Tuesday, October 8, 2024

ಯಕ್ಷಗಾನ ಪ್ರಸಂಗಕರ್ತ ಯಕ್ಷಾನಂದ ಕುತ್ಪಾಡಿ

ಸಂಗೀತ, ಸಾಹಿತ್ಯ, ನೃತ್ಯ ಚಿತ್ರಗಳ ಸಾಮರಸ್ಯದೊಂದಿಗೆ ಪ್ರೇಕ್ಷಕವರ್ಗವನ್ನು ಮೋಡಿ ಮಾಡಬಲ್ಲ ಅತ್ಯಪೂರ್ವ ಕಲೆ ಯಕ್ಷಗಾನಕ್ಕೆ ಮನಸೋಲದವರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಯಕ್ಷಗಾನಕ್ಕೆ ಗಂಡು ಹೆಣ್ಣು ಎನ್ನುವ ತಾರತಮ್ಯ ಇಲ್ಲ, ಮೇಲು ಕೀಳು ಎನ್ನುವ ತಾರತಮ್ಯ ಇಲ್ಲ, ವಿದ್ಯಾವಂತ ಅವಿದ್ಯಾವಂತ ಎನ್ನುವ ತಾರತಮ್ಯ ಇಲ್ಲ, ಆ ಜಾತಿ ಈ ಜಾತಿ ಎನ್ನುವಂತಹ ತಾರತಮ್ಯ ಇಲ್ಲ. ಬಡವ ಬಲ್ಲಿದ ಎನ್ನುವ ತಾರತಮ್ಯ ಇಲ್ಲ. ಎಂತವರನ್ನು ಹುರಿದುಂಬಿಸುವಂತಹ ಚೈತನ್ಯ ಶಕ್ತಿ ಇದ್ದರೆ ಅದು ಯಕ್ಷಗಾನಕ್ಕೆ ಮಾತ್ರ, ಈ ನಿಟ್ಟಿನಲ್ಲಿ ಎಳವೆಯಲ್ಲೇ ಯಕ್ಷಗಾನ ಕಲೆಗೆ ಮಾರುಹೋಗಿ, ಕಲೆಯನ್ನು ಕರಗತ ಮಾಡಿಕೊಳ್ಳುವ ಛಲದಿಂದ ಕಲಾಸರಸ್ವತಿಗೆ ತನ್ನನ್ನು ಸಮರ್ಪಿಸಿಕೊಂಡ ಯುವಕ ಉಡುಪಿಯ ಯಕ್ಷಾನಂದ ಕುತ್ಪಾಡಿಯವರು.

ಉಡುಪಿ ಜಿಲ್ಲೆಯ ಕುತ್ಪಾಡಿ ಗ್ರಾಮದ ಕೂಲಿ ಕಾರ್ಮಿಕ ಕುಟುಂಬವೊಂದರ ದಿ| ಪೀಂಚಿಲ ಪೂಜಾರಿ ಮತ್ತು ದಿ| ಮೆನ್ಕು ಪೂಜಾರ್ತಿಯವರ ಮಗನಾಗಿ ಜನಿಸಿದ ಆನಂದರು ಯಕ್ಷಗಾನ ಕಲೆಯ ಯಾವುದೇ ಹಿನ್ನಲೆಯಿಂದ ಬಂದವರಲ್ಲ. ಬಾಲ್ಯದಿಂದಲೇ ಇವರಿಗೆ ಯಕ್ಷಗಾನ ಕಲೆಯಲ್ಲಿ ಅತೀವ ಆಸಕ್ತಿ. ಕಡೆಕಾರಿನ ಶ್ರೀ ಮಹಾಗಣಪತಿ ಕಿರಿಯ ಶಾಲೆ, ಕಿದಿಯೂರಿನ ಶ್ರೀ ವಿದಯಾ ಸಮುದ್ರತೀರ್ಥ ಪ್ರೌಢ ಶಾಲೆ ಮತ್ತು ಕಾಪುವಿನ ದಂಡತೀರ್ಥ ವಿದ್ಯಾಲಯಗಳಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸ. ಕಿದಿಯೂರು ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಂದರ್ಭದಲ್ಲಿ ಯಕ್ಷಗಾನ ರಂಗಪ್ರವೇಶ ಮಾಡುವ ಅವಕಾಶ ದೊರಕಿತು. ಶಾಲಾ ಮಕ್ಕಳ ಮೇಳದ ಬಬ್ರುವಾಹನ ಕಾಳಗದಲ್ಲಿ ಚಿಕ್ಕ ಪಾತ್ರವೊಂದನ್ನು ನಿರ್ವಹಿಸುವ ಮೂಲಕ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಆನಂದ ಮುಂದೆ ಯಕ್ಷಾನಂದನಾಗಿ ಯಕ್ಷಗಾನದ ಪ್ರಸಂಗಕರ್ತರಾಗಿ ಸ್ವತಃ ಕಲಾವಿದರಾಗಿ ಹೆಸರಾದುದು, ಕುತ್ಪಾಡಿಯ ಹೆಸರನ್ನು ನಾಡಿನೆಲ್ಲೆಡೆ ಪಸರಿಸಿರುವುದು ಅತ್ಯಪೂರ್ವ ಸಾಧನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೈಸ್ಕೂಲ್ ಹಂತದಲ್ಲಿಯೇ ಕಾಳಿಂಗ ನಾವಡರೊಂದಿಗೆ ನಿಕಟ ಸಂಪರ್ಕ. ಪ್ರತಿ ವರ್ಷ ಕಡೆಕಾರಿನ ನಿಡಂಬೂರು ಯುವಕ ಮಂಡಲದ ದೀಪಾವಳಿ ಪಾಡ್ಯದ ತಾಳಮದ್ದಲೆಗೆ ಬರುತ್ತಿದ್ದ ನಾವಡರು ಒಮ್ಮೆ ಯಕ್ಷಾನಂದರಲ್ಲಿ ಒಂದು ಪ್ರಸಂಗ ಬರೆದುಕೊಡಿ. ಮುಂದಿನ ವರ್ಷ ಸಾಲಿಗ್ರಾಮ ಮೇಳದಲ್ಲಿ ನಾನೇ ನಿರ್ದೇಶಿಸಿ ಪ್ರದರ್ಶಿಸುತ್ತೇನೆ ಎಂದು ಹೇಳಿ ಹೋದವರು ಮುಂದಿನ ಮೇ ತಿಂಗಳಲ್ಲಿ ಅಗಲಿ ಹೋಗಿರುವುದು ನನ್ನ ಜೀವನದ ದೌಭಾಗ್ಯ ಸಂಗತಿ.

ಕುತ್ಪಾಡಿಯ ಶ್ರೀ ರಾಮಕೃಷ್ಣ ಯಕ್ಷಗಾನ ಮಂಡಳಿಯ ಗುರು ದಿ| ತೋನ್ಸೆ ಕಾಂತಪ್ಪ ಮಾಸ್ತರಲ್ಲಿ ಶಿಷ್ಯ ವೃತ್ತಿಯನ್ನು ಆರಂಭಿಸಿದ ಆನಂದರು ಪೆರಂಪಳ್ಳಿಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಅಂಬಲಪಾಡಿಯಲ್ಲಿ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ತರಬೇತಿ ಪಡೆದರು. ಗದಾಯುದ್ಧದ ಕೃಷ್ಣ, ಭೀಷ್ಮ ಪ್ರತಿಜ್ಞೆಯ ದೇವವೃತ, ದ್ರೌಪದಿ ಪ್ರತಾಪದ ಸುಭದ್ರೆ, ಶಶಿಪ್ರಭಾ ಪರಿಣಯದ, ’ಶಶಿಪ್ರಭೆ’, ಕುಮಾರ ವಿಜಯದ’ದ ’ಮಾಯಾ ಅಜಮುಖಿ’, ’ಮದನಸುಂದರಿ ಸ್ವಯಂವರ’ದ ’ಮದನಸುಂದರಿ’, ’ಭವಲೀಲಾವಿಲಾಸ’ದ ’ಅಂಶುಮತಿ’, ’ಕೋಟಿಚೆನ್ನಯ’ದ ’ಕಿನ್ನಿದಾರು’, ’ಯಕ್ಷಾಂಗ ನಂದಿನಿ’ಯ ’ಯಕ್ಷಾಂಗ’, ’ಶ್ವೇತ ಕುಮಾರ ಚರಿತ್ರೆ’ಯ ’ಶ್ವೇತಕುಮಾರ’, ’ಭೀಷ್ಮ ಪರ್ವದ’, ’ಕೃಷ್ಣ’ ಮುಂತಾದ ಪ್ರಧಾನ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಯಕ್ಷಾನಂದರು ತುಳುನಾಟಕಗಳಲ್ಲಿ ಖಳನಾಯಕಿಯ ಪಾತ್ರವನ್ನು ನಿರ್ವಹಿಸಿ, ನಾಟಕರಂಗದಲ್ಲೂ ಮಿಂಚಿದವರು. ಕಡೆಕಾರಿನ ನಿಡಂಬೂರು ಯುವಕ ಮಂಡಲದ ಸದಸ್ಯನಾಗಿ ’ಪೊಣ್ಣು ಸಂಸಾರದ ಕಣ್ಣ್’, ’ದಲ್ಲಾಲಿ ದಾಮಣ್ಣೆ’, ಮುಂತಾದ ನಾಟಕಗಳು ಇವರಿಗೆ ಕೀರ್ತಿ ತಂದಿತ್ತ ನಾಟಕಗಳಾಗಿವೆ. ಈ ಮಧ್ಯೆ ಚೆಂಡೆವಾದನದ ಕ್ರಾಂತಿ ಪುರುಷ ದಿ| ಕೆಮ್ಮಣ್ಣು ಆನಂದರ ಕೈ ಕೆಳಗೆ ಚೆಂಡೆವಾದನ ತರಬೇತಿಯನ್ನೂ ಪಡೆದುಕೊಂಡರು.

ಮುಂದೆ ಯಕ್ಷಗಾನ ರಂಗದಲ್ಲಿಯೇ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲ ತೊಟ್ಟಿದ್ದ ಆನಂದರು ’ಯಕ್ಷಾನಂದ ಕುತ್ಪಾಡಿ’ ಎಂಬ ಕಾವ್ಯ ನಾಮದೊಂದಿಗೆ ಕೃತಿ ರಚನೆಗೆ ತೊಡಗಿದರು. ಪುನರ್ಜನ್ಮದ ಬಗಗೆ ಬೆಳಕು ಚೆಲ್ಲುವ ಇವರ ಪ್ರಥಮ ಯಕ್ಷಕೃತಿ ’ಯಕ್ಷಾಂಗ ನಂದಿನಿ’, ’ಸುವರ್ಣ ರೇಖಾ’, ’ಧರ್ಮದುಂಧುಬಿ’, ’ತ್ಯಾಗತಪಸ್ವಿನಿ’, ’ಮಾತೃಮಾಂಗಲ್ಯ’, ’ರಂಗ ನರ್ತಕಿ’, ’ಭುವನ ಭಾರ್ಗವ’, ’ವಿಧಿವಿನೋದ’ (ಪೌರಾಣಿಕ), ’ಯೋಗ ಸಂಯೋಗ’ (ಪೌರಾಣಿಕ), ’ಸುವರ್ಣಸಾರಥಿ’, ಅಥವಾ ’ಆನಂದ ನಂದಿನಿ’, (ಪೌರಾಣಿಕ), ’ಅಗ್ನಿಕನ್ಯಾ’, (ಪೌರಾಣಿಕ), ’ಉರಗೋದ್ಧರಣ’, (ಪೌರಾಣಿಕ), ’ವೀರ ರಾಣಿ ಅಬ್ಬಕ್ಕ’, ’ಗಂಗೆನಾಡಿ ಕುಮಾರದೈವ’, ’ಕುತ್ಪಾಡಿ ಕ್ಷೇತ್ರ ಮಹಾತ್ಮೆ’, ’ಶಂಭು ಕಲ್ಲುಕ್ಷೇತ್ರ ಮಹಾತ್ಮೆ’, ’ಕಾಪುಪೊಯ್ಯಪೊಡಿಕಲ್ ಗರೋಡಿ ಕ್ಷೇತ್ರ ಮಹಾತ್ಮೆ’, ’ಅಪ್ಪೆಮಾಯಂದಾಲ್’, ’ಕಾರ್ಣಿಕದ ಸ್ವಾಮಿ ಕೊರಗಜ್ಜ’, ’ಶ್ರೀ ವನದುರ್ಗಾ ಮಹಾತ್ಮೆ’, ’ಕೋಟಿ ಚೆನ್ನಯ’, (ಪರಿಷ್ಕೃತ), ಇವು ಕುತ್ಪಾಡಿಯವರ ಪ್ರಮುಖ ೪೦ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದರು.

ಪ್ರತಿಭೆ – ಪಾಂಡಿತ್ಯಗಳೆರಡನ್ನು ಮೈಗೂಡಿಸಿಕೊಂಡಿರುವ ನಯ – ವಿನಯ- ವಿಧೇಯತೆಗಳ ಸರಳ ವ್ಯಕ್ತಿತ್ವದ ಯಕ್ಷಾನಂದ ಕುತ್ಪಾಡಿಯವರು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಇವರ ’ವಿಧಿವಿನೋದ’ ಕೃತಿಗೆ ’ಯಕ್ಷಕಾವ್ಯ’ ಸಮಗ್ರ ಪ್ರಶಸ್ತಿ, ಸುವರ್ಣ ಕರ್ನಾಟಕ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ’ಬ್ರಹ್ಮಶ್ರೀ ಪ್ರಶಸ್ತಿ’, ’ಸ್ಕಂದ ಪುರಸ್ಕಾರ’ದ ಜೊತೆಗೆ ’ಸಮಾಜರತ್ನ’ ಕಾಪು ಲೀಲಾಧರ ಶೆಟ್ಟಿಯವರ ’ರಂಗತರಂಗ’ ಕಲಾವಿದರು, ಕಾಪು ಇವರಿಂದ ’ಯಕ್ಷಶಿಖರ’ ಬಿರುದು ಮತ್ತು ಬಂಟ್ವಾಳದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ವತಿಯಿಂದ ’ಯಕ್ಷವಾಲ್ಮೀಕಿ’ ಬಿರುದುಗಳು ಇವರಿಗೆ ಸಂದಿರುತ್ತದೆ. ಯಕ್ಷಗಾನದ ವೃತ್ತಿ ಮತ್ತು ಬಯಲಾಟ ಮೇಳಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ನೂರಕ್ಕೂ ಅಧಿಕ ಸನ್ಮಾನ ಗೌರವಗಳಿಗೆ ಪಾತ್ರರಾದ ಇವರ ವ್ಯಕ್ತಿ ಪರಿಚಯಾದಿ ಅಸಂಖ್ಯ ವೈಚಾರಿಕ ಲೇಖನಗಳನ್ನು ’ಉದಯವಾಣಿ’ ’ತರಂಗ’, ’ಪ್ರಜಾವಾಣಿ’, ’ವಿಜಯವಾಣಿ’ ’ವಿಜಯಕರ್ನಾಟಕ’, ’ಮುಂಗಾರು, ಮುಂತಾದ ಪ್ರಮುಖ ಪತ್ರಿಕೆಗಳು ಪ್ರಕಟಿಪಡಿಸಿವೆ.

2000 ಇಸವಿಯಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಸ್ಪರ್ಧೆಗೆ ಬಂದ 18 ಕೃತಿಗಳನ್ನು ಹಿಂದಿಕ್ಕಿ ಇವರ ಪೌರಾಣಿಕ ಯಕ್ಷಕೃತಿ ವಿಧಿ ವಿನೋದವು ಯಕ್ಷಕಾವ್ಯ ಸಮಗ್ರ ಪ್ರಶಸ್ತಿ ಪಡೆದಿರುವುದು ಒಂದು ಹೆಗ್ಗಳಿಕೆ.

ಬಿಲ್ಲವ ಬಡತನ ಕುಟುಂಬದಲ್ಲಿ ಹುಟ್ಟಿ ಆನಂದ ಹೆಸರಿನ ಬದಲು ಯಕ್ಷಾನಂದ ಎಂಬ ಕಾವ್ಯನಾಮದ ಮೂಲಕ ಪ್ರಸಿದ್ಧಿ ಹೊಂದಿ ಸದ್ಯ ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಯಕ್ಷಾನಂದರು ಆರೋಗ್ಯ ಸಮಸ್ಯೆಯಿದ್ದರೂ ಜೀವನೋಪಾಯಕ್ಕಾಗಿ ಹೋಟೇಲ್ ಒಂದರಲ್ಲಿ ದುಡಿಯುತ್ತಿದ್ದಾರೆ. ಬಿಲ್ಲವ ಸಮುದಾಯ ಸಂಘಟನೆಗಳು ಯಕ್ಷಾನಂದ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸದಿರುವುದು ವಿಷಾದನೀಯ. ಇನ್ನಾದರೂ ಅವರ ಕಡೆ ಗಮನ ಹರಿಸಲಿ. ಯಕ್ಷಾನಂದ ಕುತ್ಪಾಡಿಯವರಿಗೆ ಕೀರ್ತಿ, ಸಂಪದಗಳು ಒದಗಿ ಬರಲಿ

-ವಾಸ್ತುತಜ್ಞ ಡಾ| ಬಸವರಾಜ್ ಶೆಟ್ಟಿಗಾರ್
ಕೋಟೇಶ್ವರ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!