Monday, September 9, 2024

ರೇಣುಕಾಸ್ವಾಮಿ ಕೊ* ಪ್ರಕರಣ : ದರ್ಶನ್‌, ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ !

ಜನಪ್ರತಿನಿಧಿ (ಬೆಂಗಳೂರು) : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ತಂಡದವರ ವಿರುದ್ಧ 4800 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಇಂದು(ಬುಧವಾರ) ಸಲ್ಲಿಸಿದ್ದಾರೆ.

ಬೆಂಗಳೂರು ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ನಟ ದರ್ಶನ್, ಪವಿತ್ರಾ ಗೌಡ ಅವರನ್ನೊಳಗೊಂಡು ಒಟ್ಟು 17  ಮಂದಿ ಆರೋಪಿಗಳ ವಿರುದ್ಧ 4 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ದೋಷಾರೋಪ ಪಟ್ಟಿಯಲ್ಲಿ ನಟ ದರ್ಶನ್ ಅವರನ್ನು 2ನೇ ಆರೋಪಿ ಎಂದೇ ದಾಖಲಿಸಲಾಗಿದ್ದು, ದರ್ಶನ್‌ ಪ್ರೇಯಸಿ ಎಂದು ಹೇಳಲಾಗುವ ಪವಿತ್ರಾ ಅವರನ್ನು 1ನೇ ಆರೋಪಿ ಎಂದು  ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ನಟ ದರ್ಶನ್‌ಗೆ ಈ ಪ್ರಕರಣದಲ್ಲಿ ಜೊತೆಯಾದ 17 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, 3 ಪ್ರತ್ಯಕ್ಷ ಸಾಕ್ಷಿಗಳು, ಎಫ್​ಎಸ್​ಎಲ್​ ಹಾಗೂ ಸಿಎಫ್​ಎಸ್​ಎಲ್​ನಿಂದ 8 ವರದಿಗಳಿರುವುದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿದು ಬಂದಿದೆ.

ಪ್ರಕರಣ ತನಿಖೆ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್​ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ  ನಡುವೆ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಮಾಡಿಸಿದ್ದು ಮತ್ತು ಕೊಲೆ ಮಾಡಿದ ಬಳಿಕ ಪ್ರಕರಣ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಎನ್ನುವುದು, ಹತ್ಯೆಗೆ ಮೂಲ ಕಾರಣ ಪವಿತ್ರಾ ಗೌಡ ಎನ್ನುವ ವಿಚಾರ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಹತ್ಯೆಗೆ ಪವಿತ್ರಾ ಗೌಡ ಮೂಲಕ ಕಾರಣವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು A1 ಆರೋಪಿ ಆಗಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುತ್ತಿದ್ದ ಸ್ಥಳದಲ್ಲಿ ಹಾಜರಿದ್ದು, ಚಪ್ಪಲಿಯಲ್ಲಿ ಅವರೂ ಹೊಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದರ ಬಗ್ಗೆ ಸಾಕ್ಷಿ ದೊರಕಿದ್ದು, ಪವಿತ್ರ ಗೌಡ ಅವರ ಮೊಬೈಲ್ ಕೃತ್ಯ ನಡೆದಿರುವ ಸ್ಥಳದಲ್ಲಿ ಆಕ್ಟೀವ್ ಆಗಿತ್ತು ಎಂದು ತಿಳಿದು ಬಂದಿದೆ.

ಮಾತ್ರವಲ್ಲದೇ, ನಟ ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿದ್ದು, ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಹಾಗೂ ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 11 ರಂದು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಕೊಲೆಯಂತಹ ಘೋರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!