ ಯುದ್ಧದಲ್ಲಿ ಕೇವಲ ೧೧೪೦ ಮತಗಳಿಂದ ಸೋಲಾಯ್ತು. ೨೫-೫೦ ಸಾವಿರ ಮತಕ್ಕೆ ಸೋತರೂ ಪುನಃ ಟಿಕೆಟ್‌ಗೆ ಪ್ರಯತ್ನಿಸಿ ಚುನಾವಣೆಗೆ ನಿಲ್ಲುವ ಈ ಕಾಲ ಘಟ್ಟದಲ್ಲಿ ೧೧೪೦ ಮತಕ್ಕೆ ಸೋತ ಪ್ರತಾಪ್‌ಚಂದ್ರ ಶೆಟ್ಟಿ ವಿಧಾನಸಭಾ ಚುನಾವಣಾ ರಾಜಕೀಯಕ್ಕೆ ೧೯೯೯ ರಲ್ಲಿ ವಿದಾಯ ಹೇಳಿರುವುದು ಇತಿಹಾಸ. ಇದು ಗೌರವಯುತ ರಾಜಕೀಯಕ್ಕೆ ಮೇಲ್ಪಂಕ್ತಿ.

೨೦೦೪ ರ ದ.ಕ ಜಿಲ್ಲಾ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ಇಬ್ಬರು ಅಭ್ಯರ್ಥಿಗಳು ಗೆಲ್ಲುವಷ್ಟು ಮತವಿಲ್ಲದಿದ್ದರೂ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ ಪ್ರತಾಪಚಂದ್ರ ಶೆಟ್ಟಿಯವರಿಗೆ ಅವಕಾಶ ನೀಡಲಾಯಿತು.

ಕಾಂಗ್ರೆಸ್ ಪಕ್ಷದಿಂದ ಪ್ರತಾಪಚಂದ್ರ ಶೆಟ್ಟಿಯವರಿಗೆ ಕಡಿಮೆ ಮತ ನಿಗದಿಪಡಿಸಿದರೂ ಬಹಳ ಕಠಿಣವಾದ ಚುನಾವಣೆಯನ್ನು ತನ್ನ ಮೇಲಿನ ಅನುಕಂಪದಲ್ಲಿ ಮತ್ತು ತನ್ನ ಜನಪರ ಕಾಳಜಿಯ ವ್ಯಕ್ತಿತ್ವದಿಂದಾಗಿ ನಿರಾಯಾಸವಾಗಿ ಎರಡೂ ಅಭ್ಯರ್ಥಿಗಳು ಗೆದ್ದಿರುವುದು ಇತಿಹಾಸ . ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದಲ್ಲೇ ಪ್ರಥಮ ಎನ್ನುವ ರೀತಿಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿ, ತನಗೆ ಬರುವ ಅನುದಾನವನ್ನು ಎರಡು ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ ತನ್ನದೇ ಮಾನದಂಡಗಳ ಮೂಲಕ ಹಂಚಿ ಹೊಸ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಇದರಿಂದ ಪಕ್ಷಾತೀತವಾಗಿ ಎಲ್ಲರ ಪ್ರೀತಿಗೆ ವಿಶ್ವಾಸಕ್ಕೆ ಪಾತ್ರರಾದರು.

ನಂತರ ಬಂದದ್ದೇ ೨೦೧೦ರ ವಿಧಾನ ಪರಿಷತ್ ಚುನಾವಣೆ. ಇವರ ಆರು ವರ್ಷದ ನಿರಂತರ ಜನಪರ ಹೋರಾಟದ ಫಲವೋ ಎನ್ನುವ ರೀತಿಯಲ್ಲಿ ದೈವಾನುಗ್ರಹದಿಂದ ವಿಧಾನ ಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾಗುವ ಒಂದು ಐತಿಹಾಸಿಕ ಕ್ಷಣ ಇತಿಹಾಸದ ಪುಟ ಸೇರಿದೆ. ಅವಿರೋಧ ಆಯ್ಕೆಯ ನಂತರ ಕ್ರಿಯಾಶೀಲ ಪರಿಷತ್ ಸದಸ್ಯರಾಗಿ ವಿಧಾನ ಪರಿಷತ್ ಅರ್ಜಿ ಸಮಿತಿ ಸದಸ್ಯರಾಗಿ ಸ್ಥಳಿಯಾಡಳಿತದ ಧ್ವನಿಯಾದರು.
ಸಿ.ಆರ್.ಝೆಡ್ ಕಸ್ತೂರಿ ರಂಗನ್ ವರದಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಕಂದಾಯ ಇಲಾಖೆಯ ವಿಳಂಬ ನೀತಿ ಮುಂತಾದ ಅನೇಕ ಸಮಸ್ಯೆಯ ವಿರುದ್ಧ ನಿರಂತರ ಹೋರಾಟ ನಡೆಸಿದರು. ಈ ಅವಧಿಯಲ್ಲಿ ಕೂಡಾ ಕಳಪೆ ಕಾಮಗಾರಿ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದರು.

ವಾರಾಹಿ ಯೋಜನೆ ಅವ್ಯವಹಾರ ಮತ್ತು ಕಾಲುವೆಗೆ ನೀರು ಹಾಯಿಸಲು ವಿಳಂಬ ನೀತಿ ವಿರೋಧಿಸಿ ತನ್ನದೇ ಪಕ್ಷದ ಸರಕಾರದ ವಿರುದ್ಧ ಸಿದ್ಧಾಪುರದ ವಾರಾಹಿ ಕಛೇರಿ ಎದುರು ಅಹೋರಾತ್ರಿ ಧರಣಿ ಕುಳಿತರು. ಮೂವರು ಸಚಿವರು ಧರಣಿ ಸ್ಥಳಕ್ಕೆ ಬಂದು ಆಶ್ವಾಸನೆ ನೀಡಿ ಧರಣಿ ಹಿಂಪಡೆಯಲಾಯಿತು. ಆಶ್ವಾಸನೆಯಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯರವರು ಸಿದ್ಧಾಪುರಕ್ಕೆ ಆಗಮಿಸಿ ಯೋಜನೆಗೆ ಚಾಲನೆ ನೀಡಿ ವಾರಾಹಿ ಕಾಲುವೆಗೆ ನೀರು ಹಾಯಿಸಿದ್ದು ಈ ರಾಜ್ಯದ ವಿಶೇಷವಾಗಿ ಈ ಜಿಲ್ಲೆಯ ಐತಿಹಾಸಿಕ ಅಧ್ಯಾಯಗಳಲ್ಲೊಂದು.
ಹೀಗೆ ಜನಪರ ಮತ್ತು ಧ್ವನಿಯಿಲ್ಲದವರ ಪರ ಇವರ ಹೋರಾಟ ನಿರಂತರವಾಗಿತ್ತು. ಈ ನಡುವೆ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲುವ ಉಜ್ವಲ ಅವಕಾಶವಿದ್ದರೂ ಪಕ್ಷಕ್ಕಾಗಿ ದುಡಿದ ಯುವ ಜನತೆಗೆ ಅವಕಾಶ ಸಿಗಬೇಕು ಎನ್ನುವ ದೃಷ್ಟಿಯಿಂದ ಮುಂದಿನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಒಂದು ಐತಿಹಾಸಿಕ ರಾಜಕೀಯ ತೀರ್ಮಾನ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ ೨೦೧೬ ರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಯ್ತು. ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ ಮತ್ತು ಜಿಲ್ಲೆಯ ಅನೇಕ ಹಿರಿಯರೂ, ಸುಮಾರು ಮೂರು ಸಾವಿರ ಕಾರ್ಯಕರ್ತರು ಪ್ರತಾಪಚಂದ್ರ ಶೆಟ್ಟಿಯವರ ನಿವಾಸದ ಎದುರು ಧರಣಿ ಕುಳಿತು ‘‘೩೫ ವರ್ಷ ನೀವು ಹೇಳಿದ್ದನ್ನು ನಾವು ಕೇಳಿದ್ದೇವೆ. ಈಗ ಒಂದು ಬಾರಿ ನಾವು ಹೇಳಿದ್ದು ನೀವು ಕೇಳಬೇಕು. ಯಾವುದೇ ಕಾರಣ ಕೊಡದೇ ಚುನಾವಣೆಗೆ ಸ್ಪರ್ಧಿಸಬೇಕು ಇಲ್ಲವಾದಲ್ಲಿ ನಾವು ಇಲ್ಲಿಂದ ಕದಲುವುದಿಲ್ಲ” ಎಂದು ಒತ್ತಡ ಹೇರಿದರು.

ಸಂಜೆ ಹೊತ್ತಿಗೆ “ನಿಮ್ಮ ಭಾವನೆಯನ್ನು ಧಿಕ್ಕರಿಸುವುದಿಲ್ಲ. ಈ ಬಗ್ಗೆ ಆಸ್ಕರ್ ಫೆರ್ನಾಂಡಿಸ್ ರವರ ಬಳಿ ಚರ್ಚಿಸುತ್ತೇನೆ” ಎಂದು ತಿಳಿಸಿದ ಬಳಿಕ ಧರಣಿ ಮುಕ್ತಾಯವಾಯಿತು. ವೀರೋಚಿತ ಚುನಾವಣೆ ನಡೆದು ಪ್ರತಾಪಚಂದ್ರ ಶೆಟ್ಟಿಯವರು ಗೆಲವು ಸಾಧಿಸಿದರು. ಆದರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿ ಪುನಃ ಸ್ಪರ್ಧಿಸಿದ ಮನಸ್ಸಿನ ನೋವು ಅವರ ಅಂತರಾತ್ಮದಲ್ಲಿ ಬಾಧಿಸುತ್ತಲೇ ಇತ್ತು.
ಹೀಗೆ ಸುಧೀರ್ಘ ೩೬ ವರ್ಷಗಳ ಶಾಸಕತ್ವದ ಅವಧಿಯಲ್ಲಿ ಸಿಕ್ಕಿದ್ದು ೨ ವರ್ಷದ ವಿಧಾನ ಪರಿಷತ್ ಸಭಾಪತಿ ಸ್ಥಾನ.

೨೦೨೧ ರ ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ದಿನಾಂಕ ಬರುತ್ತಿದಂತೆ ತನ್ನ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ರವರ ಬಳಿ ತಾನು ಸ್ಪರ್ಧಿಸದೆ ಇರುವ ತೀರ್ಮಾನ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಆಸ್ಕರ್ ರವರು ಸೂಕ್ತ ಸಮಯದ ತನಕ ಮೌನವಿರುವಂತೆ ತಿಳಿಸಿದರು.

ಇದಾದ ಕೆಲವು ತಿಂಗಳ ಬಳಿಕ ಆಸ್ಕರ್ ಆಸ್ಪತ್ರೆಗೆ ದಾಖಲಾದರು. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಗೆಲ್ಲಲು ಹತ್ತಾರು ಕೋಟಿ ಹಣ ಬೇಕು ಎನ್ನುವ ಮಾತು ಕೇಳಿ ಬಂತು. ಈ ಹಣ ಹೊಂದಿಸಲು ತನ್ನ ಜೀವನ ಪೂರ್ತಿ ಸಾಧ್ಯವಿಲ್ಲವೆಂದು ತಿಳಿದಿದ್ದ ಪ್ರತಾಪಚಂದ್ರ ಶೆಟ್ಟಿಯವರು ಪೂರ್ವ ತೀರ್ಮಾನದಂತೆ ಚುನಾವಣೆಗೆ ಕೋಟಿ ಕೋಟಿ ಬೇಕು ಎಂದವರಿಗೆ “ತಾನು ಸ್ಪರ್ಧಿಸುವುದಿಲ್ಲ” ಎಂದು ಹೇಳಿದರು. ಇದಾದ ನಂತರ ಅಂದಿನ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಹಿತ ಅನೇಕ ಪರಿಷತ್ ಸದಸ್ಯರು “ನಾವಿದ್ದೇವೆ, ಚುನಾವಣೆಗೆ ಸ್ಪರ್ಧಿಸಿ” ಎಂದರೂ ಒಪ್ಪಲಿಲ್ಲ. ಒಂದು ಹಂತದಲ್ಲಿ ಬಿಜೆಪಿ ನಾಯಕರು “ನಾವು ಒಂದೇ ಅಭ್ಯರ್ಥಿ ಹಾಕುವುದು.

ಪ್ರತಾಪಚಂದ್ರ ಶೆಟ್ಟಿಯವರು ಸ್ಪರ್ಧಿಸಲಿ, ಮೇಲ್ಮನೆಗೆ ಇಂತಹವರ ಅವಶ್ಯಕತೆ ಇದೆ” ಎಂದು ರಾಜಕೀಯ ಮೀರಿ ತಿಳಿಸಿದರೂ ತೀರ್ಮಾನ ಬದಲಿಸಲಿಲ್ಲ. ರಾಜಕೀಯದಲ್ಲಿ ಯಾರೂ ಸಹ ಇಂತಹ ಅವಕಾಶ ಕಳೆದುಕೊಳ್ಳುತ್ತಿರಲಿಲ್ಲ .

ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅವರು ಎಂತಹದ್ದೇ ಪರಿಸ್ಥಿತಿಯಲ್ಲಿ ಕೂಡಾ ಪಕ್ಷದ ವಿರುದ್ಧ ಬಂಡೆದ್ದವರಲ್ಲ. ಪಕ್ಷ ಇವರಿಗೆ ನೀಡಿದ ಗೌರವಕ್ಕೆ ತನ್ನ ಶುದ್ಧಹಸ್ತದ, ನೇರ ನಡೆ ನುಡಿಯ ನಿಷ್ಕಲ್ಮಶ ಮನಸ್ಸಿನಿಂದ ಪಕ್ಷಕ್ಕೂ ಗೌರವ ತಂದವರು. ಉಡುಪಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಅದೆಷ್ಟೊ ಕಾರ್ಯಕರ್ತರು, ನಾಯಕರುಗಳನ್ನು ಯಾವುದೇ ಸಂಘಟನೆ ಅಥವಾ ಚುನಾವಣೆಗೆ ಅಣಿಗೊಳಿಸುವ ಶಕ್ತಿ ಕಾಂಗ್ರೆಸ್ ಪಕ್ಷದೊಳಗಿನ ಹಿರಿಯ ನಾಯಕ ಪ್ರತಾಪಚಂದ್ರ ಶೆಟ್ಟಿಯವರಿಗೆ ಇದೆ ಎನ್ನುವುದು ಜಿಲ್ಲೆಯ ರಾಜಕೀಯ ವಿಶ್ಲೇಷಕರಿಗೆ ಗೊತ್ತಿರುವ ವಿಚಾರ.

ಆಸ್ಕರ್ ಫೆರ್ನಾಂಡಿಸ್‌ರವರನ್ನು ಹೃದಯಸ್ಪರ್ಶಿಯಾಗಿ “ತನ್ನ ನಾಯಕ” ಎಂದು ಒಪ್ಪಿಕೊಂಡು ಬಂದವರು. ತನ್ನನ್ನು ನಂಬಿದವರನ್ನು ಕೈ ಬಿಡದ ಛಲವಾದಿ. ಕುಟುಂಬದವರನ್ನು ರಾಜಕೀಯವಾಗಿ ಹತ್ತಿರಕ್ಕೆ ಸೇರಿಸಿಕೊಳ್ಳದ ಧೀಮಂತ ನಾಯಕ .

ಶೋಷಿತರ, ಬಡವರ, ದೀನ ದಲಿತರ, ನೊಂದವರ, ಧ್ವನಿ ಇಲ್ಲದವರ ಧ್ವನಿಯಾಗಿದ್ದ ಪ್ರತಾಪಚಂದ್ರ ಶೆಟ್ಟಿಯವರು ಪ್ರಚಲಿತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ೧೬-೧-೨೦೨೩ ರಂದು ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿ “ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ” ಉಳಿಯುತ್ತಾರೆ. ೭೩ನೇ ವಯಸ್ಸಿನಲ್ಲಿ ಆರೋಗ್ಯದಲ್ಲಿ ಸದೃಢರಾಗಿದ್ದರೂ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿರುವುದರಿಂದ ಜಿಲ್ಲೆಯ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಶ್ರೀ ಸಾಮಾನ್ಯರಿಗೆ ಬಹಳಷ್ಟು ಬೇಸರವಾಯಿತು. ಇದು ಕೂಡಾ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿಗೆ ಕಾರಣ ಎನ್ನುವುದು ರಾಜಕೀಯ ವಿಶ್ಲೇಷಕರ ಮತ್ತು ಮಾಧ್ಯಮ ಮಿತ್ರರ ಅಭಿಪ್ರಾಯ.

ಸುದೀರ್ಘ ೪೦ ವರ್ಷಗಳ ಬಳಿಕ ಆಸ್ಕರ್ ಫೆರ್ನಾಂಡಿಸ್ ರವರು ಇಲ್ಲದ ಮತ್ತು ಪ್ರತಾಪಚಂದ್ರ ಶೆಟ್ಟಿಯವರು ಸಕ್ರಿಯರಾಗಿರದ ೨೦೨೩ ರ ವಿಧಾನಸಭಾ ಚುನಾವಣೆ ನಡೆಯಿತು. ಕೆ. ಪ್ರತಾಪಚಂದ್ರ ಶೆಟ್ಟಿಯವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು ಮತ್ತು ನಮಗೆ ಮಾರ್ಗದರ್ಶನ ನೀಡಬೇಕು ಎನ್ನುವುದು ಉಡುಪಿ ಜಿಲ್ಲೆಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅನಿಸಿಕೆ. ಆದರೆ ಪ್ರಸ್ತುತ ರಾಜಕಾರಣದ ಅರಿವಿರುವ ಅನೇಕರು ಇವರ ಸಕ್ರಿಯ ರಾಜಕಾರಣದ ನಿವೃತ್ತಿಯನ್ನು ಸರಿಯಾದ ನಿರ್ಧಾರವೆನ್ನುತ್ತಿದ್ದಾರೆ.

ದೀಪದ ಅಡಿ ಇರುವವರಿಗೆ ಕತ್ತಲಿದ್ದರೂ ಸುತ್ತಲಿನ ಬೆಳಕಿನ ಪ್ರಭಾವದಿಂದ ಕತ್ತಲಿನ ಅರಿವಾಗುವುದಿಲ್ಲ. ಯಾವಾಗ ದೀಪ ನಂದುತ್ತದೆಯೋ ಆಗ ದೀಪದ ಅಡಿ ಇರುವವರಿಗೆ ಬೆಳಕಿನ ಪ್ರಭಾವ ಗೊತ್ತಾಗುತ್ತದೆ. ಆದರೆ ಅವರ ವ್ಯಕ್ತಿತ್ವ ಹಾಗೂ ಅವರು ಮಾಡಿರುವ ಒಳ್ಳೆಯ ಕೆಲಸಗಳು ಮಾತ್ರ ಜನಮಾನಸದಲ್ಲಿ ಅಜರಾಮರವಾಗಿರಲಿದೆ.

ಮುಂದಿನ ದಿನಗಳಲ್ಲಿ ಪ್ರತಾಪಚಂದ್ರ ಶೆಟ್ಟಿಯವರು ಬಹಳಷ್ಟು ಜನರಿಗೆ, ಬಹಳಷ್ಟು ಬಾರಿ, ಬಹಳಷ್ಟು ಕಾರಣಕ್ಕೆ ನೆನಪಾಗುತ್ತಲೇ ಇರುತ್ತಾರೆ. ೭೫ ಸಂವತ್ಸರಗಳು ಪೂರ್ಣಗೊಳಿಸಿದ ಕೆ ಪ್ರತಾಪಚಂದ್ರ ಶೆಟ್ಟಿಯವರ ಸಾರ್ಥಕ ಹಾಗೂ ಶುಭ್ರ ಜೀವನ ಈ ಸಮಯದಲ್ಲಿಅವರ ಮಾರ್ಗದರ್ಶನದಲ್ಲೇ ಬೆಳೆದ ಅದೆಷ್ಟೋ ಅಸಂಖ್ಯಾತ ಜನತೆಗೆ ಅವರೊಂದು ಸದಾ ಮಿನುಗುವ ಧ್ರುವತಾರೆ ಎಂಬ ಭಾವನೆ.

-ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಕುಂದಾಪುರ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!