Monday, September 9, 2024

ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳು : ನಿಜವಾಗಿಯೂ ನಾವು ಸ್ವತಂತ್ರರೇ?

ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ಜನಗಳ ತಿನ್ನುವ ಬಾಯಿಗೆ ಬಂತು, ಲೂಟಿಗಾರರ ಜೇಬಿಗೆ ಬಂತು, ಮಹಡಿ ಮನೆಗಳ ಸಾಲಿಗೆ ಬಂತು, ಕೋಟ್ಯಾಧೀಶರ ಕೋಣೆಗೆ ಬಂತು 47ರ ಸ್ವಾತಂತ್ರ್ಯ.

ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ನಿಜವಾಗಿಯೂ ನಾವು ಸ್ವತಂತ್ರರೇ? ಎಂದು ನಮ್ಮನ್ನು ನಾವು ಕೇಳಿಕೊಂಡಾಗ ನಮ್ಮಲ್ಲಿ ಉದಯಿಸುವ ಪ್ರಶ್ನೆ ಸ್ವಾತಂತ್ರ್ಯ ಎಂದರೇನು? ದೇಶಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿದ್ದೇನೋ ನಿಜ. ಆದರೆ ಇಂದು ನಾವು ನಿಜವಾಗಿಯೂ ಸ್ವತಂತ್ರ್ಯರೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ… ಉಳ್ಳವರ ಅಟ್ಟಹಾಸದ ಎದುರು ಬಡವರ ನಡುವಿಗೆಯಲ್ಲಿ ಸ್ವಾತಂತ್ರ್ಯವಿದೆಯೇ? ಪ್ರತಿನಿತ್ಯ ಅತ್ಯಾಚಾರ, ದರೋಡೆ, ಸುಲಿಗೆ, ಮೋಸ‌ ಇವುಗಳ ಹೆಸರಿನಲ್ಲಿ ಹಿಂಸೆಗೆ ಒಳಗಾಗುತ್ತಿರುವ ಮುಗ್ಧ ಜನರಲ್ಲಿ ಇದೆಯೇ ಸ್ವಾತಂತ್ರ್ಯ? ಪ್ರಶ್ನೆಗಳು ಪ್ರಶ್ನೆಯಾಗಿಯೇ  ಉಳಿಯುತ್ತವೆ. ಪ್ರಸ್ತುತ ನಡೆಯುತ್ತಿರುವ ದುರಂತಗಳ ನೆನೆಯುವಾಗ…

ನಾವೆಲ್ಲ ಇಂದು 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸರ್ವಸನ್ನದ್ಧರಾಗಿ ಕಾತುರತೆಯಿಂದ ಕಾಯುತ್ತಾ ಇದ್ದೇವೆ. ಆಗಸ್ಟ್ 15, 1947 ರಂದು ಸ್ವಾತಂತ್ರ ಸಿಕ್ಕಿದೆ ಅನ್ನುವ ಭಾರತೀಯರೆಲ್ಲರೂ ಯೋಚಿಸುವ ಪ್ರಶ್ನೆ ಒಂದಿದೆ. ನಾವು ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದು ಯಾವಾಗ? ಇದು ನಮ್ಮನ್ನು ಶತಮಾನಗಳಷ್ಟು ಕಾಲ ಹಿಂದಕ್ಕೆ ಕರೆದೊಯ್ಯುತ್ತದೆ. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದು ಎನ್ನುವುದಾದರೆ ಅವರಿಗಿಂತ ಮುನ್ನ ಡಚ್ಚರು, ಫ್ರೆಂಚರು, ಪೋರ್ಚುಗೀಸರು ಭಾರತವನ್ನು ಆಕ್ರಮಿಸಿಕೊಂಡಿದ್ದರು ಮತ್ತೂ ಹಿಂದಕ್ಕೆ ಹೋದರೆ 1498ರಲ್ಲಿ ವಾಸ್ಕೋಡಿಗಾಮ ಜಲಮಾರ್ಗವನ್ನು ಕಂಡುಹಿಡಿಯಲಿಲ್ಲ ಅಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವ ಪ್ರಸಂಗವೇ ಇರಲಿಕ್ಕಿಲ್ಲ ಎನ್ನುವ ವಿಚಾರ ನಿಮ್ಮ ತಲೆಗೆ ಹೊಳೆಯಬಹುದು.

ಸ್ವಾತಂತ್ರ್ಯ ಸಿಗುವ ಮುನ್ನ ಬ್ರಿಟಿಷರ ದಬ್ಬಾಳಿಕೆಯಲ್ಲಿ ಇದ್ದ ನಾವು ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ನಾವೇ ಆರಿಸಿ ತಂದ ರಾಜಕಾರಣಿಗಳು ನಮ್ಮನ್ನು ಆಳುತ್ತಿರುವುದನ್ನು ನೋಡುತ್ತಿದ್ದೇವೆ. ಹಿಂದೆ ಬ್ರಿಟಿಷರು ನಮ್ಮನ್ನು ಗುಲಾಮರಂತೆ ಮಾಡಿ ನಮ್ಮ ಬಳಿ ದುಡಿಸಿಕೊಂಡು ಲಾಭವನ್ನು ಅವರ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದರು. ಇಂದು ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು ಸಾಮಾನ್ಯ ಜನರು ನೀಡಿರುವ ತೆರಿಗೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಕೊಳ್ಳೆ ಹೊಡೆದು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ತಮ್ಮ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟಿಷರ ಚಾಟಿ ಏಟಿಗೆ ನಡುಗುತ್ತಿದ್ದರು ನಮ್ಮ ಜನ; ಆದರೆ ಇಂದು ರಾಜಕೀಯ ಭ್ರಷ್ಟರ ಏಟಿಗೆ ಬೆದರುತ್ತಿದ್ದಾರೆ.

ಸ್ವಾತಂತ್ರ್ಯ ಭಾರತದ ಏಳು ದಶಕಗಳ ಸಿಂಹಾವಲೋಕನ ಮಾಡಿದಾಗ ಭಾರತ ನಿಜಕ್ಕೂ ಸ್ವಾತಂತ್ರ್ಯವೇ? ಸ್ವಾಮಿ ವಿವೇಕಾನಂದರು ಸೇರಿದಂತೆ ನಮ್ಮ ಹಲವು ಸ್ವಾತಂತ್ರ್ಯ ಹೋರಾಟಗಾರರು ಕಂಡ ನಮ್ಮ ಭಾರತದ ಕನಸು ನನಸಾಗಿದೆಯೇ? ಯುವ ಜನತೆ ಈ ದೇಶದ ಪ್ರಗತಿಯ ರೂಪಕ ಎಂದು ನಂಬಿದ್ದ ನಮ್ಮ ಪೂರ್ವಜರ ನಂಬಿಕೆ ಉಳಿಸಿಕೊಂಡಿದ್ದೇವಾ ಎಂದು ನಮ್ಮನ್ನು ನಾವು ಕೇಳಿಕೊಳ್ಳುವ ಮತ್ತು ಮರು ಅವಲೋಕಿಸುವ ಸಮಯ ಇದಾಗಿದೆ.

ಬ್ರಿಟಿಷರು ಸ್ವಾತಂತ್ರ್ಯವನ್ನು ನೀಡಿದರು ಸಹ ನಮ್ಮೊಳಗಿನ ರಾಜಕೀಯ ನಾಯಕರು ನಮಗೆ ನಿಜವಾದ ಸ್ವಾತಂತ್ರ್ಯವನ್ನು ನೀಡಲಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಬ್ರಿಟಿಷರ ದಾಸ್ಯದ ಸಂಕೋಲೆಯನ್ನು ಕಳಚಿಕೊಂಡು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಬಂಧಿತರಾಗಿದ್ದೇವೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂದು ಭಾಷಣದಲ್ಲಿ ಬಡಾಯಿ ಕೊಚ್ಚಿಕೊಂಡು ಬಂದಿದ್ದೆಲ್ಲವನ್ನು ಕಬಳಿಸಿ, ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಸರಕಾರ ಇರುವ ತನಕ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲು ಸಾಧ್ಯವಿಲ್ಲ. ಅಂದರೆ ಭಾರತೀಯರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ.

ಸರ್ವೇ ಜನಃ ಸುಖಿನೋ ಭವಂತು ಅನ್ನುವ ರಾಷ್ಟ್ರ ನಮ್ಮದು. ಎಷ್ಟೋ ನಿರಾಶ್ರಿತರಿಗೆ ಆಶ್ರಯ ನೀಡಿರುವ ದೇಶ ನಮ್ಮದು. ಆದರೆ ಈಗಿನ ಕೆಲವು ಭ್ರಷ್ಟ ರಾಜಕೀಯ ಪಕ್ಷಗಳು ಹಿಂದೆ ಬ್ರಿಟಿಷರು ಅನುಸರಿಸಿದ್ದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಇದರಿಂದ ನಮಗೆ ಎಂದೂ ಸ್ವಾತಂತ್ರ್ಯ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಂತ ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ಭ್ರಷ್ಟರು ಎನ್ನಲಾಗುವುದಿಲ್ಲ. ಅವರಲ್ಲಿ ದೇಶಕ್ಕಾಗಿ ಪ್ರಾಮಾಣಿಕತೆಯಿಂದ ದುಡಿಯುವವರು ಇದ್ದಾರೆ.  ಆದರೆ ಅಂತವರಿಗೆ ಹೆಚ್ಚು ದಿನ ಮುಂದುವರಿಯಲು ಬಿಡುವುದಿಲ್ಲ. ಇದೆಲ್ಲವನ್ನು ತಿಳಿದು ಸುಮ್ಮನಿರುವ ನಾವು ಒಂದು ರೀತಿಯಲ್ಲಿ ದೇಶದ್ರೋಹಿಗಳೇ ಆಗಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ.

ಬಾಲ್ಯದಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ನೆನಪು ನಮ್ಮೆಲ್ಲರ ಎದೆಯಲ್ಲಿ ಮಾಸದೆ ಉಳಿಯುತ್ತದೆ. ಮದುವೆ ಮನೆಯು ಸಿಂಗಾರಗೊಂಡಂತೆ ಇಡೀ ಶಾಲೆಯು ಅಲಂಕೃತಗೊಂಡಿರುತ್ತಿತ್ತು. ಒಂದು ವಾರದ ಮೊದಲಿನಿಂದಲೇ ಹಾಡು, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಭರ್ಜರಿ ತಯಾರಿ ಆರಂಭವಾಗುತ್ತಿತ್ತು.

ಶಾಲೆಯಲ್ಲಿ ಕೊಟ್ಟ ನೀಲಿ ಸಮವಸ್ತ್ರ ಸ್ವಾತಂತ್ರ್ಯ ದಿನಾಚರಣೆಗೆ ಎಂದೇ ಹೊಲಿಸಿ, ಸಿದ್ಧ ಮಾಡಿ ಇಟ್ಟಿರುತ್ತಿದ್ದೆವು. ಕೇಸರಿ, ಬಿಳಿ, ಹಸಿರು ಬಣ್ಣದ ಬಳೆ, ಸರ, ರಿಬ್ಬನ್ ಧರಿಸಿ ಶಾಲೆಗೆ ಹೋಗುತ್ತಿದ್ದೆವು. ಅಂದು ಬೆಳಗ್ಗೆ ಪ್ರಾರ್ಥನೆ ಮಾಡಿ ಹೆಮ್ಮೆಯಿಂದ ಧ್ವಜ ನೋಡಿ ಸೆಲ್ಯೂಟ್ ಮಾಡುವಾಗ ನಾವೇನೋ  ಸೈನ್ಯದಲ್ಲಿ ಇದ್ದಂತಹ ಭಾವ! ಅನಂತರ ಶಾಲೆಯಿಂದ ಪಂಚಾಯಿತಿಯವರೆಗೆ ನಮ್ಮ ಪಥ ಸಂಚಲನ. ಒಂದು ಗುಂಪು ವಂದೇ ಎಂದರೆ ಮತ್ತೊಂದು ಗುಂಪು ಮಾತರಂ ಅನ್ನೋದು, ಬೋಲೋ ಭಾರತ್ ಮಾತಾ ಕಿ ಜೈ ಎಂಬಿತ್ಯಾದಿ ಘೋಷಣೆಗಳು. ಬ್ಯಾಂಡಿನ ಗೌಜಿನಲ್ಲಿ ಊರ ಪರ್ಯಟನೆಗೆ ಹೊರಡುತ್ತಿದ್ದೆವು. ಅಲ್ಲೂ ದ್ವಜಾರೋಹಣ ಮಾಡಿ ಸಿಹಿ ಮಿಠಾಯಿ ಚಾಕಲೇಟ್ ಗಳನ್ನು ಪಡೆದು ಸಂಭ್ರಮಿಸಿ ಮತ್ತೆ ಶಾಲೆಗೆ ಬರುತ್ತಿದ್ದೆವು. ಝಂಡಾ ಊಂಚಾ ರಹೇ ಹಮಾರ ಹಾಡು ಹಾಡುತ್ತಿದ್ದರೆ ಅದೊಂದು ಬಗೆಯ ರೋಮಾಂಚನವಾಗುತ್ತಿತ್ತು.

ಎಷ್ಟು ಸುಂದರ ಆ ಬಾಲ್ಯ!! ಸ್ವಾತಂತ್ರ್ಯ ಬಂತೆಂದರೆ ಸಾಕು ಎಲ್ಲ ಮಕ್ಕಳ ಬಾಯಿಯಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಮತ್ತು ಅವರ ಗುಣಗಾನ. ನಂತರ ಸಾಂಸ್ಕ್ರತಿಕ ಕಾರ್ಯಕ್ರಮದ ಹಬ್ಬ ನೋಡಲೆರಡು ಕಣ್ಣು ಸಾಲದಾಗಿತ್ತು. ನಂತರ ರಾಶಿ ರಾಶಿ ಚಾಕೊಲೇಟ್ ತೆಗೆದುಕೊಂಡು ಮನೆಗೆ ಬಂದು ಹಂಚಿ ತಿನ್ನುವುದೇ ಸಂಭ್ರಮ. ಆದರೆ ಇಂದು ಎಲ್ಲವೂ ಬದಲಾಗಿದೆ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಮೀಸಲಾಗಿಟ್ಟು ತ್ಯಾಗ ಮತ್ತು ಬಲಿದಾನದಿಂದ ನಮಗೆ ಪ್ರೇರಣೆಯಾಗಿ ನಿಂತ ಮಹನೀಯರನ್ನು ನೆನೆಯುತ್ತ ದೇಶ ಪ್ರೇಮ ಬಿತ್ತರಿಸುವ ಮೌಲ್ಯಯುತ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ.

-ರಶ್ಮಿ ಉಡುಪ ಮೊಳಹಳ್ಳಿ
ಡಾ ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!