Sunday, September 8, 2024

ಅಂಕೋಲ ಗುಡ್ಡ ಕುಸಿತ : 6 ಮಂದಿಯ ಶವ ಪತ್ತೆ, ಇನ್ನೂ ನಾಲ್ವರಿಗಾಗಿ ಮುಂದುವರಿದ ಕಾರ್ಯಾಚರಣೆ !

ಜನಪ್ರತಿನಿಧಿ (ಅಂಕೋಲ) : ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಘಟಿಸಿದ ಗುಡ್ಡಕುಸಿತ ಪ್ರಕರಣ ರಕ್ಷಣಾ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಈ ವರೆಗೂ 6 ಜನರ ಶವ ಪತ್ತೆಯಾಗಿ, ಮತ್ತೆ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಗುಡ್ಡಕುಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಮುಚ್ಚಿಹೋಗಿತ್ತು. ಇದೀಗ ಸತತ 4 ದಿನಗಳ ಕಾರ್ಯಾಚರಣೆ ಬಳಿಕ ಈವರೆಗೂ ಶೇ.75 ರಷ್ಟು ಅವಶೇಷಗಳನ್ನು ನಿನ್ನೆ(ಶುಕ್ರವಾರ) ಸಂಜೆ ವೇಳೆಗೆ ತೆರವುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಭಾರತೀಯ ನೌಕಾಪಡೆಯ ಸೀ-ಬರ್ಡ್‌ನ ಆಳವಾದ ಸಮುದ್ರ ಡೈವರ್‌ಗಳು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್) ಗಂಗಾವಳಿ ನದಿಯ ಕೆಸರು ನೀರನ್ನು ಸ್ಕ್ಯಾನ್ ಮಾಡಿ ಪರಿಶೀಲಿಸಿದ ಬಳಿಕ ನಿನ್ನೆಯಿಂದ(ಶುಕ್ರವಾರ) ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.

ಆದರೆ ಮತ್ತೆ ಇಂದು(ಶನಿವಾರ) ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿದಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ.

ಮತ್ತೆ ಗುಡ್ಡ ಕುಸಿತ ಭೀತಿ, ವಾಹನ ಸಂಚಾರಕ್ಕಿಲ್ಲ ಅನುಮತಿ

ರಾಷ್ಟ್ರೀಯ ಹೆದ್ದಾರಿ 66ಯ ಒಂದು ಭಾಗದಲ್ಲಿ ಮಣ್ಣು, ಕಲ್ಲುಗಳನ್ನು ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದ್ದು, ಈ ಪ್ರದೇಶ ಇನ್ನೂ ನಿಯಮಿತವಾಗಿ ಭೂಕುಸಿತಕ್ಕೆ ಸಾಕ್ಷಿಯಾಗುತ್ತಿರುವುದರಿಂದ  ವಾಹನಗಳ ಸಂಚಾರವನ್ನು ಅನುಮತಿಸಲು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಧಾರಾಕಾರ ಮಳೆಯ ನಡುವೆಯೂ ಮಣ್ಣು ತೆರವು ಕಾರ್ಯಚರಣೆ ಸಾಗಿದ್ದು, ಐಆರ್‌ಬಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.

ಎನ್‌ಡಿಆರ್‌ಎಫ್‌, ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿದ್ದು, ಮಳೆಯಿಂದಾಗಿ ಗುಡ್ಡದಿಂದ ಝರಿಯಂತೆ ನೀರು ಹರಿದುಬರುತ್ತಿದ್ದು, ಮತ್ತೆ ಗುಡ್ಡ ಕುಸಿತ ಭೀತಿ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಾಚರಣೆ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ನಾಲ್ವರಿಗಾಗಿ ಶೋಧ

ಜಿಲ್ಲಾಡಳಿತದ ನೀಡಿರುವ ಮಾಹಿತಿಯಂತೆ ಇಲ್ಲಿ 10 ಮಂದಿ ಕಣ್ಮರೆಯಾಗಿದ್ದಾರೆ. ಇವರಲ್ಲಿ 6 ಮಂದಿಯ ಶವಗಳು ದೊರಕಿವೆ. ಆದರೂ, ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಶಿರೂರು ಗ್ರಾಮದ ಜಗನ್ನಾಥ್ ನಾಯ್ಕ್ ಮತ್ತು ಸನ್ನಿಗೌಡ ಮತ್ತು ಕೇರಳದ ಟ್ರಕ್ ಚಾಲಕ ಅರ್ಜುನ್ ಎಂಬ ಮೂವರು ಇನ್ನೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಇದೆ. ಅವರ ಪತ್ತೆಗಾಗಿ ಶನಿವಾರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಟ್ರಕ್ ಚಾಲಕನ ಮೊಬೈಲ್ ರಿಂಗ್ ಆಗುತ್ತಿದೆ 

ಕೇರಳ ಮೂಲದ ಟ್ರಕ್ ಮಾಲೀಕ ಮುನ್ನಾಫ್ ನಿನ್ನೆ (ಶುಕ್ರವಾರ) ಘಟನಾಸ್ಥಳಕ್ಕೆ ಭೇಟಿ ನೀಡಿದ್ದು, ವಾಹನದಿಂದ ಕೊನೆಯ ಜಿಪಿಎಸ್ ಸ್ಥಳದ ಪ್ರಕಾರ ಅವರ ಒಂದು ಟ್ರಕ್ ಅವಶೇಷಗಳಡಿಯಲ್ಲಿದೆ ಎಂದು ಹೇಳಿದ್ದಾರೆ. ಭೂಕುಸಿತದಲ್ಲಿ ಸಿಲುಕಿರುವ ಟ್ರಕ್ ಚಾಲಕ ಅರ್ಜುನ್ ಅವರ ಕುಟುಂಬ ಸದಸ್ಯರು ಶುಕ್ರವಾರ ಬೆಳಿಗ್ಗೆಯೂ ಅವರ ಮೊಬೈಲ್ ಫೋನ್ ರಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆ. ಪೊಲೀಸರು ಮೆಟಲ್ ಡಿಟೆಕ್ಟರ್ ಸಹಾಯದಿಂದ ಸ್ಥಳವನ್ನು ಗುರುತಿಸಿದರು. ಆದರೆ, ಅವರ ಸುಳಿವು ಸಿಕ್ಕಿರಲಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!