Monday, September 9, 2024

ಕಾಯ್ದೆ, ಕಾನೂನುಗಳು ಬಲಗೊಳ್ಳದೇ ಇದ್ದರೆ…

ಕೊಲ್ಕತ್ತಾದ ಘಟನೆ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಲಿ !  

ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ ಎನ್ನುವ ಘೋಷ ವಾಕ್ಯವನ್ನು ಹೋದಲ್ಲೆಲ್ಲಾ ಉಚ್ಚರಿಸುತ್ತಲೇ ಇರುತ್ತಾರೆ. ಆದರೇ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ದಿನನಿತ್ಯದ ಸಾಮಾನ್ಯ ಸಂಗತಿ. ನ್ಯಾಷನಲ್ ಕ್ರೈಮ್ ರೆಕಾಡ್ಸ್ ಬ್ಯೂರೋ(ಎನ್ ಸಿಆರ್ ಬಿ) ನೀಡುವ ಮಾಹಿತಿಯ ಪ್ರಕಾರ 2021ರಲ್ಲಿ 31,677, 2022ರಲ್ಲಿ 31,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಒಂದು ದಿನಕ್ಕೆ ಸರಾಸರಿ 86 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ. 15 ನಿಮಿಷಕ್ಕೆ ಒಂದು ಅತ್ಯಾಚಾರ ದೇಶದಲ್ಲಿ ನಡೆಯುತ್ತಿದೆ.

ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾದ ಹೇಯ ಘಟನೆ ವೈದ್ಯಕೀಯ ವಲಯದಲ್ಲಿ ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಈ ಭೀಕರ ಪ್ರಕರಣವನ್ನು ವಿರೋಧಿಸಿ ಭಾರತದಾದ್ಯಂತ ಹಲವಾರು ಆಸ್ಪತ್ರೆಗಳ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರದ ಘಟನೆ 1973 ರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ, ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್ ಅವರ ಮೇಲೆ ನಡೆದ ಭೀಕರ ಹಲ್ಲೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರುಣಾ 2015 ರಲ್ಲಿ ನಿಧನರಾಗುವ ಮೊದಲು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದರು ಎನ್ನುವುದು ಉಲ್ಲೇಖಾರ್ಹ. ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಅರುಣಾ ಶಾನಭಾಗ್ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು. ಮತ್ತೊಂದು ಪ್ರಕರಣ, ಕೇರಳದ ಕೊಲ್ಲಂನ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಮೇ 2023 ರಲ್ಲಿ, ಡ್ರಗ್ ವ್ಯಸನಿಯೊಬ್ಬ ಡಾ. ವಂದನಾ ದಾಸ್ ಅವರನ್ನು ಕೊಲೆ ಮಾಡಿದ. ಹೀಗೆ ಅನೇಕ ಅನೇಕ ಸಂಗತಿಗಳನ್ನು ಉಲ್ಲೇಖಿಸುವುದಾದರೇ, ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯಾಧಿಕಾರಿಗಳಿಂದ ಕಿರಿಯ ವೈದ್ಯೆಯರ ಮೇಲೆ ಲೈಂಗಿಕ ಕಿರುಕುಳಂತಹ ಪ್ರಕರಣಗಳು ಹೀಗೆ ಹತ್ತು ಹಲವು. ಎಷ್ಟೋ ಪ್ರಕರಣಗಳು ಹೊರ ಬರದೇ ಅಲ್ಲಲ್ಲೇ ಮರ್ಯಾದೆಯ ಕಾರಣಕ್ಕೆ ಮುಚ್ಚಿ ಹೋಗಿವೆ. ಸುದ್ದಿಯಾಗದೇ ಉಳಿದಿವೆ.

“ರೋಗಿಗಳಿಗೆ ಕಾಳಜಿ ವಹಿಸಿ, ಅಧಿಕ ಗಂಟೆಗಳ ಕಾಲ ಕೆಲಸ ಮಾಡಿ ಮತ್ತು ವೈಯಕ್ತಿಕ ಸಮಯವನ್ನು ತ್ಯಾಗ ಮಾಡಿಯೂ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸತ್ತರೆ, ಸಂಬಂಧಿಕರು, ಸಮಾಜ ಆಗಾಗ್ಗೆ ದೂಷಿಸುವುದು ವೈದ್ಯರನ್ನೇ. “ವೈದ್ಯರ ಸುರಕ್ಷತೆ, ಅವರ ಜೀವನ ಮತ್ತು ಅವರ ಯೋಗಕ್ಷೇಮವನ್ನು ಯಾರು ಕಾಪಾಡುತ್ತಾರೆ? ವಿಶೇಷವಾಗಿ ಇತ್ತೀಚಿನ ಘಟನೆಗಳು ಯಾರು ಇಲ್ಲಿ ಸುರಕ್ಷಿತರು ಎನ್ನುವ ಪ್ರಶ್ನೆಯನ್ನು ಮುಂದಿರಿಸಿದೆ. ಸಮಾಜ ಯಾರನ್ನು ಎಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಸಮಾಜದಲ್ಲಿ ಆಘಾತಕಾರಿಯಾದ ವಿಷಯವಾಗಿದೆ.

ಇನ್ನು, ನಮ್ಮ ದೇಶದ ಮೆಡಿಕಲ್‌ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಗಮನಿಸಿ, ಫೆಬ್ರವರಿ 202 ರ ಎನ್‌ಎಂಸಿ ಡೇಟಾ ನೀಡುವ ಮಾಹಿತಿಯ ಪ್ರಕಾರ, ಸುಮಾರು 153 ಎಂಬಿಬಿಸ್ ವಿದ್ಯಾರ್ಥಿಗಳು ಮತ್ತು 1,117 ಮೆಡಿಕಲ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕಳೆದ ಐದು ವರ್ಷಗಳಲ್ಲಿ, ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರು ಸೇರಿದಂತೆ ಕನಿಷ್ಠ 122 ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಮಾನಸಿಕ ಹಿಂಸೆ, ಪ್ರತಿಕೂಲವಲ್ಲದ ಕೆಲಸದ ವಾತಾವರಣ ಮತ್ತು ದಂಡನಾತ್ಮಕ ನೀತಿಗಳಿಂದ ಬಳಲಿ ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ವೈದ್ಯಕೀಯ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ, ಅವರು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಫಾರ್ಮ್ ಅನ್ನು ಭರ್ತಿ ಮಾಡುವಾಗಲೇ, ಮಾನಸಿಕ ಒತ್ತಡ ಮತ್ತು ಅವರಲ್ಲಿ ಅನಿಶ್ಚಿತತೆ ಪ್ರಾರಂಭವಾಗುತ್ತದೆ. ನೀಟ್‌ ಗೆ ಅರ್ಹತೆ ಪಡೆದ ಅನೇಕರು ಊಹಿಸಲು ಸಾಧ್ಯವಾಗದ ವೈದ್ಯಕೀಯ ಪಠ್ಯಕ್ರಮಗಳ ಕಾರಣದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಎಷ್ಟೋ ಮಂದಿ ಅರ್ಧಕ್ಕೆ ಮೊಟಕುಗೊಳಿಸಿರುವ ಉದಾಹರಣೆಗಳಿವೆ.

ಹೆಚ್ಚಿನ ರಾಜ್ಯಗಳು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸೂಪರ್-ಸ್ಪೆಷಾಲಿಟಿ ಎಲ್ಲಾ  ಹಂತಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಬಾಂಡ್ ಷರತ್ತುಗಳನ್ನು ವಿಧಿಸುತ್ತವೆ. ಎರಡು ರೀತಿಯ ಬಾಂಡ್‌ಗಳಿವೆ ‘ಸೀಟ್ ಲೀವಿಂಗ್’ ಬಾಂಡ್‌ಗಳು ಮತ್ತು ‘ಸರ್ವೀಸ್’ ಬಾಂಡ್‌ಗಳು ಹೀಗೆ ಇನ್ನೂ ಹಲವು. ಸೇವಾ ಬಾಂಡ್‌ಗಳಿಗೆ ವೈದ್ಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1-5 ವರ್ಷಗಳ ಕಾಲ ರಾಜ್ಯದ ಹೆಲ್ತ್‌ ಕೇರ್ಸ ಸಿಸ್ಟಮ್‌ ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ, ಬಾಂಡ್ ಮೀರಿದರೇ 10 ಲಕ್ಷದಿಂದ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳ ರೆಸಿಡೆನ್ಸಿ ಪೋಸ್ಟಿಂಗ್ ಅನ್ನು ಎನ್‌ಎಂ ಸಿ ಕಡ್ಡಾಯಗೊಳಿಸುತ್ತದೆ.

ಇದೇ, ಮೇ ತಿಂಗಳಲ್ಲಿ, ಡೆಹ್ರಾಡೂನ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 26 ವರ್ಷದ ನಿವಾಸಿ ವೈದ್ಯ ದಿವೇಶ್ ಗಾರ್ಗ್ ಆತ್ಮಹತ್ಯೆ ಮಾಡಿಕೊಂಡರು. ಅವ್ಯವಸ್ಥೆ ಮತ್ತು ಹಿರಿಯ ವೈದ್ಯರ ಕಿರುಕುಳ ಅವರ ಸಾವಿಗೆ ಪ್ರಮುಖಾಂಶಗಳೆಂದು ಅವರ ಪೋಷಕರು ಆರೋಪಿಸಿದ್ದಾರೆ. ಒತ್ತಡದ ಹೊರತಾಗಿಯೂ, ಬಾಂಡ್‌ ನ ಕಾರಣದಿಂದಾಗಿ ರಿಸೈನ್‌ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಮಧ್ಯಪ್ರದೇಶ ಸರ್ಕಾರವು ಸೀಟು ಬಿಡುವ ಬಾಂಡ್(ಸೀಟ್‌ ಲಿವಿಂಗ್‌ ಬಾಂಡ್) ನೀತಿಯನ್ನು ರದ್ದುಗೊಳಿಸಿತು, ಹೀಗೆ ಮಾಡಿದ ಮೊದಲ ಭಾರತೀಯ ರಾಜ್ಯವಾಯಿತು ಎನ್ನುವುದು ಉಲ್ಲೇಖಾರ್ಹ. ಹೀಗೆ ಸಮಸ್ಯೆಗಳು ನಮ್ಮ ಮೆಡಿಕಲ್‌ ವ್ಯವಸ್ಥೆಯಲ್ಲಿ ತುಂಬಾ ಇವೆ. ಬಿಳಿಕೋಟಿನ ದಂಧೆ, ಹಗರಣ, ಅಕ್ರಮ ಎಲ್ಲವೂ ಇಂತಹ ಘಟನೆಗಳು ಮತ್ತೆ ಮತ್ತೆ ಆಗುವುದಕ್ಕೆ ಪ್ರಮುಖಾಂಶಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇನ್ನು, ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಲ್ಲಿ ವರ್ಗಾವಣೆ ಹುದ್ದೆ ಮತ್ತು ಅಕ್ರಮ ಮೆಡಿಕಲ್ ಸಿಂಡಿಕೇಟ್ ನ್ನು ಒಳಗೊಂಡಿರುವ ಬೃಹತ್ ದಂಧೆಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಹಿರಂಗಪಡಿಸಿದೆ. ಈ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇತರ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಇದು ವ್ಯಾಪಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಗಳಾಗಿವೆ. ಈ ಅಕ್ರಮ ಜಾಲದ ಮೂಲಕ ರಾಜ್ಯ ಸರ್ಕಾರ ಖರೀದಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ರವಾನಿಸಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ.

ಈ ದುಷ್ಕೃತ್ಯಗಳ ವಿರುದ್ಧ ಸಂತ್ರಸ್ತೆ ವಿವಿಧ ವೇದಿಕೆಗಳಲ್ಲಿ ಪ್ರತಿಭಟಿಸಿರುವುದೇ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿರಬಹುದೆಂದು ಸಿಬಿಐ ಆಂತರಿಕ ಮೂಲಗಳು ಹೇಳುತ್ತಿರುವುದಾಗಿಯೂ ವರದಿಯಾಗಿವೆ. ಇಡೀ ದೇಶಕ್ಕೆ ದೇಶವೇ ಇಂತಹ ಘಟನೆಗಳಾದಾಗೆಲ್ಲಾ ಆಕ್ರೋಶ ಹೊರ ಹಾಕಿದರೂ, ಪ್ರಯೋಜನವಿಲ್ಲದಂತಾಗುತ್ತಿದೆ. ತಪ್ಪುಗಳನ್ನು ಪ್ರಶ್ನಿಸಿದ್ದು, ಹೆಣ್ಣಾದರೇ ಹೀಗೆ ಎಲ್ಲೋ ಅತ್ಯಾಚಾರ, ಕೊಲೆಯಾಗಿ ಪತ್ತೆಯಾಗುವ, ಗಂಡಾದರೇ, ಎಲ್ಲೋ ಬರ್ಬರವಾಗಿ ಶವವಾಗಿ ಪತ್ತೆಯಾಗುವ ಭಯದ ಪರಿಸ್ಥಿತಿ ಇಡಿ ದೇಶದಾದ್ಯಂತ ಸಡಿಲ ಕಾನೂನು ನೀತಿಗಳಿಂದಲೇ ನಿರ್ಮಾಣವಾಗಿದೆ ಎಂದರೇ ತಪ್ಪಿಲ್ಲ.

ಇಂತಹ ಘಟನೆಗಳು ಇಡೀ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಬೇಕಾಗಿರುವ ತುರ್ತಿದೆ. ಆಡಳಿತ ಸರ್ಕಾರ ಸಾರ್ವಜನಿಕರ ನಂಬಿಕೆ, ವಿಶ್ವಾಸ ಕಳೆದುಕೊಂಡಾಗ ನ್ಯಾಯಾಂಗ ಮಧ್ಯ ಪ್ರವೇಶಿಸಿರುವುದು ಅಸಹಾಯಕರಲ್ಲಿ, ಸಂತ್ರಸ್ತರಲ್ಲಿ, ದಮನಿತರಲ್ಲಿ ಧೈರ್ಯ ತಂದಿದೆ. ಆ ಧೈರ್ಯ ದ್ವಿಗುಣವಾಗಬೇಕಿದೆ. ಹೆಣ್ಣು ಬರೀ ಅಂಗಾಂಗವೆಂಬಂತೆ ನೋಡುವ, ಬರೀ ಭೋಗದ ವಸ್ತುವಾಗಿ ನೋಡುವ ಗಂಡಿನ ಮಾನಸಿಕತೆ ಬದಲಾಗಬೇಕಿದೆ. ಆಕೆಯೂ ಕೂಡ ನಮ್ಮ ಸಮಜೀವಿ, ಸಹಜೀವಿ ಎನ್ನುವ ನಾಗರಿಕ ಪ್ರಜ್ಞೆ ಇನ್ನೂ ದೇಶದಲ್ಲಿ ಮೂಡಿಲ್ಲ ಎನ್ನುವುದೇ ದೊಡ್ಡ ದುರಂತ. ಕಾಯ್ದೆ ಕಾನೂನುಗಳು ಇನ್ನಷ್ಟು ಬಲಗೊಳ್ಳದೇ ಇದ್ದರೇ ಇನ್ನಷ್ಟು ಇಂತಹ ಘಟನೆಗಳನ್ನು ಕಾಣುವುದಕ್ಕೆ ದೇಶ ತಯಾರಾಗಬೇಕಿದೆ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!