Monday, September 9, 2024

ನಕಲಿ ಪರಶುರಾಮ ಕಾರ್ಕಳದಲ್ಲಿ, ಒರಿಜಿನಲ್‌ ಪರಶುರಾಮ ಗೋಡೌನ್ ನಲ್ಲಿ ಪತ್ತೆ | ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾದ ಪರಶುರಾಮ !

ಜನಪ್ರತಿನಿಧಿ (ಕಾರ್ಕಳ/ಬೆಂಗಳೂರು) : ಸೈಲೆಂಟ್‌ ಆಗಿದ್ದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ವಿವಾದ ಮರಳಿ ಚರ್ಚೆಗೆ ಗ್ರಾಸವಾಗಿದೆ. ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಉಮಿಕಲ್‌ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ನಕಲಿ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪರಶುರಾಮ ಥೀಂ ಪಾರ್ಕ್‌ ವಿಚಾರ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಪ್ರಕಣವೂ ದಾಖಲಾಗಿತ್ತು. ಪ್ರತಿಮೆಯ ವಿನ್ಯಾಸ ಮರುನವೀಕರಣ ಮಾಡುವ ನೆಪ ಹೇಳಿ ಟೆಂಡರ್‌ ವಹಿಸಿಕೊಂಡ ನಿರ್ಮಿತಿ ಕೇಂದ್ರ ಉಡುಪಿ ಪರಶುರಾಮ ಪ್ರತಿಮೆಯನ್ನು ಅರ್ಧಕಡಿದು ರಾತ್ರೋರಾತ್ರಿ ಸ್ಥಳಾಂತರ ಮಾಡಿತ್ತು. ಆ ಬಳಿಕ ಈ ವಿಷಯದ ಚರ್ಚೆ ಟೀಕೆ, ಗಂಭೀರ ಆರೋಪಗಳಿಗೆ ಕಾರಣವಾಗಿತ್ತು. ಪ್ರತಿಭಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿತ್ತು. ಸದ್ಯ ತನಿಖೆಯ ಹಿನ್ನೆಲೆಯಲ್ಲಿ ಕ್ರಿಷ್‌ ಆರ್ಟ್‌ ವರ್ಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಮಾಲೀಕತ್ವದ ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಇರುವ ಗೋಡೌನ್‌ನಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಸ್ಥಳ ಮಹಜರು ಮಾಡಿ ಪ್ರತಿಮೆಯ ಸುಮಾರು ಬಿಡಿಭಾಗಗಳನ್ನು ಜಪ್ತಿ ಮಾಡಿ ಕಾರ್ಕಳಕ್ಕೆ ತಂದಿದ್ದಾರೆ.

ದೂರುದಾರರಿಗೆ ಬರಲು ಹೇಳಿದ್ದೇವೆ : ಎಸ್‌ಪಿ
ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಕಾರ್ಕಳದ ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಕಾಣಿಸಿಕೊಂಡಿರುವುದು ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸ್ವತಃ ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಶೆಟ್ಟಿ ಫೋನ್‌ ಸಂಪರ್ಕದಲ್ಲಿ ಪ್ರತಿಕ್ರಿಯಿಸಿ ಪೊಲೀಸರು ಕರೆದಿರುವುದಕ್ಕೆ ನಾನೂ ಭಾಗಿಯಾಗಿದ್ದೆ ಎಂದು ತಿಳಿಸಿದ್ದರು. ಇನ್ನು, ಶಿಲ್ಪಿ ಕೃಷ್ಣ ನಾಯ್ಕ್‌ ಕೂಡ ಮಹಜರು ಮಾಡುತ್ತಿದ್ದ ವೇಳೆ ತಮ್ಮ ಫೇಸ್‌ಬುಕ್‌ ನಲ್ಲಿ ಲೈವ್‌ ಬಂದು, ನೋಟೀಸ್‌ ಕೊಡದೇ ಪೊಲೀಸರು ಮಹಜರು ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ಉದಯ್‌ ಕುಮಾರ್‌ ಮುನಿಯಾಲು ದಬ್ಬಾಳಿಕೆ ಮಾಡುತ್ತಿದ್ದಾರೆ, ಪ್ರತಿಮೆಗಳನ್ನು ಅನ್ಯ ಧರ್ಮೀಯರಿಂದ ಎತ್ತಿ ಸಾಗಿಸುತ್ತಿದ್ದಾರೆ, ಬಡ ಹಿಂದುಳಿದ ವರ್ಗದ ಶಿಲ್ಪಿಯೊಬ್ಬನ ಮೇಲೆ ಮಾನಸಿಕ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಸಂಬಂಧಿಸಿದಂತೆ ಉಡುಪಿ ಎಸ್‌.ಪಿ ಡಾ. ಅರುಣ್‌ ಕೆ. ಪ್ರತಿಕ್ರಿಯಿಸಿ, ಪರಶುರಾಮನ ಪ್ರತಿಮೆಯ ಬಿಡಿ ಭಾಗಗಳನ್ನು ವಶ ಪಡಿಸಿಕೊಳ್ಳಲಾಗಿದೆ. ದೂರುದಾರರಿಗೆ ಮಹಜರು ಸಂದರ್ಭದಲ್ಲಿ ಸಹಿ ಹಾಕಲು ಬರುವಂತೆ ಹೇಳಿದ್ದೇವೆ. ಅದರಂತೆ ಅವರು ಬಂದಿದ್ದಾರೆ. ಪ್ರತಿಮೆ ನಿರ್ಮಾಣ ಮಾಡುವವರಿಗೂ ನೋಟೀಸ್‌ ನೀಡಲಾಗಿತ್ತು. ಪ್ರತಿಮೆಯ ಬಿಡಿ ಭಾಗಗಳನ್ನು ವಶ ಪಡಿಸಿಕೊಳ್ಳುವ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದೇವೆ. ಮಹಜರು ಸಂದರ್ಭದಲ್ಲಿ ಉಪಸ್ಥಿತರಿದ್ಗದ ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣಾ ಇನ್‌ ಸ್ಪೆಕ್ಟರ್‌ ಬಾಡಿ ಕ್ಯಾಮೆರಾ ಧರಿಸಿದ್ದರು. ಅದಾಗ್ಯೂ ಈ ಪ್ರಕ್ರಿಯೆಯಲ್ಲಿ ಏನಾದರೂ ಕಾನೂನಿನ ಉಲ್ಲಂಘನೆ ಆಗಿದ್ದರೇ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಮಗೆ ಈವರೆಗೆ ಯಾವುದೇ ನೋಟೀಸ್‌ ಕೊಟ್ಟಿಲ್ಲ : ದಿವ್ಯ ನಾಯಕ್
ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ದೂರುದಾರರಿಗೆ ಸಹಿ ಹಾಕುವುದಕ್ಕೆ ಬರಲು ಹೇಳಿದ್ದೇವೆ ಎಂದು ಎಸ್‌ಪಿ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ಬಯಲಿಗೆ ಎಳೆದವರೇ ನಾವು. ಸ್ಥಳ ಮಹಜರು ಮಾಡುವ ಬಗ್ಗೆಯಾಗಲಿ ಅಥವಾ ಸಹಿ ಹಾಕುವಂತಾಗಲಿ ಯಾವುದೇ ನೋಟೀಸ್‌ ಪೊಲೀಸರು ನಮಗೆ ನೀಡಿಲ್ಲ. ಉದಯ ಕುಮಾರ್‌ ಶೆಟ್ಟಿ ಅವರು ಮಾತ್ರ ದೂರುದಾರರೆ ?. ಉದಯ ಕುಮಾರ್‌ ಶೆಟ್ಟಿ ಅವರು ಪ್ರಕರಣದ ವಿರುದ್ಧ ಹೋರಾಟ ಮಾಡುತ್ತಿರುವುದಕ್ಕೆ ನಮ್ಮದು ಯಾವುದೇ ಅಡ್ಡಿ ಇಲ್ಲ. ಆದರೇ, ಈಗ ಎಸ್‌ ಪಿ ಅವರೇ ಹೇಳುವ ಹಾಗೆ, ದೂರುದಾರರಿಗೆ ನೋಟೀಸ್‌ ಕೊಟ್ಟಿದ್ದೇವೆ ಎಂದರೇ, ಉದಯ್‌ ಕುಮಾರ್‌ ಶೆಟ್ಟಿ ಮಾತ್ರ ದೂರುದಾರರು? ಇಡೀ ಪ್ರಕರಣವನ್ನು ಮಾಹಿತಿ ಹಕ್ಕಿನ ಮೂಲಕ ಬಯಲಿಗೆಳೆದವರೇ ನಾವು. ನಾವು ಪ್ರಕರಣದ ಬಗ್ಗೆ ದೂರು ನೀಡುವುದಕ್ಕೆ ಹೋದಾಗ, ಕಾರ್ಕಳದಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಈ ಬಗ್ಗೆ ಮಾತಾಡುವಾಗಲೂ ನಮ್ಮನ್ನು ತಡೆದವರು ಇದೇ ಎಸ್‌ಪಿ. ಈಗ ರಾಜಕೀಯ ಒತ್ತಡದಲ್ಲಿ ತನಿಖೆಗೆ ಮುಂದಾಗಿದ್ದಾರೆಯೇ ? ನಾವೇ ಮೊದಲು ದೂರು ಕೊಟ್ಟಿದ್ದೇವೆ. ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ನೋಟೀಸ್‌ ಕೊಟ್ಟ ಪೊಲೀಸರು ನಮಗೆ ಯಾಕೆ ಕೊಟ್ಟಿಲ್ಲ ? ನಾವು ದೂರುದಾರರು ಅಲ್ಲವೇ ? ಎಸ್‌ಪಿ ಅವರ ಈ ತಾರತಮ್ಯ ನೀತಿಯನ್ನು ನಾವು ಖಂಡಿಸುತ್ತೇವೆ ಎಂದು ಪ್ರಕರಣವನ್ನು ಬಯಲಿಗೆಳೆದ ದಿವ್ಯ ನಾಯಕ್ ಆಕ್ರೋಶ ಹೊರ ಹಾಕಿದ್ದಾರೆ.

ಎಸ್‌.ಪಿ ಡಾ. ಅರುಣ್‌ ಕೆ, ಜಿಲ್ಲಾಧಿಕಾರಿಗಳು, ಕಾರ್ಕಳ ಪೊಲೀಸರು ವಶ ಪಡಿಸಿಕೊಂಡ ಪ್ರತಿಮೆಯ ಬಿಡಿ ಭಾಗಗಳನ್ನು ಏನು ಮಾಡುತ್ತಾರೆ ಎನ್ನುವುದನ್ನು ಬಹಿರಂಗವಾಗಿ ಹೇಳಲಿ. ತನಿಖೆ ಮಾಡಬೇಕಿರುವ ಪ್ರತಿಮೆಯ ಬಗ್ಗೆ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ನಿರ್ಮಿತಿ ಕೇಂದ್ರದವರು ನವೀಕರಣ ಮಾಡುವುದಕ್ಕೆ ಬೇಕಾಗಿ ಪ್ರತಿಮೆಯ ಅರ್ಧ ಭಾಗವನ್ನು ತೆಗೆದು ಸ್ಥಳಾಂತರ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು, ನಿರ್ಮಿತಿ ಕೇಂದ್ರ ಅಧ್ಯಕ್ಷರು ಆಗಿರವ ಡಾ. ವಿದ್ಯಾಕುಮಾರಿ ಅವರು ಹೇಳಿದ್ದರು. ನಿರ್ಮಿತಿ ಕೇಂದ್ರವೂ ಕೂಡ ಹಾಗೆಯೇ ಸಮರ್ಥಿಸಿಕೊಂಡಿತ್ತು. ಈಗ ವಶ ಪಡಿಸಿಕೊಂಡಿರುವ ಪ್ರತಿಮೆಯ ಬಿಡಿ ಭಾಗಗಳಲ್ಲಿ ಪರಶುರಾಮನ ಕಾಲುಗಳೂ ಕೂಡ ಇವೆ. ಪರಶುರಾಮನ ಪ್ರತಿಮೆ ನಕಲಿ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕಲ್ಲವೇ. ಪ್ರತಿಮೆ ಪೂರ್ಣ ಕಾರ್ಯವಾಗಬೇಕಿರುವ ಹಣ ಇನ್ನೂ ಬಿಡುಗಡೆ ಆಗದೇ ಇರುವಾಗಲೇ ಕೃಷ್ಣ ನಾಯ್ಕ್‌ ಪ್ರತಿಮೆ ಪೂರ್ತಿ ಮಾಡಿದ್ದಾರೆ ಎಂದರೇ ಇದಕ್ಕೆಲ್ಲಾ ಹಣ ಒದಗಿಸಿದವರು ಯಾರು ? ಶಾಸಕರು ಹಣ ನೀಡಿದರೇ ? ಪ್ರಶ್ನೆಯ ಜೊತೆಗೆ ದೇವರ ಹೆಸರಿನಲ್ಲಿ ಜನರನ್ನು ಮೋಸ ಮಾಡುವುದಕ್ಕೆ ಅಧಿಕಾರಿಗಳೂ ಸೇರಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಲ್ಲದೇ, ನಕಲಿ ಬಿಡಿ, ಪ್ರತಿಮೆಯಲ್ಲಿ ದೋಷಗಳು ಇವೆ ಎಂದು ತಿಳಿದ ಮೇಲೂ ಆ ವರ್ಕ್‌ ಆರ್ಡರ್‌ ಕ್ಯಾನ್ಸಲ್‌ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದ್ದಿತ್ತು. ಜಿಲ್ಲಾಧಿಕಾರಿಗಳೇ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕಿಕೊಳ್ಳುವುದಕ್ಕೆ ಎಲ್ಲಾ ಮೇಲಾಧಿಕಾರಿಗಳು ಶಾಸಕರೊಂದಿಗೆ ಒಪ್ಪಂದ ಮಾಡಿದ್ದಾರೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಕಂಚಿನ ಪ್ರತಿಮೆ ಎಂದೇ ನಂಬಿಸಿದ್ದ ಬಿಜೆಪಿ :
ಕಾರ್ಕಳದ ಉಮಿಕಲ್‌ ಕುಂಜದಲ್ಲಿ ಶಾಸಕ ಸುನೀಲ್‌ ಕುಮಾರ್‌ ಕಾರ್ಕಳ ಅವರ ನಿರ್ದೇಶನದಲ್ಲಿ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಅವ್ಯವಹಾರವಾಗಿದೆ, ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಾಗ ಕಾರ್ಕಳ ಬಿಜೆಪಿ ಪ್ರತಿಮೆ ಕಂಚಿನದ್ದೇ ಎಂದು ಸಮರ್ಥಿಸಿಕೊಂಡಿತ್ತು. ಸ್ವತಃ ಶಾಸಕ ಸುನೀಲ್‌ ಕುಮಾರ್‌, ಪರಶುರಾಮ ಥೀಂ ಪಾರ್ಕ್‌ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬೆಸುಗೆ ಹಾಕಲು ಫೈಬರ್‌ ಬಳಸಿರುವುದನ್ನು ಹಿಡಿದುಕೊಂಡು ಇಡೀ ಪ್ರತಿಮೆಯನ್ನು ನಕಲಿ ಎಂದು ರಾಜಕೀಯವಾಗಿ ಮಸಿ ಬಳಿಯುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೇ ಸುನೀಲ್‌ ಕುಮಾರ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ಅರ್ಧ ಕತ್ತರಿಸಿದ ಪ್ರತಿಮೆಯ ಭಾಗಗಳಿಗೆ ಸುತ್ತಿಗೆಯಿಂದ ಬಡಿದು ಕಂಚಿನ ಪ್ರತಿಮೆ ಎಂದು ಸಾಬೀತು ಪಡಿಸಲು ಹೋಗಿ ಮತ್ತಷ್ಟು ವಿವಾದ ಆಗಿತ್ತು.

ಪರಶುರಾಮನನ ಹೆಸರಿನಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ : ಬಿಜೆಪಿ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಸೋಮವಾರ) ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬಿಜೆಪಿ ಪ್ರತಿಭಟನೆ ಮಾಡಿದೆ. ಪರಶುರಾಮ ಕರಾವಳಿಯ ಸೃಷ್ಟಿಕರ್ತಹಗರಣಗಳನ್ನು ಮಾಡುವ ಧೋರಣೆ ಕಾಂಗ್ರೆಸ್‌ನದ್ದು, ಕಾಂಗ್ರೆಸ್‌ ಇದ್ದ ಕಾಲ ಘಟ್ಟ ಹಾಗೂ ಬಿಜೆಪಿ ಇದ್ದ ಕಾಲದಲ್ಲಿ ಆದ ಅಭಿವೃದ್ಧಿಯನ್ನು ಜನರಿಗೆ ಗೊತ್ತಿದೆ. ಶಿಲ್ಪಿ ಕೃಷ್ಣ ನಾಯ್ಕ್‌ ಅವರನ್ನೇ ನಿಂದಿಸುವ ಕಾರ್ಯ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಮಾಡಿದ್ದಾರೆಂದು ಬಿಜೆಪಿ ಆರೋಪಿಸಿದ್ದಲ್ಲದೇ, ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!