Monday, September 9, 2024

ನಕಲಿ ಪರಶುರಾಮನ ಮುಂದೆಯೇ ಅಸಲಿ ಪರಶುರಾಮ ದಿಢೀರ್ ಪ್ರತ್ಯಕ್ಷ

ಶಾಸಕ ಸುನೀಲ್‌ ನಿರ್ದೇಶನದ ಬೃಹನ್ನಾಟಕದ ಮುಂದುವರಿದ ಭಾಗವೆಂಬ ಆರೋಪ ! 

ಈವರೆಗೆ ಸದ್ದಿಲ್ಲದಂತಿದ್ದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ವಿವಾದ ಮರಳಿ ಚರ್ಚೆಗೆ ಕಾರಣವಾಗಿದೆ. ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಉಮಿಕಲ್‌ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ನಕಲಿ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪರಶುರಾಮ ಥೀಂ ಪಾರ್ಕ್‌ ವಿಚಾರ ರಾಜ್ಯದಾದ್ಯಂತ ಚರ್ಚಯಾಗಿತ್ತು. ಪ್ರಕಣವೂ ದಾಖಲಾಗಿತ್ತು. ಪ್ರತಿಮೆಯ ವಿನ್ಯಾಸ ಮರುನವೀಕರಣ ಮಾಡುವ ನೆಪ ಹೇಳಿ ಟೆಂಡರ್‌ ವಹಿಸಿಕೊಂಡ ನಿರ್ಮಿತಿ ಕೇಂದ್ರ ಉಡುಪಿ, ಪರಶುರಾಮ ಪ್ರತಿಮೆಯನ್ನು ಅರ್ಧಕಡಿದು ರಾತ್ರೋರಾತ್ರಿ ಸರ್ಕಾರದ ಗಮನಕ್ಕೂ ತರದೇ ಎಸ್ಕೇಪ್ ಮಾಡಿತ್ತು. ಆ ಬಳಿಕ ಈ ವಿಷಯದ ಚರ್ಚೆ ಟೀಕೆ, ಗಂಭೀರ ಆರೋಪಗಳಿಗೆ ಕಾರಣವಾಗಿತ್ತು. ಹೋರಾಟಗಾರರ ಪ್ರತಿಭಟನೆಗಳ ಒತ್ತಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿತ್ತು. ಸದ್ಯ ತನಿಖೆಯ ಹಿನ್ನೆಲೆಯಲ್ಲಿ ಕ್ರಿಷ್‌ ಆರ್ಟ್‌ ವರ್ಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಮಾಲೀಕತ್ವದ ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಇರುವ ಗೋಡೌನ್‌ನಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳ ಮಹಜರು ಮಾಡಿ ಪ್ರತಿಮೆಯ ಬಿಡಿಭಾಗಗಳನ್ನು ಜಪ್ತಿ ಮಾಡಿ ಕಾರ್ಕಳಕ್ಕೆ ತಂದಿದ್ದಾರೆ.

ಹಣ ಪೂರ್ತಿ ಬಿಡುಗಡೆಯಾಗಿಲ್ಲ ಎಂದು ಸ್ವತಃ ನಿರ್ಮಿತಿ ಕೇಂದ್ರದವರೇ ಹೇಳಿದ್ದರು. ಹಾಗಿರುವಾಗಲೇ ಮತ್ತು ಒಪ್ಪಂದದ ಪ್ರಕಾರ ಥೀಂ ಪಾರ್ಕ್‌ನಲ್ಲಿ ನಿಗದಿತ ಸಮಯದೊಳಗೆ ಶಿಲ್ಪಿಯು ಮೂರ್ತಿಯನ್ನು ಪೂರ್ಣಗೊಳಿಸಿ ಕೊಡಬೇಕಾಗಿತ್ತು. ಆದರೆ ಕಾಮಗಾರಿ ಮುಂದುವರಿಸಲು ಪ್ರತಿಮೆಯ ಅರ್ಧ ಭಾಗವನ್ನು ನಿರ್ಮಿತಿ ಕೇಂದ್ರದವರು ತೆಗೆದುಕೊಟ್ಟಿರಲಿಲ್ಲ. ಆ ಭಾಗವನ್ನು ತೆಗೆಯಲು ಅವಕಾಶ ಕೋರಿ ಕೃಷ್ಣ ನಾಯ್ಕ್ ಹೈಕೋರ್ಟ್‌ ಮೊರೆ ಹೋಗಿದ್ದರು. 14 ದಿನಗಳೊಳಗೆ ಮೂರ್ತಿಯ ಬಾಕಿ ಭಾಗವನ್ನು ತೆರವುಗೊಳಿಸಬೇಕು ಮತ್ತು 4 ತಿಂಗಳೊಳಗೆ ಪೂರ್ತಿಗೊಳಿಸಿ ಮರುಸ್ಥಾಪಿಸಬೇಕು ಎಂದು ಎ. 23ರಂದು ಕೋರ್ಟ್‌ ಆದೇಶಿಸಿತ್ತು. ತೆರವು ಪೂರ್ಣಗೊಳಿಸಲು ಕೇವಲ 5 ದಿನ ಬಾಕಿ ಇರುವಾಗಲೇ ದಿಢೀರಾಗಿ ಜಿಲ್ಲಾಧಿಕಾರಿಗಳು ಕಾಮಗಾರಿಗೆ ತಡೆ ನೀಡಿ ಆದೇಶಿಸಿದ್ದರು. ಹೀಗಿರುವಾಗ ಪೂರ್ಣ ಕಾಮಗಾರಿಗೆ ಬೇಕಿರುವ ಅರ್ಧ ಪರಶುರಾಮನ ಮೂರ್ತಿ ಇನ್ನೂ ಉಮಿಕಲ್‌ ಬೆಟ್ಟದ ಮೇಲೆಯೇ ಇದೆ. ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಬೆಂಳೂರಿನ ಗೋಡೌನ್‌ ನಲ್ಲಿ ಪ್ರತಿಮೆಯ ಪಾದಗಳು ಸೇರಿ ತಲೆ, ಕಾಲುಗಳು ಸೇರಿ ಬಿಡಿಭಾಗಗಳು ಪತ್ತೆಯಾಗಿವೆ. ಸ್ವತಃ ಬಡ ಕಲಾವಿದ ಎಂದು ಹೇಳಿಕೊಳ್ಳುವ ಕೃಷ್ಣ ನಾಯ್ಕ್‌ ಅವರಲ್ಲಿ ನಿರ್ಮಿತಿ ಕೇಂದ್ರ ಪರಶುರಾಮನ ಇನ್ನರ್ಧ ಭಾಗವನ್ನು ತೆಗೆದುಕೊಡದಿರುವಾಗಲೇ ಸಂಪೂರ್ಣ ೧೫  ಟನ್‌ ತೂಕದ ಕಂಚಿನ ಮೂರ್ತಿ ಮಾಡಲು ಹಣ ಇದ್ದಿತ್ತೇ ? ಅಥವಾ ಅಷ್ಟು ಹಣವನ್ನು ಯಾರು ಒದಗಿಸಿದ್ದಾರೆ ? ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ನಡುವೆ ಇವೆಲ್ಲಾ  ಶಾಸಕ ಸುನೀಲ್‌ ಕುಮಾರ್‌ ನಿರ್ದೇಶನದ ಬೃಹನ್ನಾಟಕದ ಮುಂದುವರಿದ ಭಾಗ ಎಂಬ ಆರೋಪ ಕೇಳಿ ಬರುತ್ತಿದೆ.

ಅದೇನೆ ಇರಲಿ, ಕಾರ್ಕಳದ ವಿವಾದಿತ ಪರಶುರಾಮ ಥೀಂ ಪಾರ್ಕ್‌ ಪ್ರಕರಣದ ತನಿಖೆಯ ವಿಚಾರ ಮೇಲೆ ಬರುವುದಕ್ಕೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದಿದೆ ಎನ್ನಲಾಗುತ್ತಿರುವ ಅಕ್ರಮವಾಗಿ ನಿವೇಶನ ಹಂಚಲಾಗಿದೆ ಎಂಬ ವಿಚಾರಗಳು ರಾಜಕೀಯವಾಗಿ ಚರ್ಚೆಯಾಗಲೇಬೇಕಾಯಿತು ಎನ್ನುವುದು ವಿಷಾದನೀಯವೇ ಸರಿ. ಪರಶುರಾಮ ಥೀಂ ಪಾರ್ಕ್‌ ನಲ್ಲಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು, ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದರು ಎಂಬ ಆರೋಪ ಮಾಹಿತಿ ಹಕ್ಕಿನಿಂದ ಪಡೆದ ದಾಖಲೆ ಆಧಾರದ ಮೇಲೆಯೇ ಕೇಳಿ ಬಂದರೂ ಸರ್ಕಾರ ಈ ಬಗ್ಗೆ ಕಣ್ಣು ಹಾಯಿಸಿಯೂ ನೋಡಿಲ್ಲ. ಪರಶುರಾಮನ ಶಾಪದಿಂದಲೇ ಕಾಂಗ್ರೆಸ್‌ನ ಅತಿ ದೊಡ್ಡ ಎರಡು ಹಗರಣಗಳು ಬಟಾಬಯಲಾಗಿದೆ ಎಂದು ಹೇಳಿದರೂ ತಪ್ಪಿಲ್ಲ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ರಾಜ್ಯದ ಜನರಿಗೆ ಕಾಗೆ ಹಾರಿಸಿ ಅಧಿಕಾರದ ಗದ್ದುಗೆಗೆ ಏರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ವರ್ಷ ಪೂರೈಸುತ್ತಿದ್ದಂತೆಯೇ ಎರಡು ಹಗರಣಗಳನ್ನು ಎದುರಿಸುತ್ತಿರುವುದು ಅಷ್ಟೇ ಅಲ್ಲದೆ ಜನರ ವಿಶ್ವಾಸವನ್ನು ಸಂಪೂರ್ಣವನ್ನು ಕಳೆದುಕೊಂಡಿದೆ. ಕಾರ್ಕಳದ ಯರ್ಲಪಾಡಿ ಗ್ರಾಮದಲ್ಲಿನ ಉಮಿಕಲ್‌ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಪರಶುರಾಮ ಥೀಂ ಪಾರ್ಕ್‌ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಅಲ್ಲಿ ಸ್ಥಾಪಿಸಲಾಗಿರುವ ನಕಲಿ ಪರಶುರಾಮನ ಮೂರ್ತಿಯ ವಿಚಾರ ಬಟಾಬಯಲಾದರೂ ಸರ್ಕಾರ ಈ ಬಗ್ಗೆ ಗಮನವೇ ನೀಡದೇ ಕೈಕಟ್ಟಿ ಕುಳಿತುಕೊಂಡಿತ್ತು. ಸ್ಥಳೀಯರಾದ ದಿವ್ಯ ನಾಯಕ್‌ ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯ ಮೇರೆಗೆ ಸಮಾನ ಮನಸ್ಕರೊಡಗೂಡಿ ಉಪವಾಸ ಸತ್ಯಾಗ್ರಹ ಮಾಡಿ ರಾಜ್ಯದ ಗಮನ ಸೆಳೆದರೂ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿತ್ತು.

ಕಣ್ಣೆದುರೇ ಇಂತಹದ್ದೊಂದು ದೊಡ್ಡ ಹಗರಣ ನಡೆದಿರುವಾಗ ಇಲ್ಲಿನ ಸೋ ಕಾಲ್ಡ್‌ ಕಾಂಗ್ರೆಸ್‌ ನಾಯಕರು ಕಣ್ಣು ಮುಚ್ಚಿ ಕುಳಿತರು. ಒತ್ತಡ ಜಾಸ್ತಿಯಾದಾಗ ಭೇಟಿ, ಪರಿಶೀಲನೆ, ಪ್ರತಿಭಟನೆ ಅಂತ ಶಾಸಕ ಸುನೀಲ್‌ ಕುಮಾರ್‌ ಛಾಳಿಯಂತೆ ಬೊಬ್ಬೆ ಹಾಕಿದರು. ತಮ್ಮದೇ ಸರ್ಕಾರ ಅಧಿಕಾರದಲ್ಲಿರುವಾಗಲೂ ಇಂತಹದ್ದೊಂದು ಹಗರಣ ನಡೆದಿರುವಾಗಲೂ ತನಿಖೆಗೆ ಒತ್ತಾಯಿಸಿದೇ ಬರೀ ಆರೋಪ ಪ್ರತ್ಯಾರೋಪ, ಮಾಧ್ಯಮ ಹೇಳಿಕೆ ಎಂದು ಕಾಲ ಹರಣ ಮಾಡಿದರು. ತನಿಖೆ ಚುರುಕುಗೊಳಿಸಿ ಎಂದು ತಮ್ಮದೇ ಸರ್ಕಾರದ ಮುಖ್ಯಮಂತ್ರಿಗೆ ಮನವಿ ಕೊಡುವುದಕ್ಕೆ ಸ್ವತಃ ಕಾಂಗ್ರೆಸ್‌ ಒಂದು ವರ್ಷ ತೆಗೆದುಕೊಂಡಿರುವುದು ದುರಂತವೇ ಸರಿ. ಇಂತಹ ಪ್ರಕಣವೊಂದನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಹೋರಾಟ ಮಾಡಬೇಕಿರುವ ಜಿಲ್ಲೆಯ ಹಿರಿಯ ಕಾಂಗ್ರೆಸ್‌ ನಾಯಕರು ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡು ತಮ್ಮ ಲಾಭ ಕಂಡುಕೊಂಡರೇ ಹೊರತು ತುಟಿ ಬಿಚ್ಚಿಲ್ಲ.

ಸ್ಥಳೀಯ ಕಾಂಗ್ರೆಸ್‌ ಕಾಟಾಚಾರಕ್ಕೆ ಪ್ರತಿಭಟನೆ ನಡೆಸಿ ಸುಮ್ಮನಾಗಿತ್ತು. ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಅವರು ಪರಿಶೀಲನೆ ನಡೆಸಿ ನಕಲಿ ಪರಶುರಾಮನ ಮೂರ್ತಿಯನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರಕ್ಕೆ ವರದಿ ಒಪ್ಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿ ನೀಡಿ ಅರ್ಧ ಕಂಚು, ಅರ್ಧ ಫೈಬರ್‌ ಇದೆ, ಪರಿಶೀಲನೆ ಮಾಡಿಸುತ್ತೇವೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾದರು. ಆಮೇಲೆ ಉಸ್ತುವಾರಿ ಸಚಿವರದ್ದು ಈ ಬಗ್ಗೆ ಸುದ್ದಿಯೇ ಇರಲಿಲ್ಲ. ಉಸ್ತುವಾರಿ ಸಚಿವರಿಗೆ ಸುನೀಲ್‌ ಕುಮಾರ್‌ ಅವರಿಂದ ತಲುಪಬೇಕಾಗಿರುವುದು ತಲುಪಿದೆ ಎಂದು ಸ್ವತಃ ಕಾಂಗ್ರೆಸ್‌ ವಲಯದಿಂದಲೇ ಗುಸುಗುಸು ಆರೋಪಗಳು ಕೇಳಿಬಂತು.

ಶಾಸಕ ಸುನೀಲ್‌ ಕುಮಾರ್‌ ಕಾರ್ಕಳ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್‌ ಕುಮಾರ್‌, ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ, ಹಾಗೂ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ವಿರುದ್ಧ ಲೋಕಾಯುಕ್ತದಲ್ಲಿ ಕೃತ್ಯವ್ಯ ಲೋಪದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತಿಂಗಳುಗಳು ಕಳೆದರೂ ಸುದ್ದಿಯೇ ಇರಲಿಲ್ಲ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸಿದರೂ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಸರ್ಕಾರ ಈ ಪ್ರಕರಣವನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಜಿಲ್ಲಾಧಿಕಾರಿಗಳು, ಪ್ರಕರಣದ ತನಿಖೆ ನಡೆಯುತ್ತಿರುವಾಗ ಹಸ್ತಕ್ಷೇಪ ಮಾಡಬಹುದು, ತನಿಖೆಯ ದಾರಿ ತಪ್ಪಿಸಬಹುದು ಎಂಬ ಕಾರಣದಿಂದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯಾಗಿದ್ದ ಅರುಣ್‌ ಕುಮಾರ್‌ ಅವರನ್ನು ಅಮಾನತು ಮಾಡಿ ಆದೇಶಿಸಿದ್ದನ್ನು ಹೊರತಾಗಿ ಮತ್ತೇನೂ ಬೆಳವಣಿಗೆ ಆಗಿಲ್ಲ.

ವಾಲ್ಮೀಕಿ ಅಭಿವೃದ್ಧಿ ನಿಗಮ, ಹಾಗೂ ಮುಡಾ ಹಗರಣಗಳ ಬಗ್ಗೆ ಬಿಜೆಪಿ ಆರೋಪ ಮಾಡಿದ ಬೆನ್ನಲ್ಲೇ ಸರ್ಕಾರ ಪರಶುರಾಮ ಥೀಂ ಪಾರ್ಕ್ ನ ಪ್ರಕರಣವನ್ನು ಪ್ರತ್ಯಾಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿರುವುದು ಹಾಸ್ಯಾಸ್ಪದವೇ ಸರಿ. ಆರೋಪ ಕೇಳಿ ಬಂದಾಗ ಗಮನ ಕೊಡದೆ, ಪ್ರಕರಣವನ್ನು ತನಿಖೆಗೆ ಒಪ್ಪಿಸದೇ ತಿಂಗಳುಗಟ್ಟಲೇ ಕಾಲ ಹರಣ ಮಾಡಿದ ಸರ್ಕಾರ ಈಗ ಈ ವಿಷಯವನ್ನು ಮೇಲೆತ್ತಿ ತನ್ನ ಮೇಲಿರುವ ಹಗರಣದ ಆರೋಪವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿದೆಯೇ ಎಂಬ ಅನುಮಾನ ಹುಟ್ಟಿದೆ.

ತಿಂಗಳುಗಟ್ಟಲೇ ಸುಮ್ಮನಿದ್ದ ಸರ್ಕಾರ ಹೋರಾಟಗಾರರ ಒತ್ತಡಕ್ಕೆ ಮಣಿದು ಫೆಬ್ರವರಿಯಲ್ಲಿ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿತ್ತು. ಆಮೇಲೆ ಏನಾಯಿತು ಎನ್ನುವ ಸುಳಿವೇ ಇರಲಿಲ್ಲ.  ರಾಜಕೀಯ ವಲಯದಲ್ಲಿ ವಾಲ್ಮೀಕಿ ಮತ್ತು ಮುಡಾ ಹಗರಣ ಬಹಳ ದೊಡ್ಡ ಚರ್ಚೆಯಾದಾಗ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ಹಾಗೂ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಸರ್ಕಾರದ ಬರೋಬ್ಬರಿ ೨೧ ಹಗರಣಗಳ ತನಿಖೆ ಮಾಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಆ ೨೧ ಹಗರಣಗಳ ಪೈಕಿ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಹಗರಣವೂ ಒಂದು. ರಾಜಕೀಯ ಲಾಭಕ್ಕಾಗಿಯೇ ಇಲ್ಲಿ ತನಕ ಈ ಪ್ರಕರಣಗಳನ್ನು ತನಿಖೆ ಮಾಡಿಸದೇ ಕಾಂಗ್ರೆಸ್‌ ಸುಮ್ಮನಾಗಿತ್ತೇ ? ಬಿಜೆಪಿ ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿತ್ತೆ ಎನ್ನುವ ಪ್ರಶ್ನೆಯೂ ಮುಂದಿದೆ. ಅಥವಾ ಕಾಂಗ್ರೆಸ್‌ ಅಶಕ್ತವಾಗಿದೆಯೇ ? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಮೇಲೆದ್ದಿದೆ.

ಸ್ಥಳೀಯರ ಹೋರಾಟ ಮಾಡುವಾಗ ಸರ್ಕಾರವಾಗಲಿ, ಅಧಿಕಾರಿಗಳಾಗಲಿ, ಉಸ್ತುವಾರಿ ಸಚಿವರಾಗಲಿ ಸರಿಯಾಗಿ ಸ್ಪಂದಿಸಿಲ್ಲ. ಸುನೀಲ್‌ ಕುಮಾರ್‌ ಸರ್ಕಾರದ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆಯೂ ಬಂತು. ಇಷ್ಟೆಲ್ಲಾ ಆದಾಗಲೂ ರಾಜ್ಯ ಸರ್ಕಾರ ಮೌನ ವಹಿಸಿತ್ತು. ತನ್ನನ್ನು ತಾನೇ ಟೀಕೆಗೆ ಒಳಪಡಿಸಿಕೊಂಡು ಈಗ ಮತ್ತೆ ಎಂದಿನಂತೆ ರಾಜಕೀಯ ಮೈಲೇಜ್‌ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ ಕಾಂಗ್ರೆಸ್. ಸ್ಥಳೀಯ ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದರೂ ಕೂಡ ಒಂದು ವರ್ಷ ಸುಮ್ಮನಿದ್ದ ಪ್ರಮುಖರು ಈಗ ಹೋರಾಟ ಮಾಡುವುದು ನೋಡಿದರೆ ನಿಜಕ್ಕೂ ಆಶ್ಚರ್ಯವೆನ್ನಿಸುತ್ತಿರುವುದರ ಜೊತೆಗೆ ಈ ವಾಲ್ಮೀಕಿ ಮತ್ತು ಮುಡಾ ಹಗರಣಗಳು ಬೆಳಕಿಗೆ ಬರದೆ ಇದ್ದಿದ್ದರೇ ಅಥವಾ ರಾಜಕೀಯ ವಲಯದಲ್ಲಿ ಇಷ್ಟೊಂದು ಚರ್ಚೆಯಾಗದೇ ಇದ್ದಿದ್ದರೇ, ಈ ಪರಶುರಾಮ ಥೀಂ ಪಾರ್ಕ್‌ ಪ್ರಕರಣವನ್ನು ನಿಧಾನಕ್ಕೆ ಮುಚ್ಚಿ ಹೋಗುತ್ತಿತ್ತೇನೋ ಎನ್ನುವ ಆಘಾತಕಾರಿ ವಿಷಯ ನಮ್ಮ ಮುಂದಿದೆ.

ರೈಲು ಹೋದ ಮೇಲೆ ಟಿಕೇಟ್‌ ಕೊಂಡಂತಾಯ್ತು ಕಾಂಗ್ರೆಸ್‌ನ ಪರಿಸ್ಥಿತಿ. ಇಲ್ಲಿಯವರೆಗೆ ಸ್ವಯ ಕಳೆದುಕೊಂಡಂತಿದ್ದ ಕಾಂಗ್ರೆಸ್‌ ಕೊನೆಗೂ ಎಚ್ಚರವಾಗಿದೆ ಎನ್ನುವುದೇ ಈ ಪ್ರಕರಣದ ವಿರುದ್ಧ ಹೋರಟ ನಡೆಸಿದವರ ಪಾಲಿಗೆ ತುಸು ಸಮಾಧಾನ.

ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿರುವಾಗ, ಶಾಸಕ ಸುನೀಲ್‌ ಕುಮಾರ್‌ ನೇತೃತ್ವದಲ್ಲಿ ನಡೆದ ಈ ಹಗರಣದ ವಿರುದ್ಧ ಬಿಜೆಪಿಯೇ ಈಗ ಕಾಂಗ್ರೆಸ್‌ ವಿರುದ್ಧವಾಗಿ ಪ್ರತಿಭಟಿಸುತ್ತಿದೆ. ಕಾಂಗ್ರೆಸ್‌ ಇನ್ನೂ ನಿದ್ದೆಯಿಂದ ಎಚ್ಚರಾದಂತೆ ಕಾಣಿಸುತ್ತಿಲ್ಲ. ಇವೆಲ್ಲಾ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಇಲ್ಲಿ ಸ್ವಯ ಕಳೆದುಕೊಂಡಿದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಬಿಜೆಪಿಯಷ್ಟು ನೀಚ ರಾಜಕಾರಣ ಮಾಡುವುದಿಲ್ಲ ಎಂದು ಪದೇ ಪದೇ ಹೇಳುವ ಕಾಂಗ್ರೆಸ್‌, ಈಗ ಈ ಪ್ರಕರಣವನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ತಾನೆಷ್ಟು ನೀಚ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ಸ್ವತಃ ಕಾಂಗ್ರೆಸ್‌ ಈಗ ಪ್ರಶ್ನಿಸಿಕೊಳ್ಳಬೇಕಿದೆ.

ಪರಶುರಾಮ ಅವತಾರ ಪುರುಷ, ದೇವರು, ಧರ್ಮ, ಧಾರ್ಮಿಕತೆ, ಧಾರ್ಮಿಕ ವಿಚಾರಗಳಿಗೆ ಧಕ್ಕೆಯಾಗಿದೆ ಎಂಬೆಲ್ಲಾ ವಿಚಾರಗಳು ಈ ಪ್ರಕರಣದ ಒಂದು ಮಗ್ಗಲು. ಪ್ರಕರಣದಲ್ಲಿ ಪಾಲ್ಪಡೆದವರು ಅಕ್ಷರಶಃ ಹಿಂದೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ಮಾಡಿದ್ದಾರೆ ಎನ್ನುವುದು ದಾಖಲೆಗಳಲ್ಲಿ ತಿಳಿದಿದೆ. ಮಾತ್ರವಲ್ಲದೇ, ಪರಶುರಾಮನ ಪ್ರತಿಮೆಯನ್ನು ಸ್ಥಾಪನೆ ಮಾಡಿ ಅರ್ಧ ಕಡಿದು ರಾತ್ರೋರಾತ್ರಿ ಸ್ಥಳಾಂತರ ಮಾಡಿದ್ದು, ಕಂಚಿನದ್ದು ಎಂದು ಪರಶುರಾಮನ ಪ್ರತಿಮೆಗೆ ಸುತ್ತಿಗೆಯಿಂದ ಹೊಡೆದು ಸಾಬೀತು ಮಾಡುವುದಕ್ಕೆ ಹೋಗಿ ಸುನೀಲ್‌ ಕುಮಾರ್‌ ಆಪ್ತ ಬಳಗದವರು ಎಡವಟ್ಟು ಮಾಡಿಕೊಂಡರು. ಇವೆಲ್ಲವೂ ಆಗಿ ಹೋದ ವಿಷಯ. ಇನ್ನೂ ಕಾನೂನು ಮೇಲಾಗಬೇಕಿದೆ. ಕಾನೂನನ್ನು ಹೊರತುಪಡಿಸಿ ಧರ, ಧಾರ್ಮಿಕ ವಿಚಾರಗಳಿಗೆ ಧಕ್ಕೆಯಾಗಿದೆ ಎಂದು ಚರ್ಚೆ ಮಾಡುತ್ತಿದ್ದರೇ ಅದು ವ್ಯರ್ಥವಷ್ಟೆ. ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕಿದೆ.

ಕಂಚಿನ ಪ್ರತಿಮೆ ಎಂದೇ ನಂಬಿಸಿದ್ದ ಬಿಜೆಪಿ
ಕಾರ್ಕಳದ ಉಮಿಕಲ್‌ ಕುಂಜದಲ್ಲಿ ಶಾಸಕ ಸುನೀಲ್‌ ಕುಮಾರ್‌ ಕಾರ್ಕಳ ಅವರ ನಿರ್ದೇಶನದಲ್ಲಿ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಅವ್ಯವಹಾರವಾಗಿದೆ, ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಾಗ ಕಾರ್ಕಳ ಬಿಜೆಪಿ ಪ್ರತಿಮೆ ಕಂಚಿನದ್ದೇ ಎಂದು ಸಮರ್ಥಿಸಿಕೊಂಡಿತ್ತು. ಸ್ವತಃ ಶಾಸಕ ಸುನೀಲ್‌ ಕುಮಾರ್‌, ಪರಶುರಾಮ ಥೀಂ ಪಾರ್ಕ್‌ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬೆಸುಗೆ ಹಾಕಲು ಫೈಬರ್‌ ಬಳಸಿರುವುದನ್ನು ಹಿಡಿದುಕೊಂಡು ಇಡೀ ಪ್ರತಿಮೆಯನ್ನು ನಕಲಿ ಎಂದು ರಾಜಕೀಯವಾಗಿ ಮಸಿ ಬಳಿಯುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೇ ಸುನೀಲ್‌ ಕುಮಾರ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಅರ್ಧ ಕತ್ತರಿಸಿದ ಪ್ರತಿಮೆಯ ಭಾಗಗಳಿಗೆ ಸುತ್ತಿಗೆಯಿಂದ ಬಡಿದು ಕಂಚಿನ ಪ್ರತಿಮೆ ಎಂದು ಸಾಬೀತು ಪಡಿಸಲು ಹೋಗಿ ಮತ್ತಷ್ಟು ವಿವಾದ ಆಗಿತ್ತು. ಕಾರ್ಕಳದಲ್ಲಿನ ತಮ್ಮ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಪ್ರಯತ್ನ ಮಾಡಿ ಇಲ್ಲಸಲ್ಲದ ಆರೋಪಗಳನ್ನು ಸ್ವತಃ ಶಾಸಕ ಸುನೀಲ್‌ ಕುಮಾರ್‌ ಮಾಡಿ ತಾನು ಸಾಚಾ ಎಂದು ತೋರಿಸಿಕೊಂಡಿದ್ದರು. ಜನಪ್ರತಿನಿಧಿ ಪತ್ರಿಕೆ ದಾಖಲೆಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡುವುದಕ್ಕೆ ಹೋದಾಗಲೂ ಶಾಸಕರು ಪತ್ರಿಕೆಯ ವರದಿಗಾರರನ್ನು ಪರೋಕ್ಷವಾಗಿ ಬೆದರಿಸುವ ಪ್ರಯತ್ನವೂ ಮಾಡಿದ್ದರು. ಪತ್ರಿಕೆಯ ಯೂಟ್ಯೂಬ್‌ ಚಾನೆಲ್‌ ನ ಕ್ಯಾಮೆರಾ ಬಂದ್‌ ಮಾಡಿಸಿದ್ದರು. ದಾಖಲೆಗಳ ಬಗ್ಗೆ ಮಾತನಾಡಿದಾಗ ಸುನೀಲ್‌ ಮೌನವಾಗಿದ್ದರು. ಪ್ರಕರಣದ ಬಗ್ಗೆ ಇಷ್ಟೇಲ್ಲಾ ದಾಖಲೆಗಳಿರುವಾಗಲೂ ಬಿಜೆಪಿ ಪ್ರತಿಭಟನೆ ಮಾಡುತ್ತಾ ಪ್ರತಿಮೆಯನ್ನು ಕಂಚು ಎಂದೇ ಹೇಳುತ್ತಿದೆ. ತನಿಖೆಗೆ ಆಗ್ರಹಿಸುವ ಬಿಜೆಪಿ ಆರೋಪಿ ಶಾಸಕರನ್ನು ಪರವಹಿಸಿ ವೈಭವೀಕರಿಸುತ್ತಿರುವುದು ಹಾಸ್ಯಾಸ್ಪದ. ಥೀಂ ಪಾರ್ಕ್‌ ಲೋಕಾರ್ಪಣೆಯ ಸಂದರ್ಭದಲ್ಲಿ ಎಲ್ಲಾ ಮಾಧ್ಯಮಗಳಲ್ಲಿ ಲಕ್ಷಾಂತರ ರೂ. ವ್ಯಯಿಸಿ ಕ್ರೆಡಿಟ್‌ ತೆಗೆದುಕೊಂಡಿದ್ದ ಸುನೀಲ್‌ ಕುಮಾರ್‌, ಈಗ ತೀರಾ ಸಲೀಸಾಗಿ ಆರೋಪವನ್ನು ಅಧಿಕಾರಿಗಳ ಮೇಲೆ ಹಾಕಿ ಪ್ರಕರಣದಿಂದ ಜಾರಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವುದು ಅತಿ ಮನಸ್ಥಿತಿಯೆ ಸರಿ.

ಪರಶುರಾಮನನ ಹೆಸರಿನಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ : ಬಿಜೆಪಿ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ(ಆ.೦೫) ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬಿಜೆಪಿ ಪ್ರತಿಭಟನೆ ಮಾಡಿದೆ. ಪರಶುರಾಮ ಕರಾವಳಿಯ ಸೃಷ್ಟಿಕರ್ತ. ಹಗರಣಗಳನ್ನು ಮಾಡುವ ಧೋರಣೆ ಕಾಂಗ್ರೆಸ್‌ನದ್ದು, ಕಾಂಗ್ರೆಸ್‌ ಇದ್ದ ಕಾಲ ಘಟ್ಟ ಹಾಗೂ ಬಿಜೆಪಿ ಇದ್ದ ಕಾಲದಲ್ಲಿ ಆದ ಅಭಿವೃದ್ಧಿಯನ್ನು ಜನರಿಗೆ ಗೊತ್ತಿದೆ. ಶಿಲ್ಪಿ ಕೃಷ್ಣ ನಾಯ್ಕ್‌ ಅವರನ್ನೇ ನಿಂದಿಸುವ ಕಾರ್ಯ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿದ್ದಲ್ಲದೇ, ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ.

ಸುನೀಲ್‌ ಕುಮಾರ್‌ ಮಹಾಮೋಸ : ಕಾಂಗ್ರೆಸ್‌ ಆರೋಪ
ನಕಲಿ ಪರಶುರಾಮ ಮೂರ್ತಿ ಸೃಷ್ಟಿಸಿ, ಜನರಿಗೆ ಸುಳ್ಳು ಹೇಳಿ ಸುನೀಲ್‌ ಕುಮಾರ್‌ ಶಾಸಕನಾಗಿದ್ದಾರೆ. ನಮ್ಮ ಒಂದು ವರ್ಷದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಈಗ ಬೆಟ್ಟದಲ್ಲಿ ಇರುವ ಅರ್ಧ ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಹೇಳುವುದು ಇವರೇ (ಬಿಜೆಪಿ) ಆದಮೇಲೆ ಮತ್ತೆ ಎರಡು ಕಾಲುಗಳನ್ನು ತಯಾರಿಸಿದ್ದು ಯಾಕೆ ಎಂದು ತಿಳಿಯುತ್ತಿಲ್ಲ. ಬೆಟ್ಟದಲ್ಲಿ ಇರುವ ಅರ್ಧಮೂರ್ತಿ ನಕಲಿ ಎಂದು ಇವರೇ ಹೇಳಿದ ಹಾಗಾಯ್ತಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ದೂರುದಾರರಿಗೆ ಬರಲು ಹೇಳಿದ್ದೇವೆ : ಎಸ್‌ಪಿ
ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಕಾರ್ಕಳದ ಕಾಂಗ್ರೆಸ್‌ ನಾಯಕ, ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಕಾಣಿಸಿಕೊಂಡಿರುವುದು ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸ್ವತಃ ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಶೆಟ್ಟಿ ಜನಪ್ರತಿನಿಧಿ ಪತ್ರಿಕೆಗೆ ಫೋನ್‌ ಸಂಪರ್ಕದಲ್ಲಿ ಪ್ರತಿಕ್ರಿಯಿಸಿ ಪೊಲೀಸರು ಕರೆದಿರುವುದಕ್ಕೆ ನಾನೂ ಭಾಗಿಯಾಗಿದ್ದೆ ಎಂದು ತಿಳಿಸಿದ್ದರು. ಸುದ್ದಿಗೋಷ್ಟಿಯಲ್ಲೂ ಪೊಲೀಸರು ನೋಟೀಸ್‌ ನೋಡಿರುವುದಾಗಿ ಹೇಳಿದ್ದರು.  ಇನ್ನು, ಶಿಲ್ಪಿ ಕೃಷ್ಣ ನಾಯ್ಕ್‌ ಕೂಡ ಮಹಜರು ಮಾಡುತ್ತಿದ್ದ ವೇಳೆ ತಮ್ಮ ಫೇಸ್‌ಬುಕ್‌ ನಲ್ಲಿ ಲೈವ್‌ ಬಂದು, ನೋಟೀಸ್‌ ಕೊಡದೇ ಪೊಲೀಸರು ಮಹಜರು ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಮುನಿಯಾಲು ದಬ್ಬಾಳಿಕೆ ಮಾಡುತ್ತಿದ್ದಾರೆ, ಪ್ರತಿಮೆಗಳನ್ನು ಅನ್ಯ ಧರ್ಮೀಯರಿಂದ ಎತ್ತಿ ಸಾಗಿಸುತ್ತಿದ್ದಾರೆ, ಬಡ ಹಿಂದುಳಿದ ವರ್ಗದ ಶಿಲ್ಪಿಯೊಬ್ಬನ ಮೇಲೆ ಮಾನಸಿಕ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಸಂಬಂಧಿಸಿದಂತೆ ಉಡುಪಿ ಎಸ್‌.ಪಿ ಡಾ. ಅರುಣ್‌ ಕೆ. ಪ್ರತಿಕ್ರಿಯಿಸಿ, ಪರಶುರಾಮನ ಪ್ರತಿಮೆಯ ಬಿಡಿ ಭಾಗಗಳನ್ನು ವಶ ಪಡಿಸಿಕೊಳ್ಳಲಾಗಿದೆ. ದೂರುದಾರರಿಗೆ ಮಹಜರು ಸಂದರ್ಭದಲ್ಲಿ ಸಹಿ ಹಾಕಲು ಬರುವಂತೆ ಹೇಳಿದ್ದೇವೆ. ಅದರಂತೆ ಅವರು ಬಂದಿದ್ದಾರೆ. ಪ್ರತಿಮೆ ನಿರ್ಮಾಣ ಮಾಡುವವರಿಗೂ ನೋಟೀಸ್‌ ನೀಡಲಾಗಿತ್ತು. ಪ್ರತಿಮೆಯ ಬಿಡಿ ಭಾಗಗಳನ್ನು ವಶ ಪಡಿಸಿಕೊಳ್ಳುವ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದೇವೆ. ಮಹಜರು ಸಂದರ್ಭದಲ್ಲಿ ಉಪಸ್ಥಿತರಿದ್ಗದ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ಇನ್‌ ಸ್ಪೆಕ್ಟರ್‌ ಬಾಡಿ ಕ್ಯಾಮೆರಾ ಧರಿಸಿದ್ದರು. ಅದಾಗ್ಯೂ ಈ ಪ್ರಕ್ರಿಯೆಯಲ್ಲಿ ಏನಾದರೂ ಕಾನೂನಿನ ಉಲ್ಲಂಘನೆ ಆಗಿದ್ದರೇ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದರು.

ಎಸ್‌ಪಿ ನಡೆಯನ್ನು ಖಂಡಿಸುತ್ತೇವೆ : ದಿವ್ಯ ನಾಯಕ್
ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ದೂರುದಾರರಿಗೆ ಸಹಿ ಹಾಕುವುದಕ್ಕೆ ಬರಲು ಹೇಳಿದ್ದೇವೆ ಎಂದು ಎಸ್‌ಪಿ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ಬಯಲಿಗೆ ಎಳೆದವರೇ ನಾವು. ಸ್ಥಳ ಮಹಜರು ಮಾಡುವ ಬಗ್ಗೆಯಾಗಲಿ ಅಥವಾ ಸಹಿ ಹಾಕುವಂತಾಗಲಿ ಯಾವುದೇ ನೋಟೀಸ್‌ ಪೊಲೀಸರು ನಮಗೆ ನೀಡಿಲ್ಲ. ಉದಯ ಕುಮಾರ್‌ ಶೆಟ್ಟಿ ಅವರು ಮಾತ್ರ ದೂರುದಾರರೆ ?. ಉದಯ ಕುಮಾರ್‌ ಶೆಟ್ಟಿ ಅವರು ಪ್ರಕರಣದ ವಿರುದ್ಧ ಹೋರಾಟ ಮಾಡುತ್ತಿರುವುದಕ್ಕೆ ನಮ್ಮದು ಯಾವುದೇ ಅಡ್ಡಿ ಇಲ್ಲ. ಆದರೇ, ಈಗ ಎಸ್‌ ಪಿ ಅವರೇ ಹೇಳುವ ಹಾಗೆ, ದೂರುದಾರರಿಗೆ ನೋಟೀಸ್‌ ಕೊಟ್ಟಿದ್ದೇವೆ ಎಂದರೇ, ಉದಯ್‌ ಕುಮಾರ್‌ ಶೆಟ್ಟಿ ಮಾತ್ರ ದೂರುದಾರರು? ಇಡೀ ಪ್ರಕರಣವನ್ನು ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದವರೇ ನಾವು. ನಾವು ಪ್ರಕರಣದ ಬಗ್ಗೆ ದೂರು ನೀಡುವುದಕ್ಕೆ ಹೋದಾಗ, ಕಾರ್ಕಳದಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಈ ಬಗ್ಗೆ ಮಾತಾಡುವಾಗಲೂ ನಮ್ಮನ್ನು ತಡೆದವರು ಇದೇ ಎಸ್‌ಪಿ. ಈಗ ರಾಜಕೀಯ ಒತ್ತಡದಲ್ಲಿ ತನಿಖೆಗೆ ಮುಂದಾಗಿದ್ದಾರೆಯೇ ? ಜನ ಸ್ಪಂದನ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಪ್ರಚಾರ ತೆಗೆದುಕೊಳ್ಳುವುದಕ್ಕೆ ಬರಬೇಡಿ ಎಂದೆಲ್ಲಾ ಬೇಜವಾಬ್ದಾರಿ ಮಾತನಾಡಿದ್ದರು. ಹಾಗದರೇ ಜನಸ್ಪಂದನಾ ಸಭೆ ಕಾಟಾಚಾರಕ್ಕೆ ಮಾಡಿದ್ದೆ? ಎಸ್‌ಪಿ ಸುನೀಲ್‌ ಕುಮಾರ್‌ ಅವರನ್ನು ವಹಿಸಿಕೊಂಡು ಮಾತನಾಡುವಂತದ್ದೇನಿತ್ತು ? ಸಾಮಾನ್ಯ ಜನರಿಗೆ ಪ್ರಶ್ನೆ ಮಾಡುವುದಕ್ಕೆ ಅವಕಾಶ ಮಾಡುವುದಕ್ಕೆ ಅವಕಾಶ ಜನಸ್ಪಂದನಾ ಸಭೆಯಲ್ಲಿ ಸಿಗುವುದಿಲ್ಲ ಎಂದರೇ ಜನಸ್ಪಂದನಾ ಸಭೆ ಮಾಡಿ ಏನು ಪ್ರಯೋಜನ ? ಹಗರಣದ ಬಗ್ಗೆ ನಾವೇ ಮೊದಲು ದೂರು ಕೊಟ್ಟಿದ್ದೇವೆ. ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ನೋಟೀಸ್‌ ಕೊಟ್ಟ ಪೊಲೀಸರು ನಮಗೆ ಯಾಕೆ ಕೊಟ್ಟಿಲ್ಲ ? ನಾವು ದೂರುದಾರರು ಅಲ್ಲವೇ ? ಎಸ್‌ಪಿ ಅವರ ಈ ತಾರತಮ್ಯ ನೀತಿಯನ್ನು ನಾವು ಖಂಡಿಸುತ್ತೇವೆ ಎಂದು ಪ್ರಕರಣವನ್ನು ಬಯಲಿಗೆಳೆದ ದಿವ್ಯ ನಾಯಕ್ ಆಕ್ರೋಶ ಹೊರ ಹಾಕಿದ್ದಾರೆ.

ಎಸ್‌.ಪಿ ಡಾ. ಅರುಣ್‌ ಕೆ, ಜಿಲ್ಲಾಧಿಕಾರಿಗಳು, ಕಾರ್ಕಳ ಪೊಲೀಸರು ವಶ ಪಡಿಸಿಕೊಂಡ ಪ್ರತಿಮೆಯ ಬಿಡಿ ಭಾಗಗಳನ್ನು ಏನು ಮಾಡುತ್ತಾರೆ ಎನ್ನುವುದನ್ನು ಬಹಿರಂಗವಾಗಿ ಹೇಳಲಿ. ತನಿಖೆ ಮಾಡಬೇಕಿರುವ ಪ್ರತಿಮೆಯ ಬಗ್ಗೆ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ನಿರ್ಮಿತಿ ಕೇಂದ್ರದವರು ನವೀಕರಣ ಮಾಡುವುದಕ್ಕೆ ಬೇಕಾಗಿ ಪ್ರತಿಮೆಯ ಅರ್ಧ ಭಾಗವನ್ನು ತೆಗೆದು ಸ್ಥಳಾಂತರ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರ ಅಧ್ಯಕ್ಷರು ಆಗಿರವ ಡಾ. ವಿದ್ಯಾಕುಮಾರಿ ಅವರು ಹೇಳಿದ್ದರು. ನಿರ್ಮಿತಿ ಕೇಂದ್ರವೂ ಕೂಡ ಹಾಗೆಯೇ ಸಮರ್ಥಿಸಿಕೊಂಡಿತ್ತು. ಈಗ ವಶ ಪಡಿಸಿಕೊಂಡಿರುವ ಪ್ರತಿಮೆಯ ಬಿಡಿ ಭಾಗಗಳಲ್ಲಿ ಪರಶುರಾಮನ ಕಾಲುಗಳೂ ಕೂಡ ಇವೆ. ಪರಶುರಾಮನ ಪ್ರತಿಮೆ ನಕಲಿ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕಲ್ಲವೇ. ನಕಲಿ ಬಿಡಿ, ಪ್ರತಿಮೆಯಲ್ಲಿ ದೋಷಗಳು ಇವೆ ಎಂದು ತಿಳಿದ ಮೇಲೂ ಆ ವರ್ಕ್‌ ಆರ್ಡರ್‌ ಕ್ಯಾನ್ಸಲ್‌ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದ್ದಿತ್ತು. ಜಿಲ್ಲಾಧಿಕಾರಿಗಳೇ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕೆ ಎಲ್ಲಾ ಮೇಲಾಧಿಕಾರಿಗಳು ಶಾಸಕರೊಂದಿಗೆ ಒಪ್ಪಂದ ಮಾಡಿದ್ದಾರೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಪರಶುರಾಮ ಥೀಂ ಪಾರ್ಕ್‌ ನಲ್ಲಿ ಹಗರಣ ನಡೆದಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇನ್ನು ತನಿಖೆ ಮೂಲಕ ಸಾಬೀತಾಗಿ ನಿಜಾಂಶ ಹೊರಬರಬೇಕಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಿದೆ. ಇಲ್ಲಿಯೂ ರಾಜಕೀಯ ಹಸ್ತಕ್ಷೇಪ ನಡೆದರೇ, ಇನ್ನೊಂದು ಮಹಾಮೋಸಕ್ಕೆ ಜನ ತುತ್ತಾಗುವುದರಲ್ಲಿ ಅನುಮಾನವಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!