Tuesday, October 8, 2024

ತಪ್ಪಿಸಿಕೊಳ್ಳಲು ಯತ್ನಿಸಿದ ಖತರ್ನಾಕ್ ಚಡ್ಡಿಗ್ಯಾಂಗ್‌ ನ ಇಬ್ಬರ ಕಾಲಿಗೆ ಗುಂಡು !

ಜನಪ್ರತಿನಿಧಿ (ಮಂಗಳೂರು) : ಬಂದರು ನಗರಿ ಮಂಗಳೂರಿನ ಜನರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿಗ್ಯಾಂಗ್ ಸದಸ್ಯರು ಪೊಲೀಸರ ವಶದಲ್ಲಿದ್ದಾರೆ. ಇಂದು (ಬುಧವಾರ) ಬಂಧಿತ ಗ್ಯಾಂಗ್‌ನ ಸದಸ್ಯರನ್ನು ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಯಿಂದಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ಸಂದರ್ಭದಲ್ಲಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ನಡೆದಿದೆ.

ಚಡ್ಡಿಗ್ಯಾಂಗ್‌ ಕರಾವಳಿ ಜಿಲ್ಲೆಗಳ ಮೇಲೆ ವಕ್ರದೃಷ್ಟಿ ಇಟ್ಟ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಿನ್ನೆ(ಮಂಗಳವಾರ) ಚಡ್ಡಿಗ್ಯಾಂಗ್‌ನ ನಾಲ್ವರು ಕಳ್ಳರನ್ನು ಸಕಲೇಶಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದರು. ಮಂಗಳೂರಿನ ಉರ್ವ ಪೊಲೀಸ್‌ ಠಾಣೆ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿ ದರೋಡೆ ನಡೆಸಿ ಪರಾರಿಯಾದ ಬೆನ್ನಲ್ಲೇ ಶೀಘ್ರವಾಗಿ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಖತರ್ನಾಕ್‌ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು.

ದರೋಡೆ ನಡೆಸಿದ ಬಳಿಕ ಅದೇ ಮನೆಯ ಕಾರಿನಲ್ಲಿ ಮುಲ್ಕಿ ವರೆಗೆ ಬಂದು ಕಾರನ್ನು ಅಲ್ಲಿ ಬಿಟ್ಟು ಬೆಂಗಳೂರು ಕಡೆಗೆ ಬಸ್ ನಲ್ಲಿ ಹೊರಟಿದ್ದರು.‌ಅದರಂತೆ ಕಾರು ಇಟ್ಟ ಸ್ಥಳಕ್ಕೆ ಇಂದು ಬೆಳಗ್ಗೆ ಸ್ಥಳ ಮಹಜರಿಗಾಗಿ ಪೊಲೀಸರು ಆರೋಪಿಗಳನ್ನು ಕರೆ ತಂದಿದ್ದರು. ಈ ವೇಳೆ ಇಬ್ಬರು ಪೊಲೀಸರ ಮೇಲೆ ಕೂಡ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳಾದ ರಾಜು ಸಿಂಗ್ವಾನಿಯಾ ಮತ್ತು ಬಾಲಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24 ವರ್ಷ), ಭೂಪಾಲ್ ನ ಮಯೂರ್ (30 ವರ್ಷ), ಬಾಲಿ (22 ವರ್ಷ), ಗುಣಾ ಜಿಲ್ಲೆಯ ವಿಕ್ಕಿ (21 ವರ್ಷ) ಎಂಬ ನಾಲ್ವರು ಬಂಧಿತರು. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!