Thursday, November 21, 2024

ಜು.12ರಿಂದ ಜು. 14: ಕುಂದಾಪುರದಲ್ಲಿ ‘ಹಲಸು ಹಾಗೂ ಕೃಷಿ ಮೇಳ-2024’

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನೇತೃತ್ವದಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಗೆಳೆಯರ ಬಳಗ ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ-2024 ಜುಲೈ12 ಶುಕ್ರವಾರದಿಂದ ಜುಲೈ 14ಆದಿತ್ಯವಾರದ ತನಕ ಕುಂದಾಪುರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷರಾದ ಜನನಿ ದಿನಕರ ಶೆಟ್ಟಿ ತಿಳಿಸಿದರು.

ಅವರು ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಕುಂದಾಪುರ ಪರಿಸರದ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಹಾಗೂ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಸ್ಥಾಪಕಧ್ಯಕ್ಷರಾದ ಕಿರಣ್ ಕುಂದಾಪುರ ಮಾತನಾಡಿ, ಹಲಸು ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆ, ಆಂಧ್ರದ ಮೊದಲಾದ ಭಾಗಗಳಿಂದ ಹಲಸು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಬಯಲು ಸೀಮೆಯ ಪ್ರಸಿದ್ಧ ಸಿಹಿ ಕೆಂಪು ಹಲಸು, ಚಂದ್ರ ಹಲಸು ಸೇರಿದಂತೆ ಅಪರೂಪದ ಹಲಸು ತಳಿಗಳ ಹಣ್ಣು ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಮಾವಿನಹಣ್ಣು, ರಂಬೂಟಾನ್, ಡ್ರ್ಯಾಗನ್ ಪ್ರುಟ್ಸ್ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಮಾರಾಟ ಮಳಿಗೆಗಳು ಕೂಡಾ ಇರಲಿದೆ ಎಂದರು.

ಅತ್ಯಾದುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಪ್ರದರ್ಶನ ಮತ್ತು ಮಾರಾಟ, ಹಣ್ಣುಗಳ ಕೊಯ್ಲು ಮತ್ತು ಸಂಸ್ಕರಣೆ, ಹಲಸಿನ ಹಣ್ಣಿನಿಂದ ತಯಾರಿಸುವ ಬಗೆ ಬಗೆ ತಿಂಡಿ ಮತ್ತು ಹಪ್ಪಳ ಸಂಡಿಗೆ, ಐಸ್ ಕ್ರೀಮ್, ಹಲಸಿನ ಹಣ್ಣಿನ ಖಾದ್ಯಗಳು, ಮಾವಿನ ಹಣ್ಣಿನ ತಿನಿಸುಗಳು, ಬೇರೆ ಬೇರೆ ಶೈಲಿಯ ಉಪ್ಪಿನಕಾಯಿಗಳು, ಪ್ರಸಿದ್ಧ ನರ್ಸರಿಗಳು, ಕೃಷಿಗೆ ಸಂಬಂಧಪಟ್ಟ ಮಳಿಗೆಗಳು ಇಲ್ಲಿ ಇರುತ್ತದೆ ಎಂದರು.

ಖಾದಿ ಮತ್ತು ಕೈಮಗ್ಗಾ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು, ಚನ್ನಪಟ್ಟಣ ಗೊಂಬೆಗಳು, ಇಳಕಲ್ ಸೀರೆ ಮೊದಲಾದ ಅಪರೂಪದ ಮಳಿಗೆಗಳು, ಗೃಹ ಉಪಯೋಗಿ ವಸ್ತುಗಳು ಮೇಳದಲ್ಲಿ ಲಭ್ಯವಿದೆ. ಕೃಷಿ, ತೋಟಗಾರಿಕೆ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿದೆ ಎಂದರು.

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಕಾರ್ಯದರ್ಶಿ ಶ್ರೀಧರ ಮಾತನಾಡಿ, ಈ ಹಲಸು ಮತ್ತು ಕೃಷಿ ಮೇಳದಲ್ಲಿ ಭಾಗವಹಿಸಲು ಈಗಾಗಲೇ 80 ಮಳಿಗೆಗಳು ನೊಂದಣಿಯಾಗಿದ್ದು, ಇನ್ನೂ 50ಕ್ಕೂ ಹೆಚ್ಚು ಕೃಷಿ, ಗೃಹ ಉಪಯೋಗಕ್ಕೆ ಸಂಬಂಧಪಟ್ಟ ಮಳಿಗೆಗಳು ನೊಂದಣಿಯಾಗುವ ಸಾಧ್ಯತೆ ಇದೆ. ಜು.12ರಂದು ಪೂರ್ವಾಹ್ನ 11 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಜು.14ರ ಸಂಜೆ ಸಮಾರೋಪ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ತೆರೆದಿರುತ್ತದೆ ಎಂದರು.

ಸುದ್ಧಿಗೋಷ್ಟಿಯಲ್ಲಿ ಕೋಶಾಧಿಕಾರಿ ಜಗದೀಶ ವಾಸುದೇವ ಉಪಸ್ಥಿತರಿದ್ದರು,

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!