Monday, September 9, 2024

ರೈತರ ಮೌನ ಅಪಾಯಕಾರಿ-ಕೆ.ಪ್ರತಾಪಚಂದ್ರ ಶೆಟ್ಟಿ | ಕುಂದಾಪುರದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಭೆ

ಕುಂದಾಪುರ, ಆ.9: ಪ್ರತಿ ಹೆಜ್ಜೆಗೂ ಇವತ್ತು ಸ್ವಾರ್ಥ ಕಾಡುತ್ತಿದೆ. ನಾವು ಇವತ್ತು ಯಾವ ಮನಸ್ಥಿತಿಗೆ ತಲುಪಿದ್ದೇವೆ ಎನ್ನುವುದ ಆತ್ಮವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟ ನಿರ್ಮಾಣವಾಗಿದೆ. ಭ್ರಷ್ಟಚಾರವನ್ನು ಒಪ್ಪಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಅನ್ಯಾಯವಾಗುತ್ತಿದೆ ಎಂದು ಗೊತ್ತಿದ್ದರೂ ರೈತರು ಮೌನ ವಹಿಸುತ್ತಾರೆ. ಜನರ ಧ್ವನಿಯಾಗಬೇಕಾದ ಜನಪ್ರತಿನಿಧಿಗಳು ತಮ್ಮ ಜವಬ್ದಾರಿ ಮರೆಯುವುದು ಕಾಣುತ್ತಿದೆ. ಇದು ಹೀಗೆಯೇ ಆದರೆ ಮುಂದೆ ತುಂಬಾ ಅಪಾಯಕಾರಿಯಾಗುತ್ತದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಕುಂದಾಪುರ ಆರ್.ಎನ್.ಶೆಟ್ಟಿ ಮಿನಿ ಹಾಲ್‌ನಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಕಾಮಗಾರಿಯೊಂದು ಕಳಪೆ ಎಂದು ಗೊತ್ತಾದರೂ ಜನಪ್ರತಿನಿಧಿಗಳು ಮಾತನಾಡುವುದಿಲ್ಲ. ಜನಪ್ರತಿನಿಧಿಗಳು ಜನರ ಪರವಾಗಿ ನಿಲ್ಲಬೇಕು. ಪ್ರಸ್ತುತ ಜಾತಿ ರಾಜಕಾರಣ ಬಲಿಷ್ಠವಾಗಿ ಬೆಳೆಯುತ್ತಿದೆ, ಇದು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯ ತನಕ ಜನಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಾರಾಟ ವಿಚಾರದಲ್ಲಿ 18 ಕೋಟಿ ಅವ್ಯವಹಾರವಾಗಿದೆ. ಇದು ರೈತರ ಸ್ವತ್ತು, ಆದರೆ ಕಾರ್ಖಾನೆಯ ತಳಗಟ್ಟಿನ ಕಲ್ಲು ಕಿತ್ತು ಮಾರಾಟ ಮಾಡಿದರೂ ಕೂಡಾ ನಮ್ಮ ರೈತರು ಮೌನ ವಹಿಸುತ್ತಾರೆ. 5 ಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಿರುವ ಸರ್ಕಾರ, ಅಧಿಕಾರಿಗಳಿಗೆ ರೈತರು ಆಸ್ತಿ 18ಕೋಟಿ ಅವ್ಯವಹಾರವಾದರೂ ಕ್ರಮವಾಗದಿರುವುದು ವಿಪರ್ಯಾಸ ಎಂದರು.

ಬ್ರಹ್ಮಾವರದಲ್ಲಿ ಎಲ್ಲ ಅವಶ್ಯಕ ಮೂಲಸೌಕರ್ಯಗಳಿದ್ದರೂ ಕೃಷಿ ಡಿಪ್ಲಮೋ ಕೋರ್ಸು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಾಗ ರೈತ ಸಂಘ ಸತತ ಹೋರಾಟ ಮಾಡಿತ್ತು. ಹಲವು ನಾಯಕರು, ಸಂಘಟನೆಗಳು ನಮ್ಮೊಂದಿಗೆ ಹೋರಾಟಕ್ಕೆ ನಿಂತರು. ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಉಸ್ತುವಾರಿ ಸಚಿವರು, ವಿಧಾನಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು. ಒಟ್ಟು ಹೋರಾಟದ ಫಲವಾಗಿ ಕೃಷಿ ಡಿಪ್ಲೋಮಾ ಕೋರ್ಸು ಪುನಃರಾರಂಭವಾಯಿತು. ಈಗ ವಿದ್ಯಾರ್ಥಿಗಳ ಸೇರ್ಪಡೆಯ ಬಗ್ಗೆಯೂ ಜನರು ಜವಬ್ದಾರಿ ತಗೆದುಕೊಳ್ಳಬೇಕು. ಎಲ್ಲದೂ ರೈತ ಸಂಘವೇ ಮಾಡಬೇಕು ಎನ್ನುವ ಮನೋಭಾವ ಬರಬಾರದು. ಜನರು ತಮ್ಮ ಕರ್ತವ್ಯ, ಜವಬ್ದಾರಿಗಳನ್ನು ಪಾಲಿಸಬೇಕು ಎಂದರು.

ಅಕ್ರಮ ಸಕ್ರಮ ಮತ್ತು ಕುಮ್ಕಿ ಹಕ್ಕಿನ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕೆದೂರು ಸದಾನಂದ ಶೆಟ್ಟಿ ಮಾತನಾಡಿ, ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಅರ್ಜಿ ನಮೂನೆ ೫೦, ೫೩, ೫೭ ಇತ್ಯಾರ್ಥ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದೇ ಪ್ರಶ್ನೆಯಾಗಿದೆ. ಅತಿಕ್ರಮಣ ಮಾಡಿಕೊಂಡ ಭೂಮಿಯ ಜಿ‌ಎಪಿ‌ಎಸ್ ಮಾಡುವ ಪ್ರಕ್ರಿಯೆ ಇತ್ಯಾದಿ ಹೊಸ ಹೊಸ ಆದೇಶಗಳನ್ನು ಅಧಿಕಾರಿಗಳು ಹೇಳುತ್ತಾರೆ. ಸಮಸ್ಯೆ ಜಟಿಲವಾಗುತ್ತ ಹೋಗುತ್ತದೆ. ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತರಬೇಕು ಎಂದರು.

ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಬಗ್ಗೆ ಸರ್ವೋತ್ತಮ ಹೆಗ್ಡೆ ಹಾಲಾಡಿ ಮಾತನಾಡಿ ವರಾಹಿ ನೀರನ್ನು ಕುಡಿಯುವ ಉದ್ದೇಶಕ್ಕೆ ತಗೆದುಕೊಂಡು ಹೋಗಲು ನಾವು ವಿರೋಧ ಮಾಡಲಿಲ್ಲ. ಇವತ್ತು ಈ ಯೋಜನೆಯ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಬಾವಿಗಳಿಗೆ ಕಲುಷಿತ ನೀರು ನುಗ್ಗುತ್ತಿದೆ. ಸಮೀಪದ ಹಲವಾರು ಎಕರೆ ಕೃಷಿ ಭೂಮಿಗೆ ಮರಳು, ಜಲ್ಲಿ ಮುಂತಾದ ಅಪಾಯಕಾರಿ ನಿರುಪಯೂಕ್ತ ವಸ್ತುಗಳು ಕೊಚ್ಚಿಕೊಂಡು ಬಂದು ನಿಂತಿವೆ. ಕೃಷಿಯೋಗ್ಯ ಭೂಮಿ ಕೃಷಿ ಮಾಡದಂತಾಗಿದೆ. ಕನಿಷ್ಠ ಆವರಣ ಗೋಡೆಯನ್ನು ನಿರ್ಮಿಸಲಿಲ್ಲ. ಜನ ರೊಚ್ಚಿಗೆದ್ದಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿದರೆ ಕನಿಷ್ಠ ಮುಂದೆ ಬರುವ ಅಧಿಕಾರಿಗಳಿಗೆ ವ್ಯವಸ್ಥೆಯ ಬಗ್ಗೆ ಭಯವಾದರೂ ಮೂಡುತ್ತದೆ ಎಂದರು.

ವಸಂತ ಹೆಗ್ಡೆ ಮಾತನಾಡಿ ಜನಸ್ಪಂದನ ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ. ಜನರ ಅಹವಾಲುಗಳಿಗೆ ಸ್ಪಂದನೆಯೇ ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಸಂಪಿಗೇಡಿ ಸಂಜೀವ ಶೆಟ್ಟಿ 15 ವರ್ಷಗಳ ಹಿಂದೆ ಜನಸ್ಪಂದನ ಅತ್ಯುತ್ತಮವಾಗಿ ನಡೆಯುತ್ತಿತ್ತು. ಜನಸಾಮಾನ್ಯರ ಅಭಿಪ್ರಾಯಗಳಿಗೆ ಅವಕಾಶವೇ ಸಿಗುತ್ತಿಲ್ಲದಿರುವುದು ವಿಷಾಧನೀಯ. ಕಂದಾಯ ಇಲಾಖೆಗಳಿಗೆ ಸಂಬಂಧಿಸಿ ಹಲವು ಜಿಜ್ಞಾಸೆಗಳಿರುತ್ತದೆ. ಮಧ್ಯವರ್ತಿಗಳ ಮೂಲಕವೇ ಎಲ್ಲ ಕೆಲಸಗಳು ನಡೆಯುವ ಸ್ಥಿತಿ ಇದೆ. ಈ ಬಗ್ಗೆ ರೈತ ಸಂಘದ ಸಭೆಗೆ ಜಿಲ್ಲಾಧಿಕಾರಿ ಅಥವಾ ಸಹಾಯಕ ಆಯುಕ್ತರು, ತಹಶೀಲ್ದಾರನ್ನು ಕರೆಸಿ ಮಾಹಿತಿ ಕೊಡಿಸಿದರೆ ಉತ್ತಮವಾಗುತ್ತದೆ ಎಂದರು.

ಇದಕ್ಕೆ ಸ್ಪಂದಿಸಿ ಮಾತನಾಡಿದ ಪ್ರತಾಪಚಂದ್ರ ಶೆಟ್ಟರು, ಈ ವ್ಯವಸ್ಥೆಯನ್ನು ಸರಿಪಡಿಸಲು ನಮ್ಮಿಂದ ಆಗುವುದಿಲ್ಲ ಎಂದು ಹೇಳಲಿ, ರೈತ ಸಂಘ ಹೋರಾಟ ಮಾಡುತ್ತದೆ ಎಂದರು.

ಉಮೇಶ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಬ್ರಹ್ಮಾವರ ಕೃಷಿ ಡಿಪ್ಲೋಮಾ ಕೋರ್ಸು ಆರಂಭವಾಗಲು ರೈತ ಸಂಘದ ಹೋರಾಟ ಮುಂಚೂಣಿಯಲ್ಲಿತ್ತು. ಧರಣಿ, ಸತ್ಯಾಗ್ರಹ, ಹೋರಾಟಗಳ ಮೂಲಕ ಬೇಡಿಕೆ ಈಡೇರಿದೆ. ರೈತರಿಗೆ ಅನುಕೂಲವಾಗಿದೆ. ಮುಂದೆ ವಿದ್ಯಾರ್ಥಿಗಳ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವೂ ಆಗಬೇಕಿದೆ ಎಂದರು.

ಬಾಕಿಸಂ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮಾತನಾಡಿ, ಕೃಷಿ ಡಿಪ್ಲೋಮಾ ಕೋರ್ಸು ಆರಂಭವಾಗಿದೆ. ಅಧಿಸೂಚನೆಯೂ ಪ್ರಕಟವಾಗಿದೆ. ಪ್ರತಿ ಗ್ರಾಮದಿಂದ ಒಂದೊಂದು ವಿದ್ಯಾರ್ಥಿಗಳನ್ನು ಈ ಕೋರ್ಸಿಗೆ ಸೇರ್ಪಡೆಗೊಳಿಸಬೇಕು. ಈ ಕೋರ್ಸು ಮಾಡಿದರೆ ಮುಂದೆ ಕೃಷಿ, ತೋಟಗಾರಿಕಾ ಇಲಾಖೆಯಲ್ಲಿ ಉತ್ತಮ ಉದ್ಯೋಗವಕಾಶಗಳು ಸಿಗುವ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.

ಉದಯ ಕುಮಾರ್ ಶೆಟ್ಟಿವಂಡ್ಸೆ ಸಭೆಯಲ್ಲಿ ಚರ್ಚಿಸಲಾದ ಒಟ್ಟು ವಿಷಯಗಳ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಪ್ರಮುಖರಾದ ಬಾಬು ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಕೃಷ್ಣದೇವ ಕಾರಂತ, ಜಯರಾಮ ಶೆಟ್ಟಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ ಬಲ್ಲಾಳ, ಎಲ್ಲಾ ವಲಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿದರು.

ಸಭೆಯಲ್ಲಿ ವರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಗಳು, ರೈತರ ಪಂಪುಸೆಟ್‌ಗಳಿಗೆ ಆಧಾರ್ ನಂಬರ್ ನೋಂದಣಿ ಸರ್ಕಾರದ ಆದೇಶ, ಅಕ್ರಮ ಸಕ್ರಮ ಕುಮ್ಕಿ ಹಕ್ಕಿನ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು,

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!