Monday, September 9, 2024

ಡಾ. ಹೆಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ | ಸಮಾಜದಲ್ಲಿ ಮೌಢ್ಯವನ್ನು ಮೌಲ್ಯವೆಂಬಂತೆ ಹೇರಲಾಗುತ್ತಿದೆ : ದಯಾನಂದ

ಜನಪ್ರತಿನಿಧಿ (ಕುಂದಾಪುರ) : ಒಂದು ಭಾಷೆಯೇ, ಒಂದು ಸಂಸ್ಕೃತಿಯೇ, ಒಂದು ಜನಾಂಗವೇ ಶ್ರೇಷ್ಠ ಎಂಬ ವಾದವನ್ನು ಪ್ರತಿರೋಧಿಸುವ ಧ್ವನಿ ಪರಿಣಾಮಕಾರಿಯಾಗಿ ಸಾಧ್ಯವಾಗಿಸಬಲ್ಲ ಮಾಧ್ಯಮವೆಂದರೇ ಅದು ಸಾಹಿತ್ಯ ಮಾತ್ರ ಎಂದು ಕಥೆಗಾರ ದಯಾನಂದ ಹೇಳಿದರು.

ಭಂಡಾರ್‌ಕಾರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಇಂದು (ಮಂಗಳವಾರ) ನಡೆದ ಡಾ. ಹೆಚ್.‌ ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ʼಬುದ್ಧನ ಕಿವಿʼ ಕಥಾ ಸಂಕಲನಕ್ಕೆ ಪ್ರಶಸ್ತಿ ಸ್ವೀಕಾರ ಮಾಡಿ ಅವರು ಮಾತನಾಡಿದರು.

ಸಮಾಜದಲ್ಲಿ ಮೌಢ್ಯವನ್ನು ಮೌಲ್ಯವೆಂಬಂತೆ ಹೇರಲಾಗುತ್ತಿದೆ. ವೈಚಾರಿಕತೆ ಬೆಳೆಸುವಂತಹ ಶಿಕ್ಷಣ ಸಾಹಿತ್ಯ , ಚಿಂತನೆಗಳಿಗೆ ವೇದಿಕೆ ಸೃಷ್ಟಿ ಮಾಡುವಂತಹ ಅಗತ್ಯವಿದೆ. ಸಾಹಿತ್ಯ ಸಮಾಜದ ಬಗ್ಗೆ ಒಂದು ಯೋಚನಾ ಪ್ರಕ್ರಿಯೆಯನ್ನು ನಮ್ಮಲ್ಲಿ ಉದ್ದೀಪಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ಒಂದೇ ಒಂದು ಕನ್ನಡವಂತಿಲ್ಲ. ಪ್ರದೇಶವಾರು ಕನ್ನಡ ಭಾಷೆಯೂ ಬದಲಾಗುತ್ತದೆ. ಲಿಪಿಗಳೇ ಇಲ್ಲದ ಎಷ್ಟೋ ಪ್ರಾದೇಶಿಕ ಭಾಷೆಗಳಿವೆ. ಸಂಸ್ಕೃತ ಭಾಷೆಯೇ ಶ್ರೇಷ್ಠ ಎಂಬ ವಾದ ಒಪ್ಪಿತವಲ್ಲ. ಸಂಸ್ಕೃತ ಭಾಷೆಯಿಂದಲೇ ಸ್ವರ್ಗ ದೊರೆಯುತ್ತದೆ ಎಂಬ ವಾದವನ್ನು ಅಂಬೇಡ್ಕರ್‌ ಅವರ ಸಂವಿಧಾನವನ್ನೇ ಉಸಿರಾಡುತ್ತಿರುವ ದೇಶದಲ್ಲಿ ಸುಖಾಸುಮ್ಮನೆ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದವರು ಹೇಳಿದ್ದಲ್ಲದೇ, ವೈಜ್ಞಾನಿಕವಾಗಿ ಇಷ್ಟು ಮುಂದುವರಿದರೂ ಮೌಡ್ಯವನ್ನು ವೈಭವೀಕರಿಸುವ ವಾದ ಇನ್ನೂ ಇರುವವುದು ವಿಷಾದನೀಯ ಎಂದರು.

ಡಾ. ಹೆಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿಯ ತೀರ್ಪುಗಾರರಲ್ಲಿ ಓರ್ವರಾದ ಟಿ. ಎಸ್‌. ಗೊರವರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಬಹಳಷ್ಟು ಮಂದಿ ಪತ್ರಕರ್ತರು ಉತ್ತಮ ಸೃಜನಶೀಲ ಬರಗಾರರಾಗಿದ್ದಾರೆ. ಅಂತವರಲ್ಲಿ ದಯಾನಂದ ಅವರು ಕೂಡ ಒಬ್ಬರು. ಪ್ರಭುತ್ವ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲು ಎಂದಿಗೂ ಪ್ರಯತ್ನಿಸುತ್ತದೆ. ಅಂತಹ ಪ್ರಭುತ್ವವನ್ನು ಪ್ರತಿರೋಧಿಸುವ ಧ್ವನಿ ದಯಾನಂದ ಅವರ ʼಬುದ್ಧನ ಕಿವಿʼ ಕೃತಿಯಲ್ಲಿ ಇರುವುದರಿಂದಲೇ ಡಾ. ಹೆಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಡಾ. ಹೆಚ್. ಶಾಂತಾರಾಮ್‌ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಶಾಂತಾರಾಮ್ ದ್ವಯರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು. ಕಾಲೇಜಿನ ಹಿರಿಯ ವಿಶ್ವಸ್ಥರಾದ ಕೆ. ಶಾಂತಾರಾಮ್‌ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ. ಹೆಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕಿ ಡಾ. ರೇಖಾ ಬನ್ನಾಡಿ ಪ್ರಸ್ತಾವಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ದೇವದಾಸ್‌ ಕಾಮತ್‌, ರಾಜೇಂದ್ರ ತೋಳಾರ್‌, ಯು. ಎಸ್‌. ಶೆಣೈ, ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಪ್ರೊ. ವಸಂತ ಬನ್ನಾಡಿ, ಜಾನಕಿ ಬ್ರಹ್ಮಾವರ ಸೇರಿ ಮೊದಲಾದವರು ಉಪಸ್ಥಿತರಿದ್ದರು.  ಭಂಡಾರ್‌ಕಾರ್ಸ್‌ ಪದವಿ ಕಾಲೇಜು ಪ್ರಾಂಶುಪಾಲ ಡಾ. ಶುಭಕರಾಚಾರಿ ಸ್ವಾಗತಿಸಿ, ಭಂಡಾರ್‌ ಕಾರ್ಸ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಧನ್ಯವಾದ ಸಮರ್ಪಸಿ, ಉಪನ್ಯಾಸಕಿ ರೋಹಿಣಿ ಶರಣ್‌ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!